ಒಮ್ಮೆ ಬಳಸಿದ ಎಣ್ಣೆಯ ಪುನರ್ ಬಳಕೆ ಅಪಾಯಕಾರಿಯೇ?

ಒಮ್ಮೆ ಬಳಸಿದ ಎಣ್ಣೆಯ ಪುನರ್ ಬಳಕೆ ಅಪಾಯಕಾರಿಯೇ?

ನಾವು ಮನೆಯಲ್ಲಿ ಕುರುಕುರು ತಿಂಡಿ ತಯಾರಿಸಲು ಅಥವಾ ಪೋಡಿ, ವಡೆ, ಬೋಂಡಾ ಕರಿಯಲು ಅಡುಗೆ ಎಣ್ಣೆಯನ್ನು ಬಳಸುತ್ತೇವೆ. ನೀವು ಬಳಸುವ ಎಣ್ಣೆಯು ತೆಂಗಿನ ಎಣ್ಣೆ, ತಾಳೆ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಎಳ್ಳೆಣ್ಣೆ ಯಾವುದೇ ಆಗಿರಬಹುದು. ಕರಿಯಲು ಅಗತ್ಯಕ್ಕಿಂತ ಹೆಚ್ಚಿನ ಎಣ್ಣೆಯನ್ನು ಬಾಣಲೆಯಲ್ಲಿ ಹಾಕಲೇ ಬೇಕಾಗುತ್ತದೆ ಏಕೆಂದರೆ ನಾವು ಕರಿಯ ಬೇಕಾದ ವಸ್ತುಗಳು ಆ ಎಣ್ಣೆಯಲ್ಲಿ ಮುಳುಗಬೇಕಿರುವುದು ಅವಶ್ಯಕ. ಇಲ್ಲವಾದರೆ ಅದನ್ನು ಕರಿಯಲು ಸಾಧ್ಯವಿಲ್ಲ. ಈ ಕಾರಣದಿಂದ ನಾವು ಬಳಸಿದ ಎಣ್ಣೆ ಪೂರ್ತಿಯಾಗಿ ಉಪಯೋಗವಾಗುವುದಿಲ್ಲ. ಕರಿದ ಬಳಿಕ ಸ್ವಲ್ಪವಾದರೂ ಎಣ್ಣೆ ಬಾಣಲೆಯಲ್ಲಿ ಉಳಿದಿರುತ್ತದೆ.

ಈಗ ನಮ್ಮ ಮನಸ್ಸಲ್ಲಿ ಉಳಿಯುವ ಪ್ರಶ್ನೆಯೆಂದರೆ ಈ ಉಳಿದ ಎಣ್ಣೆಯನ್ನು ಮುಂದಿನ ಸಲ ಕರಿದ ಪದಾರ್ಥಗಳನ್ನು ತಯಾರಿಸುವಾಗ ಬಳಸಿಕೊಳ್ಳಬಹುದೇ? ಎನ್ನುವುದು. ಕೆಲವು ವರ್ಷಗಳ ಹಿಂದೆ ಈ ವಿಷಯದಲ್ಲಿ ಚರ್ಚೆಗಳು ಆಗುತ್ತಲೇ ಇರಲಿಲ್ಲ. ಆದರೆ ಈಗ ಎಲ್ಲರಿಗೂ ಆರೋಗ್ಯದ ಬಗ್ಗೆ ವಿಪರೀತ ಕಾಳಜಿ. ಈ ಕಾಳಜಿ ಹೇಗೆಂದರೆ ‘ಹೇಳುವುದು ಶಾಸ್ತ್ರ-ತಿನ್ನುವುದು ಬದನೇಕಾಯಿ' ಎನ್ನುವಂತೆ. ಕರಿದ ಪದಾರ್ಥಗಳು ಅಧಿಕ ಪ್ರಮಾಣದಲ್ಲಿ ತಿಂದರೆ ಆರೋಗ್ಯಕ್ಕೆ ಹಾಳು ಎಂದು ತಿಳಿದಿದ್ದರೂ ಎಲ್ಲರಿಗೂ ಬಾಯಿ ರುಚಿಯ ಚಪಲ. ತಿನ್ನುವಾಗ ಎಷ್ಟಾದರೂ ತಿಂದು ಬಿಡುತ್ತೇವೆ. ಮತ್ತೆ ಬೊಜ್ಜು ಬೆಳೆಯಿತು, ಹೃದಯದ ಸಮಸ್ಯೆ ಶುರುವಾಯಿತು, ಗ್ಯಾಸ್, ಹೊಟ್ಟೆಯುರಿ ಸಮಸ್ಯೆಗಳು ಎಂದೆಲ್ಲಾ ಬೊಬ್ಬೆ ಹೊಡೆಯುತ್ತೇವೆ. ಇರಲಿ, ಈಗ ನಾವು ಒಮ್ಮೆ ಕರಿದ ಎಣ್ಣೆಯನ್ನು ಪುನರ್ ಬಳಕೆ ಮಾಡಬಹುದೇ ಎನ್ನುವ ವಿಷಯಕ್ಕೆ ಬರುವ…

ವೈಜ್ಞಾನಿಕವಾಗಿ ನೋಡುವುದಾದರೆ ಒಮ್ಮೆ ಬಳಸಿದ ಎಣ್ಣೆಯನ್ನು ಮತ್ತೆ ಕರಿಯಲು ಬಳಸುವುದು ಉತ್ತಮವಲ್ಲ. ಏಕೆಂದರೆ ಹೊಸದಾಗಿ ಬಳಸುವ ಅಡುಗೆ ಎಣ್ಣೆಗೂ, ಮರುಬಳಕೆ ಮಾಡುವ ಅಡುಗೆ ಎಣ್ಣೆಗೂ ಬಹಳ ವ್ಯತ್ಯಾಸವಿರುತ್ತದೆ. ನಾವು ಮೊದಲ ಸಲ ಎಣ್ಣೆಯನ್ನು ಬಳಸುವಾಗ ಅದರಲ್ಲಿ ಕೆಲವೊಂದು ಹಾನಿಕಾರಕ ಅಂಶಗಳು ಉತ್ಪತ್ತಿಯಾಗುತ್ತವೆ. ಅವುಗಳು ಮುಂದಿನ ಸಲ ನಾವು ಅದೇ ಎಣ್ಣೆಯನ್ನು ಕರಿಯಲು ಬಳಸುವಾಗ ಆಹಾರದ ರುಚಿಯನ್ನು ಬದಲಾಯಿಸಿ ಬಿಡುತ್ತದೆ. ಅದರ ಜೊತೆಗೆ ನಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಬಲ್ಲ ಸಾಕಷ್ಟು ಹಾನಿಕಾರಕ ಅಂಶಗಳನ್ನೂ ಉತ್ಪತ್ತಿ ಮಾಡುತ್ತವೆ. ಇದು ಕ್ಯಾನ್ಸರ್ ನಂತಹ ಸಮಸ್ಯೆಯ ಜೊತೆಗೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (ಕೊಬ್ಬು) ಉತ್ಪತ್ತಿಗೆ ಕಾರಣವಾಗುತ್ತದೆ ಎಂದು ಹಲವು ಸಂಶೋಧನೆಗಳು ತಿಳಿಸುತ್ತವೆ.

ಈ ಕೆಟ್ಟ ಕೊಲೆಸ್ಟ್ರಾಲ್ ಹೃದಯದ ಅಪಧಮನಿಗಳನ್ನು ಮುಚ್ಚಿ ಹಾಕಿ, ಸರಿಯಾಗಿ ರಕ್ತದ ಪರಿಚಲನೆ ಆಗದಂತೆ ತಡೆಯುವ ಸಾಧ್ಯತೆ ಇದೆ. ಈ ಕಾರಣದಿಂದ ಇಂತಹ ಎಣ್ಣೆಯನ್ನು ಬಳಸಿ ತಯಾರಿಸಿದ ತಿಂಡಿ ತಿನಸುಗಳನ್ನು ತಿನ್ನುವವರಲ್ಲಿ ಹೃದಯಾಘಾತದ ಸಮಸ್ಯೆ ಅಧಿಕವಾಗಬಹುದು. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳು ಮತ್ತು ಫ್ರೀ ರಾಡಿಕಲ್ ಅಂಶಗಳು ಅಧಿಕವಾದಂತೆ ಆರೋಗ್ಯಕರ ಜೀವಕೋಶಗಳ ಸಂಖ್ಯೆ ಕಡಿಮೆಯಾಗುತ್ತವೆ. ಇದರಿಂದ ಅವುಗಳ ಕಾರ್ಯಕ್ಷಮತೆ ಕುಗ್ಗುತ್ತದೆ. ಅಡುಗೆ ಎಣ್ಣೆಯನ್ನು ಪದೇ ಪದೇ ಬಳಸಿದಾಗ ಫ್ರೀ ರಾಡಿಕಲ್ ಗಳ ಸಂಖ್ಯೆ ದ್ವಿಗುಣವಾಗುತ್ತಾ ಸಾಗುತ್ತದೆ. 

ಈ ಕಾರಣದಿಂದಲೇ ಒಮ್ಮೆ ಕರಿಯಲು ಬಳಸಿದ ಎಣ್ಣೆಯನ್ನು ಮತ್ತೆ ಬಳಸುವುದು ಆರೋಗ್ಯಕ್ಕೆ ಉತ್ತಮವಲ್ಲ ಎನ್ನುತ್ತಾರೆ. ಒಂದು ಸಲ ಎಣ್ಣೆ ಬಿಸಿಯಾಗಿ ಮತ್ತೆ ತಣ್ಣಗಾದ ಬಳಿಕ ಅದನ್ನು ಪದೇ ಪದೇ ಬಿಸಿ ಮಾಡುವುದು ಒಳ್ಳೆಯ ಕ್ರಮವಲ್ಲ. ಒಳ್ಳೆಯ ಕೊಲೆಸ್ಟ್ರಾಲ್ ಅಂಶಗಳು ನಮ್ಮ ದೇಹದಲ್ಲಿ ಕಡಿಮೆಯಾಗಿ ಹಲವಾರು ದುಷ್ಪರಿಣಾಮಗಳನ್ನು ತಂದೊಡ್ಡುತ್ತವೆ. ಈ ಕಾರಣದಿಂದ ಈಗ ಹಲವಾರು ತಿಂಡಿ ತಿನಸು ತಯಾರಿಕಾ ಸಂಸ್ಥೆಗಳು ಅಡುಗೆ ಎಣ್ಣೆಯನ್ನು ಒಮ್ಮೆ ಮಾತ್ರ ಕರಿಯಲು ಬಳಕೆ ಮಾಡುತ್ತೇವೆ ಎಂದು ಹೇಳಿಕೊಳ್ಳುತ್ತಾರೆ. ಇವನ್ನೆಲ್ಲಾ ಎಷ್ಟರ ಮಟ್ಟಿಗೆ ಸರಿಯಾಗಿ ಪಾಲಿಸುತ್ತಾರೆ ಎಂಬುದು ದೇವರೇ ಬಲ್ಲ. 

‘ನಮ್ಮ ಆರೋಗ್ಯ ನಮ್ಮ ಕೈಯಲ್ಲಿ' ಎನ್ನುವಂತೆ ನಾವೇ ಸಾಧ್ಯವಾದಷ್ಟು ಕರಿದ ತಿಂಡಿಗಳನ್ನು ಕಡಿಮೆ ತಿನ್ನುವುದು ಉತ್ತಮ. ಬೀದಿ ಬದಿಯಲ್ಲಿ ಮಾರಾಟವಾಗುವ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ತಿನ್ನದಿರುವುದೇ ಲೇಸು. ಏಕೆಂದರೆ ಈ ರೀತಿಯ ಮಾರಾಟಗಾರರು ಪದೇ ಪದೇ ಕರಿಯಲು ಹೊಸ ಎಣ್ಣೆಯನ್ನು ಬಳಕೆ ಮಾಡುವುದು ದೂರದ ಸಂಗತಿ. ಏಕೆಂದರೆ ದುಬಾರಿ ಬೆಲೆಯ ಅಡುಗೆ ಎಣ್ಣೆಯನ್ನು ಒಂದು ಬಾರಿ ಮಾತ್ರ ಕರಿಯಲು ಬಳಕೆ ಮಾಡುವುದು ಕಷ್ಟ ಸಾಧ್ಯ. ಆದುದರಿಂದ ಕರಿದ ತಿಂಡಿಗಳನ್ನು ಕಡಿಮೆ ತಿಂದು, ಆರೋಗ್ಯಕಾರಿ ಆಹಾರ ವಸ್ತುಗಳಾದ ಹಣ್ಣು, ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಬಳಸಿಕೊಂಡರೆ ಆರೋಗ್ಯಕ್ಕೂ ಉತ್ತಮ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ