ಒಲಂಪಿಕ್ಸ್ ಆಟಗಳಲ್ಲಿರುವ ವಿಚಿತ್ರ ನಿಯಮಗಳು
ಕೇವಲ ನೂರು ಗ್ರಾಂ ಅಧಿಕ ಭಾರ ಹೊಂದಿದ್ದ ಕಾರಣ ಪದಕದ ಭರವಸೆ ಮೂಡಿಸಿದ ಕುಸ್ತಿ ಪಟು ವಿನೇಶ್ ಪೋಗಟ್ ಅನರ್ಹಗೊಂಡದ್ದು ನಮಗಿನ್ನೂ ನುಂಗಲಾರದ ತುತ್ತಾಗಿದೆ. ಸೆಮಿ ಫೈನಲ್ ನಲ್ಲಿ ಸೆಣಸಾಡುವಾಗ ಸರಿಯಾಗಿದ್ದ ಭಾರ ಫೈನಲ್ ವೇಳೆಗೆ ಹೆಚ್ಚಾದದ್ದು ದುರದೃಷ್ಟವೇ ಸರಿ. ಆದರೆ ನಿಯಮಾನುಸಾರ ಅರ್ಹತೆಯನ್ನು ಹೊಂದಿ ಗೆದ್ದಿದ್ದ ಸೆಮಿ ಫೈನಲ್ ನ ತೀರ್ಪನ್ನು ಗೌರವಿಸದೇ ಅವರನ್ನು ಫೈನಲ್ ಪಂದ್ಯಾವಳಿಯಿಂದ ಕನಿಷ್ಟ ರಜತ ಪದಕವನ್ನು ನೀಡದೇ ಹೊರಹಾಕಿದ್ದು ದೊಡ್ಡ ತಪ್ಪು ಎನ್ನುವುದು ಬಹುತೇಕರ ಅಂಬೋಣ. ಹೌದಲ್ಲವೇ? ಸೆಮಿ ಫೈನಲ್ ನಲ್ಲಿ ಪೋಗಟ್ ಸೆಣಸಾಡುವಾಗ ಅವರ ಭಾರ ನಿಗದಿತ ತೂಕಕ್ಕೆ ಸರಿಯಾಗಿತ್ತು. ಆದುದರಿಂದ ಸೆಮಿಫೈನಲ್ ಗೆಲುವು ನ್ಯಾಯಯುತವಾಗಿಯೇ ಆಗಿದೆ. ಫೈನಲ್ ಪಂದ್ಯದ ವೇಳೆ ಅವರ ಭಾರ ನೂರು ಗ್ರಾಂ ಅಧಿಕವಾದರಿಂದ ಅವರಿಗೆ ಫೈನಲ್ ಆಡುವ ಅರ್ಹತೆ ಸಿಗಲಿಲ್ಲ. ಆದರೆ ಸೆಮಿಫೈನಲ್ ಗೆದ್ದದ್ದಕ್ಕೆ ಬೆಳ್ಳಿ ಪದಕ ಕೊಡಬೇಕಿತ್ತಲ್ಲವೇ? ಅವರೇನೂ ಡ್ರಗ್ಸ್ ತೆಗೆದುಕೊಂಡು ಅಥವಾ ಪ್ರತಿಸ್ಪರ್ಧಿಯ ಜೊತೆ ಜಗಳ ಮಾಡಿಕೊಳ್ಳಲಿಲ್ಲವಲ್ಲಾ? ಇದೊಂದು ಅನ್ಯಾಯದ ಪರಮಾವಧಿ ಎಂದು ಯಾರೂ ಹೇಳಬಲ್ಲರು.
ಇದರಲ್ಲಿ ಅತ್ಯಂತ ಹಾಸ್ಯಮಯ ಸಂಗತಿ ಏನೆಂದರೆ ಯಾವ ವ್ಯಕ್ತಿ ಪೋಗಟ್ ಜೊತೆ ಸೆಮಿಫೈನಲ್ ನಲ್ಲಿ ಸೋತರೋ ಆಕೆಯನ್ನು ಫೈನಲ್ ನಲ್ಲಿ ಆಡಿಸಿದ್ದು. ಏಕೆಂದರೆ ಸೆಮಿಫೈನಲ್ ಆಡುವಾಗ ಪೋಗಟ್ ತೂಕ ಸರಿಯಾಗಿತ್ತು. ಯಾವುದೇ ತಕರಾರು ಇಲ್ಲದೇ ಅವರು ಗೆದ್ದಿದ್ದರು. ಗೆದ್ದ ವ್ಯಕ್ತಿ ಫೈನಲ್ ನಲ್ಲಿ ಅನರ್ಹವೆಂದು ಘೋಷಿಸಲ್ಪಟ್ಟಾಗ ಅವರಿಗೆ ಬಂಗಾರ ಕೊಡಲು ಆಗುವುದಿಲ್ಲ ಸರಿ, ಆದರೆ ಬೆಳ್ಳಿ ಪದಕ ಕೊಡಬೇಕಲ್ಲವೇ? ಒಂದೊಮ್ಮೆ ವಿನೇಶ್ ಪೋಗಟ್ ಅನಾರೋಗ್ಯದ ಕಾರಣದಿಂದ ಫೈನಲ್ ಆಡದೇ ಇದ್ದಲ್ಲಿ ಅವರಿಗೆ ಬೆಳ್ಳಿ ಪದಕ ಕೊಡುತ್ತಿರಲಿಲ್ಲವೇ? ನೂರು ಗ್ರಾಂ ಅಧಿಕವಾದದ್ದು ಅದೇ ಒಂದು ರೀತಿಯ ಅನಾರೋಗ್ಯದ ಕಾರಣವೇ ಅಲ್ಲವೇ? ಈ ಓಬೀರಾಯನ ಕಾಲದ ನಿಯಮಗಳು ಒಲಂಪಿಕ್ಸ್ ನಲ್ಲಿ ಬಹಳಷ್ಟಿವೆ. ಅವುಗಳಲ್ಲಿ ಕೆಲವು ಸ್ವಾರಸ್ಯಕರವಾದ ನಿಯಮಗಳನ್ನು ನಿಮಗಾಗಿ ಇಲ್ಲಿ ನೀಡಿರುವೆ…
ಗಡ್ಡ ಮೀಸೆ ಬಿಡುವಂತಿಲ್ಲ : ಈಗಿನ ಫ್ಯಾಷನ್ ಜಗತ್ತಿನಲ್ಲಿ ಎಲ್ಲರೂ ಗಡ್ಡ, ಮೀಸೆಯನ್ನು ವೈವಿಧ್ಯಮಯ ರೂಪದಲ್ಲಿ ಬಿಡುವವರೇ. ಆದರೆ ಒಲಂಪಿಕ್ಸ್ ನ ಬಾಕ್ಸಿಂಗ್ ಸ್ಪರ್ಧೆಗಳಲ್ಲಿ ನೀವು ಪಾಲ್ಗೊಳ್ಳಬೇಕಾದಲ್ಲಿ ಗಡ್ಡ ಮೀಸೆಗೆ ತಿಲಾಂಜಲಿ ನೀಡಲೇ ಬೇಕು. ಏಕೆಂದರೆ ನೀವು ಬಾಕ್ಸಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಬೇಕಾದರೆ ಕ್ಲೀನ್ ಶೇವ್ ಮಾಡಿಕೊಂಡೇ ಸ್ಪರ್ಧಿಸಬೇಕು. ಅವರ ಪ್ರಕಾರ ಸ್ಪರ್ಧಿಗೆ ಗಾಯಗಳಾದ ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಸುಲಭವಾಗಬೇಕಾದರೆ ಗಡ್ದ ಮೀಸೆ ಇರಬಾರದಂತೆ !
ನೇಲ್ ಪಾಲಿಶ್ ಹಾಕಬಾರದು : ಜಿಮ್ನಾಸ್ಟಿಕ್ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ನಿಮ್ಮ ದೇಹವು ಬಿಲ್ಲಿನಂತೆ ಬಾಗಿದರೆ ಮಾತ್ರ ಸಾಲದು, ನೀವು ನಿಮ್ಮ ಉಗುರಿಗೆ ನೈಲ್ ಪಾಲಿಶ್ ಹಾಕಲೂ ಬಾರದು. ಅದರ ಜೊತೆಗೆ ಮೇಕಪ್ ಸಹಾ ಮಾಡಿಕೊಳ್ಳಬಾರದಂತೆ. ಏಕೆಂದರೆ ಗಾಢವಾದ ಮೇಕಪ್ ಮತ್ತು ನೈಲ್ ಪಾಲಿಶ್ ನಿಮ್ಮ ಆರೋಗ್ಯವನ್ನು ಗುರುತಿಸಲು ಸಮಸ್ಯೆಯಾಗುತ್ತದೆಯಂತೆ. ಮೈಬಣ್ಣ ಮತ್ತು ಉಗುರಿನಿಂದ ನಿಮ್ಮ ಆರೋಗ್ಯವನ್ನು ತೀರ್ಪುಗಾರರು ಅಳೆಯುತ್ತಾರೆ. ಈ ಕಾರಣದಿಂದ ಜಿಮ್ನಾಸ್ಟಿಕ್ ಸ್ಪರ್ಧಿಗಳು ನೈಲ್ ಪಾಲಿಶ್ ಹಾಕಬಾರದು.
ಇನ್ ಶರ್ಟ್ ಅತ್ಯಗತ್ಯ: ಒಲಂಪಿಕ್ಸ್ ನಲ್ಲಿ ನಡೆಯುವ ಬೈಸಿಕಲ್ ಮೋಟೋಕ್ರಾಸ್ (ಬಿ ಎಂ ಎಕ್ಸ್) ಸ್ಪರ್ಧೆಯಲ್ಲಿ ಭಾಗವಹಿಸಲೇ ಬೇಕಾದರೆ ನಿಮ್ಮ ಶರ್ಟ್ ಅಥವಾ ಟೀ ಶರ್ಟ್ ಅನ್ನು ಇನ್ ಶರ್ಟ್ ಮಾಡಿಕೊಳ್ಳಲೇ ಬೇಕು. ಗುಡ್ಡಗಾಡು ಪ್ರದೇಶಗಳಲ್ಲಿ ರೋಚಕವಾಗಿ ನಡೆಯುವ ಈ ಕ್ರೀಡೆಯಲ್ಲಿ ಭಾಗವಹಿಸಲು ಇದೊಂದು ವಿಚಿತ್ರ ನಿಯಮವಿದೆ. ಆಯೋಜಕರ ಪ್ರಕಾರ ಸ್ಪರ್ಧೆಯ ಸಮಯದಲ್ಲಿ ನೀವು ಇನ್ ಶರ್ಟ್ ಮಾಡದೇ ಇದ್ದರೆ ನಿಮ್ಮ ಶರ್ಟ್ ಸೈಕಲ್ ನ ಚಕ್ರಗಳಿಗೆ ಸಿಲುಕಿಕೊಳ್ಳುವ ಸಾಧ್ಯತೆ ಇದೆಯಂತೆ.
ಕುಸ್ತಿಗೆ ವಸ್ತ್ರದ ತುಂಡು ಅಗತ್ಯ: ನೀವು ಒಲಂಪಿಕ್ಸ್ ನ ಕುಸ್ತಿ ಆಟದಲ್ಲಿ ಭಾಗವಹಿಸುವರೇ ಆದರೆ ನಿಮ್ಮ ಕಿಸೆಯಲ್ಲಿ ಪುಟ್ಟ ಬಟ್ಟೆಯ ತುಂಡು ಅಥವಾ ಕರವಸ್ತ್ರ ಇರುವುದು ಅಗತ್ಯ. ಹೆಚ್ಚಾಗಿ ಕುಸ್ತಿಪಟುಗಳು ತಮ್ಮ ಸಮವಸ್ತ್ರದ ವಿನ್ಯಾಸದ ಬಟ್ಟೆಯ ತುಂಡುಗಳನ್ನೇ ಇಟ್ಟುಕೊಳ್ಳುತ್ತಾರೆ. ಇದೇನೂ ನಿಮಗೆ ಸೀನು ಬಂದರೆ ಅಥವಾ ಕಣ್ಣೀರು ಬಂದರೆ ಒರೆಸಿಕೊಳ್ಳಲು ಅಲ್ಲ. ಸ್ಪರ್ಧೆಯ ಸಮಯದಲ್ಲಿ ಗಾಯವಾಗಿ ರಕ್ತ ಒಸರಿದರೆ ಅದನ್ನು ಒರೆಸಿಕೊಳ್ಳಲು ಈ ಬಟ್ಟೆ ಅಗತ್ಯ. ಈ ಬಟ್ಟೆಗೆ ‘ಬ್ಲಡ್ ರಾಗ್' ಎನ್ನುತ್ತಾರೆ.
ಫ್ಯಾಕ್ಸ್ ಬಳಕೆ: ತಂತ್ರಜ್ಞಾನವು ಏರುಗತಿಯಲ್ಲಿರುವ ಸಮಯದಲ್ಲೂ ಒಲಂಪಿಕ್ಸ್ ಕ್ರೀಡೆಯೊಂದರಲ್ಲಿ ವಿಜೇತರ ದಾಖಲೆಯನ್ನು ಘೋಷಿಸಲು ಈಗಲೂ ಫ್ಯಾಕ್ಸ್ ನ ಬಳಕೆಯಾಗುತ್ತದೆಯಂತೆ. ಯಾವುದು ಆ ಕ್ರೀಡೆ ಅಂತೀರಾ? ಈಜಿನ ಸ್ಪರ್ಧೆಗಳಲ್ಲಿ ಈಜುಪಟುಗಳು ವಿಶ್ವದಾಖಲೆ ನಿರ್ಮಿಸಿದರೆ ಆ ವಿವರಗಳನ್ನು ಸಮಿತಿಯು ವಿಶ್ವ ಅಕ್ವಾಟಿಕ್ಸ್ ಸಂಸ್ಥೆ (ಫಿನಾ) ಗೆ ಫ್ಯಾಕ್ಸ್ ಮುಖಾಂತರವೇ ಕಳುಹಿಸಬೇಕಂತೆ. ಆಗ ಮಾತ್ರ ಅದು ಅಧಿಕೃತ ಎಂದು ದಾಖಲಾಗುತ್ತದೆ. ಈಗಿನ ಕಾಲದಲ್ಲೂ ಇಂತಹ ಸಂಪ್ರದಾಯವೊಂದು ಜಾರಿಯಲ್ಲಿರುವುದು ಅಚ್ಚರಿಯೇ ಸರಿ.
ಮಾತಾಡಿದರೆ ದಂಡ: ಯಾವುದೇ ಸ್ಪರ್ಧೆಗಳಲ್ಲಿ ಎದುರಾಳಿಯ ವಿರುದ್ಧ ಕ್ರೀಡಾಪಟು ಆಕ್ರೋಶದಿಂದ ಕಿರಿಚಾಡುವುದು, ಬೈಗುಳವಾಡುವುದು ಸಾಮಾನ್ಯ. ಆದರೆ ಒಲಂಪಿಕ್ಸ್ ನ ಈ ಆಟದಲ್ಲಿ ನೀವು ಹಾಗೆ ಮಾಡಿದರೆ ನಿಮಗೆ ದಂಡ ಬೀಳಬಹುದು. ಜೊತೆಗೆ ಕ್ರೀಡೆಯಿಂದ ಅನರ್ಹಗೊಳಿಸಲೂ ಬಹುದು. ಹೌದು, ಕುದುರೆ ಸವಾರಿ ಸ್ಪರ್ಧೆಯ ಈಕ್ವೆಸ್ಟ್ರಿಯನ್ ಆಟದಲ್ಲಿ ಸವಾರ ತುಟಿ ಬಿಚ್ಚುವಂತಿಲ್ಲ. ತುಟಿಕ್ ಪಿಟಿಕ್ ಎನ್ನದೇ ಮೌನ ವೃತ ಧರಿಸಿ ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ೧೯೩೨ರ ಸ್ವೀಡನ್ ಒಲಂಪಿಕ್ಸ್ ನ ಈ ಕ್ರೀಡೆಯಲ್ಲಿ ಓರ್ವ ಸ್ಪರ್ಧಿ ನಾಲಗೆಯಿಂದ ‘ಕ್ವಾಕ್' ಎಂದು ಶಬ್ಧ ಮಾಡಿದ್ದಕ್ಕೆ ದಂಡ ವಿಧಿಸಲಾಗಿತ್ತು.
ಈ ಮೇಲಿನ ಕೆಲವು ನಿಯಮಗಳು ಮತ್ತು ಸಂಪ್ರದಾಯಗಳು ಕೇವಲ ಸ್ಯಾಂಪಲ್ ಅಷ್ಟೇ. ಈಗಿನ ನೂತನ ತಂತ್ರಜ್ಞಾನ, ಆಧುನಿಕ ಯುಗದಲ್ಲೂ ಈ ನಿಯಮಗಳು ಅಚ್ಚರಿ ಹುಟ್ಟಿಸುತ್ತಿವೆ. ಒಲಂಪಿಕ್ಸ್ ಸಮಿತಿಯಲ್ಲಿರುವ ವ್ಯಕ್ತಿಗಳು ‘ಮೊಹಬ್ಬತೇ’ ಎಂಬ ಹಿಂದಿ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಹೇಳುವ ಡೈಲಾಗ್ ಅನ್ನು ಚಾಚೂ ತಪ್ಪದೇ ಪಾಲಿಸುತ್ತಾರೆ ಅನಿಸುತ್ತೆ. ಅದರಲ್ಲಿ ಅಮಿತಾಬ್ “I Don't like changes” (ನಾನು ಬದಲಾವಣೆ ಅಥವಾ ಪರಿವರ್ತನೆಯನ್ನು ಇಷ್ಟಪಡುವುದಿಲ್ಲ) ಎಂದು ಆಗಾಗ ಹೇಳುತ್ತಾನೇ ಇರುತ್ತಾರೆ. ಭವಿಷ್ಯದಲ್ಲಾದರೂ ಇಂತಹ ಹಲವಾರು ನಿಯಮಗಳು ಬದಲಾವಣೆ ಹೊಂದಲಿ, ಅರ್ಹ ಕ್ರೀಡಾಳುಗಳು ಇಂತಹ ನಿಯಮಗಳ ಕಾರಣ ಅನರ್ಹವಾಗದಿರಲಿ ಎಂಬುದೇ ನಮ್ಮ ಆಶಯ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ