ಒಲವಿನೊಸಗೆ
ಕವನ
ಹನಿ ಹನಿ ಒಲವಧಾರೆ
ಧಾರಾಕಾರ ಹರಿಸಿದೆ ನೀನು
ಮಳೆಯಲ್ಲಿ ನಿಂತ ಗೋರ್ಕಲ್ಲು
ಕೊನರದ ಕೊರಡಾದೆ ನಾನು.
ಹಸಿರ ಹಬ್ಬಿಸಲೆಂದೆ ಹರಿದೆ
ಪ್ರೀತಿಯೊರತೆಯಾಗಿ ನಾನು
ತೀರದ ದಾಹದ ಮರುಭೂಮಿ
ನನ್ನ ಹೀರಿ ನಿಂತೆ ನೀನು.
ನನಗೆ ನೀನು; ನಿನಗೆ ನಾನು
ಮರೆಯಬಹುದೆ ವಾಸ್ತವ?
ಅವರು ಇವರು ಎಲ್ಲ ಇರಲಿ
ನಿರ್ವ್ಯಾಜ ಪ್ರೀತಿ ಹಂಚುವ.
ಹಂಚಿ ತಿನುವ ಹಣ್ಣು - ಪ್ರೀತಿ
ಔದಾರ್ಯ ಸ್ವಾತಂತ್ರ್ಯ ಅದರ ರೀತಿ
ನೀಗಿಕೊಳುವ ಬಗೆಯ ಭೀತಿ
ತಿಳಿವು ಒಲವು ಬಾಳ ನೀತಿ.
ಒಲವ ಧಾರೆ ಹರಿಸು ನೀನು
ಚಿಗುರಿ ನಲಿವ ನೆರಳಾಗುವೆ ನಾನು
ಸಸ್ಯಶಾಮಲೆ ಮಾತೆಯೆನಿಸು ನೀನು
ಪ್ರೀತಿ ನದಿಯಾಗಿ ಹರಿವೆ ನಾನು.