ಒಲವೆಂದರೆ...
ಒಲವೆಂದರೆ...!
ಒಲವೆಂದರೆ ಹೀಗೇನೆ ಎಲ್ಲಂದರಲ್ಲಿ ಭೂತಾಯಿ ಎದೆಗೆ ಬಿದ್ದ ಮಳೆಯ ಹನಿಗಳು ಹೊರಡಿಸುವ ಘಮ್ಮೆನ್ನುವ ಸುವಾಸನೆಯಂತೆ. ಸದ್ದಿಲ್ಲದೆ ಸರಿಯುವ ಕಾಲದಂತೆ. ಅವ್ವನ ಮಡಿಲ ಮೇಲೆ ಬೆಚ್ಚಗೆ ಮಲಗಿ ನಿದ್ರಿಸಿದಂತೆ. ಗಾಲಿಬ್ ನ ಬರಹದ ಅಮಲಿನಂತೆ.!
ಆ ದಿನ ನಿನಗಾಗಿ ಹದಿನೇಳು ಪುಟಗಳ ಪ್ರೇಮ ಪತ್ರ ಕೈಗಿತ್ತಾಗ ನಿನ್ನ ಎದೆ ಒಂದು ಕ್ಷಣ ಜಲ್ಲೆಂದಿದ್ದು ನನಗೆ ಗೊತ್ತು. ಯಾಕೆಂದರೆ ನಿನಗೆ ಸ್ಪಷ್ಟವಾಗಿ ಗೊತ್ತಿತ್ತು ಅದರಲ್ಲಿ ಪ್ರೀತಿಸಿಕೊಂಡ ನಮ್ಮಿಬ್ಬರ ಭಾವಗಳು ಮಾತ್ರವೆ ಇರಲಿಲ್ಲ. ಅಲ್ಲಿ ನಾವು ಸುತ್ತಾಡಿದ ಬೀದಿ ತಿರುವುಗಳು, ಕಾನನದಂಚಿನ ಎತ್ತರೆತ್ತರದ ವೃಕ್ಷಗಳು , ಬಣ್ಣ ಬಣ್ಣದ ಹೂ - ಚಿಟ್ಟೆಗಳು, ಹಸಿ ಹಸಿ ಕೊಂಬೆ ರೆಂಬೆ ಮರದ ಕಾಂಡಗಳು , ಉದುರಿ ಬಿದ್ದ ಒಣಗೆದೆಲೆಗಳು , ಹಿಡಿ ಮಣ್ಣ ಗುಂಪಿನಿಂದ ಹೊರಬಂದ ಇರುವೆಯ ಸಾಲುಗಳು , ಧೋ ಎಂದು ಬಿಸಿಲಲ್ಲೆ ಸುರಿದ ಮಳೆಗೆ ಸೃಷ್ಟಿಯಾದ ಕಾಮನ ಬಿಲ್ಲು, ಒಂದೆ ಸವನೆ ಬೆಚ್ಚಗಿಡುವ ಬಿಸಿ ಭಾವಗಳು , ಕದ್ದು ನೋಡಿದ ನೇಸರನ ಕಿರಣಗಳು, ದಡ ತಾಕಿದ ಅಲೆಗಳು, ನೋಡು ನೋಡುತ್ತಲೆ ಉದುರಿಬಿದ್ದ ನಕ್ಷತ್ರಗಳು ಯಾವುದಿರಲಿಲ್ಲ ಹೇಳು.? ನಮ್ಮ ಒಲವಿನೊಟ್ಟಿಗೆ.! ಯಾವುದೊ ಒಂದು ಜೊತೆಯಾಗುತ್ತಲೆ ಇತ್ತು.
ಸಾಕೆನಿಸದಷ್ಟು ಸಾಲ...
ಹೌದು ಯಾರಿಗೆ ಸಾಕಾಗುತ್ತೆ ಹೇಳು ? ಒಲವೊಂದು ಧಾರೆ ಎರೆದುಕೊಡುತ್ತಲೇ ಇದ್ದರೆ.! ನಿನ್ನ ಪ್ರೀತಿಗೆ ಬೆಲೆ ಕಟ್ಟಿದರೆ ನಿಜಕ್ಕೂ ನನ್ನ ಮುರ್ಖತನದ ಪರಮಾವಧಿ ಮೀರಿದಂತೆಯೆ.! ಅದೆಷ್ಟೊ ಸಂಗೀತದ ಸಾಲುಗಳು ನಮಗಾಗಿಯೆ ಬರೆದು ಹಾಡಿದಂತೆ ಅನಿಸೋದು ನಿನ್ನ ಗಟ್ಟಿಯಾಗಿ ತಬ್ಬಿ ಹಣೆಗೆ ಮುತ್ತಿಟ್ಟು ದೂರ ಸರಿದಾಗಲೆ..!
ಯಾರಿಗೂ ಹೇಳಬೇಡ ಕಂಗಳು ಹಸಿಯಾದಗೆಲ್ಲಾ ಕಂಬನಿ ಜಾರಿ ಗುಲ್ಮೊಹರ್ ನ ನಾಬಿಯೊಳಗೆ ಬಿದ್ದದ್ದು.!
ಯಾಕಿಷ್ಟು ಅಂತರ ನಮ್ಮಿಬ್ಬರ ಮಧ್ಯೆ ? ನಿನಗೆ ನನ್ನ ನಿವೇದನೆಗಳನ್ನು ತಿಳಿಸುವುದಾದರೂ ಹೇಗೆ ಹೇಳು ? ವಿನಿಮಯಗೊಂಡ ಪ್ರೇಮ ಸಲ್ಲಾಪವೆಲ್ಲ ನಿನಗೆ ನಿರುಪಯುಕ್ತವಾಗಿ ಹೋಯಿತೆ ? ಸುಖಾಸುಮ್ಮನೆ ತುಟಿಗಳೇಕೆ ಮೌನ ವೃತ ಹಿಡಿದಿವೆ ? ಯಾವುದೊ ಉಮೇದಿಗೆ ಬಿದ್ದು ಭಾವನೆಗಳನ್ನು ಬಿಚ್ಚಿಡದೆ ಅವಡುಗಚ್ಚಿ ಬದುಕಬೇಡ.!
ಪ್ರೀತಿಸುವುದಾದರೆ ಪ್ರೀತಿಸಿಬಿಡು ಉಸಿರುಗಟ್ಟದ ಹಾಗೆ ಉಸಿರಾಡುತ.! ಶುದ್ಧ ಒಲವೊಂದೆ ಅಲ್ಲಿರಲಿ.! ಮತ್ತೊಂದು ಮೊಗದೊಂದು ಬೇಡವೆ ಬೇಡ.
ನಿ'ನಿಲ್ಲದೆ' ಹೋದ ಮೇಲೆ ಅಮವಾಸ್ಯೆಗೆಲ್ಲಾ ಬೆಳದಿಂಗಳು ಹುಡುಕುವ ಖಯಾಲಿಗೆ ಬೀಳುತ್ತೇನೆ.! ವಿನಾಃ ಕಾರಣ ನಡುರಾತ್ರಿಯಲಿ ತಲೆದಿಂಬು ತಬ್ಬಿ ಮಲಗುತ್ತೇನೆ.! ಈ ನಡುವೆ ಬೀದಿ ತಿರುವಲಿ ವ್ಯರ್ಥ ಸಮಯ ಭರಿಸುತ್ತೇನೆ.! ಯಾಕಿಷ್ಟು ಕೋಪ ಗೆಳತಿ ?ಒಂದೊಮ್ಮೆ ಹೇಳಿಬಿಡು ನನ್ನೊಲವೆ ಎಂದು.! ಅಷ್ಟೆ ಸಾಕಲ್ಲವೆ ಇದೊಂದು ಜನ್ಮ ದಾಟಿಸಲು. ಬಿಚ್ಚಿಟ್ಟ ಸಂಪೂರ್ಣ ಹೃದಯ ನನ್ನದು ಅಲ್ಲಿ ಕಾನೂನು ನಿನ್ನದೆ. ರಾಯಬಾರಿಯೂ ನೀನೆ. ನಿನ್ನದೆ ಖಾಸಗಿ ಸ್ಮಾರಕ. ನಿನ್ನಿಂದಲೆ ಅದರ ಬಡಿತ. ಈ ಒಲವಿನಂಕಣ ಹೃದಯದಾಳದ ಹೃದೃಂಗದೊಳಗಿನ ಹಸಿ ಮನಸಿನಿಂದ ಗೀಚಿರುವೆ ಎದೆಗವಚಿಕೊ ಒಣಗಿ ಅಚ್ಚಾಗುವವರೆಗೆ.!
ಇಂತಿ ನಿನ್ನ
ಒಲವಿನೂರಿನ ಕನಸುಗಾರ.
- ಮೌನೇಶ ಕನಸುಗಾರ
8970870271