ಬೆಳಗಿನ ಸೂರ್ಯನ ಎಳೆಬಿಸಿಲೂ ಕೂಡ ರಂಗನಿಗೆ ಸುಡುವ ಬೆಂಕಿಯಂತೆ ಭಾಸವಾಗುತಿತ್ತು. ಅವನು ಮೇಸ್ತ್ರಿ ಹನುಮಂತಪ್ಪನ ಮನೆಯ ಕಡೆ ಬಿರಬಿರನೆ ಹೆಜ್ಜೆ ಹಾಕುತ್ತಿದ್ದ. ಕೆಲಸ ನಿಂತು ಸರಿಯಾಗಿ ಎಲ್ಲೂ ಕೂಲಿ ಸಿಕ್ಕದೆ ಒಂದು ತಿಂಗಳಾಗಿತ್ತು. ಅದರ ಹಿಂದಿನ ತಿಂಗಳು ಕೆಲಸ ಮಾಡಿದ ಎರಡು ವಾರಗಳ ಕೂಲಿಯ ಹಣವೂ ಕೈಗೆ ಸಿಕ್ಕಿರಲಿಲ್ಲ. ಕಾಯಿನ್ ಬೂತಿನಿಂದ ಫೋನು ಮಾಡಿ ಯಾವಾಗ ಕೇಳಿದರೂ ಮೇಸ್ತ್ರಿ ಹನುಮಂತಪ್ಪ ‘ಸಾವ್ಕಾರ್ರಿಗೆ ಬಿಲ್ಲು ಬಂದಿಲ್ಲ.. ಮುಂದಿನ ಶನಿವಾರ ನೋಡೋಣ’ ಎಂದು ಹೇಳುತಿದ್ದ. ಮೂರ್ನಾಲ್ಕು ದಿನಗಳಿಂದ ಅವನ ಮೊಬೈಲ್ ಫೋನೂ ಸ್ವಿಚ್ ಆಫ್ ಆಗಿತ್ತು. ಕೈಯಲ್ಲಿ ಉಳಿಸಿದ್ದ ಹಣವೂ ಖಾಲಿಯಾಗಿ ಮನೆಯ ಬಾಡಿಗೆಯನ್ನೂ ಕಟ್ಟದೆ, ಅಂಗಡಿಯಲ್ಲಿ ಸಾಲ ತಂದ ಸಾಮಾನುಗಳಿಗೆ ಹಣ ನೀಡದೆ ಬದುಕು ದುಸ್ತರವಾಗಿತ್ತು. ಮಗುವಿಗೆ ಕುಡಿಯಲು ಹಾಲು ತರಲೂ ಒಂದು ಬಿಡಿಗಾಸು ಹಣವಿರಲಿಲ್ಲ. ಮೇಸ್ತ್ರಿ ಸಿಕ್ಕಿದರೆ ಹೇಗಾದರೂ ಮಾಡಿ ನೂರು ರೂಪಾಯಿಯನ್ನಾದರೂ ಇಸ್ಕಂಡು ಬರಬೇಕು ಎಂಬ ನಿರ್ಧಾರದಿಂದ ರಂಗ ಬೆಳಿಗ್ಗೆಯೇ ಮೇಸ್ತ್ರಿಯ ಮನೆಯ ಕಡೆ ಹೊರಟಿದ್ದ.
ರಂಗ ಮೇಸ್ತ್ರಿಯ ಮನೆಗೆ ಹೋಗಿ ಬರ್ತೀನಿ ಅಂತ ಅತ್ತ ಹೋದ ತಕ್ಷಣ ಅವನ ಹೆಂಡತಿ ಕೆಂಪಿ ಅಡುಗೆ ಮಾಡಲು ಏನಾದರೂ ಉಳಿದಿವೆಯೇ ಎಂದು ತಡಕಾಡಿದಳು. ಮನೆಯ ಖಾಲಿ ಡಬ್ಬಗಳಲ್ಲಿ ಒಂದು ಬೊಗಸೆ ರಾಗಿಹಿಟ್ಟು, ಒಂದು ಹಿಡಿ ಅಕ್ಕಿ ಮುದುರಿಕೊಂಡು ಕುಳಿತಿದ್ದವು. ಏನನ್ನೋ ಯೋಚಿಸಿಕೊಂಡು ತನ್ನ ಒಂದೂವರೆ ವರ್ಷದ ಮಗಳನ್ನು ಎತ್ತಿಕೊಂಡು ಅಂಗಡಿಯ ಕಡೆ ನಡೆದಳು. ಅಂಗಡಿಯಲ್ಲಿ ಮೂರ್ನಾಲ್ಕು ಜನ ಸಾಮಾನು ಕೊಂಡುಕೊಳ್ಳಲು ಬಂದಿದ್ದರು. ಅಂಗಡಿಯವನು ಇವಳನ್ನು ನೋಡಿಯೂ ನೋಡದವನಂತೆ ಅವರಿಗೆಲ್ಲಾ ಏನೇನು ಬೇಕೆಂದು ಕೇಳಿ ಸಾಮಾನು ಕಟ್ಟಿಕೊಡುತ್ತಿದ್ದ. ಕೆಂಪಿ ಮಗುವನ್ನು ಎತ್ತಿಕೊಂಡು ಅಂಗಡಿಯ ಒಂದು ಬದಿಯಲ್ಲಿ ನಿಂತು ಸಹನೆಯಿಂದ ಕಾಯತೊಡಗಿದಳು. ಎಲ್ಲರೂ ಸಾಮಾನುಗಳನ್ನು ಪಡೆದು ಅಂಗಡಿಯಿಂದ ಹೋದ ಮೇಲೆ ತನ್ನ ಗಂಟಲು ಸರಿಪಡಿಸಿಕೊಳ್ಳುತ್ತಾ ‘ಒಂದರ್ಧ ಕೇಜಿ ಅಕ್ಕಿ ಕೊಡಣ್ಣಾ..’ ಎಂದಳು. ಅಂಗಡಿಯವನ ಮುಖ ದಪ್ಪಗಾಯಿತು. ‘ದುಡ್ಡು ತಂದಿದೀಯಾ..’ ಅಂತ ಅಸಹನೆಯಿಂದ ಕೇಳಿದ. ‘ಶನಿವಾರ ಬಟವಾಡಿ ಆಯ್ತದೆ ತಂದುಕೊಡ್ತೀನಿ ಕೊಡಣ್ಣಾ...’ ಎಂದು ಕ್ಷೀಣ ಧ್ವನಿಯಲ್ಲಿ ನುಡಿದಳು. ‘ಆಗಲೇ ಇಂತೋವು ಎಷ್ಟೋ ಶನಿವಾರ ಆಗೋದೋ.. ಮೊದ್ಲು ಇರೋ ಬಾಕೀನ ತೀರಿಸ್ಬುಟ್ಟು ಬಂದು ಸಾಮಾನು ಕೇಳು..’ ಎಂದು ಅಂಗಡಿಯವನು ಮುಖಕ್ಕೆ ಹೊಡೆದಂತೆ ಹೇಳಿ ಕುರ್ಚಿಯಲ್ಲಿ ಕುಳಿತು ಎತ್ತಲೋ ನೋಡತೊಡಗಿದ. ಕೆಂಪಿಗೆ ಏನು ಮಾಡುವುದೆಂದು ತೋಚದೆ ತುಸು ಹೊತ್ತು ಅಲ್ಲೇ ಸುಮ್ಮನೆ ನಿಂತುಕೊಂಡಳು. ಎತ್ತಿಕೊಂಡಿದ್ದ ಮಗಳು ತನ್ನ ಪುಟ್ಟ ಕೈಯಿಂದ ಮುಖದ ಮೇಲೆಲ್ಲಾ ಮೆಲ್ಲಗೆ ಬಡಿಯುತ್ತಿದ್ದಳು. ಇವತ್ತಿನ ಒಂದು ಹೊತ್ತಿನ ಊಟಕ್ಕಾದರೆ ಸಾಕು ಎಂದುಕೊಂಡು ಕೊನೆಯ ಪ್ರಯತ್ನವೆಂಬಂತೆ ‘ ಕಾಲು ಕೇಜಿನಾದ್ರೂ ಕೊಡಣ್ಣಾ..’ ಎಂದು ಕೇಳಿದಳು. ‘ಕಾಲು ಕೇಜೀನೂ ಇಲ್ಲ.. ಹತ್ತು ಗ್ರಾಮೂ ಇಲ್ಲ..’ ಎಂದು ಅಂಗಡಿಯವನು ನಿರ್ದಯೆಯಿಂದ ತಿಳಿಸಿದ. ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮಗಳನ್ನು ಎತ್ತಿಕೊಂಡು ಮನೆಗೆ ಬಂದಳು.
ರಂಗನ ಜೀವನದಲ್ಲಿ ಇಂತಹ ಒಂದು ಪರಿಸ್ಥಿತಿ ಯಾವಾಗಲೂ ಎದುರಾಗಿರಲಿಲ್ಲ. ಆಗಾಗ ಕೆಲಸ ನಿಂತರೂ ಮೇಸ್ತ್ರಿ ಹನುಮಂತಪ್ಪ ತನ್ನನ್ನು ನಂಬಿದ ಆಳುಗಳಿಗೆ ಹೇಗೋ ಕೆಲಸ ಹೊಂದಿಸಿಕೊಂಡು ಬರುತ್ತಿದ್ದ. ಆದರೆ ಇತ್ತೀಚೆಗೆ ಅವನು ಈಗೀಗ ಎಲ್ಲಾ ಮೆಷಿನ್ನಲ್ಲೇ ಕೆಲ್ಸ ಮಾಡ್ಸಿಕೊಳ್ಳೋಕೆ ಶುರು ಮಾಡಕಂಡವ್ರೆ ಎಂದು ನಿಟ್ಟುಸಿರುಬಿಡುತಿದ್ದುದು ಅವನನ್ನು ನಂಬಿದ ಎಲ್ಲಾ ಜನರಿಗೆ ಗೊತ್ತಿತ್ತು. ನಿರಂತರ ಯಾಂತ್ರೀಕರಣ ಮತ್ತು ಬಂಡವಾಳಶಾಹಿಪೂರಕ ಆರ್ಥಿಕತೆಯ ಪರಿಣಾಮವಾಗಿ ಎಲ್ಲೆಂದರಲ್ಲಿ ಕಾಣಿಸಿಕೊಂಡಿದ್ದ ದೈತ್ಯ ಯಂತ್ರಗಳು ದುಡಿಯುವ ಕೈಗಳ ಕೆಲಸವನ್ನು ಕಿತ್ತುಕೊಂಡಿದ್ದವು.
ಮೇಸ್ತ್ರಿಯ ಮನೆಯ ಬಳಿ ಬಂದ ರಂಗನಿಗೆ ನಿರಾಸೆ ಕಾದಿತ್ತು. ಮೇಸ್ತ್ರಿ ಓಡಾಡುತ್ತಿದ್ದ ಮೋಟಾರು ಸೈಕಲ್ ಮನೆಯ ಬಳಿ ಕಾಣದೆ ಮೇಸ್ತ್ರಿ ಮನೆಯಲ್ಲಿಲವೆಂಬುದು ಅವನಿಗೆ ದೃಢವಾಗಿಹೋಯಿತು. ಆದರೂ ಮುಚ್ಚಿದ್ದ ಬಾಗಿಲನ್ನು ತಟ್ಟಿದಾಗ ಮೇಸ್ತ್ರಿಯ ಹೆಂಡತಿ ಗಂಗಮ್ಮ ಒಳಗಿನಿಂದಲೇ ‘ಯಾರು..’ ಎಂದು ಕೂಗಿದಳು. ‘ನಾನು ಕಣಕ್ಕಾ ರಂಗಯ್ಯ..’ ಎಂದು ತನ್ನ ಗುರುತನ್ನು ಹೇಳಿದಾಗ ಬಾಗಿಲು ತೆರೆದ ಗಂಗಮ್ಮ ಮುಖದಲ್ಲಿ ಅಸಹನೆ ತುಂಬಿಕೊಂಡು ‘ಏನು’ ಎಂದು ಕೇಳಿದಳು. ಅವಳಿಗೆ ದಿನವೂ ಮೇಸ್ತ್ರಿಯನ್ನು ಹುಡುಕಿಕೊಂಡು ಬರುತ್ತಿದ್ದ ಆಳುಗಳಿಗೆ ಉತ್ತರ ನೀಡಿ ಸಾಕಾಗಿಹೋಗಿತ್ತು. ‘ಮೇಸ್ತ್ರಿ ಇಲ್ವಾ..’ ಎಂದ ರಂಗನಿಗೆ ‘ಅವ್ರಿಲ್ಲ.. ಸಾವ್ಕಾರ್ರು ನೋಡೋದಿಕ್ಕೆ ಟೌನಿಗೋಗವ್ರೆ..’ ಎಂದು ಹೇಳಿ ಬಾಗಿಲು ಮುಚ್ಚಲು ಸಿದ್ಧವಾದಳು. ‘ಒಂದು ನೂರು ರೂಪಾಯಿ ಇದ್ರೆ ಕೊಡಕ್ಕಾ..’ ಎಂದು ಕೇಳೋಣವೆಂದು ನಾಲಿಗೆಯ ತುದಿಗೆ ಬಂದ ಮಾತು ತನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗುವುದೇನೋ ಎನಿಸಿ ಹೊರಬರದೆ ಬಾಯಿಯಲ್ಲಿಯೇ ಉಳಿಯಿತು. ‘ ಮೇಸ್ತ್ರಿ ಬಂದ ಮೇಲೆ ರಂಗಯ್ಯ ಬಂದಿದ್ದ ಅಂತ ಹೇಳಕ್ಕಾ..’ ಎಂದ ರಂಗನಿಗೆ ಗಂಗಮ್ಮ ‘ಆಯ್ತು..’ ಎಂದು ಹೇಳಿ ಮರುಮಾತನಾಡದೆ ಬಾಗಿಲು ಮುಚ್ಚಿದಳು. ಬೇರೆ ದಾರಿ ಕಾಣದೆ ರಂಗ ಮುಂದೇನು ಎಂದು ಯೋಚಿಸುತ್ತಾ ತನ್ನ ಮನೆಯತ್ತ ವಾಪಾಸು ನಡೆದ.
ಅಂಗಡಿಯಿಂದ ಮನೆಗೆ ಬಂದ ಕೆಂಪಿ ಡಬ್ಬದಲ್ಲಿದ್ದ ಒಂದು ಹಿಡಿ ಅಕ್ಕಿಯಲ್ಲಿ ಅನ್ನ ಮಾಡಿ ಅದನ್ನು ಮಿದ್ದು ಮೆತ್ತಗೆ ಮಾಡಿ ಮಗುವಿಗೆ ತಿನ್ನಿಸಿ ನೀರು ಕುಡಿಸಿದಳು. ಬಾಯಿ ಒರೆಸಿ ಅದನ್ನು ನಡುಮನೆಯಲ್ಲಿದ್ದ ಚಾಪೆಯ ಮೇಲೆ ಕುಳ್ಳಿರಿಸಿಕೊಂಡು ಆಡಲು ಕೈಗೆ ಗಿಲುಕಿ ಕೊಟ್ಟು ರಂಗನ ದಾರಿಯನ್ನೇ ಕಾತುರದಿಂದ ಕಾಯತೊಡಗಿದಳು.
ಒಂದೇ ಕಡೆ ಕೂಲಿ ಕೆಲಸಕ್ಕಾಗಿ ಹೋಗುತ್ತಿದ್ದ ರಂಗ ಮತ್ತು ಕೆಂಪಿಯರ ನಡುವೆ ಬಾಹ್ಯ ರೂಪದ ಆಕರ್ಷಣೆ, ಜಾತಿ, ಅಂತಸ್ತುಗಳಿಂದ ಮುಕ್ತವಾದ ನಿರ್ಮಲ ಪ್ರೀತಿಯೊಂದು ಅರಳಿ ಹೂವಾಗಿತ್ತು. ಅವರಿಬ್ಬರ ಅಂತರಾಳದಲ್ಲಿದ್ದ ಸಮಾನ ಭಾವನೆಗಳು ಅವರನ್ನು ಒಂದುಗೂಡಿಸಿದ್ದವು. ಬೇರೆ ಬೇರೆ ಜಾತಿಯೆಂಬ ಕಾರಣಕ್ಕಾಗಿ ಊರಿನ ಮುಖಂಡರು ತಮ್ಮ ಮಕ್ಕಳಿಗೂ ಇದೊಂದು ಮಾದರಿಯಾಗಿಬಿಟ್ಟೀತು ಎಂಬ ಭಯದಿಂದ ಬಹಿಷ್ಕಾರದ ಬೆದರಿಕೆ ಹಾಕಿದ್ದರು. ಆದರೆ ರಂಗ ಮತ್ತು ಕೆಂಪಿಯರೊಂದಿಗೆ ಕೂಲಿಕೆಲಸ ಮಾಡುತ್ತಿದ್ದ ಸಹಕಾರ್ಮಿಕರೆಲ್ಲರೂ ಅವರಲ್ಲಿ ಧೈರ್ಯ ತುಂಬಿ ದೇವಸ್ಥಾನವೊಂದರಲ್ಲಿ ಮದುವೆ ಮಾಡಿಸಿದ್ದರು. ಮದುವೆಯಾದ ನಂತರ ಊರಿನವರ ಬಹಿಷ್ಕಾರಕ್ಕೆದರಿ ಊರನ್ನೇ ಬಿಟ್ಟು ಪಟ್ಟಣಕ್ಕೆ ಬಂದು ಮೇಸ್ತ್ರಿ ಹನುಮಂತಪ್ಪನ ಆಶ್ರಯ ಪಡೆದು ಹೊಟ್ಟೆ ತುಂಬಿಸಿಕೊಳ್ಳುವ ಕಾಯಕದಲ್ಲಿ ತೊಡಗಿಕೊಂಡು ಎರಡು ದೇಹ ಒಂದೇ ಜೀವದಂತೆ ಬದುಕುತ್ತಿದ್ದ ರಂಗ ಮತ್ತು ಕೆಂಪಿಯರ ದಾಂಪತ್ಯಜೀವನ ಅನನ್ಯವಾಗಿತ್ತು. ಅವರ ಪ್ರೀತಿಯ ದ್ಯೋತಕವಾಗಿ ಕೆಂಪಿಯ ಒಡಲಲ್ಲಿ ಜೀವವೊಂದು ಮೊಳೆತಾಗ ಅವರಿಬ್ಬರ ಆನಂದಕ್ಕೆ ಪಾರವೇ ಇರಲಿಲ್ಲ. ಮಗುವಾದ ನಂತರ ಕೆಂಪಿ ತಾತ್ಕಾಲಿಕವಾಗಿ ಕೂಲಿ ಕೆಲಸ ಬಿಟ್ಟು ಅದರ ಆರೈಕೆಯಲ್ಲಿಯೇ ಪೂರ್ತಿ ಸಮಯ ಕಳೆಯತೊಡಗಿದ್ದಳು.
ಬಾಡಿದ ಮುಖವನ್ನೊತ್ತು ಬರಿಗೈಲಿ ಮರಳಿದ ರಂಗನ ಮುಖ ಕಂಡು ಕೆಂಪಿಗೆ ಹೋದ ಕೆಲಸವಾಗಿಲ್ಲ ಎಂಬುದು ತಿಳಿಯಿತು. ಅಗಾಧವಾದ ಚಿಂತೆಯಲ್ಲಿ ಮುಳುಗಿ ಗೋಡೆಗೊರಗಿ ಕುಳಿತ ರಂಗನನ್ನು ಕಂಡು ‘ಅದ್ಯಾಕಂಗೆ ಚಿಂತೆ ಮಾಡ್ತಾ ಇದೀಯಾ.. ಏನೋ ಒಂದು ಮಾಡಿದ್ರಾಯ್ತು’ ಎಂದು ಧೈರ್ಯ ತುಂಬಿ ಅಡಿಗೆ ಮನೆಗೆ ಹೋಗಿ ಇದ್ದ ಬೊಗಸೆಯಷ್ಟು ರಾಗಿ ಹಿಟ್ಟಿನಲ್ಲಿ ಒಂದು ರೊಟ್ಟಿ ಬಡಿದು ಉಪ್ಪಿನ ಕಾಯಿ ಹಾಕಿ ತಟ್ಟೆಯಲ್ಲಿ ತಂದು ‘ಎದ್ದೇಳು ಕೈತೊಳ್ಕಂಡು ಬಂದು ರೊಟ್ಟಿ ತಿನ್ನು..’ ಅಂದ ಕೆಂಪಿಯನ್ನು ಕಂಡು ರಂಗ ‘ನೀನು ರೊಟ್ಟಿ ತಿಂದಾ.. ’ ಅಂತ ಕೇಳಿದ. ‘ಯಾಕೋ ಹೊಟ್ಟೆ ಹಸೀತಿತ್ತು.. ಪಾಪೂಗೆ ಅನ್ನ ಮಾಡಿ ತಿನ್ನಿಸಿ ನಾನೂ ಅದುನ್ನೇ ತಿಂದೆ’ ಎಂದಳು ಕೆಂಪಿ. ಅವಳು ಹೇಳುತ್ತಿರುವುದು ಸುಳ್ಳು ಎಂಬುದನ್ನು ಆಕೆಯ ಮುಖಚಹರೆಯಿಂದಲೇ ತಿಳಿದ ರಂಗನಿಗೆ ಇನ್ನಿಲ್ಲದ ಸಂಕಟವಾಯಿತು. ಕೈತೊಳೆದುಕೊಂಡು ಬಂದು ‘ನೀನು ತಿಂದಿದೀಯಾ ಅಂತ ಗೊತ್ತು. ಕೂತ್ಕೋ ಬಾ.. ಇರೋದನ್ನೇ ಒಟ್ಟಿಗೆ ತಿನ್ನನ’ ಎಂದ ಗಂಡನ ಅಂತಃಕರಣದಲ್ಲಿದ್ದ ವಾತ್ಸಲ್ಯವನ್ನು ತಿಳಿದಿದ್ದ ಕೆಂಪಿಗೆ ಬೇಡವೆನ್ನಲಾಗಲಿಲ್ಲ. ಮುಗುಳ್ನಗುತ್ತಲೇ ಬಂದು ತಟ್ಟೆಯ ಮುಂದೆ ಕುಳಿತಳು. ಮಗು ಚಾಪೆಯ ಮೇಲೆ ಕುಳಿತು ಗಿಲುಕಿಯನ್ನು ಅಲ್ಲಾಡಿಸುತಿತ್ತು.
ರೊಟ್ಟಿ ತಿಂದು ಬಂದು ಇಬ್ಬರೂ ಆಟವಾಡುತ್ತಿದ್ದ ಮಗುವಿನ ಬಳಿಯಲ್ಲಿ ಕುಳಿತಾಗ ಮಗುವಿಗೆ ರಾತ್ರಿ ತಿನ್ನಲು ಅನ್ನಕ್ಕಾಗಿ ಏನು ಮಾಡುವುದೆಂಬ ಚಿಂತೆ ಕಾಡತೊಡಗಿತ್ತು. ಕೆಂಪಿಯ ಮನದಲ್ಲಿ ಪಕ್ಕನೆ ಆಲೋಚನೆಯೊಂದು ಮೂಡಿ ಆಕೆಯ ದೃಷ್ಟಿ ಕೊರಳಿನಲ್ಲಿ ಕರಿಮಣಿಯ ಸರದ ಜೊತೆಗಿದ್ದ ನಯಾಪೈಸೆ ಅಗಲದ ಚಿನ್ನದ ಮಾಂಗಲ್ಯದ ಕಡೆ ಹರಿಯಿತು. ಹೇಳಲೋ ಬೇಡವೋ ಎಂದುಕೊಂಡು ‘ಒಂದು ಕೆಲ್ಸ ಮಾಡಾನ..’ ಎಂದು ಹೇಳಿ ರಂಗನತ್ತ ನೋಡಿದಳು. ಅವನು ಏನು ಎನ್ನುವಂತೆ ಕೆಂಪಿಯತ್ತ ತಿರುಗಿದ. ‘ಇದನ್ನ ತಗಂಡೋಗಿ ಎಲ್ಲಾದ್ರೂ ಮಾರ್ಕಂಡು ಬರೋಗು...’ ಎಂದು ಹೆಂಡತಿ ತೋರಿಸಿದ ಮಾಂಗಲ್ಯದ ಕಡೆ ನೋಡಿ ರಂಗನಿಗೆ ತನ್ನ ಅಸಹಾಯಕ ಪರಿಸ್ಥಿತಿಯನ್ನು ನೆನೆದು ಜೀವ ಹಿಂಡಿದಂತಾಯಿತು. ಅವನಿಗೂ ಅದನ್ನು ಬಿಟ್ಟು ಬೇರೆ ದಾರಿ ಕಾಣಿಸಲಿಲ್ಲ. ‘ಆಮೇಲೆ ತಗಂಡು ಬಂದ್ರಾಯ್ತು...’ ಎಂದ ಕೆಂಪಿ ತನ್ನ ಕೊರಳಿನಿಂದ ಕರಿಮಣಿಯ ಸರವನ್ನು ತೆಗೆಯಲು ಕೈ ಹಾಕಿದಾಗ ಹೊರಗೆ ಬಾಗಿಲಿನಲ್ಲಿ ಮೋಟಾರು ಸೈಕಲ್ಲು ಬಂದು ನಿಂತ ಸದ್ದಾಗಿ ಕೆಂಪಿಯ ಕೈ ಅಲ್ಲಿಯೇ ಉಳಿಯಿತು. ಇಬ್ಬರೂ ಎದ್ದು ಹೊರಗೆ ಬಂದರು.
ಬಾಗಿಲ ಬಳಿಯಲ್ಲಿ ಮೇಸ್ತ್ರಿ ಹನುಮಂತಪ್ಪ ನಿಂತಿದ್ದ. ‘ಮನೆ ಹತ್ರ ಬಂದಿದ್ದಂತೆ.. ಸಾವ್ಕಾರ್ರು ನೋಡಾನ ಅಂತ ಹೋಗಿದ್ದೆ. ಸಾವ್ಕಾರ್ರಿಗೆ ಬಿಲ್ ಆಗಿ ದುಡ್ಡು ಬಂದದೆ.. ಬಾಕಿ ಇದ್ದುದನ್ನೆಲ್ಲಾ ಚುಕ್ತಾ ಮಾಡಿದ್ರು. ತಗೋ..’ ಎಂದು ಹೇಳಿ ಜೇಬಿನಲ್ಲಿದ್ದ ಹಣದ ಕಟ್ಟಿನಿಂದ ಬರಬೇಕಾಗಿದ್ದ ಎರಡು ವಾರದ ಕೂಲಿ ಹಣವನ್ನು ಎಣಿಸಿ ರಂಗನ ಕೈಯಲ್ಲಿಟ್ಟಾಗ, ರಂಗ ಮತ್ತು ಕೆಂಪಿಯರ ಮನಸ್ಸಿನಲ್ಲಿ ಬೆಟ್ಟದಂತಹ ಕಷ್ಟ ಮಂಜಿನಂತೆ ಕರಗಿ ಮಾಯವಾದಂತಾಗಿ ಇಬ್ಬರ ಮುಖಗಳು ಸಂತಸದಿಂದ ಅರಳಿದವು. ‘ಸಾವ್ಕಾರ್ರು ಹೊಸ ಕೆಲ್ಸ ತಗಂಡವ್ರೆ.. ಮುಂದಿನ ವಾರದಿಂದ ಶುರು ಮಾಡು ಅಂದ್ರು.. ಇನ್ಮೇಲೇನೂ ಪ್ರಾಬ್ಲಮ್ ಇಲ್ಲ.. ಸೋಮವಾರ ಬೆಳಿಗ್ಗೇನೆ ಬಂದುಬಿಡು..’ ಎಂದು ಹೇಳಿ ಮೇಸ್ತ್ರಿ ಹನುಮಂತಪ್ಪ ಮೋಟಾರು ಸೈಕಲ್ ಹತ್ತಿ ಹೋದ ನಂತರ ಒಳಗೆ ಬಂದ ಇವರಿಬ್ಬರನ್ನು ನೋಡಿ ಮಂದಹಾಸ ಬೀರಿದ ಮಗುವನ್ನು ಎತ್ತಿಕೊಂಡು ಮುದ್ದಾಡಿದರು. ಅಂದು ಪ್ರೇಮಿಗಳ ದಿನವೆಂದು ಅವರಿಗೆ ತಿಳಿದೇ ಇರಲಿಲ್ಲ.
Comments
ಕಥೆ ಸೂಪರ್. ಓದಿದ ಕೂಡಲೇ ಕನ್ನಡದ
In reply to ಕಥೆ ಸೂಪರ್. ಓದಿದ ಕೂಡಲೇ ಕನ್ನಡದ by ಮಮತಾ ಕಾಪು
ಕಥೆಯನ್ನು ಮೆಚ್ಚ್ಫಿರುವುದಕ್ಕೆ
ಮಿಡಿವ ಹೃದಯಗಳ ಕಥೆ! ಚೆನ್ನಾಗಿದೆ.
In reply to ಮಿಡಿವ ಹೃದಯಗಳ ಕಥೆ! ಚೆನ್ನಾಗಿದೆ. by kavinagaraj
ಕವಿನಾಗರಾಜ್ ಸಾರ್.. ಧನ್ಯವಾದಗಳು