ಒಲವ ಧಾರೆ

ಒಲವ ಧಾರೆ

ಪುಸ್ತಕದ ಲೇಖಕ/ಕವಿಯ ಹೆಸರು
ರಾಮಕೃಷ್ಣ ಹೆಗಡೆ
ಪ್ರಕಾಶಕರು
ಕ್ರಿಯೇಟಿವ್ ಪುಸ್ತಕ ಮನೆ, ಕುಕ್ಕುಂದೂರು, ಕಾರ್ಕಳ
ಪುಸ್ತಕದ ಬೆಲೆ
ರೂ. ೮೦.೦೦, ಮುದ್ರಣ : ೨೦೨೪

ರಾಮಕೃಷ್ಣ ಹೆಗಡೆ ಇವರು ಬರೆದ 'ಒಲವ ಧಾರೆ' ಎನ್ನುವ ಕವನ ಸಂಕಲನ ಇತ್ತೀಚೆಗೆ ಕಾರ್ಕಳದ ಪುಸ್ತಕ ಮನೆ ಪ್ರಕಾಶನದ ಮುಖಾಂತರ ಬಿಡುಗಡೆಯಾಗಿದೆ. ಈ ಕವನ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಜಯಲಕ್ಷ್ಮಿ ಕೆ. ಇವರು ತಮ್ಮ ಮುನ್ನುಡಿ ಬರಹದಲ್ಲಿ ವ್ಯಕ್ತ ಪಡಿಸಿದ ಅನಿಸಿಕೆಗಳ ಆಯ್ದ ಭಾಗ... 

“ನವೋದಯ-ನವ್ಯ ಸಾಹಿತ್ಯರಚನೆಯ ಈ ಕಾಲಘಟ್ಟದಲ್ಲಿ ಕವನಗಳನ್ನು ರಚಿಸಲು ನಿರ್ದಿಷ್ಟ ನಿಯಮಗಳೇನೂ ಇಲ್ಲವಾದರೂ ತೋಚಿದ್ದನ್ನೆಲ್ಲ ಗೀಚಿದರೆ ಅದು ಕವನ ಎನಿಸಿಕೊಳ್ಳುವುದಿಲ್ಲ. ಅನುಭವಗಳ ಸಾರವನ್ನು ಕಲ್ಪನೆಯ ಮೂಸೆಯಲ್ಲಿ ಎರಕ ಹೊಯ್ದಾಗ ಕವನಗಳ ಸೃಷ್ಟಿಯಾಗುತ್ತದೆ ಎನ್ನುವ ಮಾತಿದೆ. ಈ ನಿಟ್ಟಿನಲ್ಲಿ ರಾಮಕೃಷ್ಣ ಹೆಗಡೆಯವರ ಬಹುತೇಕ ಕವನಗಳು ಅವರ ಅನುಭವಗಳ ಸಾರವನ್ನು ನಮಗೆ ಮೊಗೆ- ಮೊಗೆದು ಕೊಡುತ್ತವೆ. ಕವನಗಳಲ್ಲಿ ಅಡಕವಾಗಿರುವ ಅನುಭವ ಸಾರ್ವತ್ರಿಕವಾದಷ್ಟೂ ಕವನಗಳ ಮೌಲ್ಯ ಹೆಚ್ಚು. ಈ 'ಒಲವ ಧಾರೆ' ಕವನ ಸಂಕಲನದಲ್ಲಿರುವ ರಾಮಕೃಷ್ಣರವರ ಬಹುತೇಕ ಕವನಗಳಲ್ಲಿ ವ್ಯಕ್ತವಾಗುವ ಕವಿಯ ಅನುಭವಗಳು ನಮ್ಮ ಅನುಭವಗಳೇ ಎನ್ನುವಷ್ಟರಮಟ್ಟಿಗೆ ನಮ್ಮ ಮನಸಿಗೆ ಭಾಸವಾಗುವುದರಿಂದಲೇ ಅವು ನಮಗೆ ಆಪ್ತವಾಗುತ್ತವೆ. ಯಾರಿಗೂ ಕಾಯದೆ ಅತಿವೇಗದಲ್ಲಿ ಸರಿದು ಹೋಗುತ್ತಿರುವ ಈ ಕಾಲದಲ್ಲಿ ಬದುಕಲ್ಲಿ ಎದುರಾಗುವ ಪ್ರಶ್ನೆಗಳಿಗೆ ನಾವೇ 'ಉತ್ತರ' ಆಗಬೇಕು ಎನ್ನುವ ಕವಿ ಜೀವನದಲ್ಲಿ ಮೌಲ್ಯಗಳಷ್ಟೇ ಮುಖ್ಯ ಎನ್ನುತ್ತಾ 'ಕೂಡಿಟ್ಟ ಹಣ ಎಲ್ಲಿ ಹೋಯಿತು?' ಎಂದು ಕೇಳುವ ಮೂಲಕ ಬದುಕಿನ ಸಾರ ಸತ್ವ ಯಾವುದು ಎಂಬ ಚಿಂತನೆಗೆ ನಮ್ಮನ್ನು ಹಚ್ಚಿದ್ದಾರೆ.

ಸಂಸಾರ ಸಾಗರದ ಕಷ್ಟ ಕೋಟಲೆಗಳಿಗೆ ಅಂಜದೆ ತತ್ವಾದರ್ಶಗಳ ಮೂಲಕ ಬದುಕಿದ ಅಪ್ಪಯ್ಯ ನಿಗೆ ಕವಿ ಸಲ್ಲಿಸುವ ಧನ್ಯತೆಯ ಭಾವ ಬಹುತೇಕ ನಮ್ಮೆಲ್ಲರ ಭಾವನೆಗಳೇ ಆಗಿವೆ. ಆದ್ದರಿಂದಲೇ ಆ ಕವನ ನಮ್ಮ ಮನ ಗೆದ್ದಿದೆ. ಹಗಲೆಲ್ಲ ಬೆಳಗುವ ಭಾಸ್ಕರ ಇರುಳಾಗುತ್ತಲೇ ಸರಿವನು ಅಂತೆಯೇ ನಮ್ಮ ಜೀವಿತದಲ್ಲೂ ಕೂಡಾ. ಎಲ್ಲವುಗಳಿಂದ ನಾವು ಮುಕ್ತರಾಗಿ ಬದುಕಬೇಕು ಎನ್ನುತ್ತಾ ಎಲ್ಲವೂ ದೇವರ ಚಿತ್ತದಂತೆಯೇ ನಡೆಯುತ್ತದೆ ಎಂಬುದನ್ನು 'ಮುಕ್ತ' ದಲ್ಲಿ ವ್ಯಕ್ತಪಡಿಸಿದ್ದಾರೆ. ಮೂರು ತೋಟದ ಮಲ್ಲಿಗೆ ಎನ್ನುವ ಕವನದಲ್ಲಿ ಬದುಕಿನ ಸಾರ್ಥಕತೆಯ ಬಗ್ಗೆ ಕಿವಿಮಾತನ್ನು ಹೇಳಿರುವ ಕವಿ ವಿಶ್ವ ಶಾಂತಿಯನ್ನು ಸಾರುವುದನ್ನು ಮರೆಯಲಿಲ್ಲ. ಕವಿ ಉಪನ್ಯಾಸಕ ಆಗಿರುವ ಕಾರಣಕ್ಕೇ ಇರಬೇಕು ಕರಿಹಲಗೆಗೆ ಬಹಳ ಪ್ರಾಶಸ್ತ್ರವನ್ನು ನೀಡಿದ್ದಾರೆ. ಅದು ನೀಡಬೇಕಾದದ್ದೂ ಹೌದು. ನಮ್ಮ ಬದುಕನ್ನು ಬಿಳಿಯಾಗಿಸುವಲ್ಲಿ ಕರಿ ಹಲಗೆ ವಹಿಸುವ ಪಾತ್ರ ಹಿರಿದು. ಈ ಅಂಶವನ್ನು ಬಹಳ ಸ್ವಾರಸ್ಯಕರವಾಗಿ ಬಣ್ಣಿಸಿದ ಕವಿ ಇಲ್ಲಂತೂ ಅದ್ಭುತ ಕಲಾತ್ಮಕತೆಯನ್ನು ಮೆರೆದಿದ್ದಾರೆ.

ಸತ್ಯ ಪಥ, ದಿವ್ಯ ತೇಜ, ದಾರಿ-ಹೆಜ್ಜೆ, ಕ್ಷಾತ್ರತೇಜ, ಒಲವ ಕಾಣ್ಕೆ ಮುಂತಾದ ಕವನಗಳು ಕವಿಯಾದವನು ಬದುಕನ್ನು ವಿವಿಧ ಆಯಾಮಗಳಿಂದ ನೋಡುತ್ತಾನೆ ಎನ್ನುವುದಕ್ಕೆ ನಿದರ್ಶನ ಎನ್ನುವಂತಿದೆ. "ಪದ ಕುಸಿಯೆ ನೆಲವಿಹುದು" ಎಂಬ ಕಗ್ಗದ ಸಾಲನ್ನು ನೆನಪಿಸುವ 'ಕಾಲರಾಯ' ಕವನ ರಾಮಕೃಷ್ಣರವರು ಪ್ರಬುದ್ಧ ಕವನಗಳನ್ನು ರಚಿಸುವಲ್ಲಿಯೂ ಸಿದ್ಧಹಸ್ತರು ಎನ್ನುವುದಕ್ಕೆ ಸಾಕ್ಷಿಯೆನಿಸಿದೆ.

ನೈತಿಕ ಮೌಲ್ಯಗಳನ್ನು ತಮ್ಮ ಬೋಧನೆಯ ಜೊತೆ-ಜೊತೆಗೆ ಮಕ್ಕಳಿಗೆ ನೀಡುತ್ತಿರುವ ರಾಮಕೃಷ್ಣರವರು ತಮ್ಮ ಕವನಗಳುದ್ದಕ್ಕೂ ಒಂದಿಲ್ಲೊಂದು ನೀತಿಯನ್ನು ಸಾರುತ್ತಲೇ ಸಾಗಿದ್ದಾರೆ. ಒಟ್ಟಿನಲ್ಲಿ ಉಪನ್ಯಾಸಕರಾಗಿ ಮಕ್ಕಳ ಮನ ಗೆದ್ದಿರುವ ಶ್ರೀಯುತ ರಾಮಕೃಷ್ಣರವರು ಕವಿಯಾಗಿ ಸಾಹಿತ್ಯ ಕ್ಷೇತ್ರಕ್ಕೆ ಶ್ಲಾಘನೀಯ. ಒಲವ ಧಾರೆಯೇ ಮೊದಲಾಗಿ ಬಹಳಷ್ಟು ಕವನ ಸಂಕಲನಗಳು ಇವರ ಲೇಖನಿಯಿಂದ ಮೂಡಿ ಬರಲಿ, ತನ್ಮೂಲಕ ಕನ್ನಡ ಸಾಹಿತ್ಯ ಮತ್ತಷ್ಟು ಶ್ರೀಮಂತ ಗೊಳ್ಳಿ ಎಂದು ಆಶಿಸೋಣ.”