ಒಲವ ವೃಷ್ಟಿ

ಒಲವ ವೃಷ್ಟಿ

ಪುಸ್ತಕದ ಲೇಖಕ/ಕವಿಯ ಹೆಸರು
ವಿಶ್ವನಾಥ ಅರಬಿ
ಪ್ರಕಾಶಕರು
ಸಂಗೀತ ಜಗತ್ತು ಪ್ರಕಾಶನ, ವಿಜಯಪುರ
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೪

ಉದಯೋನ್ಮುಖ ಕವಿ ವಿಶ್ವನಾಥ ಅರಬಿ ಇವರು ತಮ್ಮ ನೂತನ ಕವನ ಸಂಕಲನ ‘ಒಲವ ವೃಷ್ಟಿ' ಯನ್ನು ಇತ್ತೀಚೆಗೆ ಹೊರತಂದಿದ್ದಾರೆ. ಈ ಸಂಕಲನಕ್ಕೆ ವಿಶ್ವನಾಥ ಅರಬಿ ಇವರು ಬರೆದ ಮುನ್ನುಡಿಯ ಕೆಲವು ಸಾಲುಗಳು ನಿಮ್ಮ ಓದಿಗಾಗಿ...

“ಮತ್ತೆ ತಮ್ಮೊಂದಿಗೆ ನನ್ನ ಭಾವನೆಗಳನ್ನು ಹಂಚಿಕೊಳ್ಳಲು ಸಿದ್ಧಗೊಂಡಿರುವ ಈ ಕವನ ಸಂಕಲನವನ್ನು ಒಪ್ಪಿ, ಅಪ್ಪಿಕೊಂಡು ಓದುತ್ತಿರುವ ಕನ್ನಡ ಮನಸ್ಸುಗಳಿಗೆ ನನ್ನ ಹೃದಯಂತರಂಗದ ಅನಂತ ಕೋಟಿ ನಮನಗಳು. ತಮ್ಮೆಲ್ಲರ ಪ್ರೋತ್ಸಾಹದೊಂದಿಗೆ ಇಲ್ಲಿಯವರೆಗೆ ನನ್ನೆಲ್ಲ ಆರು ಕೃತಿಗಳು ಯಶಸ್ವಿಯಾಗಿವೆ. ಅದಕ್ಕಾಗಿ ತಮಗೆ ಎಷ್ಟು ಧನ್ಯವಾದಗಳನ್ನು ತಿಳಿಸಿದರೂ ಕಡಿಮೆಯಾಗುವುದು.

ಪ್ರೀತಿ-ಪ್ರೇಮ ಎನ್ನುವವು ಈ ಭೂಮಿಯ ಮೇಲೆ ಬೆಲೆ ಕಟ್ಟಲಾಗದ ಬಾಂಧವ್ಯ-ಭಾವನೆಗಳು. ಅಂತಹ ಬಾಂಧವ್ಯಗಳ ಕುರಿತು ಅದೆಷ್ಟು ಕವಿತೆ, ಲೇಖನಗಳನ್ನು ಬರೆದರೂ ಸಹ ಕಡಿಮೆಯೇ. ನನ್ನ ಮನದಲ್ಲಿ ಅರಳಿದ ಪ್ರೀತಿ -ಪ್ರೇಮದ ಭಾವನೆಗಳನ್ನು ಈ 'ಒಲವ ವೃಷ್ಟಿ'  ಕೃತಿಯಲ್ಲಿ  ಹಿಡಿದಿಡುವ ಸಣ್ಣ ಪ್ರಯತ್ನ ಮಾಡಿದ್ದೇನೆ. ಪ್ರೀತಿ ಎನ್ನುವುದು ಯಾವಾಗಲೂ ಹಸಿರನ್ನು ಬೆಳೆಸಿ, ಪೋಷಿಸುವ ಮಳೆಯಂತೆ. ಹೀಗಾಗಿ, ಒಲವ ವೃಷ್ಟಿಗೆ ಒಲವು ತೋರಿಸಿ, ನನ್ನೊಳಗೂ ಒಲವಾಗಿ, ಒಲವ ವೃಷ್ಟಿಯನ್ನು ಸುರಿಸಿ, ಇದೀಗ ನನ್ನೀ ಕೃತಿಗೆ ಬೆನ್ನುಡಿ ಬರೆದುಕೊಟ್ಟು ಒಲವ ಸಿಹಿ ಹಂಚುತ್ತಿರುವ ನನ್ನ ಪ್ರೀತಿಯ ಮುದ್ದಿನ ಮಡದಿ ನನ್ನಾತ್ಮದರಸಿ ಶ್ರೀಮತಿ ಸಂಗೀತಾ ಮಠಪತಿಯವರಿಗೆ ನನ್ನೊಲವಿನ ನಮನಗಳನ್ನು ತಿಳಿಸುವೆ.    

ಹುಟ್ಟಿನಿಂದ ಇಲ್ಲಿಯವರೆಗೆ ತಮ್ಮೊಲವಿನಂಗಳದಲ್ಲಿ ನನ್ನನ್ನು ಬೆಳೆಸಿ, ಪೋಷಿಸಿ, ಹಾರೈಸಿ ಆಶೀರ್ವಾದದೊಂದಿಗೆ ಶುಭ ಹಾರೈಕೆ ನುಡಿಗಳನ್ನು ಬರೆದುಕೊಡುವ ಮೂಲಕ ಪ್ರತೀ ಕಾರ್ಯದಲ್ಲೂ ಜೊತೆಯಾಗಿ ನಿಂತು ತಮ್ಮ ಪ್ರೀತಿಯನ್ನು ನೀಡುತ್ತಿರುವ ನನ್ನ ಹೆತ್ತವರಾದ ಶ್ರೀ ಬಸಪ್ಪ ಈಶ್ವರಪ್ಪ ಅರಬಿ ಮತ್ತು ಶ್ರೀಮತಿ ಶಂಕ್ರಮ್ಮ ಬಸಪ್ಪ ಅರಬಿ ಅವರಿಗೆ ನಾನು ಚಿರರುಣಿಯಾಗಿರುವೆ.        

ವಿಶ್ವ ಎಂದ ಕೂಡಲೆ ಎಲ್ಲಿಲ್ಲದ ಪ್ರೀತಿ ತೋರಿಸಿ, ತಮ್ಮ ಮನೆ ಮಗನಂತೆ ಕಾಣುವುದರೊಂದಿಗೆ ನನ್ನೆಲ್ಲ ಸಾಹಿತ್ಯವನ್ನು ಸ್ವತಃ ಮೆಚ್ಚಿ ಪ್ರೀತಿಯಿಂದ ಓದಿ ಚೆನ್ನಾಗಿ ಬರೆಯುತ್ತೀಯಾ ಎಂದು ಚೈತನ್ಯದಾಯಕ ನುಡಿಗಳನ್ನಾಡುವ ನನ್ನೆಲ್ಲ ಆತ್ಮೀಯರಿಗೆ ಮತ್ತೊಮ್ಮೆ ವಂದಿಸುತ್ತಾ, ನನ್ನ ಮುಂದಿನ ಹೊಸ ಹೆಜ್ಜೆಗಳಿಗೆ ತಮ್ಮೆಲ್ಲರ ಪ್ರೋತ್ಸಾಹ, ಹಾರೈಕೆ ಜೊತೆಗೆ ಸಲಹೆ,ಸಹಕಾರ, ಮಾರ್ಗದರ್ಶನ ಇರಲೆಂಬ ನಿವೇದನೆಯೊಂದಿಗೆ ತಮ್ಮೊಳಗಿನವನೊಬ್ಬ ತಮ್ಮ ವಿಶ್ವಾಸದ ವಿಶ್ವ.”

ವಿಶ್ವನಾಥ ಅರಬಿಯವರ ಪತ್ನಿ ಹಾಗೂ ಸಾಹಿತಿ ಸಂಗೀತಾ ಮಠಪತಿಯವರು ಈ ಕೃತಿಗೆ ‘ಬೆನ್ನುಡಿ’ ಬರೆಯುವ ಮೂಲಕ ಪ್ರತಿಯೊಬ್ಬ ಯಶಸ್ವಿ ಗಂಡಸಿನ ಹಿಂದೆ ಹೆಣ್ಣು ಇದ್ದೇ ಇರುತ್ತಾಳೆ ಎಂದು ನಿರೂಪಿಸಿದ್ದಾರೆ ! ಅವರು ತಮ್ಮ ಪತಿಯ ಸಾಹಸಕ್ಕೆ ಬೆನ್ನು ತಟ್ಟುವ ಮೂಲಕ ವ್ಯಕ್ತ ಪಡಿಸಿದ ಭಾವನೆಗಳು ಹೀಗಿವೆ...

“ಪ್ರೀತಿ-ಪ್ರೇಮದ ಭಾವನೆಗಳನ್ನು ಬಿಚ್ಚಿಡುವುದೆಂದರೆ ಕವಿ ವಿಶ್ವನಾಥ ಅರಬಿಯವರಿಗೆ ಎಲ್ಲಿಲ್ಲದ ಉತ್ಸಾಹವೆನ್ನುವುದಕ್ಕೆ ಇವರ ಈ ಏಳನೇ ಕೃತಿ 'ಒಲವ ವೃಷ್ಟಿ' ಯೇ ಸಾಕ್ಷಿಯಾಗಿದೆ. ಏಕೆಂದರೆ, ಇವರು ಈಗಾಗಲೇ 'ಪ್ರೇಮ ಕಾರಂಜಿ' ಮತ್ತು 'ಭಾವ ಸೋಲುವ ವೇಳೆ' ಎಂಬೆರೆಡು ಕೃತಿಗಳಲ್ಲಿ ಪ್ರೀತಿ-ಪ್ರೇಮದ ಭಾವನೆಗಳ ಕುರಿತಾಗಿಯೆ ಕವಿತೆಗಳನ್ನು ರಚಿಸಿದ್ದಾರೆ. ಇದೀಗ ಮತ್ತದೇ ಪ್ರೇಮ ಪ್ರಯಾಣದಲ್ಲಿ ಪ್ರೀತಿ ಎಂದಿಗೂ ಶಾಶ್ವತ, ಅದು ಹಸಿರು ನಿಸರ್ಗ, ಮಳೆ ಹನಿಯಂತೆ ಎಂದು ಮನದುಂಬಿ ಒಲವ ಕವಿತೆಗಳ ಒಲವ ವೃಷ್ಟಿಯನ್ನೇ ಸುರಿಸಿದ್ದಾರೆ. ಇಲ್ಲಿನ ಕವಿತೆಗಳು ಬಹಳಷ್ಟು ಸರಳತೆಯಿಂದ ಕೂಡಿದ್ದು, ಮನದ ತುಡಿತವಾದ ಪ್ರೀತಿಯನ್ನು ವ್ಯಕ್ತಪಡಿಸುತ್ತವೆ. ನಿಸರ್ಗದ ಹಸಿರಿಗೆ ಆ ವರುಣ ಕಾರಣವಾದಂತೆ ನಮ್ಮ ಬದುಕಿನ ಹಸಿರಿಗೆ, ಜೀವ-ಭಾವದ ಉಸಿರಿಗೆ ಒಲವೇ ಕಾರಣವೆನ್ನವ ಕವಿಯ ಆಲೋಚನಾ ಶಕ್ತಿಯನ್ನು ನಾವೆಲ್ಲರು ಮೆಚ್ಚಲೇಬೇಕು.       

ವೃತ್ತಿಯೊಂದಿಗೆ ಪ್ರವೃತ್ತಿಯನ್ನು ಜಾಗರೂಕತೆಯಿಂದ ಸಮದೂಗಿಸಿಕೊಂಡು ಸಾಗುತ್ತಿರುವ ವಿಶ್ವನಾಥ ಅರಬಿಯವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಈಗಾಗಲೇ ಆರು ಕೃತಿಗಳನ್ನು ರಚಿಸಿ, ಸಾಕಷ್ಟು ಓದುಗರ ಮನ ಗೆದ್ದಿರುವ ಇವರು ಭಿನ್ನ-ವಿಭಿನ್ನ ಪ್ರಕಾರದ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡು, ತಾಯಿ ಕನ್ನಡಾಂಬೆಯ ಸೇವೆ ಮಾಡುತ್ತಿರುವುದು ಅಭಿನಂದನಾರ್ಹವಾಗಿದೆ. ಒಲವ ವೃಷ್ಟಿಯಲ್ಲಿನ ಕವಿತೆಗಳನ್ನು ಓದಿ ನಿಮ್ಮ ಬದುಕಿನಲ್ಲಿಯು ಹಸಿರನ್ನು ಕಾಣಿರಿ, ಕವಿತೆಗಳಲ್ಲಿ ನಿಮ್ಮವರನ್ನು ಹುಡುಕುತ್ತಾ ಸಾಗಿ ಆಗ ನಿಮ್ಮ ಮನದಲ್ಲೂ ಒಲವ ವೃಷ್ಟಿ ಸುರಿದು ಬದುಕು ಹಸಿರಾಗಲಿದೆ. ಕವಿ ವಿಶ್ವನಾಥ ಅರಬಿಯವರೊಂದಿಗೆ ತಮ್ಮೆಲ್ಲರ ಪ್ರೋತ್ಸಾಹ, ಹಾರೈಕೆ ಸದಾ ಇರಲಿ. ಇವರಿಂದ ಹೊಸ ಅಧ್ಯಯನಗಳಾಗಲಿ, ಜ್ಞಾನದೊಂದಿಗೆ ಕೃತಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲೆಂದು ಶುಭ ಹಾರೈಸುತ್ತೇನೆ.”