ಒಲಿಂಪಿಕ್ಸ್ : ಕ್ಷಣಾರ್ಧದಲ್ಲಿ ಭಗ್ನವಾದ ಕನಸುಗಳು….

ಒಲಿಂಪಿಕ್ಸ್ : ಕ್ಷಣಾರ್ಧದಲ್ಲಿ ಭಗ್ನವಾದ ಕನಸುಗಳು….

ವಿಶ್ವದ ಘಟಾನುಘಟಿ ಕ್ರೀಡಾಪಟುಗಳ ನಡುವೆ ಓಟಕ್ಕೆ ಅಣಿಯಾಗುತ್ತಿದ್ದ ಆಕೆಗೀನ್ನು ೨೦ ವರ್ಷ. ಆಕೆಯ ಜೀವನದ ಸರ್ವಶ್ರೇಷ್ಠ ಓಟಕ್ಕೆ ಕ್ಷಣಗಣನೆ ಆರಂಭವಾಗಿತ್ತು. ದೇಶದ ಕೋಟ್ಯಂತರ ಜನರ ಶುಭ ಆರೈಕೆ ಅವಳ ಮೇಲೆ. ಓಟ ಶುರುವಾಯಿತು.. ಇನ್ನೇನು ಗುರಿ ತಲುಪಲು ಕೆಲವೇ ಹೆಜ್ಜೆಗಳು ಬಾಕಿ ಇವೆ. ಆದಷ್ಟು ಭಾರತೀಯರ ಕನಸು ನನಸಾಗಲು ಇನ್ನು ಕೆಲವೇ ಕ್ಷಣಗಳು ಉಳಿದಿವೆ. ತನ್ನೆಲ್ಲ ಶಕ್ಕ್ತಿಯನ್ನು ಮೀರಿ ಆಕೆ ಓಡಿದಳು,ಗುರಿಯನ್ನೂ ತಲುಪಿದಳು. ಮೊದಲ ಹಾಗು ಎರಡನೆಯ ಸ್ಥಾನಗಳು ಮೊರಾಕೋ ಹಾಗೂ ಅಮೇರಿಕಾದ ಪಾಲಾದವು! ಮೊದಲೆರಡು ಸ್ಥಾನಗಳು ಇಲ್ಲದಿದ್ದರೂ ಮೂರನೆಯದಾದರೂ ಸಿಗುತ್ತಿದೆಯಲ್ಲ ಎಂದು ಎಲ್ಲರೂ ಭಾವಿಸುತ್ತಿರುವಾಗಲೇ ಅಚ್ಚರಿಯ ಸಂದೇಶವೊಂದು ಹೊರಬರುತ್ತದೆ. ಈಕೆಯದು ನಾಲ್ಕನೇ ಸ್ಥಾನವೆಂದು ಘೋಷಿಸಲಾಗುತ್ತದೆ!  ಅಂದು ಈಕೆಯೊಟ್ಟಿಗೆ ಕೋಟ್ಯಂತರ ಭಾರತೀಯರ ಪದಕದ ಆಸೆಯೂ ಭಗ್ನವಾಯಿತು. ನೂರನೇ ಒಂದು ಬಾಗದ (೧/೧೦೦ of a Second) ಕ್ಷಣಮಾತ್ರದಲ್ಲಿ ಅಂದು ಕಂಚಿನ ಪದಕ ಕೈ ತಪ್ಪಿತು! ಇದು ನೆಡೆದಿದ್ದು ೧೯೮೪ ರ ಲಾಸ್ ಏಂಜೆಲೀಸ್ ನ  ಒಲಿಂಪಿಕ್ಸ್ನನ  ೪೦೦ ಮೀಟರ್ hurdles ಓಟದಲ್ಲಿ. ದೇಶಕ್ಕಾಗಿ ಓಡಿದ ಆಕೆ 'ಪಾಯೋಲ್ಲಿ ಎಕ್ಸ್ಪ್ರೆಸ್ಸ್' ಎಂದು ಪ್ರಸಿದ್ದಿ ಪಡೆದು ದೇಶದ ಮನೆ ಮಾತಾಗಿದ್ದ  ಪಿಲಾವುಳ್ಳಕಂಡಿ ತೆಕ್ಕೆಪರಂಬಿಲ್ ಉಷಾ ಅಥವಾ ದೇಶದ ಚಿನ್ನದ ಹುಡುಗಿ ಪಿ ಟಿ ಉಷಾ.. ಕ್ಷಣ ಮಾತ್ರದಲ್ಲಿ ಪದಕವು ಕೈಜಾರಿದ ಆ ಗಳಿಗೆಯನ್ನು ಕ್ರೀಡಾಪ್ರಿಯರು ಇಂದಿಗೂ ಮರೆತಿಲ್ಲ.
ಆದುನಿಕ ಒಲಿಂಪಿಕ್ಸ್ ಶುರುವಾಗಿ ಸುಮಾರು ೧೨೦ ವರ್ಷಗಳಲ್ಲಿ ಭಾರತ ಗಳಿಸಿರುವುದು ಕೇವಲ ೨೪ ಪದಕಗಳು. (ನೋರ್ಮನ್ ಪಿಚರ್ಡ್ ರ  ಎರಡು ಪದಕಗಳನ್ನು ಬಿಟ್ಟು). ಆದರೂ, ಗುಲಾಮಗಿರಿಯಲ್ಲಿ ಬೆಂದು ಬೆಂಡಾಗಿದ್ದ  ಕಾಲದಲ್ಲೂ ತಮ್ಮ ಸ್ವಂತ ಪ್ರತಿಬೆ ಹಾಗು ಛಲದಿಂದ ಆಡಿದ ಅದೆಷ್ಟೋ ಆಟಗಾರರು ಅಂದು ವಿಶ್ವವನ್ನೇ ನಡುಗಿಸಿದ್ದರು. ಅಂತಹ ಹತ್ತಾರು ಸೆಣೆಸಾಟಗಳ ನೆನಪುಗಳು ಭಾರತದ ಒಲಿಂಪಿಕ್ ಇತಿಹಾಸದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿವೆ. ಕ್ಷಣಮಾತ್ರದಲ್ಲಿ ಪದಕಗಳ ಕನಸು ಭಗ್ನವಾದ ರೋಚಕ ಸೆಣೆಸಾಟಗಳ ಕೆಲವನ್ನು ಇಲ್ಲಿ ಮೆಲುಕು ಹಾಕಲಾಗಿದೆ.
 
1.ಹೆನ್ರಿ ರೆಬೆಲ್ಲೊ - ೧೯೪೮ ಲಂಡನ್ ಒಲಿಂಪಿಕ್ಸ್.
ಮೂಲತಃ ಬೆಂಗಳೂರಿನವನಾದ ಹೆನ್ರಿ ರೆಬೆಲ್ಲೊ ೧೯೪೮ ರ ಲಂಡನ್ ಒಲಿಂಪಿಕ್ಸ್ ನ ಟ್ರಿಪಲ್ ಜಂಪ್ ನಲ್ಲಿ ದೇಶವನ್ನು ಪ್ರತಿನಿಧಿಸುತ್ತಾನೆ. ಅದಾಗಲೇ ೧೫.೨೯ ಮೀಟರ್ (ಆಗಿನ ವಿಶ್ವ ದಾಖಲೆ - ೧೬ ಮೀಟರ್ )ನೆಗೆಯುವುದರ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದ ಹೆನ್ರಿ, ಸ್ವತಂತ್ರ ಭಾರತದ ಮೊದಲ ವೈಯಕ್ತಿಕ ಪದಕವನ್ನು ಗೆಲ್ಲುವ ಆಸೆಯನ್ನು ಚಿಗುರೊಡೆಸುತ್ತಾನೆ. ಒಲಿಂಪಿಕ್ಸ್ ನ ಅರ್ಹತಾ ಸುತ್ತಿನ ಮುನ್ನ ದಿನ ಏರ್ಪಡಿಸಿದ್ದ ಅಭ್ಯಾಸ ಪಂದ್ಯದಲ್ಲಿ ೧೫.೮೮ ಮೀಟರ್ ನೆಗೆಯುವ ಮೂಲಕ ವಿಶ್ವದ ಎಲ್ಲಾ ಟ್ರಿಪಲ್ ಜಂಪ್ ಆಟಗಾರರಲ್ಲೂ ನಡುಕವನ್ನು ಹುಟ್ಟಿಸಿದ್ದ ಹೆನ್ರಿ, ಆಗಸ್ಟ್ ೩ರ ಟ್ರಿಪಲ್ ಜಂಪ್ ನಲ್ಲಿ ಭಾರತದ ಧ್ವಜವನ್ನು ಚಿನ್ನದ ಪದಕದೊಟ್ಟಿಗೆ ಹಾರಿಸಲು ಕಣಕ್ಕೆ ಇಳಿಯುತ್ತಾನೆ. ಅರ್ಹತಾ ಸುತ್ತಿನಲ್ಲಿ ಸಲೀಸಾಗಿ ಗೆದ್ದು ಫೈನಲ್ಗೆ ಆಯ್ಕೆ ಆಗುತ್ತಾನೆ. ಆಗ ಹೆನ್ರಿ ಸೆಣೆಸುತ್ತಿದ್ದದ್ದು ಕಂಚು ಅಥವಾ ಬೆಳ್ಳಿಗಾಗಲಿ ಅಲ್ಲ, ಅದು ನೇರ ಚಿನ್ನದ ಪದಕಕ್ಕೆ ಎಂದರೆ ನೀವು ನಂಬಲೇ ಬೇಕು! ಅದು ನಮ್ಮವರಲ್ಲದೆ ಅಲ್ಲಿದ್ದ ಇತರ ದೇಶದ ಆಟಗಾರರೂ ಹಾಗು ಅವರ ಕೋಚ್ಗಳ ಊಹೆಯೂ ಆಗಿತ್ತು. ಹವಾಮಾನ ವೈಪರೀತ್ಯದಿಂದ ತರಾತುರಿಯಲ್ಲಿ ಓಟಕ್ಕೆ ಅಣಿ ಮಾಡಲಾಗುತ್ತದೆ. ಇದರಿಂದ ಹೆನ್ರಿ ಸರಿಯಾದ ವಾರ್ಮ್-ಅಪ್ ಕೂಡ ಮಾಡದೆ ಓಡಲು ಶುರುಮಾಡುತ್ತಾನೆ. ನೆರೆದಿದ್ದ ಇತರ ಆಟಗಾರರೆಲ್ಲರೂ ಬೆಕ್ಕಸ ಕಣ್ಣಿನಿಂದ ಈತನ ಓಟವನ್ನೇ ನೋಡತೊಡಗುತ್ತಾರೆ. ಟ್ರಿಪಲ್ ಜಂಪ್ ನ ಮೊದಲ ನಗೆ, ಇದ್ದಕ್ಕಿದ್ದಂತೆ ತೊಡೆಯ ಹಿಂಭಾಗದ ಸ್ನಾಯುಗಳಲ್ಲಿ ಏನೋ ಮುರಿದ ಸದ್ದು! ಕ್ಷಣ ಮಾತ್ರದಲ್ಲಿ ಹೆನ್ರಿ ಸ್ನಾಯು ಸೆಳೆತದಿಂದ ಕುಸಿಯುತ್ತಾನೆ, ತನ್ನ ಎರಡನೆಯ ನಗೆಯನ್ನು ಜಿಗಿಯುವ ಮೊದಲೇ! ಇದರಿಂದ ಪಂದ್ಯದಿಂದ ಹೊರಗುಳಿಯುತ್ತಾನೆ. ಲಕ್ಷಾಂತರ ಜನರ ಕನಸು ಕ್ಷಣ ಮಾತ್ರದಲ್ಲಿ ಛಿದ್ರವಾಗುತ್ತದೆ.   ಗೆಲ್ಲಲು ಇಷ್ಟು ಸಮೀಪಕ್ಕೆ ಬಂದು ವಿಧಿಯ ಆಟಕ್ಕೆ ಮಣಿದು ಪದಕದ ಆಸೆಯನ್ನು ಕೈ ಚೆಲ್ಲುತ್ತಾನೆ. ಟ್ರಿಪಲ್ ಜಂಪ್ನಲ್ಲಿ ದೇಶಕ್ಕೆ ಚಿನ್ನದ ಪದಕವನ್ನು ಗಳಿಸಿ ಕೊಡುವ ಮತ್ತೂಬ್ಬ ಹೆನ್ರಿ ಹುಟ್ಟಲಿಲ್ಲ. ವೈಯಕ್ತಿಕ ಕಾರಣಗಳಿಂದ ಮತ್ತೊಮ್ಮೆ ಒಲಿಂಪಿಕ್ಸ್ ನ ಕಣಕ್ಕಿಳಿಯದೆ ಹೆನ್ರಿ ರೆಬೆಲ್ಲೊ ಆಟದಿಂದ ಕಣ್ಮರೆಯಾಗುತ್ತಾನೆ!
 
 
2.ಮಿಲ್ಕಾ ಸಿಂಗ್ - ೧೯೬೦ ರೋಮ್ ಒಲಿಂಪಿಕ್ಸ್
'ದ ಫ್ಲಯಿಂಗ್ ಸಿಖ್' ಎಂದೇ ಪ್ರಸಿದ್ಧಿಯ ಮಿಲ್ಖಾ ಸಿಂಗ್ ೧೯೬೦ ರ ರೋಮ್ ಒಲಿಂಪಿಕ್ಸ್ ನ ೪೦೦ ಮೀಟರ್ ಓಟದಲ್ಲಿ ದೇಶವನ್ನು ಪ್ರತಿನಿದಿಸುತ್ತಾನೆ. ಇದಕ್ಕೂ ಮೊದಲು 1958 ರ ಟೋಕಿಯೋ ಏಷ್ಯನ್ ಗೇಮ್ಸ್ ನ ೨೦೦ ಹಾಗೂ ೪೦೦ ಮೀಟರ್ ಓಟದಲ್ಲಿ ಚಿನ್ನ ಹಾಗೂ ಅದೇ ವರ್ಷ ಕಾರ್ಡಿಫ್ ನಲ್ಲಿ  ನೆಡೆದ ಕಾಮಾನ್ವೆಲ್ತ್ ಪಂದ್ಯದಲ್ಲಿ  ‘ದೇಶದ ಮೊದಲ’ ಚಿನ್ನದ ಪದಕವನ್ನು ಗೆದಿದ್ದ ಮಿಲ್ಖಾ ರೋಮ್ ನಲ್ಲಿ ತನ್ನ ಛಾಪನ್ನು ಮೂಡಿಸುವ ಎಲ್ಲಾ ಸಾಧ್ಯತೆಗಳೂ ಕಾಣತೊಡಗಿದ್ದವು.  ಒಂದು ದಾಖಲೆಗಳ ಪ್ರಕಾರ  ಆತ ಕ್ರೀಡಾ ಜೀವನದಲ್ಲಿ ಸೆಣೆಸಿದ ೮೦ ಪಂದ್ಯಗಳಲ್ಲಿ ೭೭ ಪಂದ್ಯಗಳನ್ನು ಗೆದ್ದಿರುತ್ತಾನೆ!  ಸೋತ ನಾಲ್ಕರಲ್ಲಿ ರೋಮ್ ಒಲಿಂಪಿಕ್ಸ್ ನ ಫೈನಲ್ಸ್ ಕೂಡ ಒಂದು. ಪಂದ್ಯದ ಮೊದಲರ್ಧ ಭಾಗವೂ ಮುಂದಿದ್ದ ಮಿಲ್ಖಾ ಉಳಿದರ್ಧ ಓಟದಲ್ಲಿ ಕೊಂಚ ಹಿಂದುಳಿದು ನಾಲ್ಕನೇ ಸ್ಥಾನಕ್ಕೆ ತೃಪ್ತನಾಗಬೇಕಾಗುತ್ತದೆ. ಅಂದು ೪೫.೬ ಸೆಕೆಂಡ್ನಲ್ಲಿ ಓಟವನ್ನು ಮುಗಿಸಿ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದರೂ ಸಹ ಅದು ಅವನಿಗೆ ಪದಕವನ್ನು ಗಳಿಸಿ ಕೊಡುವಲ್ಲಿ ವಿಫಲವಾಗುತ್ತದೆ. ಅಲ್ಲದೆ ಅದೇ ಓಟದಲ್ಲಿ ಮೊದಲೆರಡು ಸ್ಥಾನವನ್ನು ಗೆದ್ದ ಓಟಗಾರರು ಹೊಸ ವಿಶ್ವದಾಖಲೆಯನ್ನೂ ಮಾಡುತ್ತಾರೆ. 'ನನ್ನ ಪೋಷಕರ ಸಾವಿನ ನಂತರದ ಕರಾಳ ಗಳಿಗೆಯಾಗಿ ಅಂದಿನ ಓಟ ನನಗೆ ಇಂದಿಗೂ ಭಾಸವಾಗುತ್ತದೆ' ಎಂದು ನೆನಯುತ್ತಾನೆ. ಇವನ ಬಳಿಕ ಅಷ್ಟೊಂದು ಭರವಸೆಯನ್ನು ಮೂಡಿಸಿದ ಮತ್ತೊಬ್ಬ ಓಟಗಾರ ಮೂಡಲಿಲ್ಲ.
 
3.ಗುರುಚರಣ್ ಸಿಂಗ್ - ಸಿಡ್ನಿ ಒಲಿಂಪಿಕ್ಸ್ ೨೦೦೦
'The Storm' (ಚಂಡಮಾರುತ) ಎಂದೇ ಪ್ರಸಿದ್ಧಿಯ ಗುರುಚರಣ್ ಸಿಂಗ್ ಸಿಡ್ನಿ ಒಲಿಂಪಿಕ್ಸ್ ನ 'ಲೈಟ್ ಹೆವಿವೈಟ್' ಬಾಕ್ಸಿಂಗ್ ನಲ್ಲಿ ದೇಶವನ್ನು ಪ್ರತಿನಿದಿಸುತ್ತಾನೆ. ಇದಕ್ಕೂ ಮೊದಲು ೧೯೯೬ ರ ಅಟ್ಲಾಂಟಾ ಒಲಿಂಪಿಕ್ಸ್ ನಲ್ಲಿ ಸ್ಪರ್ದಿಸಿ ಮೊದಲ ಸುತ್ತಿನಲ್ಲೇ ಹೊರ ಬಂದಿದ್ದ ಗುರುಚರಣ್, ಸಿಡ್ನಿ ಒಲಿಂಪಿಕ್ಸ್ ನಲ್ಲಿ ಪದಕದ ಭರವಸೆಯನ್ನೇನೂ ಮೂಡಿಸಿರಲಿಲ್ಲ. ಆದರೆ ಮೊದಲೆರಡು ಸುತ್ತಿನಲ್ಲಿ ಕ್ರಮವಾಗಿ ದಕ್ಷಿಣ ಕೊರಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸುವ ಮೂಲಕ ಎಲ್ಲರ ಲೆಕ್ಕವನ್ನು ತಲೆಕೆಳಗಾಗಿ ಮಾಡುತ್ತಾನೆ. ಮೂರನೇ ಸುತ್ತು ಪದಕದ ಸುತ್ತು. ಎದುರಾಳಿ ಉಕ್ರೇನಿನ ಉದಯೋನ್ಮುಖ ಬಾಕ್ಸರ್ ಅಂಡ್ರಿಯ್ ಫೆಡ್ಚುಕ್.  ಗೆದ್ದರೆ ಕಂಚಿನ ಪದಕವಂತೂ ಖಚಿತ ಅಲ್ಲದೆ ಮುಂದಿನ ಸೆಮಿಫೈನಲ್ ಸ್ಪರ್ಧೆಗೂ ಹಾದಿ ಸುಗಮ! ಒಲಿಂಪಿಕ್ಸ್ ಬಾಕ್ಸಿಂಗ್ ನಲ್ಲಿ ಹಿಂದೆಂದೂ ಮಾಡದ ಸಾಧನೆಯ ಕ್ಷಣಕ್ಕೆ ಸಾಕ್ಷಿಯಾಗಲು ದೇಶ ಸಜ್ಜಾಗಿತ್ತು. ತೀವ್ರವಾದ ಹಣಹಣಿಯಿಂದ ಶುರುವಾದ ಪಂದ್ಯದ ಶುರುವಿನಲ್ಲಿ ಗುರುಚರಣ್ ಮೇಲುಗೈ ಸಾಧಿಸಿದರೂ ಛಲ ಬಿಡದ ಅಂಡ್ರಿಯ್ ಪ್ರಭಲ ಪ್ರತಿಸ್ಪರ್ಧೆಯನ್ನು ನೀಡುತ್ತಾನೆ. ಪಂದ್ಯ ೧೨-೧೨ ಅಂಕಗಳಲ್ಲಿ ಟೈ ಆಗುತ್ತದೆ! ಗೆಲುವಿನ ನಗೆ ಗುರುಚರಣ್ ನ ಮುಖದ ಮೇಲಿದ್ದರೆ, ಚೊಚ್ಚಲ ಬಾಕ್ಸಿಂಗ್ ಪದಕದ ಸಂಭ್ರಮ ಭಾರತೀಯರಲ್ಲಿ. ಟೈ ಬ್ರೇಕ್ ಮಾಡಲು  ನೆರೆದಿದ್ದ ೫ ಜಡ್ಜ್ಗಳ ಅಂಕಗಳನ್ನು ತಾಳೆಹಾಕಲಾಗುತ್ತದೆ. ದುರದೃಷ್ಟವಶತ್ ಹೆಚ್ಚು ಪಂಚ್ ಗಳನ್ನು ಗಳಿಸಿದ್ದ ಅಂಡ್ರಿಯ್ ಫೆಡ್ಚುಕ್ನನ್ನು ಜಯಶಾಲಿ ಎಂದು ಘೋಷಿಸಲಾಗುತ್ತದೆ! ಬಾಕ್ಸಿಂಗ್ ರಿಂಗ್ ನ ಒಳಗೆ ಗುರುಚರಣ್ ಕುಸಿಯುತ್ತಾನೆ, ಬಿಕ್ಕಿ-ಬಿಕ್ಕಿ ಅಳುತ್ತಾನೆ. ಕೊನೆ ಕ್ಷಣದ ಒಂದು ಪಂಚನ್ನು ತಪ್ಪಿಸಿಕೊಳ್ಳುವಲ್ಲಿ ಸಫಲನಾಗಿದ್ದರೆ ಅಂದು ಕಂಚಿನ ಪದಕ ಅವನದೇ ಆಗಿರುತ್ತಿತ್ತು! ಗುರುಚರಣ್ ಹೆಸರು ದೇಶದ ಮನೆ ಮಾತಾಗಿರುತ್ತಿತ್ತು.  ಫಲಿತಾಂಶದಿಂದ್ದ ಬೇಸೆತ್ತ ಗುರುಚರಣ್ ಮುಂದೆಂದೂ ಒಲಿಂಪಿಕ್ಸ್ ನಲ್ಲಿ ಸ್ಪರ್ದಿಸದೆ ಪ್ರೊ-ಬಾಕ್ಸಿಂಗ್ ಆಡಲು ಅಮೇರಿಕಾಕ್ಕೆ ಹೋಗಿ ಭಾರತೀಯ ಬಾಕ್ಸಿಂಗ್ ನಿಂದ ಕಣ್ಮರೆಯಾಗುತ್ತಾನೆ.
 
4. ಭಾರತೀಯ ಹಾಕಿ - ಸಿಡ್ನಿ ಒಲಿಂಪಿಕ್ಸ್ ೨೦೦೦
ದಶಕಗಳವರೆಗೆ ವಿಶ್ವವನ್ನೇ ತನ್ನ ಗೆಲುನಿನ ಮುಷ್ಟಿಯಲ್ಲಿ ಹಿಡಿದಿಟ್ಟ ಖ್ಯಾತಿ ಭಾರತೀಯ ಹಾಕಿಯದು. ೧೯೮೦ ರ ಮಾಸ್ಕೋ ಒಲಿಂಪಿಕ್ಸ್ ನ ಚಿನ್ನದ ಪದಕ ಹಾಕಿಯಲ್ಲಿ ದೇಶಕ್ಕೆ ಬಂದ ಕೊನೆಯ ಪದಕ. ಗತಿಸಿಹೋದ ಸುವರ್ಣ ಇತಿಹಾಸವನ್ನು ಪುನಾರವರ್ತಿಸಲು ರಮನ್ ದೀಪ್ ಸಿಂಗ್ ನಾಯಕತ್ವದ ಭಾರತೀಯ ಹಾಕಿ ತಂಡ  ಅಂದು ಸಿಡ್ನಿ ಕ್ರೀಡಾಂಗಣದಲ್ಲಿ ಸಜ್ಜಾಗುತ್ತದೆ. ಅದು ಧನ್ರಾಜ್ ಪಿಳ್ಳೈ, ದೇವೇಶ್ ಚೌಹಾಣ್, ದಿಲೀಪ್ ಟಿರ್ಕೆ ಅವರಂತಹ ಭಾರತದ ಶ್ರೇಷ್ಠ ಆಟಗಾರರ ತಂಡ.  ಮೊದಲ ಪಂದ್ಯದಲ್ಲೇ ಅರ್ಜೆಂಟಿನಾವನ್ನು ೩-೦ ಗೋಲುಗಳ ಮೂಲಕ ಸೋಲಿಸುವುದರ ಮೂಲಕ ಭರ್ಜರಿ ಆರಂಭವನ್ನೇ ಪಡೆದ ಭಾರತ ಎರಡೆನೆ ಸುತ್ತಿನಲ್ಲಿ ಭಲಿಷ್ಟ ಆಸ್ಟ್ರೇಲಿಯಾ ತಂಡದೊಟ್ಟಿಗೆ ೨-೨ ಗೋಲುಗಳಿಂದ ಪಂದ್ಯವನ್ನು ಡ್ರಾ ಮಾಡಿಕೊಳ್ಳುತ್ತದೆ. ಇದೆ ಆತ್ಮವಿಶ್ವಾಸದಿದಿಂದ ಮುನ್ನುಗ್ಗಿದ ತಂಡಕ್ಕೆ ಮೂರನೇ ಸುತ್ತಿನಿನಲ್ಲಿ ಆಘಾತ ಎದುರಾಗುತ್ತದೆ. ದಕ್ಷಿಣ ಕೊರಿಯಾ ದೊಟ್ಟಿಗೆ ೦-೨ ಗೋಳುಗಳಿಂದ ಸೋಲನೊಪ್ಪಿಕೊಳ್ಳಬೇಕಾಗುತ್ತದೆ. ಆದರೆ ದೃತಿಗೆಡದ ಭಾರತ ನಂತರದ ಸ್ಪೈನ್ ತಂಡದ ವಿರುದ್ಧ ೩-೨ ಅಂತರರ ಗೆಲುವನ್ನು ಸಾದಿಸುವ ಮೂಲಕ ಪುಟಿದೇಳುತ್ತದೆ. ಇದಾದ ನಂತರದ ಪಂದ್ಯ ಅಷ್ಟೇನೂ ಭಲಿಷ್ಟವಲ್ಲದ  ಪೋಲ್ಯಾಂಡ್ ವಿರುದ್ಧ. ಈ ಪಂದ್ಯದ ಗೆಲುವು ಕನಿಷ್ಠ ಒಂದು ಪದಕದ ಖಾತ್ರಿಯನ್ನಂತೂ ತರುತ್ತಿತ್ತು. ಪಂದ್ಯದ ಕೊನೆಯವರೆಗೂ ೧-೦ ಅಂತರದಿಂದ ಮುಂದಿದ್ದ ಭಾರತ 'ಕೊನೆಯ ೧ ನಿಮಿಷದ' ಅವಧಿಯಲ್ಲಿ ಎದುರಾಳಿ ತಂಡಕ್ಕೆ ಗೋಲನ್ನು ಬಿಟ್ಟುಕೊಟ್ಟಿತು. ಪಂದ್ಯ ೧-೧ ರಿಂದ ಡ್ರಾ ನಲ್ಲಿ ಅಂತ್ಯ ಕಂಡಿತು. ಪಂದ್ಯ ಗೆಲ್ಲದ ಪರಿಣಾಮ ಭಾರತ ಸೆಮಿಪೈನಲ್ ಅಂಗಳಕ್ಕಿಳಿಯದೆ ಹೊರ ಬಂದಿತು. ಕೈಗೆ ಬಂದ ತುತ್ತು ಬಾಯಿಗೆ ಸೇರದೆ ಕೈ ಜಾರಿತು. ದೇಶದ ರಾಷ್ತ್ರೀಯ ಕ್ರೀಡೆಯನ್ನು ಪ್ರೀತಿಸುವ ಹಲವರು ಇಂದಿಗೂ ಈ ಪಂದ್ಯವನ್ನು ನೆನೆದು ದುಃಖಿಸುತ್ತಾರೆ. ಒಂದು ಪಕ್ಷ ಆ ಕಡೆಯ ೬೦ ಸೆಕೆಂಡ್ ಗಳು ಭಾರತ ಎದುರಾಳಿ ತಂಡವನ್ನು ಹಿಡಿದಿಟ್ಟಿದ್ದರೆ ಮತ್ತೊಮ್ಮೆ ಚಿನ್ನದವನ್ನು ಗೆಲ್ಲಬಹುದಿತ್ತು ಎಂದು ನೆನೆದು ಮರುಗುವವರಿದ್ದಾರೆ. ತದಾ ನಂತರ ಇನ್ನಷ್ಟು ಶಕ್ತಿಹೀನವಾದ ಭಾರತೀಯ ಹಾಕಿ ೨೦೦೮ ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಅರ್ಹತೆಯನ್ನೇ ಗಳಿಸದಿದ್ದದ್ದು ನಿಜವಾಗಿಯೂ ವಿಪರ್ಯಾಸದ ಸಂಗತಿ.
 
 
 
5.ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ - ೨೦೦೪ ಅಥೆನ್ಸ್ ಒಲಿಂಪಿಕ್ಸ್.
ಭಾರತದಲ್ಲಿ ಟೆನ್ನಿಸ್ ಬಗ್ಗೆ ಅಷ್ಟೇನೂ ತಿಳಿಯದವರೂ ಸಹ ಈ ಜೋಡಿಯ ಹೆಸರನ್ನು ಕ್ಷಣ ಮಾತ್ರದಲ್ಲಿ ಗುರುತಿಡಿಯಬಲ್ಲರು. 'Lee-Hesh'  ಎಂದೇ ಹೆಸರಾಗಿದ್ದ ಈ ಜೋಡಿ ಮೂರನೇ ಬಾರಿ ೨೦೦೪ ರ ಒಲಿಂಪಿಕ್ಸ್ ನಲ್ಲಿ  ಜೊತೆಯಾಗಿ ಆಡುವುದರ ಮೂಲಕ ಎಲ್ಲರ ಗಮನ ಸೆಳೆದಿತ್ತು. ಅಂದು ಈ ಜೋಡಿ  ಅಮೆರಿಕಾ ವಿರುದ್ಧ  (೭-೬,೬-೩), ಸ್ವಿಜರ್ಲ್ಯಾಂಡ್ ವಿರುದ್ಧ (೬-೨,೭-೬) ಹಾಗೂ ಜಿಂಬಾಬ್ವೆ ವಿರುದ್ಧ (೬-೪,೬-೪) ರ ನೇರ ಸೆಟ್ ಗಳ ಪ್ರಚಂಡ ಗೆಲುವಿನ ಮೂಲಕ ಸೆಮಿಫೈನಲ್ ಹಣಾಹಣಿಗೆ ಲಗ್ಗೆ ಇಟ್ಟಿತು. ಇದು ಒಲಿಂಪಿಕ್ಸ್ ನಲ್ಲಿ ಭಾರತೀಯ ಟೆನ್ನಿಸ್ ನ ಶ್ರೇಷ್ಠ ಸಾಧನೆ. ಮೊದಲ ಬಾರಿಗೆ ಭಾರತವನ್ನು ಒಲಿಂಪಿಕ್ಸ್ನ ಸೆಮಿಫೈನಲ್ ವರೆಗೂ ಕೊಂಡೊಯ್ದ ಈ ಜೋಡಿ  ಪದಕದ ಆಸೆಯನ್ನು ಸಹಜವಾಗಿಯೇ ಚಿಗುರೊಡೆಸಿತು. ಸೆಮಿಫೈನಲ್ ನ ಎದುರಾಳಿ ತಂಡ ಜೆರ್ಮನಿಯ ನಿಕೋಲಸ್ ಕೈಫರ್ ಹಾಗೂ ರೈನರ್ ಶಟ್ಲರ್. ಮೂರೂ ಸುತ್ತುಗಳನ್ನು ಸಲೀಸಾಗಿ ಗೆದ್ದು ಸೆಮಿಫೈನಲ್ಗೆ ಬಂದಿದ್ದ  ಜೋಡಿ ಜರ್ಮನ್ ತಂಡದ ವಿರುದ್ಧ ಅಷ್ಟೊಂದು ಹೀನಾಯವಾಗಿ ಸೋಲುತ್ತದೆಂದು ಯಾರು ಅಂದುಕೊಂಡಿರಲಿಲ್ಲ! ೨-೬ ಹಾಗೂ ೩-೬ ರ ನೇರ ಸೆಟ್ಗಳಿಂದ ಪರಾಭವಗೊಂಡಿತು. ಅಲ್ಲಿಗೆ ಒಲಿಂಪಿಕ್ ಟೆನ್ನಿಸ್ ನ ಭಾರತದ ಚಿನ್ನ ಅಥವಾ ಬೆಳ್ಳಿಯ ಪದಕದ ಕನಸು ಕೊನೆಗೊಂಡಿತು. ಏತನ್ಮಧ್ಯೆ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ  ಚಿಲಿ ತಂಡದ ವಿರುದ್ಧ  ಸೋತ ಕ್ರೋಯೇಟಿಯ  ಕಂಚಿನ ಪದಕಕ್ಕೆ ಭಾರತೀಯ ಜೋಡಿಯ ವಿರುದ್ಧ ಸೆಣೆಸಬೇಕಾಗಿ ಬಂತು. ಒಲಿಂಪಿಕ್ಸ್ ಫೈನಲ್ ತಲುಪದೇ ನಿರಾಸೆ ಮೂಡಿಸಿದ್ದ Lee-Hesh ಜೋಡಿ ಕಂಚಿನ ಪದಕವನ್ನಾದರೂ ಗೆದ್ದೇ ತೀರಬೇಕೆಂದು ಅಂದು ಟೆನ್ನಿಸ್ನ ಅಂಗಳಕ್ಕಿಳಿದಿದ್ದಿತು. ಅಂದು ಮಾರಿಯೋ ಎನ್ಸಿಕ್ ಹಾಗೂ ಇವನ್ ಲ್ಯೂಬಿಸಿಕ್ ವಿರುದ್ಧ ನೆಡೆದ ಹಣಾಹಣಿಯನ್ನು ಯಾವುದೇ ಭಾರತೀಯ ಟೆನ್ನಿಸ್ ಪ್ರೇಮಿ ಮರೆಯಲು ಸಾಧ್ಯವಿಲ್ಲ. Lee-Hesh ಜೋಡಿ ಮೊದಲ ಸೆಟ್ನಲ್ಲಿ ೬-೭ ಅಂತರದಿಂದ ಸೋತರೂ ೬-೪ ಅಂತರದಿಂದ ನಂತರದ ಸೆಟ್ ಅನ್ನು ಗೆಲ್ಲುವುದರ ಮೂಲಕ ಪುಟಿದೆದ್ದಿತು. ನಂತರ ಸುಮಾರು ೨ ಘಂಟೆಗೂ ಹೆಚ್ಚು ಹೊತ್ತು ನೆಡೆದ ಅಂತಿಂಮ ಸೆಟ್ ೧೪-೧೬ ರಲ್ಲಿ ಅಂತ್ಯ ಕಂಡಿತು. ಕೊನೆಯ ಕ್ಷಣದವರೆಗೂ ಹೋರಾಡಿದ ಭಾರತೀಯ ಜೋಡಿ ಸೋತಿತು. ಅಭಿಮಾನಿಗಳಲ್ಲಿ ಪದಕದ ಆಸೆ ಮತ್ತೊಮ್ಮೆ ನೆಲಕಚ್ಚಿತು. ನಂತರದ ಯಾವುದೇ ಒಲಿಂಪಿಕ್ಸ್ನಲ್ಲೂ ಭಾರತ ಸೆಮಿಫೈನಲ್ನನ್ನು ತಲುಪಲಾಗಲಿಲ್ಲ.
ಕೀಡೆ ಎಂದರೆ ಕ್ರಿಕೆಟ್ ಎನ್ನುವ ನಮ್ಮ ಬಹುಪಾಲು ಭಾರತೀಯರಲ್ಲಿ ಮಹತ್ತರವಾದ ಬೆಂಬಲ ಹಾಗೂ ಪ್ರೋತ್ಸಾಹವೇನು ಇಲ್ಲದೆಯೂ ಸಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿದಿಸಿ, ಸೆಣೆಸಿ, ದೇಶದ ಧ್ವಜವನ್ನು ಎತ್ತರಕ್ಕೆ ಏರಿಸಿದ್ದ ಇಂತಹ ಹಲವಾರು ಕ್ರೀಡಾಳುಗಳನ್ನು ನಾವಿಂದು ಮರೆತಿದ್ದೇವೆ. ಭಾರತದ ಒಲಿಂಪಿಕ್ ಇತಿಹಾಸ ಇಂತಹ ಹಲವಾರು ರೋಚಕ ಸೆಣೆಸಾಟಗಳನ್ನು ಕಂಡಿದೆ. ಇವಿಷ್ಟೇ ಅಲ್ಲದೆ ಇನ್ನೂ ಹಲವಾರು ಸೆಣೆಸಾಟಗಳು ಭಾರತದ ಪಾಲಿಗೆ ಪದಕಗಳ ಮರೀಚಿಕೆಯಾಗಿ ಉಳಿದವು. ಅವುಗಳಲ್ಲಿ ನನೆಪಿಸಿಕೊಳ್ಳಲೇ ಬೇಕಾದ ಇನ್ನೂ ಕೆಲವು ಗಳೆಂದರೆ,
·         ಭಾರತೀಯ ಫುಟ್ಬಾಲ್ ತಂಡ - ೧೯೫೬ ಮೆಲ್ಬೋರ್ನ್ ಒಲಿಂಪಿಕ್ಸ್ನಲ್ಲಿ ೪ ನೇ ಸ್ಥಾನ.
·         ಗುರುಬಚ್ಚನ್ ಸಿಂಗ್ ೧೯೬೪ ಟೋಕಿಯೋ ಒಲಿಂಪಿಕ್ಸ್. - ೧೧೦ ಮೀಟರ್ hurdles ನಲ್ಲಿ ೫ನೇ ಸ್ಥಾನ.
·         ಸುಂದೇಶ್ ಕುಮಾರ್ ೧೯೭೨ ಮ್ಯೂನಿಚ್ ಒಲಿಮೋಲಿಕ್ಸ್ - ೫೨ ಕೆಜಿ ವರ್ಗದ ಕುಸ್ತಿಯಲ್ಲಿ ೫ನೇ ಸ್ಥಾನ.
·         ಪ್ರೇಮ್ ನಾಥ್ ೧೯೭೨ ಮ್ಯೂನಿಚ್ ಒಲಿಮೋಲಿಕ್ಸ್ - ೫೭ ಕೆಜಿ ವರ್ಗದ ಕುಸ್ತಿಯಲ್ಲಿ ೪ನೇ ಸ್ಥಾನ. (ಸೆಮಿಫೈನಲ್ ಪಂದ್ಯದಲ್ಲಿ ಈತ ಗಾಯಗೊಂಡ ಕಾರಣಕ್ಕೆ ಒಲಿಂಪಿಕ್ಸ್ ನಿಂದ ಹೊರಗುಳಿಯಬೇಕಾಯಿತು.)
·         ಜೋಯ್ ದೀಪ್ ಕರ್ಮಕರ್ ೨೦೧೨ ಲಂಡನ್ ಒಲಿಂಪಿಕ್ಸ್ - ೫೦ ಮೀಟರ್ ಶೂಟಿಂಗ್ ನಲ್ಲಿ ೫ನೇ ಸ್ತಾನ.
 
ಅಲ್ಲದೆ  ೧೯೭೬ ಮೊಂಟ್ರಿಯಾಲ್ ಒಲಿಂಪಿಕ್ಸ್ ನ ೮೦೦ ಮೀಟರ್ ಓಟದಲ್ಲಿ ಶ್ರೀರಾಮ್ ಸಿಂಗ್, ೨೦೦೪ ರ ಒಲಿಂಪಿಕ್ಸ್ನ ಬಿಲ್ಲುಗಾರಿಕೆಯಲ್ಲಿ ಸತ್ಯದೇವ್ ಪ್ರಸಾದ್, ಅದೇ ವರ್ಷ ೧೦ ಮೀಟರ್ ಶೂಟಿಂಗ್ ಸ್ಪರ್ಧೆಯಲ್ಲಿ ಅಭಿನವ್ ಬಿಂದ್ರಾ ಹಾಗು ಇನ್ನೂ ಹಲವು ಹಣಾಹಣಿಗಳು ಪ್ರಚಂಡ ಭರವಸೆಯನ್ನು ಮೂಡಿಸಿ, ಗೆಲುವಿನ ತೀರಾ ಬಂದು ಒಲಿಂಪಿಕ್ ಪ್ರಿಯರ ಎದೆ ಬಡಿತವನ್ನು ಹೆಚ್ಚಾಗಿಸಿದ್ದ ಸಂಧರ್ಭಗಳಿವೆ. ಗೆದ್ದ ಪಂದ್ಯಗಳೊಟ್ಟಿಗೆ, ಹೀಗೆ ಹಲವು ಬಾರಿ ರೋಚಕವಾಗಿ ಸೆಣೆಸಿದ  ಪಂದ್ಯಗಳನ್ನೂ ಗಮನಿಸಿ, ಅವಲೋಕಿಸಿ ನಮ್ಮ ಆಟಗಾರರು ಈ ಬಾರಿಯ ರಿಯೋ  ಒಲಿಂಪಿಕ್ಸ್ ನಲ್ಲಿ ಹೆಚ್ಚು-ಹೆಚ್ಚು ಪದಕಗಳನ್ನು ಗೆಲ್ಲಲಿ ಎಂದು ಆಶಿಸೋಣ. ಗೆಲುವಿನ ಗುರಿಯನ್ನು ಬೆನ್ನತ್ತಿ, ಸೆಣೆಸಿ, ದೇಶದ ಕೀರ್ತಿಯನ್ನು ಹೆಚ್ಚಿಸಿದ್ದ ಎಲ್ಲಾ ಆಟಗಾರರಿಗೂ ನಮ್ಮದೊಂದು ಸಲಾಂ ಸಹ ಅರ್ಪಿಸೋಣ.