ಒಳಗೆ ಬರಲಿ...

ಒಳಗೆ ಬರಲಿ...

ಕವನ

ಸಾಮಾನಿಲ್ಲದ ಖಾಲಿ ಡಬ್ಬಗಳು

ವಯಸ್ಸಿಗೆ ಬಂದಿರುವ ಮಗಳು

ಕೆಲಸ ಕಳೆದುಕೊಂಡಿರುವ ಗಂಡ

ಮಾರ್ಕೆಟ್ಟಿನಲ್ಲಂತೂ ಚೌಕಾಶಿಯೇ ಇಲ್ಲ

ಅಲ್ಲೇ ಕೇಳದಿರಿ ಎಷ್ಟು ತಂದೆಯೆಂದು..

ಮನೆಯೊಳಗಾದರೂ ಬರಲಿ

ಅಷ್ಟಾದರೂ ಸಹನೆ ಇರಲಿ.

 

ಕೆಲಸದಲ್ಲಿ ಗೊಂದಲ

ಯಾರೋ ಬೈದಿರಬಹುದು

ಸಹ ನೌಕರರು ನಿಂದಿಸಿರಬಹುದು

ಯಾರದ್ದೋ ಸಿಟ್ಟಿನ ಜ್ವಾಲೆಗೆ ತಾನು ಬೂದಿಯಾಗುತ್ತಿರಬಹುದು

ಮನೆಯೊಳಗಾದರೂ ಬರಲಿ

ಸಹನೆ ಇರಲಿ‌.

 

ವ್ಯಾಪಾರದಲ್ಲೇನೋ ಕಿರಿಕಿರಿ

ರಸ್ತೆಯಲ್ಯಾರೋ ಬೈದಿರಬಹುದು

ಕೆಲಸವಿಲ್ಲದ ಮಗನ ನೋಡಲಾರದೆ

ಮನದಲ್ಲೇ ಮರುಗುತ್ತಿರಬಹುದು

ಮನೆಯೊಳಗಾದರೂ ಬರಲಿ

ಅಷ್ಟಾದರೂ ನಮ್ಮಲ್ಲಿ ಸೌಜನ್ಯವಿರಲಿ.

 

ಶಿಕ್ಷಕರು ಬೈದಿರಬಹುದು

ಪರೀಕ್ಷೆಯ ಭಯವಿರಬಹುದು

ಸಹಪಾಠಿಗಳು ನೋಯಿಸಿರಬಹುದು

ಅಲ್ಲೇ ಕೇಳದಿರಿ ಎಷ್ಟು ಓದಿದೆಯೆಂದು

ಮನೆಯೊಳಗಾದರೂ ಬರಲಿ,

ತಾಳ್ಮೆ ಇರಲಿ.

 

ಕೊರೋನೋತ್ತರ ಕಾಲವಿದು

ಉರಿವ ದೀಪದ ಹಿಂದೆ

ಎಂದೂ ಆರದ ಕತ್ತಲೆ ಇರಬಹುದು.

ನಗುವ ಹಲ್ಲಿನ ಹಿಂದೆ

ಕಟ್ಟೆಯೊಡೆಯಲು ಕಾದಿರುವ

ನೂರು ನೋವಿರಬಹುದು.

 

ಕಷ್ಟಗಳ ಕಂಡು ನಗುವ ಮುನ್ನ

ಯಾರನ್ನೋ ಮೂದಲಿಸುವ ಮುನ್ನ

ಯಾರದ್ದೋ ಅಳುವಿಗೆ 

ನಾನು ಕಾರಣನಾಗುವ ಮುನ್ನ

ಕಿಂಚಿತ್ತಾದರೂ ಕರುಣೆ ಇರಲಿ

ಮಾನವೀಯತೆ ಮರೆಯಾಗದಿರಲಿ.

- ನಿಶ್ಮಿತಾ ಪಳ್ಳಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್