ಒಳದನಿ

ಒಳದನಿ

ಪುಸ್ತಕದ ಲೇಖಕ/ಕವಿಯ ಹೆಸರು
ರಂಗಮ್ಮ ಹೊದೇಕಲ್
ಪ್ರಕಾಶಕರು
ಸ್ನೇಹಮಯಿ ಪ್ರಕಾಶನ, ಮೈಸೂರು
ಪುಸ್ತಕದ ಬೆಲೆ
ರೂ. ೨೦.೦೦, ಮುದ್ರಣ: ೧೯೯೯

ರಂಗಮ್ಮ ಹೊದೇಕಲ್ ವೃತ್ತಿಯಲ್ಲಿ ಶಿಕ್ಷಕಿ. ಮನೆಯಲ್ಲಿನ ಬಡತನ, ಅಸಹಾಯಕತೆ, ಒಂಟಿತನ, ಬದುಕಿನ ಪ್ರತಿ ಹೆಜ್ಜೆಯೂ ಒಂದು ನೋವಿನ ‘ಕ್ರಿಯೆ’ಯಾಗಿ ಈ ಹುಡುಗಿಯನ್ನು ಕಾಡಿ ಕಾಡಿ, ಈ ಹೊತ್ತು ‘ಕವಿ'ಯನ್ನಾಗಿಸಿರುವುದು ಸುಳ್ಳಲ್ಲ. ರಂಗಮ್ಮ ಹೊದೇಕಲ್ ಆರ್ದ್ಯ ಹೃದಯದ ‘ಹೂ’ ಹುಡುಗಿ! ಎಂದು ಬರೆಯುತ್ತಾರೆ ತುಮಕೂರು ಜಿಲ್ಲಾ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾದ ಶ್ರೀಮತಿ ಬಿ.ಸಿ.ಶೈಲಾ ನಾಗರಾಜ್. ಶೈಲಾ ನಾಗರಾಜ್ ಅವರು ರಂಗಮ್ಮ ಅವರ ಶಕ್ತಿ ಎಂದರೆ ತಪ್ಪಾಗಲಾರದು. ಶೈಲಾ ನಾಗರಾಜ್ ಅವರ ಹೆಸರಿನಲ್ಲೇ ‘ಶೈನಾ’ ಎಂಬ ಕೈಬರಹದ ಪತ್ರಿಕೆಯನ್ನು ರಂಗಮ್ಮ ಬಹಳ ಹಿಂದೆ ಹೊರತರುತ್ತಿದ್ದರು. ರಂಗಮ್ಮನವರ ಕೈಬರಹ ಮುತ್ತು ಪೋಣಿಸಿದಂತೆ ಸುಂದರ ಮತ್ತು ನಯನ ಮನೋಹರ. ರಂಗಮ್ಮನವರ ಕೈ ಬರಹವೇ ಶೈನಾ ಪತ್ರಿಕೆಯ ಪ್ಲಸ್ ಪಾಯಿಂಟ್ ಆಗಿತ್ತು. ಈಗಲೂ ಪ್ರಕಟವಾಗುತ್ತಿದೆಯೋ ಗೊತ್ತಿಲ್ಲ. ಪ್ರತೀ ತಿಂಗಳು ಸುಮಾರು ೧೨ ಪುಟಗಳನ್ನು ಕೈಬರಹದಲ್ಲಿ ಬರೆದು ಅದನ್ನು ನೆರಳು ಪ್ರತಿ (Photo Copy) ಮಾಡಿಸಿ ಚಂದಾದಾರರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದರು. 

ಬಾಲ್ಯದ ಬಡತನದ ಕಷ್ಟ ಹಾಗೂ ನೋವುಗಳೆಲ್ಲಾ ಕವನದ ರೂಪದಲ್ಲಿ ಹೊರಹೊಮ್ಮಿದೆ ಎಂದು ಅವರ ಬರಹಗಳನ್ನು ನೋಡುವಾಗ ಅನಿಸುತ್ತದೆ. 'ಒಳದನಿ' ರಂಗಮ್ಮನವರ ಪ್ರಥಮ ಕವನ ಸಂಕಲನ. ‘ಗಟ್ಟಿ ನೆಲದಲ್ಲಿ...' ಎಂಬ ತಮ್ಮ ಮುನ್ನುಡಿಯಲ್ಲಿ ಮೈಸೂರಿನ ‘ಸುದ್ದಿ ಸಂಭ್ರಮ' ಪತ್ರಿಕೆಯ ಜಿ.ಆರ್.ಸತ್ಯಲಿಂಗರಾಜು ಅವರು ರಂಗಮ್ಮನವರ ಹಾಗೂ ಅವರ ಕವನಗಳ ವಿವಿಧ ಆಯಾಮಗಳನ್ನು ಪರಿಚಯ ಮಾಡಿಕೊಡುತ್ತಾರೆ. ಮುನ್ನುಡಿಯಲ್ಲಿ ಒಂದೆಡೆ ಅವರು ಬರೆಯುತ್ತಾರೆ “‘ನಾನೇಗೆ ಬದುಕಲಿ' ಎಂಬ ಕವನದಲ್ಲಿ

'ಇರಲು ಸೂರಿದೆ, ಅನ್ನವಿದೆ

ಆದರೇನು ಎಲ್ಲವನು ಮೀರಿದ್ದು

ಪ್ರೀತಿಯೊಂದೇ ತಾನೇ!

ಅದಿಲ್ಲದ ಬದುಕು ಶೂನ್ಯವೆ'

ಈ ಸಾಲುಗಳನ್ನೇಳುವ ಮೂಲಕ ‘ಪ್ರೀತಿ' ಯ ಘನತೆಯನ್ನೆತ್ತಿ ಹಿಡಿಯುವ ಕವಿಯಿತ್ರಿ, ಅದೇ ಕವಿತೆಯಲ್ಲಿ ಮುಂದೆ ಸಾಗುತ್ತಾ, ಪತಿ ಜತೆ ಮತ್ತೊಬ್ಬಾಕೆ ಬಂದರೂ ಬರಲಿ, ಋಣಾನುಬಂಧ, ಪ್ರೀತಿಯಲ್ಲೂ ಹಂಚಿಕೊಳ್ಳಲು ಸಿದ್ಧ ಎಂಬ ಮನೋಸ್ಥಿತಿ ತಲುಪಿಬಿಡುವುದು ಹೆಣ್ಣು ತ್ಯಾಗಮಯಿಯಾಗಿರಬೇಕು ಎಂಬ ಆದರ್ಶ (?) ದ ಸಂಕೇತವೋ, ಬಂದಿದ್ದೇ ಪಂಚಾಮೃತ ಎಂಬ ಭಾವವೋ ಅಥವಾ ಹೆಣ್ಣು ಬಂಡಾಯವೇಳುವ ಭಾವಕ್ಕೆ ಬಾರದೆ, ಪತಿ ಮಾಡಿದ್ದನ್ನೆಲ್ಲಾ ಸಹಿಸಿಕೊಂಡಿರಬೇಕು ಎಂಬುವುದನ್ನು ಪ್ರತಿಧ್ವನಿಸಲೊರಟಿದ್ದಾರೋ ಎನಿಸಿಬಿಡುವುದು ಕೂಡ ಲೇಖಕಿಯ ಮನಸ್ಸಿಗಷ್ಟು ಗಟ್ಟಿತನ ಬೇಕು.."

ರಂಗಮ್ಮ ಹೊದೇಕಲ್ ತಮ್ಮ ‘ತೊದಲು ಮಾತು..' ಬರೆಯುತ್ತಾ ಹೇಳುತ್ತಾರೆ ‘ನೊಂದವರ, ಅಸಹಾಯಕರ ಮೌನವೇದನೆ, ನಿಟ್ಟುಸಿರು, ವೈಯಕ್ತಿಕ ಬದುಕಿನ ದುಃಖ ದುಮ್ಮಾನಗಳು ಕವಿತೆಯ ಸಾಲುಗಳಾಗಿವೆ. ನಾನು ಬೆಳೆದ ಪರಿಸರ, ಬದುಕನ್ನು ನಾನು ಕಾಣುವ ದೃಷ್ಟಿ ಅದಕ್ಕೆ ಕಾರಣವಾಗಿರಬಹುದು' 

ಪ್ರಕಾಶಕರಾದ ಸ್ನೇಹಮಯಿ ಪ್ರಕಾಶನದ ಕೃಷ್ಣ ಅವರ ನುಡಿಗಳು ಹಾಗೂ ಜಯಶ್ರೀ ನಾಯಕ, ಹೊನ್ನಾವರ ಇವರ ಮನದಾಳದ ಮಾತುಗಳೂ ಪುಸ್ತಕದಲ್ಲಿವೆ. ಸುಮಾರು ೪೫ ಪುಟಗಳ ಈ ಪುಟ್ಟ ಪುಸ್ತಕದಲ್ಲಿ ಸುಮಾರು ೫೦ ಕವಿತೆಗಳಿವೆ. ಈ ಪುಸ್ತಕವನ್ನು ಲೇಖಕಿ ತನ್ನನ್ನು ಸಾಕಿ ಸಲಹಿದ ಅಪ್ಪ, ಅಮ್ಮನಿಗೆ ಹಾಗೂ ಅರಳುವ ಮುನ್ನವೇ ಬಾಡಿಹೋದ ತನ್ನ ಅಕ್ಕನ ನೆನಪಿಗೆ ಅರ್ಪಿಸಿದ್ದಾರೆ.