ಒಳಹೊರ

ಒಳಹೊರ

ಕವನ

ಮಾತಿನ ಭರದಲಿ ಮಾಸಿದೆ ಮೌನವು
ಅರ್ಥವು ಅರಿಕೆಯ ಮೀರಿರಲು
ಪದಗಳ ಸ್ವೇಚ್ಚೆಗೆ ತಪ್ಪಿದೆ ತಾನವು
ಸ್ಮೃತಿಯಾಚೆಗೆ ಶೃತಿ ಸಾಗಿರಲು

ಕೇಳುವ ಕಿವಿಗಳು ಕಣ್ಣಿಗೆ ಕಾಣದೆ
ಉಲಿಯದೆ ನಲುಗಿದೆ ಏಕೆ ದನಿ?
ಸ್ವರಗಳ ಮರ್ಮರ ಹವೆಯಲೇ ತೇಲಿದೆ
ಕೊರಳಲಿ ಹಿಡಿದಿಡು ಅವುಗಳ ನೀ

ಎಲ್ಲೋ ಅವಿತಿದೆ ಪ್ರೇಮದ ಸೆಳೆತ
ಕೂಗಿ ಕರೆದರೂ ಓಗೊಡದೆ..
ಇಲ್ಲಿ ಮರಳುತಿದೆ ಪದಗಳ ತುಡಿತ
ಕರೆಯದೆ ಬರುವವು ತಡವಿರದೆ!

ಹರೆಯದ ಹುರುಪದು ಹೊರಗಿದೆ ಹುಡುಗಿ!
ಒಳಗಿನ ಹರಿವನ್ನು ತಡೆಯದಿರು
ಹಂಬಲ ಹವಣಿಕೆ ಒಳಗಿದೆ ಅಡಗಿ
ಹೊರಗಿನ ಝಳದಲಿ ಬಳಲದಿರು..
 

Comments

Submitted by raghumuliya Mon, 02/02/2015 - 11:33

ಸೊಗಸಾದ ಗೀತೆ. ಲಯಬದ್ಧವಾಗಿದೆ. ಅಭಿನ೦ದನೆಗಳು.
"ಶ್ರುತಿ" ಎ೦ಬುದು ಸರಿಯಾದ ಶಬ್ದ.