ಒಳ್ಳೆಯತನ ...ಕೆಟ್ಟತನದ ನಡುವೆ

ಒಳ್ಳೆಯತನ ...ಕೆಟ್ಟತನದ ನಡುವೆ

ಇತ್ತೀಚಿಗೆ ಯಾಕೋ ಚಿತ್ರ ವಿಚಿತ್ರ ಆಲೋಚನೆಗಳಲ್ಲಿ ಮುಳುಗಿರತ್ತೆ ಈ ಹಾಳು ತಲೆ. ಹಾಗೆ ಸುಮ್ಮನೆ ಮನೇಲಿ ಕುಳಿತಿದ್ದಾಗ ತಲೆಗೆ ಹುಳ ಬಿಟ್ಟುಕೊಂಡಾಗ ಹುಟ್ಟಿಕೊಂಡಿದ್ದು ಈ ಲೇಖನ. ಒಳ್ಳೆಯತನ ಅಂದ್ರೆ? ನಾವಿರೋ ಸನ್ನಿವೇಷಗಳಿಗನುಗುಣವಾಗಿ ಒಳ್ಳೆಯದು ಕೆಟ್ಟದು ಅನ್ನೋದು ಬದಲಾಗುತ್ತಿರುತ್ತವೆ. ಯಾವಾಗಲೂ ನಮ್ಮ ಮೂಗಿನ ನೇರಕ್ಕೆ ಒಳ್ಳೆಯತನ ಇರುತ್ತೆ ಅನ್ನೋದು ಮಾತ್ರ ವಾಸ್ತವ. ಇಲ್ಲಿವೆ ಕೆಲ ಸನ್ನಿವೇಷಗಳು.... ಒಳ್ಳೆಯತನ ...ಕೆಟ್ಟತನದ ನಡುವೆ ಹಾಳಾದ್ದು ಅಲಾರಾಂ ಕೈ ಕೊಡ್ತು ಹೊಡಿಲೇ ಇಲ್ಲ ಇವತ್ತು, ಎಚ್ರಾನೇ ಆಗಿಲ್ಲ ಅಂತ ಲೇಟಾಗಿ ಎದ್ದು ಬಡ ಬಡಾಯಿಸೋದು ಈ ಮಹಾನಗರದಲ್ಲಿ ಸರ್ವೇ ಸಾಮಾನ್ಯ. (ವರ್ಷಕ್ಕೊಮ್ಮೆ ನಾದ್ರೂ ಶೆಲ್ ಬದಲಾಯಿಸದಿದ್ರೆ ಕೈ ಕೊಡದೆ ಇನ್ನೇನು ಮಾಡತ್ತೆ ಅದು ಪಾಪ, ಅದ್ಕೆ ಕಾಲು ಅನ್ನೋದು ಇದ್ದಿದ್ರೆ ಜಾಡ್ಸಿ ಒದೀತಿತ್ತೋ ಏನೋ). ಅಂತು ಇಂತೂ ಎದ್ದು ಬೆಳಗ್ಗಿನ ಕಾರ್ಯಕ್ರಮ ಎಲ್ಲ ಮುಗ್ಸಿ ರೆಡಿ ಆಗಿ ಬಸ್ ಸ್ಟ್ಯಾಂಡ್ ಗೆ ಓಡಿ ಹೋಗ್ತೀರಾ. ಮಾಮೂಲಿ ಟೈಮ್ ಗಿಂತ ಜಸ್ಟ್ 5 ನಿಮಿಷ ಲೇಟು ಅಷ್ಟೇ. ಬಸ್ ಹೊರಟಿರತ್ತೆ ಸ್ಟ್ಯಾಂಡ್ ಇಂದ, ನೀವು ಕೈ ತೋರಿಸ್ತೀರ. ನನ್ನ ವಿಶ್ಲೇಷಣೆ ಇಲ್ಲಿ ಶುರು. ಬಸ್ ಡ್ರೈವರ್ ಬಸ್ ನಿಲ್ಸಿದ್ರೆ ಅವ್ನು ನಿಮ್ ಮನಸಿಗೆ ಒಳ್ಳೆಯವನು ಅನಿಸ್ತಾನೆ. ಆದ್ರೆ ಬಸ್ ಒಳಗೆ ಕೂತ ಉಳಿದ ಎಲ್ಲ ಜನರಿಗೆ ಅವ್ನ ಮೇಲೆ ಸಿಟ್ಟು, ಏನಪ್ಪಾ ಲೇಟಾಯ್ತು ನೀನು ನೋಡಿದ್ರೆ ಎಲ್ಲ ಕಡೇ ನಿಲ್ಲಿಸ್ತ ಇದ್ದೀಯ ಅಂತ ಬೈಗುಳು ಸ್ಟಾರ್ಟ್. ಅಕಸ್ಮಾತ್ ಅವ್ನು ನಿಲ್ಸಿಲ್ಲ ಅಂದ್ರೆ ಡ್ರೈವರ್ ನಿಮ್ಮ ಪಾಲಿಗೆ ಕೆಟ್ಟವನು ಅನ್ಸತ್ತೆ. ದಿನ ಇದೆ ಬಸ್ ಅಲ್ಲಿ ಬರ್ತೀನಿ ಅಂತ ಗೊತ್ತಿದ್ರು ನಿಲ್ಸಿಲ್ಲ ಹಾಗೆ ಹೋದ ಅಂತ ಬೈಕೊತಿರ. ಅದೇ ಬಸ್ ಒಳಗೆ ಇರೋ ಜನಕ್ಕೆ ಡ್ರೈವರ್ ಸರಿಯಾದ ಸಮಯಕ್ಕೆ ಅವರವರ ಜಾಗಕ್ಕೆ ತಲುಪಿಸ್ತಾನೆ ಅಂತ ಒಳ್ಳೆ ಮನುಷ್ಯನಾಗಿ ಬಿಡ್ತಾನೆ. ಕೆಲವೇ ನಿಮಿಷಗಳಲ್ಲಿ ಒಳ್ಳೇದು ಕೆಟ್ಟದು ಅನ್ನೋದು ಗಾಳೀಲಿ ತೇಲೋ ಎಲೆ ತರ ಚಂಚಲ ಆಗಿಬಿಡತ್ತೆ. ಒಳ್ಳೆತನ ಹಾಗು ಕೆಟ್ಟತನ ಅನ್ನೋದನ್ನು ಡ್ರೈವರ್ ನ ಕಾಲ ಕೆಳಗೆ ಬಂದಿಯಾಗಿರೋ ಅಕ್ಷಿಲೇಟರ್ ಹಾಗು ಬ್ರೇಕುಗಳು ನಿರ್ದರಿಸೋದು ಮಾತ್ರ ವಿಪರ್ಯಾಸ ಬಾನುವಾರ .... ಹೊಸ ಸಿನೆಮಾ ಒಂದು ಬಂದಿದೆ ...ನಮ್ಮ ಮೆಚ್ಚಿನ ಹೀರೋ. ಮೊದಲ ದಿನ ಮೊದಲ ಷೋ ನೋಡಬೇಕು ಅನ್ನೋ ಆಸೆ. ಶನಿವಾರಾನೆ ನಾಳೆ ಬೆಳಗ್ಗೆ ಬೇಗ ಎದ್ದು ಸಿನೆಮಾಗೆ ಹೋಗಬೇಕು ಅಂತ ಡಿಸೈಡ್ ಮಾಡಿರ್ತೀರ .. ಆದರೆ sunday sickness ಎಲ್ಲಿ ಬಿಡಬೇಕು, ಅದಕ್ಕೆ ಏಳೋದು ಲೇಟ್ ..... ಸರಿ ಬುಕ್ ಮೈ ಶೋ ದ ಲ್ಲಿ ಬುಕ್ ಮಾಡೋಣ ಅಂತ ನೋಡಿದರೆ ಮೊಬೈಲ್ ಅಲ್ಲಿ ನೆಟ್ ವರ್ಕ್ ಸಮಸ್ಯೆ. ಸರಿ ಥಿಯೇಟರ್ ನಲ್ಲಿನೇ ಟಿಕೆಟ್ ತಗೊಳ್ಳೋಣ ಅಂತ ಬೇಗ ರೆಡಿ ಯಾಗಿ ಹೋಗಿ ನೋಡಿದರೆ ಅಲ್ಲಿ ದೊಡ್ಡ ಸರದಿ ಸಾಲು... ಪರಿಚಿಅತ ಮುಖಗಳು ಯಾವುದಾದರು ಇದೆಯಾ ಅಂತ ಒಮ್ಮೆ ಕಣ್ಣು ಹಾಯಿಸಿ ಅಲ್ಲೇ ಸರದಿಯಲ್ಲಿ ನಿಂತಿರೋ ಪಾಪ ಪ್ರಾಣಿಗೆ ಒಂದು ಸ್ಮೈಲ್ ಕೊಟ್ಟು ಸಾರ್ ಒಂದು ಟಿಕೆಟ್ ತಗೋತೀರ ಅಂತ ಕೇಳ್ತೀರಾ ... ಇಲ್ಲಿ ಸರಿ ತಪ್ಪು ಅನ್ನೋದು ಬೇಡ. ಆ ಮನುಷ್ಯ ನಿಮಗೂ ಸೇರಿಸಿ ಟಿಕೆಟ್ ತಗೊಂಡರೆ ಅವ್ನು ನಿಮ್ಮ ಪಾಲಿಗೆ ತುಂಬಾ ಒಳ್ಳೆಯವನು. ಆದರೆ ಆದೇ ಸರದಿ ಸಾಲಿನಲ್ಲಿ ನಿಂತಿರೋ ಕೊನೆಯ ಮನುಷ್ಯನ ಪಾಲಿಗೆ ನೀವಿಬ್ರು ಉಗ್ರಗಾಮಿಗಳ ತರ ಅನ್ನಿಸೋದಂತು ಖಚಿತ. ಅವ್ನು ಟಿಕೆಟ್ ತಗೊಂಡಿಲ್ಲ ಅಂದ್ರೆ ನಿಮ್ಮ ಪಾಲಿಗೆ ಅವ್ನು ಕೆಟ್ಟವನು. ಆದರೆ ಹಿಂದಿರೋ ಜನರಿಗೆ ಅವ್ನು ಒಳ್ಳೆಯವನು. ಒಂದು ಗಂಟೆಯಿಂದ ಲೈನ್ ಅಲ್ಲಿ ನಿಂತಿದೀವಿ ಈಗ ಬಂದು ನಕ್ರ ಮಾಡ್ತಾ ಇದಾನೆ ಒಳ್ಳೆದಾಯ್ತು ಟಿಕೆಟ್ ಸಿಕ್ಕಿಲ್ಲ ಈ ಮೂತಿಗೆ ಅಂತ . 100 ರುಪಾಯಿಯ ಒಂದು ಟಿಕೆಟ್ ಗೆ ಒಳ್ಳೆತನ ಕೆಟ್ಟತನ ದ ಮದ್ಯೆ ಒಂದು ರೇಖೆ ಎಳೆಯೋ ಚಾನ್ಸ್ ಇಲ್ಲಿ.. ಇಲ್ಲೇ ಇನ್ನೊಂದು ಸನ್ನಿವೇಶ.... ಸುದೀಪ್ ಅಥವಾ ದರ್ಶನ್ ಅವರ ಚಿತ್ರ ಅಂದುಕೊಳ್ಳೋಣ. ಅಪರೂಪಕ್ಕೆ ಎಂಬಂತೆ ಹೆಂಡತಿ ಈ ಚಿತ್ರ ನೋಡಲೇಬೇಕು ಅಂತ ಹಠ ಹಿಡಿದಿದ್ದಾಳೆ. ತರಾತುರಿಯಲ್ಲಿ ಹೊರಟು ಬರೋವಷ್ಟರಲ್ಲಿ ಚಿತ್ರ ಮಂದಿರದಲ್ಲಿ ಸಿಕ್ಕಾಪಟ್ಟೆ ಜನ. ಜೊತೆ ಹೆಂಡತಿ ಬೇರೆ ಇದಾಳೆ, ಟಿಕೆಟ್ ಸಿಕ್ಕಿಲ್ಲ ಅಂದ್ರೆ ಮನೇಲಿ ಮಹಾಯುದ್ದ ನಡೆಯೋದು ಖಂಡಿತ. ಅಲ್ಲೇ ಕಣ್ಣು ಹಾಯಿಸಿದರೆ ಸಂದಿಯಲ್ಲೊಬ್ಬ ಬ್ಲಾಕ್ ಟಿಕೆಟ್ ಮಾರೋದು ಕಾಣಿಸುತ್ತೆ. ಬೇರೆ ಸಮಯದಲ್ಲಿ ಆಗಿದ್ರೆ ಈ ಬ್ಲಾಕ್ ಟಿಕೆಟ್ ಮಾರೋ ನನ್ ಮಕ್ಳನ್ನು ಜೈಲ್ ಗೆ ಹಾಕ್ಬೇಕು ಅಂತ ಹೇಳ್ತಾ ಇದ್ರೂ ಇವತ್ತು ಮಾತ್ರ ಅವ್ನು ನಿಮ್ ಪಾಲಿಗೆ ದೇವರೇ ಸರಿ. ದುಪ್ಪಟ್ಟು ಹಣ ತೆತ್ತು ಚಿತ್ರಮಂದಿರದೊಳಗೆ ಹೆಜ್ಜೆ ಹಾಕ್ತೀರಿ. ಈಗ ತನ್ನ ,ಮನದನ್ನೆಯನ್ನು ಪುಸಲಾಯಿಸಿ ಹೇಗೋ ದುಡ್ಡು ಹೊಂದಿಸಿ ಟಿಕೆಟ್ ತಗೊಳೋಕೆ ಕ್ಯೂ ಅಲ್ಲಿ ನಿಂತಿರೋ ಚಿಗುರುಮೀಸೆಯ ಹುಡುಗನ ಪಾಡು. ಬಿಸಿಲಿನಲ್ಲಿ ನಿಂತಿದ್ದಾನೆ, ನೂಕುನುಗ್ಗಲು ಬೇರೆ , ತನ್ನ ಸರದಿ ಇನ್ನೇನು ಬರಬೇಕು ಅಷ್ಟರಲ್ಲಿ ಟಿಕೆಟ್ ಸೋಲ್ಡ್ ಔಟ್ . ಈಗ ಬ್ಲಾಕ್ ಟಿಕೆಟ್ ಮಾರುವವನು ಅವನ ಪಾಲಿಗೆ ವಿಲ್ಲನ್. ಬ್ಲಾಕ್ ಟಿಕೆಟ್ ಖರೀದಿಸಿದ ನೀವಂತೂ ಅವನ ಪಾಲಿಗೆ ಹತ್ತು ತಲೆಯ ರಾವಣನಂತೆ ಕಂಡರೂ ಆಶ್ಚರ್ಯವಿಲ್ಲ ....ಏನಂತೀರಿ? ‍‍‍‍‍‍‍‍‍‍‍‍‍‍‍‍-----------------------------------------------ಶ್ರೀ :-)

Comments