ಒಳ್ಳೆಯ ಘಟನೆಗಳೇ ನಮ್ಮ ಸುತ್ತ ಮುತ್ತ ಘಟಿಸುತ್ತಿರಲಿ...

ಒಳ್ಳೆಯ ಘಟನೆಗಳೇ ನಮ್ಮ ಸುತ್ತ ಮುತ್ತ ಘಟಿಸುತ್ತಿರಲಿ...

ಇಂದು ಕೇವಲ ಒಳ್ಳೆಯದನ್ನು ಮಾತ್ರ ನೆನಪಿಸಿಕೊಳ್ಳಬೇಕು ಎಂದು ನಿರ್ಧರಿಸಿದಾಗ ಕಂಡದ್ದು… ಪುಟ್ಟ ಕಂದ ಬೆಳಗಿನ ನಿದ್ರೆಯಿಂದ ಎದ್ದು ಕಣ್ಣು ಬಿಟ್ಟು ಪಕ್ಕದಲ್ಲಿ ಮಲಗಿದ್ದ ಅಮ್ಮನನ್ನು ತನ್ನ ಎರಡೂ ಕೈಗಳಿಂದ ಬಾಚಿತಬ್ಬಿ ಆಕೆಯ ಎದೆಯ ಮೇಲೆ ಮತ್ತೆ ಮಲಗಿದಾಗ ತಾಯಿ ತನ್ನೆಲ್ಲಾ ಅಕ್ಕರೆಯಿಂದ ಆಕೆಗೆ ಮುತ್ತಿಟ್ಟದ್ದು.

ರಸ್ತೆ ದಾಟುತ್ತಿದ್ದ ಹಿರಿಯರೊಬ್ಬರು ಇದ್ದಕ್ಕಿದ್ದಂತೆ ತಲೆತಿರುಗಿ ಬಿದ್ದಾಗ ಅಲ್ಲಿಯೇ ಕಾಲೇಜಿಗೆ ಹೋಗುತ್ತಿದ್ದ ಹುಡುಗನೊಬ್ಬ ತನ್ನ ಬ್ಯಾಗಿನಲ್ಲಿದ್ದ ನೀರಿನ ಬಾಟಲಿನಿಂದ ಮುಖದ ಮೇಲೆ ನೀರು ಚಿಮುಕಿಸಿ ಅವರನ್ನು ಎಚ್ಚರಿಸಿದಾಗ ಆ ಹಿರಿಯರು ಅವನನ್ನು ತಬ್ಬಿಕೊಂಡು ಕೃತಜ್ಞತೆ ಹೇಳಿದ್ದು, ವ್ಯಕ್ತಿಯೊಬ್ಬ ಹೋಟೆಲಿನಲ್ಲಿ ಮಸಾಲೆ ದೋಸೆ ತಿನ್ನುತ್ತಿರುವಾಗ ಅಲ್ಲಿಗೆ ಭಿಕ್ಷೆ ಬೇಡುತ್ತಾ ಬಂದು ಅನಾಥನೊಬ್ಬ ಕೈ ಮುಗಿದು ಬೇಡಿದಾಗ ಆ ವ್ಯಕ್ತಿ ಅವನಿಗೆ ಒಂದು ಬೆಣ್ಣೆ ಮಸಾಲೆ ಪಾರ್ಸಲ್ ಕೊಡಿಸಿದಾಗ ಆ ಭಿಕ್ಷುಕನ ಕಣ್ಣುಗಳಲ್ಲಿ ಹೊಳೆದ ಆಸೆಯ ಹೊಳಪನ್ನು ಕಂಡದ್ದು,

ಅಪಘಾತವಾಗಿ ಪ್ರಜ್ಞೆ ತಪ್ಪಿದ್ದ ವ್ಯಕ್ತಿಗೆ ಮತ್ತೆ ಪ್ರಜ್ಞೆ ಮರಳಿದಾಗ ಡಾಕ್ಟರ್ ಪಕ್ಕದಲ್ಲಿದ್ದ ಒಬ್ಬ ವ್ಯಕ್ತಿಯನ್ನು ತೋರಿಸಿ ಇವರು ನಿಮ್ಮನ್ನು ಸಕಾಲಕ್ಕೆ ಆಸ್ಪತ್ರೆಗೆ ಸೇರಿಸಿದ್ದರಿಂದಲೇ ನಿಮ್ಮ ಪ್ರಾಣ ಉಳಿಯಿತು ಎಂದು ಅಪರಿಚಿತರನ್ನು ಪರಿಚಯಿಸಿದಾಗ ಗಾಯಗೊಂಡ ವ್ಯಕ್ತಿಯ ಮುಖದಲ್ಲಿ ಮೂಡಿದ ಭಾವನೆ ಮತ್ತು ಆ ಅಪರಿಚಿತರ ಮನದಲ್ಲಿ ಆದ ತೃಪ್ತಿಯ ಭಾವ ಕಂಡದ್ದು, ಕಾಲೇಜಿನ ಕ್ಯಾಂಪಸ್‌ನಲ್ಲಿ ಏನೋ ಕಾರಣದಿಂದ ಆಳುತ್ತಿದ್ದ ಹುಡುಗಿಯನ್ನು ಎದೆಗವುಚಿಕೊಂಡು ಸಂತೈಸುತ್ತಿದ್ದ ಹುಡುಗನ ಕಣ್ಣಲ್ಲೂ ಪ್ರೀತಿಯ ಹನಿಯುದುರುವುದನ್ನು ನೋಡಿದಾಗ..

ಮೊದಲ ಬಾರಿಗೆ ಯಾವುದೋ ಒಂದು ಕ್ರಿಕೆಟ್ ಪಂದ್ಯದಲ್ಲಿ ತಮ್ಮ ಮೊಮ್ಮಗ ಶತಕದ ರನ್ನು ಹೊಡೆದ ಸಾಧನೆಯನ್ನು ಟಿವಿಯಲ್ಲಿ ನೋಡುತ್ತಿದ್ದ ಅಜ್ಜ ಅಜ್ಜಿ ಮತ್ತು ಕುಟುಂಬದವರು ಏಕದಂ ಆಕಾಶಕ್ಕೆ ನೆಗೆದು ಸಂತೋಷದಿಂದ ಕೂಗಿದ ಘಟನೆಯನ್ನು ವೀಕ್ಷಿಸಿದಾಗ, ಕೆಲವು ವರುಷಗಳ ಶ್ರಮದ ನಂತರ ಉಪಗ್ರಹವೊಂದು ಯಶಸ್ವಿಯಾಗಿ ಉಡಾವಣೆಯಾದ ಸಂದರ್ಭದಲ್ಲಿ ತಾಯಿ ಮಗುವನ್ನು ಹೆಡದ ನಂತರದ  ರೀತಿಯಲ್ಲಿ ಸಂಭ್ರಮಿಸಿದ ವಿಜ್ಞಾನಿಗಳ ಹರ್ಷೋದ್ಘಾರಗಳನ್ನು ಕಂಡಾಗ.

ಮಧ್ಯ ವಯಸ್ಕ ಹೆಣ್ಣೊಂದು ತನ್ನ ಸಾಕು ಬೆಕ್ಕಿನ ಜೊತೆ ತನ್ನೆಲ್ಲಾ ನೋವು ಮರೆಯುತ್ತಾ, ನಲಿದಾಡುತ್ತಾ ಮಗುವಿನಂತೆ ಕುಣಿದಾಡುವುದನ್ನು ಕಂಡಾಗ, ಪಟ್ಟು ಮಗುವೊಂದು ಮನೆಯ ಹಜಾರದಲ್ಲಿ ಎಲ್ಲರ ಮುಂದೆ ತೊದಲುತ್ತಾ ಮೊದಲ ಬಾರಿಗೆ ಅಪ್ಪಾ ಎಂದು ಕರೆದಾಗ ಆ ಅಪ್ಪನ ಮುಖದಲ್ಲಿ ಮೂಡಿದ ಆ ಅಭಿಮಾನದ ಧನ್ಯತಾ ಖುಷಿಯ ಭಾವ. ಹೀಗೆ ಸದಾ ಒಳ್ಳೆಯ ಘಟನೆಗಳೇ ನಮ್ಮ ಸುತ್ತ ಮುತ್ತ ಘಟಿಸುತ್ತಿರಲಿ ಎಂದು ಆಶಿಸುತ್ತಾ..

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ