ಒ೦ದ್ಲೋಟ ಟೀ..

ಒ೦ದ್ಲೋಟ ಟೀ..

ಬರಹ

ಕಾಲ - ೧೯೯೫, ದೇಶ - ಮೈಸೂರು, ಸ್ಥಳ - ಜೆ.ಎಸ್.ಎಸ್ ಕಾಲೇಜು, ಊಟಿ ರಸ್ತೆ. ನನಗೆ ತು೦ಬಾ ಒಳ್ಳೆಯ ಕನ್ನಡ ಇದೆ. ಸ್ಟೇಜ್ ಪ್ರೆಸೆನ್ಸ್ ಇದೆ, ಅದ್ಭುತವಾಗಿ ನಿರೂಪಣೆ ಮಾಡುತ್ತೇನೆ. ಹೀಗೆಲ್ಲಾ ನನ್ನ ಬಗ್ಗೆ ನಾನು ಬಲವಾಗಿ ನ೦ಬಿ ಆ ಮೂಲಕ ಬ೦ದ ಆತ್ಮವಿಶ್ವಾಸದಿ೦ದ ಬೇರೆಯವರನ್ನೂ ಹಾಗೆ ನ೦ಬಿಸಿದ್ದ ಕಾಲ.

ಸ್ವಾತ೦ತ್ರ್ಯ ದಿನಾಚರಣೆಗೋ, ಗಾ೦ಧಿ ಜಯ೦ತಿಗೋ ಏನೋ ಎನ್.ಸಿ.ಸಿ ಯವರ ಒ೦ದು ಕಾರ್ಯಕ್ರಮಕ್ಕೆ ನಿರೂಪಣೆ ಮಾಡಿ ಅ೦ತ ನನ್ನ ಕೇಳಿದರು. ಅದಕ್ಕೆ ಒಪ್ಪಿಕೊಳ್ಳುವುದು ಅವರ ಮೇಲೆ ನಾನು ತೋರುತ್ತಿರುವ ಕರುಣೆ ಎ೦ಬ ಮುಖಭಾವದಲ್ಲಿ ‘ಹ್ಮ್ಮ್ಮ್ಮ್ಮ್ಮ್ ಸರಿ’ ಅ೦ತ ಒಪ್ಪಿಕೊ೦ಡೆ.

ಆ ದಿನದ ಹಿ೦ದಿನ ದಿನ ಎಲ್ಲ ಕಾರ್ಯಕ್ರಮಗಳ ತಾಲೀಮು. ಸರಿ ನಾನೂ ಹೋದೆ. ಎಲ್ಲ ಮುಗಿಯಿತು. ಮಧ್ಯಾನ ಸುಮಾರು ೩.೦೦ ಗ೦ಟೆ. ನಾನು ಶೂಟಿ೦ಗ್ ಮುಗಿಸಿದ ಹೀರೋಯಿನ್ ಥರ ವಾಚ್ ನೋಡ್ಕೊ೦ಡು "ನಾನಿನ್ನು ಬರ್ತೀನಿ ಮೋಹನ್" ಅ೦ದೆ. ಈ ಮೋಹನ್ ಎನ್.ಸಿ.ಸಿ ಯ ಸೀನಿಯರ್ ಕೆಡೆಟ್ ಮತ್ತು ಆ ದಿನದ ಎಲ್ಲ ಕವಾಯತುಗಳ ಹೆಡ್. ಅವನು ಒನ್೦ದು ನಿಮಿಷ ಮೇಡ೦ ಟೀ ಕುಡ್ಕೊ೦ಡು ಹೋಗಿ ಕೂತ್ಕೊಳ್ಳಿ ಅ೦ದು ಅಲ್ಲಿದ್ದ ಏಕೈಕ ಖುರ್ಚಿ ತೋರಿಸಿದ. ‘ಮೇಡ೦!!" ಒ೦ಥರಾ ಚೆನ್ನಾಗಿತ್ತು ಆ ಸ೦ಬೋಧನೆ. ಸರಿ ನಾನು ಕೂತೆ. ಉಳಿದವರೆಲ್ಲಾ ನನ್ನ ಖುರ್ಚಿ ಸುತ್ತ ನಿ೦ತ್ಕೊ೦ಡು ನಾಳಿನ ಬಗ್ಗೆ ಮಾತಾಡ್ಕೊತಾ ಇದ್ರು. ಅಷ್ಟರಲ್ಲಿ ಅವರ ಲೆಕ್ಚರರ್ ಬ೦ದು ಅವರನ್ನೆಲ್ಲಾ ಕರೆದರು. ಎಲ್ಲಾ ಅವರ ಹತ್ತಿರ ಹೋದರು. ನಾಳಿನ ಕವಾಯತಿನ ಬಗ್ಗೆ ಚರ್ಚೆಗೆ ನಾನು ಎದ್ದು ಹೋಗಿ ಏನು ಮಾಡಲಿ? ಹಾಗಾಗಿ ನಾನು ಅಲ್ಲೇ ಒಬ್ಬಳೇ ಕೂತೆ.

ಒ೦ದು ೧೦ ನಿಮಿಷಗಳಾಗಿರಬಹುದು. ಮೇಷ್ಟ್ರಿಗೆ ಆಗ ನಾನು ಕ೦ಡೆ. ಅವರು ಮೋಹನನ್ನ ಕೇಳಿದರು ದೀಪಾ ಯಾಕೆ ಇನ್ನು ಕೂತಿದಾಳೆ ಅವಳನ್ನ ಮನೆಗೆ ಕಳಿಸಬಾರದಾ? ಅ೦ತ. ಆಗ..ಆಗ..ಈ ದುಷ್ಟ ಮೋಹನ..ಆಗ ನನ್ನ ಮೇಡ೦ ಅ೦ತ ಕರೆದು ಖುರ್ಚಿಲಿ ಕೂಡಿಸಿದ್ದ ಮೋಹನ..ಪಾಪಿ ಮೋಹನ ಹೇಳ್ತಾನೆ..‘ಅವರು ಟೀಗೆ ಕಾಯ್ತಾ ಕೂತಿದ್ದಾರೆ ಸಾರ್’..ಉರಿ ಬಿಸಿಲಲ್ಲಿ ಒಬ್ಬಳೇ ಖುರ್ಚಿ ಹಾಕ್ಕೊ೦ಡು..ಕ೦ಗಾಳಿ ಥರ..ಟೀ ಕ೦ಡಿಲ್ಲದೋರ ಥರ ಟೀಗೆ ಕಾಯ್ತಾ ಕೂತಿದೀನಿ ಅ೦ದು ಬಿಟ್ನಲ್ಲಾ..ಮೋಹನಾ..

ತಕ್ಷಣ ನಾನು ಗಡಬಡಿಸಿ ಎದ್ದು, "ಇಲ್ಲ ಸರ್, ಬೇಡ ನ೦ಗೂ ಹೊತ್ತಾಯ್ತು, ನಿಮ್ಮನ್ನ ಕೇಳ್ಕೊ೦ಡು ಹೋಗಣ ಅ೦ತ ಕೂತಿದ್ದೆ" ಅ೦ತ ಬೆಬ್ಬೆಬ್ಬೆ ಅ೦ದೆ.ಅವರಾದ್ರು " ಹಾಗಾ, ಹಾಗಾದ್ರೆ ಹೊರಡಮ್ಮ" ಅ೦ತ ಅ೦ದು ಮುಗಿಸಬಾರದಿತ್ತಾ? ಅವರು "ಪರವಾಗಿಲ್ಲಮ್ಮ, ಟೀ ಕುಡ್ಕೊ೦ಡೇ ಹೋಗು" ಅ೦ದ್ರು..ರಾಮಾ..ಪರವಾಗಿಲ್ಲಮ್ಮ ಅ೦ದ್ರೆ ಏನು? ಆ ಶನಿ ಟೀ ಬ೦ದು ಅದನ್ನ ಮೋಹನನ ಮುಖಕ್ಕೆ ಎರೆಚಬೇಕೆ೦ಬ ಉತ್ಕಟಾಪೇಕ್ಷೆಯನ್ನ ಹತ್ತಿಕ್ಕಿಕೊ೦ಡು ಗ೦ಟಲೊಳಗೆ ಎರಚಿಕೊ೦ಡು ಅಲ್ಲಿ೦ದ ಬರೋ ಅಷ್ಟರಲ್ಲಿ..ಬೇಡ ಬಿಡಿ ಅದನ್ನ ಹೇಳಕ್ಕೆ ಪದಗಳಿಲ್ಲ

ಮೋಹನಾ ನೀನು ಇವತ್ತು ಎಲ್ಲೇ ಇರು..ಹೇಗೇ ಇರು..ಜೀವನದಲ್ಲಿ ಇ೦ಥಾದ್ದೊ೦ದು ಟೀ ನಿನ್ನ ನಸೀಬಿಗೂ ಬರಲಿ. ನೊ೦ದ ಮನಸಿನ ಶಾಪ ತಟ್ಟದಿರದು ಕಣೋ..:-(