ಓ..ಒಲವೇ(ಹಿನ್ನೋಟ)
ಪ್ರೀತಿ, ಪ್ರೇಮ ಅನ್ನೋದು ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿ ಬಿಟ್ಟದೆ, ಟಿ.ವಿ ಧಾರವಾಹಿಗಳ ಪ್ರಭಾವವೋ, ಸಿನಿಮಾಗಳ ಕೃಪೆಯೋ ಗೊತ್ತಿಲ್ಲ, ಪ್ರೀತಿ ಅಂದ್ರೆ ಸಾಕು ಈಗಿನ ಕಾಲದ ಚಿಕ್ಕ ಚಿಕ್ಕ ಮಕ್ಕಳಿಗೂ ಅರ್ಥವಾಗಿ ಬಿಡುತ್ತೆ, ಪ್ರೀತಿ ಅಂದ್ರೆ ಒಂದು ಹೆಣ್ಣಿಗೂ, ಒಂದು ಗಂಡಿಗೂ ಸಂಬಂಧ ಪಟ್ಟಿದ್ದು ಅಂತ. ಓ..ಒಲವೇ ಕಥೆಯನ್ನು ಸಂಪದದಲ್ಲಿ ಹಾಕಿದಾಗ ಕೆಲವರು ಕಾಮೆಂಟ್ ಮಾಡಿದ್ದಾರೆ. "ಪ್ರೀತಿ ಅಂದ್ರೆ ಏನು ಅನ್ನೋ ಸಂದೇಹ ಉಂಟಾಗಿದೆ" ಎಂದು. ಹೌದು ಪ್ರೀತಿ ಅಂದರೆ ಏನು...? ಇತ್ತೀಚಿನ ದಿನಗಳಲ್ಲಂತೂ ಯಾರನ್ನಾದ್ರೂ ಪ್ರೀತಿ ಎಂದ್ರೇನು ಅಂತ ಕೇಳಿದ್ರೆ ಅವರಿಗೆ ಹೊಳೆಯೋದು ಬರೀ ಒಂದು ಗಂಡು, ಒಂದು ಹೆಣ್ಣು ಒಬ್ಬರನ್ನೊಬ್ಬರು ನೋಡೋದು, ಕೈ ಕೈ ಹಿಡಿದು ಮಾಲ್, ಪಾರ್ಕ್ ಸುತ್ತೋದು, ಸಿನಮಾ ಥಿಯೇಟರ್,ಹೋಟಲ್ ಅಂತ ಅಲೆಯೋದು, ಚುಂಬನ, ಆಲಿಂಗನ ನಂತರ ದೈಹಿಕ ಸಂಪರ್ಕ. ಇಷ್ಟೆ.ಇದನ್ನೆಲ್ಲ ಮಾಡಿದ್ರೆ ಮಾತ್ರನಾ ಪ್ರೀತಿ ಅನ್ನೋದು....? ಆದ್ರೆ ಇದನ್ನೆಲ್ಲ ಹೊರತು ಪಡಿಸಿ ಪ್ರೀತಿ ಅಂದ್ರೆ ಬೇರೆ ಏನೋ ಇದೆ ಅಂತ ನಿಜವಾದ ಪ್ರೀತಿಯ ಅರ್ಥ ಗೊತ್ತಿರೋರಿಗೆ ಮಾತ್ರ ಗೊತ್ತಾಗೋದು. ಈ ಕಥೆಯಲ್ಲಿ ತನ್ಮಯಾಳ ಪ್ರಕಾರ ಪ್ರೀತಿ ಅಂದ್ರೆ ಕಾಳಜಿ, ಅಕ್ಕರೆಯ ಮಾತು,ತನ್ನ ಸುಖ, ದುಃಖ, ನೋವು ಸಂಕಟಗಳಿಗೆ ಸ್ಪಂದಿಸುವ ಹೃದಯ.ಇದೆಲ್ಲವೂ ಸಂಜುವಿನಿಂದ ಸಿಗುತ್ತಿದ್ದ ಕಾರಣ ಸಂಜಯ್ ನನ್ನು ಬಿಟ್ಟಿರಲಾಗುತ್ತಿರಲಿಲ್ಲ. ಆದರೆ ಇದಕ್ಕಿದ್ದಂತೆ ಸಂಜುವಿನಿಂದ ಇದ್ಯಾವುದೂ ಸಿಗದಿದ್ದಾಗ ಹುಚ್ಚಿಯಂತಾಗತೊಡಗಿದ್ದಳು.ಆದ್ರೆ ಈ ಕಥೆಯಲ್ಲಿ ಸಂಜು ಯಾಕೆ ಹೀಗೆ ಅವಳನ್ನು ತಾತ್ಸಾರ ಮಾಡಿದ್ದ ಎಂದು ಹೇಳೋಕೆ ನನಗೂ ಸಾಧ್ಯವಾಗುತ್ತಿಲ್ಲ.ಏಕೆಂದರೆ ಅವನು ತನ್ಮಯಾಳ ಜೊತೆ ದೇಹ ಸಂಪರ್ಕ ಇಟ್ಟುಕೊಳ್ಳಬೇಕೆಂದುಕೊಂಡ, ಅದಕ್ಕೆ ತನು ಅಸ್ಪದ ಕೊಡಲಿಲ್ಲವಾದ್ದರಿಂದ ಇನ್ನು ಏನು ಪ್ರಯೋಜನವಿಲ್ಲವೆಂದು ಅವಳನ್ನು ಬಿಟ್ಟ ಎಂದು ಹೇಳಿ ಅವನನ್ನು ಕೆಟ್ಟವನನ್ನಾಗಿ ತೋರಿಸಲು ಮನಸ್ಸು ಬರುತ್ತಿಲ್ಲ.ಅಥವಾ ತನುವಿನ ಜೀವನದಲ್ಲಿ ತಾನಿದ್ದರೆ ಅವಳಿಗೆ ಒಳಿತಾಗುವುದಿಲ್ಲವೇನೋ ಎಂದು ಯೋಚಿಸಿ, ಆ ಕಾರಣದಿಂದ ದೂರಾದ ಎಂದು ಹೇಳಿ ಅವನನ್ನು ಒಳ್ಳೆಯವನನ್ನಾಗಿ ತೋರಿಸಲೂ ಸಹ ಇಷ್ಟವಾಗುತ್ತಿಲ್ಲ.ಹಾಗಾಗಿ ಅವನೇಕೆ ಹಾಗೆ ಮಾಡಿದ ಅನ್ನೋದನ್ನ ಒಗಟಾಗಿಯೇ ಉಳಿಸಿದೆ.
ಓ..ಒಲವೇ ಕಥೆ ಏನೋ ಮುಗಿಯಿತು,ಆದರೆ ಸಮಾಜದಲ್ಲಿ ಈ ರೀತಿಯ ನೋವನ್ನು ಅನುಭವಿಸುತ್ತಿರುವ ತನುವಿನಂತ ಹೆಣ್ಣು ಮಕ್ಕಳು ತುಂಬಾ ಜನ ಇದ್ದಾರೆ,ಅಂಥವರಿಗೆ ನನ್ನದೊಂದು ಮಾತು.ಪ್ಲೀಸ್ ನಿಮ್ಮ ಜೀವನದಲ್ಲಿ ಮಾತಿಗೆ ಮರುಳಾಗಿ ಸಂಜುವಿನಂತ ಗಂಡಸರಿಗೆ ಸ್ಥಾನ ಕೊಡಬೇಡಿ. ಏನೇ ಕಷ್ಟ ಬಂದರೂ ದಿಟ್ಟತನದಿಂದ ಎದುರಿಸಿ ಹೇಡಿಗಳಂತೆ ಆತ್ಮಹತ್ಯೆಗೆ ಪ್ರಯತ್ನಿಸಬೇಡಿ, ಯಾರಿಗಾಗೋ ನಿಮ್ಮ ಜೀವ ಕಳೆದುಕೊಳ್ಳಬೇಡಿ.
ಸ್ವಲ್ಪ ಇರಿ ಗಂಡಸರೇ... ಹೆಣ್ಣು ಮಕ್ಕಳಿಗೆ ಬುದ್ದಿ ಹೇಳ್ತಾ ಇದ್ದೀನಿ ಅಂತ ತಪ್ಪೆಲ್ಲಾ ಅವರದೇ ಅಂತ ತಿಳಿಬೇಡಿ, ಹೆಣ್ಣಿನ ತಪ್ಪಿಗೆ ಮೂಲಕಾರಣಾನೇ ಗಂಡಸು.ಇಲ್ಲಿ ತನುವಿನ ಗಂಡ ಸರಿಯಾಗಿದ್ದಿದ್ದರೆ ತನು ಬೇರೆ ಯಾರನ್ನೋ ಪ್ರೀತಿ ಮಾಡೋ ಅವಶ್ಯಕತೆ ಇರ್ತಾ ಇರ್ಲಿಲ್ಲ.ತನು ವಿನ ಹಾಗೆ ಎಷ್ಟೋ ಜನ ಹೆಣ್ಣುಮಕ್ಕಳಿದ್ದಾರೆ ಸಮಾಜದಲ್ಲಿ.ಅದರಲ್ಲಿ ನಿಮ್ಮ ಅಕ್ಕ ತಂಗಿಯರೂ ಇರಬಹುದು.ಹಾಗಾಗಿ ನಿಮಗೂ ಒಂದು ಕಿವಿಮಾತು, ಬೇರೆ ಹೆಣ್ಣುಮಕ್ಕಳನ್ನು ಪ್ರೀತಿ ಪ್ರೇಮ ಅಂತ ಅವರ ಹಿಂದೆ ಸುತ್ತೋದನ್ನು ಬಿಡಿ.ನಿಮ್ಮ ನಿಮ್ಮ ಹೆಂಡತಿಯರನ್ನು ಪ್ರೀತಿ ಮಾಡಿ, ಅವರೊಟ್ಟಿಗೆ ನಿಯತ್ತಿನಿಂದ ಜೀವನ ಸಾಗಿಸಿ.ಇದರಿಂದ ಅವರು ಬೇರೆಯವರ ಪ್ರೀತಿಯ ಬಲೆಯಲ್ಲಿ ಸಿಕ್ಕಿ ಒದ್ದಾಡುವುದು ತಪ್ಪುತ್ತೆ, ಆಗ ಎಲ್ಲರೂ ಸಂತೋಷವಾಗಿರಬಹುದು.ನನ್ನ ಈ ಮಾತುಗಳಿಂದ ಯಾರಿಗಾದರೂ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ,
ಧನ್ಯವಾದಗಳು......
N....R....
Comments
ಉ: ಓ..ಒಲವೇ(ಹಿನ್ನೋಟ)
ವಿಮರ್ಶಾತ್ಮಕ ಹಿನ್ನೋಟ ಚೆನ್ನಾಗಿದೆ. ಇದರಲ್ಲಿನ ಈ ಸಾಲು ಓದುಗರ ವಿಮರ್ಶೆಗೆ ಅರ್ಹವಾಗಿದೆ: 'ನಿಮ್ಮ ಜೀವನದಲ್ಲಿ ಮಾತಿಗೆ ಮರುಳಾಗಿ ಸಂಜುವಿನಂತ ಗಂಡಸರಿಗೆ ಸ್ಥಾನ ಕೊಡಬೇಡಿ.'- ತನ್ಮಯಳಂತಹ ತೊಳಲಾಟದ ಸ್ಥಿತಿಯೂ ಸಂಜುವಿನಂತಹವರಿಗೆ ಪ್ರೇರಿಸುತ್ತದೆ ಎಂಬುದೂ ಸತ್ಯ. ಎರಡೂ ಕೈ ಸೇರಿದರೆ ಮಾತ್ರ ಚಪ್ಪಾಳೆಯ ಸದ್ದು ಕೇಳಿಸುತ್ತದೆ. ತಪ್ಪು/ಸರಿ ಅನ್ನುವುದು ಇಬ್ಬರಲ್ಲೂ ಇರುತ್ತದೆ. ಒಬ್ಬರನ್ನೇ ದೂಷಿಸಲಾಗದು.