ಓ..ಒಲವೇ (1)
ತನ್ನ ಪಕ್ಕದಲ್ಲಿ ಯಾರೋ ಕುಳಿತಂತೆ ಭಾಸವಾಗಿ ಕಣ್ಣು ಬಿಟ್ಟಳು. ಹೌದು ನಿವಾಗಿಯೂ ಒಬ್ಬ ವ್ಯಕ್ತಿ ತನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದ. ನೋಡೋಕೆ ಹೆಚ್ಚು ಕಡಿಮೆ ತನ್ನ ವಯಸ್ಸಿನವನಂತೆ ಕಾಣುತ್ತಿದ್ದ. ಅವಳಿಗೆ ಕಸಿವಿಸಿಯಾಯಿತು.ಇವನಿಗೆ ಬೇರೆ ಎಲ್ಲೂ ಜಾಗ ಇರಲಿಲ್ವಾ..? ನನ್ನ ಪಕ್ಕದ ಸೀಟೇ ಬೇಕಿತ್ತಾ..? ಅಂತ ಮುಖ ಸಿಂಡರಿಸಿಕೊಂಡು ಕಿಟಕಿಯ ಕಡೆ ಮುಖ ತಿರುಗಿಸಿಕೊಂಡಳು. ಇದನ್ನು ಗಮನಿಸಿದ ಆ ವ್ಯಕ್ತಿ ಎದ್ದು ಕಂಡೆಕ್ಟರ್ ಬಳಿ ಹೋಗಿ ರೀ ಕಂಡೆಕ್ಟರ್, ನನಗೆ ಬೇರೆ ಕಡೆ ಸೀಟು ಕೊಡಿ, ಆ ಸೀಟು ಅಡ್ಜೆಸ್ಟ್ ಆಗೋಲ್ಲ ಎಂದನು.ಕಂಡೆಕ್ಟರ್ ಹೇಳಿದ ಇಲ್ಲ ಮಾರಾಯ, ಇರೋದು ಅದೊಂದೇ ಸೀಟು. ಇಷ್ಟವಿದ್ರೆ ಕೂತ್ಕೋ ಇಲ್ಲವಾದರೆ ಬೇರೆ ಬಸ್ಸಿಗೆ ಹೋಗು ಎಂದ. ಪ್ಲೀಸ್ ಸರ್ ಹೇಗಾದ್ರು ಅಡ್ಜೆಸ್ಟ್ ಮಾಡಿ ಅಂದ.ಸೀಟೇ ಇಲ್ಲ ಅಂದ್ರೆ ಹೇಗೆ ಮಾರಾಯ ಅಡ್ಜೆಸ್ಟ್ ಮಾಡೋದು. ನನ್ನ ಕರ್ಮಕ್ಕೆ ಪ್ರತೀದಿನ ನಿನ್ನಂಥವರು ಯಾರಾದರೂ ಒಬ್ಬರು ಗಂಟು ಬೀಳುತ್ತಾರೆ ಎಂದ. ಹೀಗೇ ಇಬ್ಬರಿಗೂ ವಾದ ಶುರುವಾಯ್ತು.ಇದನ್ನೆಲ್ಲಾ ಗಮನಿಸಿದ ತನ್ಮಯ ಅಯ್ಯೋ ದೇವರೇ ಇವನೆಲ್ಲೋ ಜಗಳಗಂಟನಿರಬೇಕು ಎಂದುಕೊಂಡಳು.ಆ ವ್ಯಕ್ತಿ ವಾದದಿಂದ ಏನೂ ಪ್ರಯೋಜನವಿಲ್ಲ ಎಂದು ಅರಿತಾಗ ಮತ್ತೆ ಬಂದು ತನ್ಮಯ ಪಕ್ಕದ ಸೀಟಿನಲ್ಲೇ ಕುಳಿತನು.ಬಸ್ಸು ಹೊರಟಿತು.ತನ್ಮಯ ಕಿಟಕಿಗೆ ತಲೆಯಿಟ್ಟು ಮಲಗಲು ಪ್ರಯತ್ನಿಸಿದಳು. ಸ್ವಲ್ಪ ಹೊತ್ತಿಗೆ ಗಂಟಲಲ್ಲಿ ಕಿರಿಕಿರಿಯಾಗಿ ಕೆಮ್ಮು ಶುರುವಾಯ್ತು. ಎಷ್ಟು ಪ್ರಯತ್ನಿಸಿದರೂ ಕೆಮ್ಮು ನಿಲ್ಲಲಿಲ್ಲ. ಇದರಿಂದ ಗಾಢನಿದ್ರೆಯಲ್ಲಿದ್ದ ಪಕ್ಕದಲ್ಲಿ ಕೂತಿದ್ದ ಆ ವ್ಯಕ್ತಿಗೂ ಎಚ್ಚರವಾಯ್ತು.ಅವನು ತನ್ನ ಬ್ಯಾಗ್ ನಲ್ಲಿದ್ದ ನೀರಿನ ಬಾಟಲ್ ತೆಗೆದು ತನ್ಮಯಳಿಗೆ ಕುಡಿಯಲು ಕೊಟ್ಟನು. ನೀರು ಕುಡಿದು ಅವಳಿಗೆ ಕೆಮ್ಮು ಸ್ವಲ್ಪ ಕಮ್ಮಿಯಾಯಿತು. ಥ್ಯಾಂಕ್ಸ್ ಎಂದಳು. ಅವನು ನಿಮ್ಮ ಪರಿಚಯ ಎಂದನು. ನನ್ನ ಹೆಸರು ತನ್ಮಯ,ಗಂಡನ ಹೆಸರು ಚಂದನ್, ನಮಗೊಬ್ಬಳು ಮಗಳಿದ್ದಾಳೆ ಮಧು ಅಂತ ಅವಳ ಹೆಸರು ಎಂದು ತನ್ನ ಹಾಗೂ ತನ್ನ ಕುಟುಂಬದ ಬಗ್ಗೆ ಪರಿಚಯ. ಮಾಡಿಕೊಂಡು ತಾನೀಗ ತವರುಮನೆಗೆ ಅಮ್ಮನನ್ನು ನೋಡಲು ಹೋಗುತ್ತಿರುವುದಾಗಿ ತನ್ನ ಗಂಡನಿಗೆ ಕೆಲಸವಿದ್ದ ಕಾರಣ ಒಂಟಿಯಾಗಿ ಹೋಗುತ್ತಿರುವುದಾಗಿ ಹೇಳಿದಳು. ಅಂದ ಹಾಗೆ ತಮ್ಮ ಪರಿಚಯ ಎಂದಳು.ಅದಕ್ಕೆ ಅವನು ನಾನು ಸಂಜಯ್, ಬೆಂಗಳೂರಿನ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ.ಮದುವೆಯಾಗಿ ಇಬ್ಬರು ಗಂಡು ಮಕ್ಕಳಿದ್ದಾರೆ. ಫೋಟೋಗ್ರಫಿ ನನ್ನ ಹವ್ಯಾಸ. ಹಾಗಾಗಿ ಚಿಕ್ಕಮಗಳೂರಿನ ಸುಂದರ ತಾಣಗಳನ್ನು ಪೋಟೋಶೂಟ್ ಮಾಡಲು ಹೋಗುತ್ತಿದ್ದೇನೆ ಎಂದನು. ಓಹ್ ಹೌದಾ ಎಂದು ಹೇಳಿ ಮತ್ತೆ ಮುಖವನ್ನು ಕಿಟಕಿಯ ಕಡೆ ತಿರುಗಿಸಿಕೊಂಡಳು.ಅಪರಿಚಿತ ವ್ಯಕ್ತಿಯ ಜೊತೆ ತುಂಬಾ ಮಾತನಾಡಬಾರದು. ಈ ಕಾಲದಲ್ಲಿ ಯಾರನ್ನೂ ನಂಬುವ ಹಾಗಿಲ್ಲ ಎಂದು ಮನಸ್ಸಿನಲ್ಲೇ ಗೊಣಗಿಕೊಂಡು ಮತ್ತೆ ನಿದ್ರೆ ಮಾಡಳು ಪ್ರಯತ್ನಿಸಿದಳು...
N....R....
ಮುಂದುವರೆಯುವುದು....
Comments
ಉ: ಓ..ಒಲವೇ (1)
ಪ್ರಿಯ ಓದುಗರೆ, ಓ..ಒಲವೆ ಕಥೆಯ ಭಾಗ 2 ನ್ನೂ ಸಹ ಓ..ಒಲವೆ(1) ಅಂತ ತಪ್ಪಾಗಿ ಹಾಕಿದ್ದೇನೆ. ಸಂಪದಕ್ಕೆ ಹೊಸಬಳಾಗಿರುವುದರಿಂದ ಅದನ್ನು ಬದಲಾಯಿಸುವುದು ಹೇಗೆಂದು ತಿಳಿಯುತ್ತಿಲ್ಲ. ದಯವಿಟ್ಟು ಕ್ಷಮಿಸಿ...