ಓಝೋನ್ ಪದರ ಮತ್ತು ನೇರಳಾತೀತ ಕಿರಣ
ಒಬ್ಬ ರಕ್ಕಸನಿದ್ದಾನೆ. ಬಹಳ ಬಲಶಾಲಿ ಅಲ್ಲ ಎನ್ನಬಹುದಾದರೂ ರಕ್ಕಸ ಕುಲವಲ್ಲವೇ? ಹಾನಿ ಉಂಟುಮಾಡದೇ ಬಿಡುವವನಲ್ಲ. ಆದರೆ ಇವನ ವಿರೋಧಿಯನ್ನು ಇವನೇ ಹುಟ್ಟಿಸುತ್ತಾನೆ. ಆ ವಿರೋಧಿಯಿಂದ ತಾನೇ ಬಂಧಿಯಾಗುತ್ತಾನೆ. ವೈರಿಯ ವೈರಿಗೂ ತಾನೇ ಜನ್ಮ ನೀಡುತ್ತಾನೆ. ಆತನಿಂದ ವೈರಿ ಸಂಹಾರ ಮಾಡಿಸುತ್ತಾನೆ. ಈ ತಲೆ ತಿರುಕನ ಕಥೆ ಇವತ್ತು ನಮ್ಮ ಕಥಾ ವಸ್ತು.
ನಿಮಗೆ ಗೊತ್ತು ಸೂರ್ಯನ ಬೆಳಕನ್ನು ಗಾಜಿನ ಪಟ್ಟಕದ ಮೂಲಕ ಅದು ಏಳು ಬಣ್ಣಗಳಾಗಿ ಒಡೆಯುತ್ತದೆ. ಒಂದು ಕಡೆಯಲ್ಲಿ ನೇರಳೆ ಇದ್ದರೆ ಇನ್ನೊಂದು ತುದಿಯಲ್ಲಿ ಕೆಂಪು. ಇವುಗಳ ಪಥದಲ್ಲಿ ನೀವು ಫೋಟೋ ಗ್ರಾಫಿಕ್ ಫಿಲ್ಮ್ ಅನ್ನು ಇರಿಸಿದರೆ ಅದು ಚಿತ್ರ ಮೂಡಿಸಿಕೊಳ್ಳುತ್ತದೆ. ಕೆಂಪಿನಿಂದ ಆಚೆ ಕ್ರಿಶ 1800 ರಲ್ಲಿ ಫೋಟೋ ಫಿಲ್ಮ್ ಅನ್ನಿಟ್ಟು ಒಬ್ಬ ಅಲ್ಲಿಯೂ ಒಂದು ಶಕ್ತಿಯ ತರಂಗವಿದೆ ಎಂದು ಕಂಡು ಹಿಡಿದಿದ್ದ. 1801 ರಲ್ಲಿ ಜಾನ್ ರಿಟ್ಟರ್ (Johann Ritter) ಎಂಬೊಬ್ಬ ವಿಜ್ಞಾನಿ ನೇರಳೆಯಿಂದ ಈಚೆ ಹುಡುಕ ಹೊರಟ. ಆಗ ಫೋಟೋ ಫಿಲ್ಮ್ ಹೆಚ್ಚು ಗಾಢವಾಯಿತು. ಆಗ ನೇರಳೆಯಿಂದಾಚೆಗೆ ನೇರಳೆಗಿಂತಲೂ ಒಂದು ಶಕ್ತಿಶಾಲಿ ಕಿರಣ ಪುಂಜ ಇದೆ ಅದನ್ನು ಅನುತ್ಕರ್ಷಕ ಕಿರಣ (de - oxidising rays) ಎಂದ. ಮತ್ಯಾರೋ ಆಕರ್ಷಕವಾಗಿರಲಿ ಎಂದು ರಾಸಾಯನಿಕ ಕಿರಣಗಳು (chemical rays) ಎಂದರು. ಆದರೆ ಕೊನೆಗೆ ನೇರಳಾತೀತ ಕಿರಣಗಳು (Ultra violet rays) ಎಂಬ ಹೆಸರೇ ಸ್ಥಿರವಾಯಿತು. ಹಾಗಾದರೆ ಇವು ನಮಗೆ ಕಾಣಿಸುತ್ತವೆಯೇ ಎಂದರೆ ಇಲ್ಲ. ಆದರೆ ಅದರ ಮೂಲವನ್ನೇ ನೋಡುತ್ತಿದ್ದರೆ ಶುಕ್ಲಪಟಲದ (retina) ಆ ಭಾಗ ಸುಟ್ಟು ಹೋಗುತ್ತದೆ. ಇದನ್ನು ಮೆಕುಲಾರ್ ಕಲೆ (macular scar) ಎನ್ನುತ್ತೇವೆ. ಚರ್ಮ UV ಕಿರಣಾಘಾತಕ್ಕೆ ಒಳಗಾದರೆ ಚರ್ಮದ ಕ್ಯಾನ್ಸರ್ ಉಂಟಾಗಬಹುದು. ಆದರೆ ಜೇನುನೊಣಗಳು, ಕೆಲವೊಂದು ಚಿಟ್ಟೆಗಳು, ಬರಿಂಕಗಳು (reindeers) ಇವುಗಳನ್ನು ಗುರುತಿಸಬಲ್ಲುವಾದರೆ ಕೆಲವೊಂದು ಚೇಳುಗಳು UV ಕಿರಣಗಳಿಗೆ ಹೊಳೆಯುತ್ತವೆ. ನಮಗೆ UV ಕಿರಣಗಳ ಪ್ರಮುಖ ಮೂಲ ಸೂರ್ಯನೇ. ಮಾನವ ಇವುಗಳನ್ನು ತಾನೇ ಉತ್ಪಾದಿಸಬಲ್ಲ.
UV ಕಿರಣಗಳ ತರಂಗಾಂತರ 100 nm ನಿಂದ 400 nm ನ ವರೆಗೆ. 100 ರಿಂದ 280 nm ಇದ್ದರೆ ಇವು UVC. UVC ಗಳು ಓಝೋನ್ ಪದರದ ಕಾರಣದಿಂದ ಭೂಮಿಯನ್ನು ತಲುಪುವುದೇ ಇಲ್ಲ. ಆದರೆ ಬ್ಯಾಕ್ಟೀರಿಯಾ ನಾಶ ಮಾಡಲು ಇವುಗಳನ್ನು ಕೃತಕವಾಗಿ ಉತ್ಪಾದಿಸಲಾಗುತ್ತದೆ. 280 - 315 nm ತರಂಗಗಳು UVB ಇವುಗಳ 5% ಮಾತ್ರ ಭೂಮಿಯನ್ನು ತಲುಪುತ್ತದೆ. ಇವು ನಮ್ಮ ಹೊರ ಚರ್ಮವನ್ನು ಭೇದಿಸಿ ಸೂರ್ಯನ ಸುಡುವಿಕೆಗೆ (sunburn) ಮತ್ತು ಚರ್ಮದ ಕ್ಯಾನ್ಸರ್ ಗೆ ಕಾರಣ ಇವೆ. ಇನ್ನು 315 - 400 nm ತರಂಗಗಳು 95% ಭೂಮಿಯನ್ನು ತಲುಪುತ್ತವೆ. ಓಝೋನ್ ಪದರ ಇದನ್ನು ಸೋಸಲಾರದು. ಬಿಸಿಲಿನಲ್ಲಿ ನೀವು ಕಪ್ಪಾಗುವುದು ಮತ್ತು ಬೇಗನೇ ವಯಸ್ಸಾಗುವಂತೆ ಗೋಚರಿಸುವುದು (premature aging) ಇವುಗಳ ಕಾರಣದಿಂದ. UVA ಮತ್ತು UVB ಕಿರಣಗಳನ್ನು ಬೆಳಕಿನ ಚಿಕಿತ್ಸೆಯಲ್ಲಿ ಬಳಸುತ್ತಾರೆ. UVA ಕಿರಣಗಳನ್ನು ದಂತ ವೈದ್ಯರು ಹಲ್ಲನ್ನು ತುಂಬಿಸಿದ ನಂತರ ಅದು ಬೇಗ ಗಟ್ಟಿಯಾಗಲು ಬಳಸುತ್ತಾರೆ. ವೈದ್ಯಕೀಯದಲ್ಲಿ ಬ್ಯಾಕ್ಟೀರಿಯಾ ನಾಶಕ್ಕೆ ಬಳಸುವ ಇದು ಖೋಟಾ ನೋಟುಗಳನ್ನೂ ಗುರುತಿಸಬಲ್ಲುದು.
ಈ ಯುವಿ ಕಿರಣದ ವೈರಿಯೆಂದರೆ ಈ ಓಝೋನ್ ಪದರ. ಎಲ್ಲರೂ ಓಝೋನ್ ಪದರಕ್ಕೆ ಹಾನಿ ಎಂದು ಬೊಬ್ಬೆ ಹೊಡೆಯುವುದನ್ನು ಕೇಳಿದ ನೀವು ಈ ಓಝೋನ್ ಪದರ ಹಾಸಿಗೆಯಷ್ಟು ಅಥವಾ ಕಿಲೋಮೀಟರ್ ಗಟ್ಟಲೆ ದಪ್ಪ ಇರಬಹುದೆಂದು ಭಾವಿಸಿದ್ದೀರಾ? ಇಲ್ಲ ಅದು ಇರುವುದು ಗರಿಷ್ಠ 3 ಮಿಲಿ ಮೀಟರ್ ದಪ್ಪ ಅಷ್ಟೇ. ಇದು ಪ್ರಬಲವಾಗಿರುವ ಅಂದರೆ UVC ಕಿರಣಗಳನ್ನು ಸೋಸಿ ನಿಮ್ಮನ್ನು ರಕ್ಷಿಸುತ್ತದೆ. ನಮ್ಮ ಚರ್ಮದಲ್ಲಿ ವಿಟಮಿನ್ D ತಯಾರಿಗೆ ಕಾರಣವಾಗುವ UVB ಕಿರಣಗಳನ್ನು 5% ಮಾತ್ರ ಬಿಡುತ್ತದೆ. ಯಾಕೆಂದರೆ ಹೆಚ್ಚು ಬಿಟ್ಟರೆ ಅದೊಂದು ಕ್ಯಾನ್ಸರ್ ಕಾರಕ. UVA ಗಳನ್ನು ಧಾರಾಳ ಒಳಬಿಡುತ್ತದೆ. ಏಕೆಂದರೆ ಅದು ಸೌಂದರ್ಯ ವರ್ಧಕ ಕಂಪನಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡಿರಬೇಕು.
ವಿ ಕಿರಣಗಳು ಗಾಲಿಯಲ್ಲಿರುವ ಆಮ್ಲಜನಕದ ಅಣುಗಳನ್ನು ಆಮ್ಲಜನಕದ ಪರಮಾಣುಗಳಾಗಿ ಒಡೆಯುತ್ತವೆ. ಆಮ್ಲಜನಕದ ಪರಮಾಣುಗಳದ್ದು ಬಹಳ ತುಂಟ ಸ್ವಭಾವ. ಅವು ಎರಡು ಸೇರಿ ಪುನಃ ಆಮ್ಲಜನಕದ ಅಣುಗಳಾಗುತ್ತವೆ. ಬಿಸಿಲಿನಲ್ಲಿ ಒಣಗಿಸಿದ ಒದ್ದೆ ಒಣ ಬಟ್ಟೆಗಳ ಒಳ ಹೊಕ್ಕು ಜಲಜನಕದ ಪೆರಾಕ್ಸೈಡ್ (hydrogen peroxide) ಅನ್ನು ಉತ್ಪಾದಿಸುತ್ತವೆ ಅಥವಾ ಆಮ್ಲಜನಕದ ಅಣುವಿನೊಂದಿಗೆ ವರ್ತಿಸಿ ಓಝೋನ್ ಅನ್ನು ಉತ್ಪಾದಿಸುತ್ತವೆ. ಈ ಜಲಜನಕದ ಪೆರಾಕ್ಸೈಡ್ ಇದೆಯಲ್ಲ ಇದು ಬಣ್ಣಗಳನ್ನು (dye) ದುರ್ಬಲಗೊಳಿಸುತ್ತದೆ. ಅದೇ ಬಿಸಿಲಿನಲ್ಲಿ ಒಣಗಿಸಿದ ಬಣ್ಣದ ಬಟ್ಟೆ ಬಣ್ಣ ಕಳೆದುಕೊಳ್ಳಲು ಕಾರಣ. ಹೀಗೆ ಓಝೋನ್ ತನ್ನ ವೈರಿಯನ್ನು ತಾನೇ ಸೃಷ್ಟಿಸಿಕೊಳ್ಳುತ್ತದೆ. ಆದ್ದರಿಂದ ಓಝೋನ್ ಪದರದ ಸೃಷ್ಟಿ ಮತ್ತು ರಿಪೇರಿ ಎರಡೂ ಪ್ರಕೃತಿಯೇ ನೋಡಿಕೊಳ್ಳುತ್ತಿತ್ತು. ಆದರೆ ಈಗ ಓಝೋನ್ ಪದರ ತೂತು ಬಿದ್ದಿದೆ ಎನ್ನುತ್ತಾರಲ್ಲ ಏನದು?
ನಾವು ಬಳಸುವ AC, fridge ಗಳಲ್ಲಿ ತಂಪುಕಾರಕವಾಗಿ (refrigerants) ಒಂದು CFC ಗಳೆಂಬ ಅನಿಲಗಳನ್ನು ಬಳಸುತ್ತೇವೆ. ನಾವು ಹುಟ್ಟಿದ ಹಬ್ಬಗಳ ಆಚರಣೆ ಸಮಯ ಬಳಸುವ ನೊರೆಕಾರಕ ಏರೋಸೋಲ್ ಗಳಲ್ಲಿಯೂ ಇವು ಇರುತ್ತವೆ. ಅಗ್ನಿ ನಂದಕಗಳಲ್ಲಿ ಬಳಸುವ halon ಗಳು ಇವುಗಳಿಗಿಂತಲೂ ಅಪಾಯಕಾರಿ. ಇವು ವಾತಾವರಣಕ್ಕೆ ತಪ್ಪಿಸಿಕೊಂಡರೆ ಹಗುರವಾಗಿ ಮೇಲಕ್ಕೇರುತ್ತವೆ. ಮೇಲ್ಪದರದಲ್ಲಿ ಯುವ ಕಿರಣಗಳು ಬಿದ್ದಾಗ ಕ್ಲೋರಿನ್ ಅನಿಲ ಬಿಡುಗಡೆಯಾಗುತ್ತದೆ. ಒಂದು ಕ್ಲೋರಿನ್ ಪರಮಾಣು ಸರಿ ಸುಮಾರು 1 ಲಕ್ಷ ಓಝೋನ್ ಅಣುಗಳನ್ನು ನಾಶ ಮಾಡಬಲ್ಲುದು. ಈ CFC ಗಳು ರಾಸಾಯನಿಕವಾಗಿ ಸ್ಥಿರವಾಗಿರುವುದರಿಂದ 150 ವರ್ಷಗಳ ಕಾಲ ಅಲ್ಲಿಯೇ ಕುಳಿತು ಓಝೋನ್ ಪದರವನ್ನು ತಿನ್ನುತ್ತಲೇ ಇರುತ್ತವೆ. ಆದ್ದರಿಂದ 1985 ರಲ್ಲಿ ನಡೆದ ಮಾಂಟ್ರಿಯಲ್ ಒಡಂಬಡಿಕೆಯಲ್ಲಿ (Montreal protocol) CFC ಮತ್ತು halons ಗಳನ್ನು ನಿಷೇದಿಸಲು ಒಪ್ಪಿಕೊಳ್ಳಲಾಗಿದೆ. ಆದರೆ CFC / ಹ್ಯಾಲೇನುಗಳ ಬಳಕೆ ನಿಂತಿಲ್ಲ. ನಮ್ಮ ಹಂತದಲ್ಲಿ ಸಂಭ್ರಮಾಚರಣೆಯ ಸಮಯ ಏರೋಸಾಲ್ ಗಳ ಬಳಕೆ ನಿಲ್ಲಿಸೋಣ.
-ದಿವಾಕರ ಶೆಟ್ಟಿ ಎಚ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ