ಓಝೋನ್ ರಕ್ಷಿಸಿ, ಭೂಮಿಯನ್ನು ಉಳಿಸಿ (ಭಾಗ ೧)

ಓಝೋನ್ ರಕ್ಷಿಸಿ, ಭೂಮಿಯನ್ನು ಉಳಿಸಿ (ಭಾಗ ೧)

ಪ್ರಕೃತಿ ಸಹಜವಾಗಿಯೇ ತನ್ನ ಉಳಿವಿಗಾಗಿ ತನ್ನದೇ ಆದ ಸಂರಕ್ಷಣಾ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಅದಲ್ಲದೆ ಈ ವ್ಯಣವಸ್ಥೆಯನ್ನು ಅನಾದಿಕಾಲದಿಂದಲೂ ಕಾಪಾಡಿಕೊಂಡು ಬಂದಿದೆ. ಆದರೆ  ಅತಿ ಬುದ್ಧಿವಂತ ಎನಿಸಿಕೊಂಡ ಮಾನವ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯ ಸಮತೋಲನವನ್ನೇ ಹಾಳು ಮಾಡಿ, ಜೀವಸಂಕುಲವನ್ನು ವಿನಾಶದಂಚಿಗೆ ತಳ್ಳಿ, ತನ್ನ ಗೋರಿಯನ್ನು ತಾನೇ ತೋಡಿಕೊಳ್ಳುತ್ತಿದ್ದಾನೆ. ಯುರೋಪಿನಲ್ಲಿ. ೧೬ ನೇ ಶತಮಾನದಲ್ಲಿ ಆರಂಭಗೊಂಡ ಕೈಗಾರಿಕಾ ಕ್ರಾಂತಿಯಿಂದ ಇಂತಹ ಕತ್ಯಗಳು ಆರಂಭಗೊಂಡರೂ, ಕಳೆದ ಶತಮಾನದಿಂದ ಇತ್ತೀಚಿನವರೆಗೂ ಮಾನವನ ವಿಪರೀತ ಚಟುವಟಿಕೆಗಳಿಂದ ಭೂಮಿ ತನ್ನ ಸಮತೋಲನವನ್ನು ಕಳೆದುಕೊಳ್ಳುತ್ತಿದೆ. ಇದರಿಂದ ಭವಿಷ್ಯದಲ್ಲಿ ಅನೇಕ ಅಪಾಯಗಳು ಕಟ್ಟಿಟ್ಟ ಬುತ್ತಿ. ಇಂತಹ ಸಮಸ್ಯೆಗಳಲ್ಲಿ ಪ್ರಮುಖವಾದ ಸಮಸ್ಯೆ ಎಂದರೆ ಓಝೋನ್ ಪದರದ ನಾಶ!

ಏನಿದು ಓಜೋನ್ ಪದರ? : ಭೂಮಿಯ ಮೇಲೆ ೨೦ ರಿಂದ ೪೦ ಕಿ.ಮೀ. (ಸ್ತರಗೋಲ) ಎತ್ತರದ ಅಂತರಗಳ ನಡುವೆ ಒಂದು ಅನಿಲದ ಪದರವಿದೆ. ಇದನ್ನು ಓಜೋನ್ ಪದರ ಎಂದು ಕರೆಯುತ್ತಾರೆ ಇದೊಂದು ಸುರಕ್ಷಾ ಪದರ. ಈ ಪದವು ಸೂರ್ಯನಿಂದ ಬರುವ ಶೇಕಡ. ೯೭ ರಿಂದ ೯೯ ರಷ್ಟು ಅಪಾಯಕಾರಿ ನೇರಳಾತೀತ ವಿಕಿರಣವನ್ನು (ಅಲ್ಟ್ರಾವೈಲೆಟ್) ತಡೆಗಟ್ಟಿ ಭೂಮಿಯ ಮೇಲಿನ ಜೀವಸಂಕುಲವನ್ನು ರಕ್ಷಿಸುತ್ತಿದೆ. ಈ ಓಜೋನ್ ಪದರವನ್ನು ೧೯೧೩ ರಲ್ಲಿ ಫ್ರೆಂಚ್ ವಿಜ್ಞಾನಿಗಳಾದ ಚಾರ್ಲ್ಸ್ ಫೆಬ್ರಿ ಮತ್ತು ಹೆನ್ರಿ ಬ್ಯುಸೆನ್ ಜಂಟಿಯಾಗಿ ಕಂಡುಹಿಡಿದರು. ಇದರ ಕುರಿತ ಸಂಪೂರ್ಣ ವಿವರಣೆಯನ್ನು ಬ್ರಿಟಿಷ್ ಪವನ ಶಾಸ್ತ್ರಜ್ಞ ಜಿಎಂಬಿ ಡಾಬ್ಸನ್ ನೀಡಿದನು.

ಓಜೋನ್ ಪದರದ ರಚನೆ:  ಓಝೋನ್ ಎಂಬುದು ಮೂರು ಆಮ್ಲಜನಕದ ಪರಮಾಣುಗಳಿಂದ ಉಂಟಾದ ಒಂದು ಅಣು. ಇದು ಅನಿಲ ರೂಪದಲ್ಲಿ ಭೂಮಿಯನ್ನು ಸುತ್ತುವರಿದಿರುತ್ತದೆ. ಈ ಪದರವು ಸೂರ್ಯನಿಂದ ಬರುವ ನೇರಳಾತೀತ ವಿಕಿರಣಗಳನ್ನು ತಡೆಗಟ್ಟಿ ಜೀವಿಗಳನ್ನು ರಕ್ಷಿಸುತ್ತದೆ. ಈ ಓಝೋನ್ ಪದರವು ಭೂಮಧ್ಯರೇಖೆಯ ಬಳಿ ತೆಳುವಾಗಿದ್ದು ಧ್ರುವ ಪ್ರದೇಶಗಳ ಬಳಿ ದಪ್ಪವಾಗಿರುತ್ತದೆ. ಸೂರ್ಯನಿಂದ ಬರುವ ನೇರಳಾತೀತ ವಿಕಿರಣಗಳನ್ನಿಲ್ಲಿ ಗುರುತಿಸಲಾಗಿದೆ.

೧. ಯುವಿ- ಎ (ತರಂಗಾಂತರ ೪೦೦-೩೧೫ ನ್ಯಾನೋ ಮೀಟರ್)

೨. ಯುವಿ- ಬಿ (ತರಂಗಾಂತರ ೩೧೫-೨೮೦ ನ್ಯಾನೋ ಮೀಟರ್)

೩. ಯುವಿ- ಸಿ (ತರಂಗಾಂತರ ೨೮೦-೧೦೦ ನ್ಯಾನೋ ಮೀಟರ್)

(೧೦೦ ಕೋಟಿ ನ್ಯಾನೋ ಮೀಟರ್ = ೧ ಮೀಟರ್)

ಇವುಗಳಲ್ಲಿ ಯುವಿ-  ಬಿ ಮತ್ತು ಯುವಿ-  ಸಿ ನೇರಳಾತೀತ ಕಿರಣಗಳು ಜೀವಿಗಳಿಗೆ ಅತ್ಯಂತ ಮಾರಕವಾಗಿವೆ. ಆಶ್ಚರ್ಯದ ಸಂಗತಿಯೆಂದರೆ ವಿಶೇಷ ನೇರಳಾತೀತ ವಿಕಿರಣಗಳೇ ವಾತಾವರಣದಲ್ಲಿನ ಆಮ್ಲಜನಕದ. (O2) ಅಣುವನ್ನು ವಿಭಜಿಸಿ ಎರಡು ಆಮ್ಲಜನಕದ ಪರಮಾಣುಗಳನ್ನು ಬಿಡುಗಡೆ ಮಾಡುತ್ತವೆ. ಈ ಒಂದೊಂದು ಆಮ್ಲಜನಕದ ಪರಮಾಣುಗಳು ಆಮ್ಲಜನಕದ ಅಣು (O2) ವಿನೊಂದಿಗೆ ಸಂಯೋಗಗೊಂಡು ಒಂದು ಓಜೋನ್ ಅಣುವಾಗಿ ಮಾರ್ಪಡುತ್ತದೆ. (O2+O=O3=  ಓಝೋನ್)

( ಮುಂದುವರಿಯುತ್ತದೆ)

-ಕೆ. ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ