ಓಝೋನ್ ರಕ್ಷಿಸಿ, ಭೂಮಿಯನ್ನು ಉಳಿಸಿ (ಭಾಗ ೨)

ಓಝೋನ್ ರಕ್ಷಿಸಿ, ಭೂಮಿಯನ್ನು ಉಳಿಸಿ (ಭಾಗ ೨)

ನೇರಳಾತೀತ ವಿಕಿರಣಗಳ ಅಪಾಯಗಳು: ನೇರಳಾತೀತ ವಿಕಿರಣಗಳು ವಿದ್ಯುತ್ಕಾಂತೀಯ ವಿಕಿರಣಗಳು. ಇವು ಶಕ್ತಿಯುತವಾಗಿದ್ದ ಬೆಳಕಿನ ವೇಗದಲ್ಲಿ ಚಲಿಸುತ್ತವೆ. ಸೂರ್ಯನಲ್ಲಿ ನಡೆಯುವ ಬೈಜಿಕ ಕ್ರಿಯೆಗಳಿಂದ. (Nuclear Reactions) ಈ ವಿಕಿರಣಗಳು ಬಿಡುಗಡೆಯಾಗುತ್ತವೆ. ಈ ವಿಕಿರಣಗಳು ಜೀವಸಂಕುಲಗಳ ಮೇಲೆ ಬಿದ್ದರೆ ಅಪಾಯ ನಿಶ್ಚಿತ. ಈ ಕಿರಣಗಳು ಮಾನವನ ದೇಹದ ಮೇಲೆ ಬಿದ್ದರೆ, ಚರ್ಮ ಸುಡುತ್ತದೆ (ಸನ್ ಬರ್ನ್). ಚರ್ಮದ ಕ್ಯಾನ್ಸರ್, ಉಸಿರಾಟದ ತೊಂದರೆ, ಚರ್ಮದ ಅಲರ್ಜಿ ಮುಂತಾದ ತೀವ್ರತರ ರೋಗಗಳು ಉಂಟಾಗುತ್ತವೆ. ಈ ನೇರಳಾತೀತ ಕಿರಣಗಳು ಡಿ ಎನ್ ಎ ಜೀವಕೋಶಗಳ ಮೇಲೆ ದಾಳಿ ಮಾಡಿ ಅವುಗಳನ್ನು ನಾಶ ಮಾಡುತ್ತವೆ. ೨೦೧೦ರ ನವೆಂಬರ್ ನಲ್ಲಿ ನಡೆಸಿದ ಸಮೀಕ್ಷೆಯೊಂದರಲ್ಲಿ ಕ್ಯಾಲಿಫೋರ್ನಿಯಾದ ವೇಲ್ಸ್ ಪ್ರಾಣಿಗಳು ನೇರಳಾತೀತ ವಿಕಿರಣಗಳಿಂದಾಗಿ ಚರ್ಮರೋಗಕ್ಕೆ ಬಲಿಯಾಗಿ ಅಪಾರ ತೊಂದರೆ ಅನುಭವಿಸುವುದನ್ನು ಉಲ್ಲೇಖಿಸಲಾಗಿದೆ. ಈ ಕಿರಣಗಳು ಪ್ರಾಣಿಗಳ ಕಣ್ಣುಗಳ ಮೇಲೂ ಅಪಾಯವನ್ನು ಉಂಟುಮಾಡುತ್ತವೆ. ಬೆಳೆಯುವ ಸಸ್ಯಗಳಿಗೂ ಸಮಸ್ಯೆಗಳನ್ನು ತಂದೊಡ್ಡುತ್ತವೆ ಎಂಬುದು ಸಂಶೋಧನೆಗಳಿಂದ ತಿಳಿದುಬಂದಿದೆ. ಒಟ್ಟಿನಲ್ಲಿ ಓಝೋನ್ ಪದರ ಇಲ್ಲದೇ ಇದ್ದಿದ್ದರೆ ಭೂಮಿಯ ಮೇಲೆ ಜೀವಿಗಳ ಉಗಮ ಸಾಧ್ಯವಾಗುತ್ತಲೇ ಇರಲಿಲ್ಲ.

ಓಜೋನ್ ಪದರದ ನಾಶ: ಭೂಮಿಯ ಮೇಲೆ ಅತಿಯಾದ ಕೈಗಾರಿಕರಣದ ಪರಿಣಾಮವಾಗಿ ಅಪಾಯಕಾರಿಯಾದ ಅನಿಲಗಳು ವಾತಾವರಣಕ್ಕೆ ಸೇರ್ಪಡೆಯಾಗುತ್ತಿವೆ. ಅಪಾಯಕಾರಿ ಅನಿಲಗಳಾದ ನೈಟ್ರಿಕ್ ಆಕ್ಸೈಡ್ (NO), ನೈಟ್ರಸ್ ಆಕ್ಸೈಡ್ (N20), ಹೈಡ್ರಾಕ್ಸಿಲ್ (OH), ಪರಮಾಣು ಕ್ಲೋರಿನ್ (CL) ಮತ್ತು ಪರಮಾಣು ಬ್ರೋಮಿನ್ (Br) ಬಹುಮುಖ್ಯವಾದುವು. ಅಲ್ಲದೆ ಇತ್ತೀಚೆಗೆ ಮಾನವ ನಿರ್ಮಿತ ವಸ್ತುಗಳಾದ ಹ್ಯಾಲೋಜನ್, ಕ್ಲೋರೋಫೋರೋ ಕಾರ್ಬನ್ ಗಳು (ಸಿ ಎಫ್ ಸಿ) ಮತ್ತು ಬ್ರೋಮೋ ಫ್ಲೋರೋ ಕಾರ್ಬನ್ ಗಳು ನೇರವಾಗಿ ಆವಿಗೊಂಡು ಈ ಓಝೋನ್ ಪದರವನ್ನು ನಾಶ ಮಾಡಿಬಿಡುತ್ತವೆ. ಅದರಲ್ಲೂ ಒಂದೊಂದು ಕ್ಲೋರಿನ್ ಹಾಗೂ ಬ್ರೋಮಿನ್ ರಾಸಾಯನಿಕ ಗುಂಪುಗಳು ಒಂದು ಲಕ್ಷ ಓಝೋನ್ ಅಣುಗಳನ್ನು ನಿರ್ನಾಮ ಮಾಡಬಲ್ಲವು. ಯಾವಾಗ ಈ ಓಜೋನ್ ಅಣುಗಳು ನಾಶವಾಗುತ್ತವೋ ಆಗ ಓಜೋನ್ ಪದರ ಶಿಥಿಲಗೊಳ್ಳುತ್ತವೆ. ಇದರಿಂದ ನೇರಳಾತೀತ ವಿಕಿರಣಗಳು ಸುಲಭವಾಗಿ ಭೂಮಿಯನ್ನು ತಲುಪುತ್ತವೆ. ಹೀಗಾಗಿ ಭೂಮಿಯ ಉತ್ತರ ಗೋಳದಲ್ಲಿ ಪ್ರತಿವರ್ಷ ಶೇ.೪ ರಷ್ಟು ಓಝೋನ್ ಪದರ ನಾಶವಾಗುತ್ತಿದೆ. ಧ್ರುವಪ್ರದೇಶಗಳಲ್ಲಿ ವರ್ಷಕ್ಕೆ ಶೇ.೫ ರಷ್ಟು ಪದರ ನಾಶಗೊಳ್ಳುತ್ತಿದೆ.

ಓಜೋನ್ ರಂದ್ರ: ಓಝೋನ್ ರಂಧ್ರ ಎಂದರೆ ಓಝೋನ್ ಪದರದಲ್ಲಿ ಸಂಪೂರ್ಣ ಓಝೋನ್ ನಾಶವಾಗಿ ರಂದ್ರ ಉಂಟಾಗುತ್ತದೆ ಎಂದು ತಪ್ಪಾಗಿ ಭಾವಿಸಲಾಗಿದೆ. ಅಂದರೆ ಎಲ್ಲೂ ಓಝೋನ್ ಸಂಪೂರ್ಣ ನಾಶವಾಗುವುದಿಲ್ಲ. ಈ ಪದರ ಅಪಾಯಕಾರಿಯಾದ ಅನಿಲಗಳಿಂದ ನಾಶಗೊಂಡಾಗ ತೆಳುವಾದ ಓಝೋನ್ ಪದರವು ಉಳಿಯುತ್ತದೆ. ಇಂತಹ ಕಡಿಮೆ ಸಾಂದ್ರತೆ ಇರುವ ಓಜೋನ್ ಪ್ರದೇಶವನ್ನು ಓಜೋನ್ ರಂದ್ರ ಎಂದು ಕರೆಯಲಾಗುತ್ತದೆ.

ಎಚ್ಚೆತ್ತ ವಿಜ್ಞಾನಿಗಳು: ೧೯೮೫ರಲ್ಲಿ ಪ್ರಥಮ ಬಾರಿಗೆ ಅಂಟಾರ್ಟಿಕಾದಲ್ಲಿ ಓಝೋನ್ ಕುಳಿಯನ್ನು ಗುರುತಿಸಲಾಯಿತು. ಇಂದು ಸುಮಾರು ೧೬೫ ರಾಷ್ಟ್ರಗಳು ಕ್ಲೋರೋಪ್ಲೋರೋ ಕಾರ್ಬನ್ ಗಳನ್ನು ನಿಷೇಧಿಸಿವೆ. ಇವುಗಳನ್ನು ಮೊದಲು ಶೈತ್ಯಾಗಾರಗಳಲ್ಲಿ ಬಳಸುತ್ತಿದ್ದರು. ಓಜೋನ್ ಪದರದ ನಾಶ ಭೂಮಿಯ ತಾಪಮಾನದ ಏರಿಕೆಗೂ ಕಾರಣವಾಗಬಲ್ಲದು. ಕಾರ್ಖಾನೆಗಳು ಹಾಗೂ ವಾಹನಗಳು ಬಿಡುಗಡೆಮಾಡುವ ಅನಿಲಗಳಿಂದ ಓಝೋನ್ ಪದರಕ್ಕೆ ಅಪಾಯ ತಪ್ಪಿದ್ದಲ್ಲ.! ಅಂತರಾಷ್ಟ್ರೀಯ ಸಾಮಾನ್ಯ ಸಭೆಯ ಅನುಮೋದನೆಯಂತೆ ಪ್ರತಿವರ್ಷ ಸೆಪ್ಟೆಂಬರ್ ೧೬ ರಂದು ಪ್ರಪಂಚದ ‘ಓಝೋನ್ ದಿನ’ವನ್ನಾಗಿ ಆಚರಿಸಲಾಗುತ್ತದೆ.

(ಮುಗಿಯಿತು)

- ಕೆ. ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ