ಓಟಾ ಬೆಂಗ

ಓಟಾ ಬೆಂಗ

ಪುಸ್ತಕದ ಲೇಖಕ/ಕವಿಯ ಹೆಸರು
ರೋಹಿತ್ ಚಕ್ರತೀರ್ಥ
ಪ್ರಕಾಶಕರು
ಅಯೋಧ್ಯಾ ಪಬ್ಲಿಕೇಷನ್ಸ್, ಬನಶಂಕರಿ ಎರಡನೇ ಹಂತ, ಬೆಂಗಳೂರು-೫೬೦೦೭೦
ಪುಸ್ತಕದ ಬೆಲೆ
ರೂ. ೧೮೦.೦೦, ಮುದ್ರಣ: ೨೦೨೨

ಕಪ್ಪು ವರ್ಣದ ಚೂಪು ಹಲ್ಲುಗಳ ವ್ಯಕ್ತಿಯೊಬ್ಬನ ಮುಖಪುಟವನ್ನು ಹೊಂದಿರುವ ‘ಓಟಾ ಬೆಂಗ' ಎಂಬ ಪುಸ್ತಕವು ಹಲವು ಬರಹಗಳ ಸಂಕಲನ. ಲೇಖಕರಾದ ರೋಹಿತ್ ಚಕ್ರತೀರ್ಥ ಇವರು ಬೇರೆ ಬೇರೆ ಸಂದರ್ಭಗಳಲ್ಲಿ ವಿವಿಧ ಪತ್ರಿಕೆಗಳಿಗೆ ಬರೆದ ಚುಟುಕು ಬರಹಗಳು ಪುಸ್ತಕದ ರೂಪದಲ್ಲಿ ಹೊರಬಂದಿವೆ. ಈ ಬರಹಗಳಲ್ಲಿ ಸುಖಕ್ಕಿಂತ ಅಧಿಕ ದುಃಖದ ಛಾಯೆ ಇದೆ. 

ಪುಸ್ತಕದ ಪುಟ ತೆರೆದಂತೆ ‘ಓಟಾ ಬೆಂಗ' ಸೇರಿ ೧೧ ಅಧ್ಯಾಯಗಳಿವೆ. ಪ್ರತಿಯೊಂದು ಅಧ್ಯಾಯವನ್ನು ಓದಿದಾಗಲೂ ನೋವು ಸಹಜವಾಗಿ ಕಾಡುತ್ತದೆ. ಒಂದಿಷ್ಟು ಅದೃಷ್ಟ ಕೈ ಹಿಡಿದಿದ್ದರೆ ಈ ಅಧ್ಯಾಯದಲಿನ ವ್ಯಕ್ತಿಗಳ ಬದುಕು ಇನ್ನೇನೋ ಆಗಿ ಬಿಡುತ್ತಿತ್ತು ಎಂದು ಅನಿಸುತ್ತದೆ. ಪುಸ್ತಕದ ಮೊದಲ ಅಧ್ಯಾಯ ‘ಏಕ್ ಥಾ ಟೈಗರ್'. ಇದೇ ಹೆಸರಿನ ಹಿಂದಿ ಚಲನ ಚಿತ್ರವೊಂದು ಬಂದಿರುವುದರಿಂದ ಹೆಸರು ಬಹುತೇಕರಿಗೆ ಪರಿಚಿತವಾಗಿಯೇ ಇರುತ್ತದೆ. ರವೀಂದ್ರ ಕೌಶಿಕ್ ಎಂಬ ಯುವಕನ ನಟನಾ ಪ್ರತಿಭೆಯನ್ನು ಕಂಡ ‘ರಾ’ ಅಧಿಕಾರಿಗಳು ಆತನನ್ನು ಪಾಕಿಸ್ತಾನಕ್ಕೆ ಭಾರತದ ಬೇಹುಗಾರನಾಗಿ ಕಳಿಸುತ್ತಾರೆ. ಆತ ಅಲ್ಲಿಗೆ ಹೋಗಿ ಕಾಲೇಜು ಸೇರಿ, ಪದವಿಯನ್ನು ಪಡೆದು ಅಲ್ಲಿಯ ಸೇನೆಗೆ ಆಯ್ಕೆಯಾಗಿ ಮೇಜರ್ ನಬಿ ಅಹ್ಮದ್ ಶಕೀರ್ ಆಗುತ್ತಾನೆ. ಆತನನ್ನು ಪಾಕಿಸ್ತಾನಕ್ಕೆ ಕಳಿಸುವ ಮೊದಲೇ ಆತನಿಗೆ ೩೦ ವರ್ಷಗಳನ್ನು ಅಲ್ಲಿಯೇ ಕಳೆದು, ಅಲ್ಲಿನ ಸುದ್ದಿಗಳನ್ನು ಭಾರತಕ್ಕೆ ಕಳಿಸಬೇಕೆಂಬ ಕರಾರು ಮಾಡಲಾಗಿತ್ತು. ಅಂತೆಯೇ ಬದುಕಿದ ರವೀಂದ್ರ ಕೌಶಿಕ್ ಒಂದು ದಿನ ತನ್ನ ಸಹ ಗೂಢಾಚಾರ ಮಾಡಿದ ತಪ್ಪಿನಿಂದ ಸಿಕ್ಕಿ ಬಿದ್ದು ಪಾಕಿಸ್ತಾನದ ಜೈಲಿನಲ್ಲಿ ವರ್ಷಗಟ್ಟಲೆ ಕಳೆದು ಅಲ್ಲಿಯೇ ನಿಧನ ಹೊಂದುತ್ತಾನೆ. 

ಯಾವುದೇ ಐಡೆಂಟಿಟಿ ಇಲ್ಲದೇ ಬದುಕಿದ ರವೀಂದ್ರ ಕೌಶಿಕ್ ಗೆ ಭಾರತದ ಕಡೆಯಿಂದ ಯಾವುದೇ ಪುರಸ್ಕಾರಗಳು ಲಭ್ಯವಾಗುವುದಿಲ್ಲ. ಮನೆಯವರಿಗೆ ಸಿಕ್ಕಿದ್ದು ಕೇವಲ ಒಂದಿಷ್ಟು ಹಣ ಮಾತ್ರ. ದೇಶ ಪ್ರೇಮದ ಹುಚ್ಚಿನಲ್ಲಿ ಕೌಶಿಕ್ ಕಳೆದುಕೊಂಡದ್ದು ತನ್ನ ಪೂರ್ತಿ ಯೌವನವನ್ನು. ಅದೇ ಆತ ಭಾರತದಲ್ಲೇ ಇದ್ದು ಪದವಿ ಪಡೆದು ಸೇನೆಗೆ ಸೇರಿದ್ದಿದ್ದರೆ ಅಲ್ಲಿ ಉತ್ತಮ ಪದವಿಯನ್ನು ಗಳಿಸಿ ಹೆಸರು ಪಡೆದು ಸೇನಾ ಪುರಸ್ಕಾರಗಳನ್ನಾದರೂ ಪಡೆಯುತ್ತಿದ್ದ. ಯುದ್ಧದಲ್ಲಿ ಸತ್ತಿದ್ದರೆ ಹುತಾತ್ಮನೆಂದಾದರೂ ಗುರುತಿಸಿಕೊಳ್ಳುತ್ತಿದ್ದ. ಆದರೆ ಅದೃಷ್ಟ ಕೈಕೊಟ್ಟ ಮೇಲೆ ಏನು ಮಾಡಲು ಸಾಧ್ಯ. ಶತ್ರು ರಾಷ್ಟ್ರದಲ್ಲಿ ಕೈದಿಯಾಗಿ ತನ್ನ ಜೀವನವನ್ನು ಕೊನೆಗಾಣಿಸಿದ ರವೀಂದ್ರ ಕೌಶಿಕ್ ಕಥೆ ಓದಿ ಮುಗಿಸಿದಾಗ ಮನಸ್ಸು ಮೂಕವಾಗುತ್ತದೆ. 

ಮುಂದಿನ ಅಧ್ಯಾಯಗಳೂ ಇದೇ ರೀತಿಯ ಭಾವವನ್ನು ಮೂಡಿಸುತ್ತವೆ. ‘ಮಿಸ್ಟರ್ ಬ್ಯಾಡ್ ಲಕ್' ಎಂಬ ಅಧ್ಯಯವು ಅತ್ಯಂತ ಪ್ರತಿಭಾವಂತ ಖಗೋಳ ವಿಜ್ಞಾನಿಯಾಗಿದ್ದ ಗೆಯೋಮ್ ಲೆ ಜಾಂಟಿ ಬಗ್ಗೆ ಇದೆ. ಪ್ರತಿಯೊಬ್ಬನ ಜೀವನದಲ್ಲಿ ಎರಡು ಬಾರಿ ಮಾತ್ರವೇ ನೋಡಲು ಸಿಗುವ ‘ಶುಕ್ರ ಸಂಕ್ರಮ' ದ ಬಗ್ಗೆ ಅನ್ವೇಷಣೆ ನಡೆಸಿ ಸೂರ್ಯನ ದೂರವನ್ನು ಅಳೆಯಲು ಪ್ರಯತ್ನಿಸಿದವನೀತ. ಈ ‘ಆಪರೇಶನ್ ಶುಕ್ರ ಸಂಕ್ರಮ’ ಕ್ಕೆ ಭಾರತದ ಪಾಂಡಿಚೇರಿಗೆ ಹೊರಟ ಆತ ಅದೃಷ್ಟ ಕೆಟ್ಟು ಎರಡು ಸಲವೂ (೧೭೬೧ ಮತ್ತು ೧೭೬೯) ಈ ಶುಕ್ರ ಸಂಕ್ರಮವನ್ನು ಗಮನಿಸಲು ಸಾಧ್ಯವಾಗುವುದಿಲ್ಲ. 

ಪುಸ್ತಕದ ಮೂರನೇ ಅಧ್ಯಾಯ ಬಾಲ ಕಲಾವಿದ ಎಡ್ಮಂಡ್ ಥಾಮಸ್ ಕ್ಲಿಂಟ್ ಎಂಬವನ ಬಗ್ಗೆ ಬರೆದ “ಬಣ್ಣಗಳ ರಾಜ". ಕೇವಲ ೭ ವರ್ಷದ ಈ ಪುಟ್ಟ ಬಾಲಕ ಗುಣವಾಗದ ಕಾಯಿಲೆಯಿಂದ ನಿಧನ ಹೊಂದಿದಾಗ ಬರೆದ ಚಿತ್ರಗಳ ಸಂಖ್ಯೆ ಬರೋಬ್ಬರಿ ೨೫ ಸಾವಿರ. ತಾನು ಬದುಕಿದ ೨,೩೦೦ ದಿನಗಳಲ್ಲಿ ೨೫ ಸಾವಿರ ಚಿತ್ರಗಳನ್ನು ಬರೆಯುವುದು ಪವಾಡವೇ ಸರಿ. ಅತ್ಯಂತ ಸಣ್ಣ ಪ್ರಾಯದಲ್ಲಿ ಅಗಲಿದ ಈ ಬಾಲಕಲಾವಿದನ ಬಗ್ಗೆ ಓದುವಾಗ ತುಂಬಾನೇ ನೋವಾಗುತ್ತದೆ. ನಾಲ್ಕನೇ ಅಧ್ಯಾಯ ‘ಆದಿವೈದ್ಯೆ ಆನಂದಿಬಾಯಿ' ಬಗ್ಗೆ. ಆನಂದಿ ಗೋಪಾಲ್ ಎಂಬ ಮಹಿಳೆ ತನ್ನ ಪತಿಯ ಬೆಂಬಲದೊಂದಿಗೆ ವಿದೇಶಕ್ಕೆ ತೆರಳಿ ೧೮೮೬ರಲ್ಲಿ ‘ಡಾಕ್ಟರ್ ಆಫ್ ಮೆಡಿಸಿನ್' ಪಡೆದ ಕಥೆ. ಆದರೆ ಖುದ್ದು ವೈದ್ಯೆಯಾಗಿದ್ದೂ ಅಲ್ಪಾಯುವಿನಲ್ಲೇ ಕ್ಷಯ ರೋಗಕ್ಕೆ ಬಲಿಯಾದ ನತದೃಷ್ಟೆ ಈಕೆ.

ಈ ಪುಸ್ತಕದ ದೀರ್ಘ ಅಧ್ಯಾಯವೆಂದರೆ ‘ಬಂಗಾರದ ಬೇಟೆ'. ನಂತರ ಪುಸ್ತಕದ ಮುಖ್ಯ ಲೇಖನ ‘ಓಟಾ ಬೆಂಗ' ಎಂಬ ಪಿಗ್ಮಿ ಯುವಕನ ದುರಂತ ಕಥೆ. ಆಫ್ರಿಕಾ ಖಂಡದ ಕಾಂಗೋ ದೇಶದಲ್ಲಿ ಇರುವ ಪಿಗ್ಮಿ ಜನಾಂಗದ ಕುಳ್ಳಗೆ, ಕಪ್ಪಗೆ, ಚೂಪಾದ ಹಲ್ಲಿನ ಮುಗ್ಧ ಹುಡುಗನೊಬ್ಬನನ್ನು ಹಿಡಿದು ಅಮೇರಿಕಾಗೆ ಕರೆದುಕೊಂಡು ಹೋಗಿ ಮೃಗಾಲಯದ ಗೂಡಿನಲ್ಲಿ ಬಂಧಿಸಿ ಪ್ರದರ್ಶನಕ್ಕೆ ಇಟ್ಟ ಕಥೆ ಇಲ್ಲಿದೆ. ಇದೇನೋ ಬಹಳ ಹಿಂದಿನ ಕಥೆಯಲ್ಲ. ಬಹಳ ಮುಂದುವರಿದ ದೇಶವೆಂದು ಕರೆಯಲ್ಪಡುವ ಅಮೇರಿಕಾದಲ್ಲಿ ಕಳೆದ ೨೦ನೇ ಶತಮಾನದ ಆದಿಯಲ್ಲಿ (೧೯೦೪) ನಡೆದ ದುರದೃಷ್ಟಕರ ಘಟನೆ. ಮನುಷ್ಯನೊಬ್ಬನನ್ನು ಪ್ರಾಣಿಯಂತೆ ಬಳಸಿ, ಗೂಡಿನಲ್ಲಿ ಬಂಧಿಸಿ ಮನೋರಂಜನೆ ಪಡೆದದ್ದು ಬಹಳ ನೋವಿನ ಸಂಗತಿ. 

ಏಳನೇ ಅಧ್ಯಾಯ “ಕಣ್ಣೀರಿನಲ್ಲಿ ಕೈ ತೊಳೆದವನು" ಎಂಬ ಅದೃಷ್ಟಹೀನ ವೈದ್ಯ ಆಸ್ಟ್ರಿಯಾ ದೇಶದ ಇಗ್ನಾಸ್ ಸೆಮಲ್ ವೀಸ್ ಬಗ್ಗೆ. ಎಂಟನೇ ಅಧ್ಯಾಯ ರಷ್ಯಾದವರ ‘ಅರ್ಥಹೀನ ಗಗನಯಾನ' ದ ಬಗ್ಗೆ ಇದೆ. ಯೂರಿ ಗಾಗರಿನ್ ಮತ್ತು ಆತನ ಸ್ನೇಹಿತ ಕೊಮರೋವ್ ನ ಕಥೆಯಿದು. ರಾಶಿ ರಾಶಿ ಟೈಫಾಯಿಡ್ ಬ್ಯಾಕ್ಟೀರಿಯಾಗಳು ತನ್ನ ಪಿತ್ತಕೋಶದಲ್ಲಿ ಇದ್ದರೂ ಆರೋಗ್ಯವಾಗಿದ್ದು, ಇತರರಿಗೆ ಈ ರೋಗವನ್ನು ಹರಡಿದ “ಟೈಫಾಯಿಡ್ ಮೇರಿ" ಬಗ್ಗೆ ಒಂಬತ್ತನೇ ಅಧ್ಯಾಯ ಇದೆ.

ಹಲವು ಸಲ ವಿಜ್ಞಾನಿಗಳ ಪ್ರಯೋಗಕ್ಕೆ ಅಮಾಯಕ ಪ್ರಾಣಿಗಳು ಬಲಿಯಾಗುತ್ತವೆ. ಅಂತಹುದೇ ಒಂದು ಪ್ರಯೋಗಕ್ಕೆ ಬಲಿಯಾದ ಕೋತಿ ಮರಿಯ ದಾರುಣ ಕಥೆ ‘ತಾಯ ಪ್ರೀತಿ ನಿರೂಪಿಸಲು ತಬ್ಬಲಿಯಾದ ಕೋತಿ' ಇಲ್ಲಿದೆ. ಕೊನೆಯ ಹನ್ನೊಂದನೆಯ ಅಧ್ಯಾಯ ‘ಶ್ವಾನ ಸ್ವರ್ಗಾರೋಹಣ'.  ಅಮೇರಿಕಾ ಹಾಗೂ ರಷ್ಯಾ ನಡುವೆ ವ್ಯೂಮಯಾನಕ್ಕೆ ಮೊದಲು ತೆರಳುವ ಕುರಿತಾಗಿ ನಡೆಯುತ್ತಿದ್ದ ಗುದ್ದಾಟಕ್ಕೆ ಬಲಿಯಾದ 'ಲೈಕಾ’ ಎಂಬ ಬೀದಿ ನಾಯಿಯ ಕಥೆ. ನಾವು ಸಣ್ಣವರಿದ್ದಾಗ ನಮ್ಮ ಪಾಠ ಪುಸ್ತಕದಲ್ಲಿ ಬಾಹ್ಯಾಕಾಶಕ್ಕೆ ಹೋದ ಮೊದಲ ಪ್ರಾಣಿ ‘ಲೈಕಾ’ ಎಂಬ ಹೆಣ್ಣು ನಾಯಿ ಎಂದು ಓದಿದ್ದೆವು. ಆದರೆ ಆ ನಾಯಿಗೆ ಏನಾಯಿತು? ಸುರಕ್ಷಿತವಾಗಿ ಅದು ಬಾಹ್ಯಾಕಾಶದಿಂದ ಮರಳಿ ಬಂತೇ ಎನ್ನುವ ಯಾವುದೇ ಮಾಹಿತಿಗಳು ಸಿಗುತ್ತಿರಲಿಲ್ಲ. ಲೈಕಾವನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ ನೌಕೆಯನ್ನು ಮರಳಿ ಭೂಮಿಗೆ ತರುವ ಯಾವುದೇ ಸೌಲಭ್ಯಗಳು ಅದರಲ್ಲಿ ಅಳವಡಿಕೆಯಾಗಿರಲೇ ಇಲ್ಲ. ಬಾಹ್ಯಾಕಾಶಕ್ಕೆ ಹೋದ ನೌಕೆಯು ಪ್ರಾರಂಭದಲ್ಲೇ ಬ್ಯಾಟರಿಯ ತಾಂತ್ರಿಕ ತೊಂದರೆಗೆ ಒಳಪಟ್ಟು ಶಾಖವು ಅಧಿಕವಾಗಿ ನಾಯಿ ಸತ್ತು ಹೋಯಿತು. ಮಾನವನ ದುರಾಸೆಗೆ ಬಲಿಯಾದ ಪ್ರಾಣಿಗಳ ಸಾಲಿಗೆ ಲೈಕಾವೂ ಸೇರಿಹೋಯಿತು.

ಇಲ್ಲಿರುವ ಎಲ್ಲಾ ೧೧ ಅಧ್ಯಾಯಗಳು ಓದಿ ಮರೆಯುವಂಥದ್ದಲ್ಲ. ಅತ್ಯಂತ ಆಪ್ತತೆಯಿಂದ ನೈಜ ಘಟನೆಗಳನ್ನು ಲೇಖಕ ರೋಹಿತ್ ಚಕ್ರತೀರ್ಥ ಇವರು ನಿರೂಪಿಸಿದ್ದಾರೆ. ೧೩೮ ಪುಟಗಳ ಈ ಪುಸ್ತಕ ನಿಜವಾಗಿಯೂ ಒಂದು ಸಂಗ್ರಹ ಯೋಗ್ಯ ಹೊತ್ತಗೆ ಎಂದರೆ ತಪ್ಪಾಗಲಾರದು. ರೋಹಿತ್ ಪುಸ್ತಕದ ಪ್ರಾರಂಭದಲ್ಲಿ ಬರೆದ ಮಾತು ಹೀಗಿದೆ “ ಸುಖಿಗಳ ಜೊತೆ ಹಲವರಿರುತ್ತಾರೆ, ದುಃಖಿಗಳು ಎಂದಿಗೂ ಒಬ್ಬಂಟಿಗಳು. ಜಾತ್ರೆಯ ನಡುವಲ್ಲಿದ್ದರೂ ದುಃಖಿಗಳು ಏಕಾಕಿಗಳಾಗೇ ಇರುತ್ತಾರೆ. ಹೀಗೆ ಒಂದಿಲ್ಲೊಂದು ಕಾರಣಕ್ಕೆ ದೈಹಿಕವಾಗಿ ಅಥವಾ ಮಾನಸಿಕವಾಗಿ ಜಗತ್ತಿನಿಂದ ಬೇರ್ಪಟ್ಟು ಒಬ್ಬಂಟಿಗಳಾದ ಬಗ್ಗೆ ನನಗೆಂದಿಗೂ ಬತ್ತದ ಕುತೂಹಲ, ಕರುಣೆ ಮತ್ತು ಪ್ರೀತಿ. ಅಂಥವರ ಕತೆಗಳು ಈ ಹೊತ್ತಗೆಯಲ್ಲಿವೆ.”