ಓದಲೇಬೇಕಾದ ಪುಸ್ತಕ, ಯೇಗ್ದಾಗೆಲ್ಲಾ ಐತೆ

ಓದಲೇಬೇಕಾದ ಪುಸ್ತಕ, ಯೇಗ್ದಾಗೆಲ್ಲಾ ಐತೆ

ಯೇಗ್ದಾಗೆಲ್ಲಾ ಐತೆ, ಪುಸ್ತಕವನ್ನು ಮಂಗಳೂರಿನ ಕನ್ನಡ ಪುಸ್ತಕ ಪ್ರದರ್ಶನದಲ್ಲಿದ್ದ ಮಳಿಗೆಯೊಂದರಿಂದ ಖರೀದಿಸಿದೆ. ಮಾರಿದ ವ್ಯಕ್ತಿ ಪುಸ್ತಕದ ಬಗ್ಗೆ ಪ್ರಶಂಸೆಯ ಮಾತುಗಳನ್ನು ಹೇಳಿದ್ದರಿಂದಲೂ, ಪುಸ್ತಕ ನಿರೀಕ್ಷೆಗೆ ನಿಲುಕದೆ ಇದ್ದರೆ ಹೋಗುವುದು ಐವತ್ತು ರೂಪಾಯಿ ತಾನೇ ಎನ್ನವ nonchalant ಧೋರಣೆಯಿಂದ ಪುಸ್ತಕವನ್ನ ಖರೀದಿಸಿದೆ. ಹಳ್ಳಿಯ ಮಾಸ್ತರರೊಬ್ಬರ ಅನುಭವ ಕಥನ ಈ ಪುಟ್ಟ ಪುಸ್ತಕ. ಗ್ರಾಮವೊಂದರಲ್ಲಿ ಯೋಗಿಯೊಬ್ಬನೊಂದಿಗಿನ ತಮ್ಮ ಸ್ನೇಹದ ಬಗ್ಗೆ, ತಮಗಾದ ಅನುಭವದ ಬಗ್ಗೆ ಸರಳವಾಗಿ ಬರೆದಿದ್ದಾರೆ.   

ಮುಕುಂದನ ಹಳ್ಳಿಯ ಈ ಸ್ವಾಮೀ ಒಬ್ಬ ಸರಳ ಸನ್ಯಾಸಿ. ಕಳ್ಳ ಸನ್ಯಾಸಿ, ಭಂಗಿ, ಗಾಂಜಾ ಸೇದುವವನು, “ಭಕ್ತರ ಮನೆಯ ಮುದ್ದೆ, ಬಸವಿ ಮನೆಯ ನಿದ್ದೆ”....   ಹೀಗೇ ವಿನಾಕಾರಣ ಪುರಾವೆಗಳಿಲ್ಲದೆ ಅವರನ್ನು ಜನ ತೆಗಳಿದರೂ (ಯಾರೋ ಹೇಳಿದ್ದನ್ನು, ಹೇಳಿ ಕೊಟ್ಟಿದ್ದನ್ನು ನಂಬಿ prejudiced ಆಗೋ ವಿದ್ಯಾ?ವಂತ ಸಮೂಹ ನಮ್ಮ ನಡುವೆ ಇರುವಾಗ ಗ್ರಾಮಸ್ಥರ ವರ್ತನೆ ಬಗ್ಗೆ ಅಚ್ಚರಿ ಪಡಬೇಕಿಲ್ಲ ) ಅದ್ಯಾವುದನ್ನೂ ಕಿವಿಗೆ ಹಾಕಿ ಕೊಳ್ಳದೆ ಮೇಷ್ಟ್ರು ತಮ್ಮ ಸ್ನೇಹವನ್ನು ಅವರೊಂದಿಗೆ ಮುಂದುವರೆಸುತ್ತಾ ಬದುಕು ಒಂದು ಒಂದು ಭ್ರಮೆ ಎಂದು ಕಂಡು ಕೊಳ್ಳುತ್ತಾರೆ.  

ಮುಕುಂದನ ಹಳ್ಳಿಯ ಸ್ವಾಮಿಗಳಿಗೆ ಬದುಕಿನ ಬಗ್ಗೆ ಸರಳವಾಗಿ, ಜನರ ದೈನಂದಿನ ಬದುಕಿನೊಂದಿಗೆ ತಳುಕು ಹಾಕಿ ವಿನೋದವಾಗಿ, ಮನದಟ್ಟಾಗುವಂತೆ ಹೇಳುವ ಸಾಮರ್ಥ್ಯ ತಮ್ಮ ಅಲೆದಾಟದಷ್ಟೇ ಸುಲಭ. ಒಮ್ಮೆ  ವ್ಯಕ್ತಿಯೊಬ್ಬ ಬಂದು ಯಾರೋ ಸತ್ತು ಹೋದರು ಎನ್ನುವ ಸುದ್ದಿಯನ್ನ ಇವರಿಗೆ ತಲುಪಿಸುತ್ತಾನೆ. ಸತ್ತು ಹೋದ ಎನ್ನುವ ಪದ ಕೇಳಿದ ಕೂಡಲೇ ಹೌಹಾರಿದಂತೆ ನಟಿಸಿದ ಸ್ವಾಮಿಗಳು, ಅದ್ಹೇಗಯ್ಯಾ, ಅವನೆಲ್ಲಾದರೂ ಸತ್ತು ಹೋಗಲು ಸಾಧ್ಯವೇ ಎಂದು ಕೇಳುತ್ತಾರೆ. ಸ್ವಾಮಿಗಳ ಈ ಪ್ರಶ್ನೆಯ ಮರ್ಮ ಅರಿಯದ ಹಳ್ಳಿಗ ಮತ್ತಷ್ಟು ವಿವರಿಸುತ್ತಾನೆ. ಆದರೂ ಸ್ವಾಮಿ ಜಪ್ಪಯ್ಯ ಅನ್ನುವುದಿಲ್ಲ. ಎಲ್ಲಾದರೂ, ಯಾರಾದರೂ ಸತ್ತು ಹೋಗೋದಿದೆಯೇ? ಇಷ್ಟೆಲ್ಲಾ ವರ್ಷ ಬಾಳಿ  ಬದುಕಿದವನು ಅಷ್ಟು ಸಲೀಸಾಗಿ “ಸತ್ತು ಹೋಗು” ವನೆ? ಎಂದು ಕೇಳಿ ಅವನನ್ನು ಮತ್ತಷ್ಟು ಗಲಿಬಿಲಿಗೊಳಿಸುತ್ತಾರೆ.  “ಸತ್ತು ಹೋಗು’ ಎನ್ನುವ ಪದದ ಹಿಂದಿನ ಗೂಢಾರ್ಥವನ್ನು ಸ್ವಾಮಿಗಳಂಥ ವರಿಗೆ ಅರಿಯುವುದು ಸುಲಭ. ಉಸಿರಾಟ ನಿಂತು ಬಿಟ್ಟರೆ ಅವನು ಸತ್ತ ಎಂದು ಬಗೆಯುವ ಹಳ್ಳಿಯ ನಿರಕ್ಷರ ಕುಕ್ಷಿಗೆ ಹೇಗೆ ತಾನೇ ತಿಳಿಯಬೇಕು ಸಾವು ಮತ್ತೊಂದು ಬದುಕಿನೆಡೆಗಿನ ಪಯಣ ಎಂದು ? ಹೌದಲ್ಲವೇ? ದೀರ್ಘಾವಧಿ ಬಾಳಿ ಬದುಕಿದ  ಮಾಡಬೇಕಾದ್ದನ್ನೂ, ಮಾಡಬಾರದ್ದನ್ನೂ ಎಲ್ಲಾ ಮಾಡಿದ ಮನುಷ್ಯ ಸದ್ದಿಲ್ಲದೇ “ಸತ್ತು ಹೋಗಲು” ಹೇಗೆ  ಸಾಧ್ಯ? ಬದುಕಿನ ಮತ್ತು ಸಾವಿನ ನಿಜರೂಪವನ್ನು ಸ್ವಾಮಿಗಳು ಲೀಲಾಜಾಲವಾಗಿ ನಗುತ್ತಾ ಹಾಸ್ಯದಿಂದ ವಿವರಿಸುತ್ತಾರೆ ಸಾವಿನ ಸುದ್ದಿ ತಂದಾತನಿಗೆ. 

ನದಿಯಲ್ಲಿ ನೀರಿನ ಹರಿವನ್ನು ನೋಡುತ್ತಾ, ಅದರೊಂದಿಗೆ ಹೊರಡುವ ನೀರ ಗುಳ್ಳೆಗಳೂ ಸ್ವಾಮಿಗಳ ಆಸಕ್ತಿ,  ಕಲ್ಪನೆಯನ್ನು ಹಿಡಿದಿಡುತ್ತವೆ. ಕ್ಷಣ ಮಾತ್ರ ಬದುಕುವ ಆ ಗುಳ್ಳೆಗಳ ಹಿಂದಿನ ಮರ್ಮವನ್ನೂ, ನಮ್ಮ ಬದುಕಿನ ಟೊಳ್ಳುತನ ದೊಂದಿಗೆ ಹೋಲಿಸಿ ಗಾಂಭೀರ್ಯ ಮಿಳಿತ ನಗುವಿನೊಂದಿಗೆ ಬಿಡಿಸಿ ಹೇಳುತ್ತಾರೆ. ಒಟ್ಟಿನಲ್ಲಿ ಒಂದು ಚೆಂದದ ಪುಟ್ಟ ಪುಸ್ತಕ.  ಒಂದು ರೀತಿಯಲ್ಲಿ reader’s digest ಓದಿದ ಹಾಗುತ್ತದೆ ಸ್ವಾಮಿಗಳ ಮಾತು, ಅನುಭವ ನೋಡಿದಾಗ. ಇಂಥ ನಿಸ್ವಾರ್ಥಿ ಸಾಧಕರಿಂದಲೇ ಇರಬೇಕು ನಮ್ಮ ಸಮಾಜ ಒಳ್ಳೆಯತನವನ್ನು ತನ್ನಲ್ಲಿ ಇನ್ನೂ ಉಳಿಸಿಕೊಂಡು ಬರುತ್ತಿದೆ. ಆದರೆ ಇವರುಗಳ ಸಂಖ್ಯೆ ಕ್ಷೀಣಿಸುತ್ತಿರುವುದೂ ಸಹ ತುಂಬು ಬದುಕು ಸಾಗಿಸಿದ ಸ್ವಾಮಿಗಳ ಮಾತುಗಳಷ್ಟೇ ಸತ್ಯ.

ಮನುಷ್ಯರೆಲ್ಲರೂ ಸಮಾನರು ಎಂದು ಸ್ವಾಮಿಗಳು ಹೇಳುವ ರೀತಿ ಇಲ್ಲಿದೆ ನೋಡಿ;

“ಊರು ಕೇರಿ, ಕುಲ ಗೋತ್ರ ಹೆಣ್ಣು ಗಂಡು ಎಲ್ಲಾ ಇಂಗಡಿಸ್ತಾರೆ. ನಾವು ಶಿವಾಚಾರ್ದೋರು, ನಾವು ದೇವಾಂಗ ದೋರು, ನಾವ್ ಬ್ರಾಮಣರು, ಅದರಾಗ್ ಮತ್ತೆ ನಾಮ್ದೋರು, ಅಡ್ಡ ಗಂಧದೋರು, ಮುದ್ರೆರು, ಅವ್ರು ಇವ್ರು ಒಬ್ಬರನ್ನ ಕಂಡ್ರೆ ಒಬ್ರು ಮಾರು ದೂರ ಹೋಗ್ತಾರೆ. ಮಾಡಿ ಮೈಲಿಗೆ ಅಂತಾರೆ, ನಗು ಬರ್ತೈತೆ........ಈ ಮುದ್ರೆ, ವಿಭೂತಿ ಎಲ್ಲಾ ಅಷ್ಟೇ. ಬಾರೆ ಹೊರಗಳ ಯಾಪಾರ ಹಿಡಿದು ಬಡಿದಾಡ್ತಾರೆ” ಈ ಮಾತನ್ನು ಆಧುನಿಕ ಸ್ವಾಮಿಗಳಿಗೆ ಕೇಳಿಸಿದರೆ ಯಾವ ಉತ್ತರ ಸಿಗಬಹುದೋ?      

ಸ್ವಾಮಿಗಳ  ಕೆಲವೊಂದು ಸಂಗತಿಗಳು ಉತ್ಪ್ರೇಕ್ಷೆ ಎಂದು ತೋರಿದರೂ ಈ ಭಾವನೆ ಮತ್ತು ದಂತ ಕಥೆಗಳು ದೇವ ಮಾನವರಿಗೆ ಜನ ಅಂಟಿಸಿಯೇ ತೀರುತ್ತಾರೆ. ಅವನು ಕುಡುಕ, ಭಂಗಿ, ಗಾಂಜಾ ಹಾಕುವವನು ಎಂದೆಲ್ಲಾ ಜರೆಯುವ ಅದೇ ಬಾಯಿ ಅವರ ಪವಾಡಗಳ ಬಗ್ಗೆಯೂ ಭಯ ಭಕ್ತಿಯಿಂದ ಮಾತನಾಡುತ್ತಾರೆ, ಅದೇ ಸೋಜಿಗ. 

ಹಳ್ಳಿಗಳಲ್ಲಿ ಈಗ ಅಪರೂಪವಾಗುತ್ತಿರುವ ಸಾಮರಸ್ಯದ ಜೀವನ ಸಹ ಈ ಮೇಷ್ಟರ ನೆನಪಿನಂಗಳದಿಂದ ಮರೆಯಾಗುವುದಿಲ್ಲ. ಮುಸ್ಲಿಮರಾದರೂ ಹಯಾತ್ ಸಾಹೇಬರು ಹಳ್ಳಿಯಲ್ಲಿನ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೊಡುತ್ತಿದ್ದ ಸಹಾಯ, ಗ್ರಾಮಸ್ಥರ ಮೂಢ ನಂಬಿಕೆಗಳು ಹೀಗೇ ಹತ್ತು ಹಲವು ವಿಚಾರಗಳನ್ನು ಜೋಪಾನದಿಂದ ಓದುಗರಿಗಾಗಿ ಕಾಯ್ದುಕೊಂಡು ನಮ್ಮ ಕೈಗಳಿಗರ್ಪಿಸಿದ ಕೃಷ್ಣ ಶಾಸ್ತ್ರಿಗಳು ಮಹದುಪಕಾರವನ್ನೇ ಮಾಡಿದ್ದಾರೆ ಈ ಪುಸ್ತಕ ಬರೆಯುವ ಮೂಲಕ. ಈ ಪುಸ್ತಕ ಆಂಗ್ಲ ಭಾಷೆಗೆ ತರ್ಜುಮೆಗೊಂಡಿದೆಯೋ ಗೊತ್ತಿಲ್ಲ. ತರ್ಜುಮೆ ಆಗದ ಪಕ್ಷದಲ್ಲಿ ಯಾರಾದರೂ ಈ ಮಹತ್ಕಾರ್ಯಕ್ಕೆ ಕೈ ಹಾಕಿದರೆ ಈ ಪುಸ್ತಕ ಹಿಟ್ ಆಗುವುದರಲ್ಲಿ ಸಂಶಯವಿಲ್ಲ. 

 ಒಬ್ಬ ನಿರಕ್ಷರಕುಕ್ಷಿ ಆದರೆ ಬದುಕಿನ ನಿಜವಾದ ಪಾಠದಲ್ಲಿ ಅದ್ವಿತೀಯ professor ಆದ ಸ್ವಾಮಿಯೊಬ್ಬರ ಪರಿಚಯ ನನ್ನಲ್ಲಿ ಒಂದು ಅವರ್ಣನೀಯವಾದ ಭಾವವನ್ನೇ ಸೃಷ್ಟಿಸಿತು. ರಾಜಕಾರಣಿಗಳ ಒಡನಾಟದಿಂದ ನಾಡಿನ ಸಂಪನ್ಮೂಲ ಲೂಟಿ ಮಾಡುವ ಕೆಲವು ಸ್ವಾಮಿಗಳಿಗೂ ಈ ಮುಕುಂದೂರಿನ ಸ್ವಾಮಿಗೂ ಎತ್ತಣ ಸಂಬಂಧ ಎಂದು ತೋರಿದರೂ ಆಶ್ಚರ್ಯವಿಲ್ಲ. ಒಬ್ಬ ಅಹಂಕಾರಿ, ಸ್ವಾಮಿಯೊಬ್ಬ ತನ್ನ ಮಠಕ್ಕೆ ಬಂದು ಪೊಗರು ತೋರಿಸಿದರೂ ತನ್ನ ಸಂಸ್ಕೃತಿ ಕಲಿಸಿದ ವಿನಯ ವಿಧೇಯತೆ ಯನ್ನ ಮೋಹಕವಾಗಿ ಪ್ರದರ್ಶಿಸಿ ಮನಃಪೂರ್ವಕ ಆ ಸ್ವಾಮಿಯ ಸೇವೆ ಮಾಡುವ ಇವರ ಉದಾತ್ತ ಸಂಸ್ಕಾರ ನಮ್ಮನ್ನು ನಿಬ್ಬೆರಗಾಗಿಸುತ್ತದೆ. ಅಹಂಕಾರಿಗೆ ಅಹಂಕಾರವೇ ಉತ್ತರ ಎನ್ನುವ ನಮಗೂ ಆ ಸ್ವಾಮಿಗೂ ಇರುವ ವ್ಯತ್ಯಾಸ ನೋಡಿ. 

ನನ್ನ ಆಸಕ್ತಿಯನ್ನು ಈ ಪುಟ್ಟ ಪುಸ್ತಿಕೆ ಈ ರೀತಿ ಹಿಡಿದಿಡುತ್ತದೆ ಎಂದು ಪುಸ್ತಕ ಕೊಂಡಾಗ ನನಗನ್ನಿಸಿರಲಿಲ್ಲ. ಸಾಧು ಸಂತರ ಬಗ್ಗೆ ದೊಡ್ಡ ಒಲವು ಆಸಕ್ತಿ ಇಲ್ಲದ ನನಗೆ ಒಬ್ಬ ಸಾಧಾರಣ, ಪ್ರಚಾರ ಫಲಾಪೇಕ್ಷೆ ಬೇಡದ ಸ್ವಾಮಿಯೊಬ್ಬರ ಪರಿಚಯ ಆದದ್ದು ಒಂದು ಅಪರೂಪದ ಅನುಭವವೇ ಸರಿ. ಕೊನೆಯದಾಗಿ ಇಲ್ಲಿದೆ ಮತ್ತೊಂದು ಬದುಕನ್ನು ಸಕರಾತ್ಮಕವಾಗಿ ಕಾಣಬೇಕೆಂದು ಹೇಳುವ ಮಾತು. 

ಒಮ್ಮೆ ತನ್ನ ಮೂರು ವರ್ಷದ ಮಗು ಗುಲಾಬಿ ಕೀಳಲು ಗಿಡದ ಕಡೆ ಹೋಗುತ್ತಿದ್ದನ್ನು ಕಂಡ ಮಗುವಿನ ತಾಯಿ “ಅಯ್ಯೋ, ಅಯ್ಯೋ, ಮುಳ್ಳು, ಮುಳ್ಳು, ಮುಟ್ಟಬೇಡ ಎಂದು ಮಗುವನ್ನು ತಡೆದುದನ್ನು ಕಂಡ ಸ್ವಾಮಿಗಳು ಹೇಳಿದ್ದು, ಅಮ್ಮಯ್ಯಾ, ಆ ಮಗುವಿಗೆ ಹೂವಿನ ಗಿಡದಾಗೆ ಮುಳ್ಳು ಐತೆ ಅಂತ ಹೇಳ್ಕೊಡಬ್ಯಾಡ, ಮುಳ್ಳಿನ ಗಿಡ್ಯಾಗೆ ಹೂ ಐತೆ ಅಂತ ಹೇಳ್ಕೊಡಬೇಕು ಎಂದು ನಗುತ್ತಾ ಹೇಳುತ್ತಾರೆ. ಈ ಮಾತು ನಾವು ಕಲಿತ “half glass full” ಗಿಂತ ಮನೋಹರವಾಗಿಲ್ಲವೇ?            

 

ಚಿತ್ರ ಕೃಪೆ: ಸಮರಸ.ನೆಟ್

Comments