ಓದಿದ್ದು - ಆದದ್ದು

ಓದಿದ್ದು - ಆದದ್ದು

ಬರಹ

ಲ. ನಾ. ಭಟ್ಟರು - ಏನು ಓದಿದೆ?

ನಾನು - ನಿಮ್ಮೂರಿನ ಬಗ್ಗೆ ಓದಿದೆ. ನಿಮ್ಮ ತಲೆಯಲ್ಲಿ ! ಚಿಹ್ನೆ ಬರಲಿ ಎಂದೇ ಹಾಗಂದೆ. ಅದು ನಮ್ಮೂರೂ ಹೌದು. ಪ್ರಾರಂಭವಾಗುವುದು ಮಳೆಗಾಲ. ನೀರಿನ ಬಗ್ಗೆ ಓದೋಣವೆಂಬ ಮನಸ್ಸು. ಅಂಕಿತದಲ್ಲಿ ಪಡ್ರೆ ಇರಲಿಲ್ಲ. ರಾಧಾಕೃಷ್ಣ ಭಡ್ತಿ ಸಿಕ್ಕರು. ಅವರನ್ನೇ ಕೇಳಿದಾಗ "ನೀರಸಾಧಕರು" ಕೊಟ್ಟರು. ಅದರಲ್ಲಿನ ನಮ್ಮೂರಿನ ಬಗ್ಗೆಯೂ ಇದ್ದ ಲೇಖನ ಕಂಡು ಸಂತಸವಾಯಿತು.

ಲ. ನಾ. ಭಟ್ಟರು - ಏನಾದೆ?

ನಾನು - ನೀಚಡಿ ಎಂಬ ಶಬ್ದ ನೀರತಡಿ ಎನ್ನುವ ಶಬ್ದದಿಂದ ಬಂದದ್ದೆಂದು ನೀವು ನನಗೆ ಹೇಳಿರಲಿಲ್ಲ. ಭಡ್ತಿಯವರ ಲೇಖನ ಓದಿ ತಿಳಿದೆ. ಹತ್ತಾರು ಹಳ್ಳಿಗಳ ನೀರುಳಿಸಿದ ಯಶಸ್ಸಿನ ಕತೆಗಳಲ್ಲಿದ್ದವು. ಪ್ರಕೃತಿಯನ್ನು ನೋಡಿ ಆಶ್ಚರ್ಯಗೊಂಡೆ. ಭೂಮಾತೆಗೆ ಪ್ರಾಣಿ-ಪಕ್ಷಿ, ಹೂಗಿಡ, ಮರ, ಮಾನವರಿಗೆಲ್ಲರಿಗೂ ನೀರು ಬೇಕೆಂದು ಗೊತ್ತವಳಿಗೆ. ನಾಲ್ಕು ತಿಂಗಳು ಹೊಲದಲ್ಲಿ ದುಡಿದು ಉಳಿದಷ್ಟು ದಿನ ಬೆಳೆದದ್ದನ್ನು ಉಳಿಸಿ ತಿನ್ನುವವರು ನಾವು, ಬುದ್ಧಿವಂತರೆಂಬುದೂ ಗೊತ್ತವಳಿಗೆ.  ಅದಕ್ಕೇ ಮಳೆಗಾಲವೆಂಬುದೊಂದನ್ನು ಮಾಡಿ, ನಾಕೊಟ್ಟೆ, ಈಗ ನಿಮ್ಮ ಬುದ್ಧಿಯುಪಯೋಗಿಸಿ ಎನ್ನ್ನುತ್ತಿದ್ದಾಳೆಂಬುದನ್ನು ತಿಳಿದೆ. ಹಾಗೆ ಬುದ್ಧಿಯುಪಯೋಗಿಸಿದ ಹತ್ತಾರು ಹಳ್ಳಿಗಳ ಜನರಿದ್ದಾರೆ, ಇನ್ನೂ ಉಪಯೋಗಿಸದ ನನ್ನಂತವರೂ ಇದ್ದಾರೆ ಎಂಬುದನ್ನು ತಿಳಿದೆ. ಸ್ವಲ್ಪ ಜಾಸ್ತಿಯೇ ಮತಿ ಬಳಸಿದ ಪಡ್ರೆ, ಭಡ್ತಿ ಮುಂತಾದವರೂ ಇದ್ದಾರೆ. ನಾವು ಹೂಂ ಎಂದರೆ, ಹಾರಿಸುವಷ್ಟು ಮಾಹಿತಿ ಅವರಲ್ಲಿದೆ ಎಂಬುದನ್ನು ತಿಳಿದೆ. ಭಟ್ಟರೆ, ನಾನೂ ಏನಾದರೂ ಮಾಡುವೆ.

-ಮಾಧವ
೨೬-೪-೨೦೧೦