ಓದುಗದ್ವೇಷಿ ಪತ್ರಿಕಾ ಏಜೆಂಟರು..ಉಪಟಳಕ್ಕೆ ಓದುಗ ಗಿರಾಕಿ ತತ್ತರ!

ಓದುಗದ್ವೇಷಿ ಪತ್ರಿಕಾ ಏಜೆಂಟರು..ಉಪಟಳಕ್ಕೆ ಓದುಗ ಗಿರಾಕಿ ತತ್ತರ!

ಬರಹ

ಓದುಗದ್ವೇಷಿ ಗ್ರಂಠಪಾಲಕರಿಂದಾಗಿ ಇಂದು ನಾಡಿನ ಬಹುತೇಕ ಗ್ರಂಥಾಲಯಗಳು ಬಿಕೋ ಎನ್ನುತ್ತಿರುವ ಸಂಗತಿ ತಮಗೆಲ್ಲ ತಿಳಿದಿದೆ. ನಾನು ಕೈಗೊಂಡ ಸರ್ವೆ ಪ್ರಕಾರ ನೂರಕ್ಕೆ ನಾಲ್ಕು ಜನ ಮಾತ್ರ ನಿತ್ಯ ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗಿ ಓದುವ ಹವ್ಯಾಸ ಇಟ್ಟುಕೊಂಡಿದ್ದಾರೆ. ದುರ್ದೈವವೋ ಸುದೈವವೋ ಅವರಲ್ಲಿ ಇಬ್ಬರು ನಿವೃತ್ತರು!

ಅದಕ್ಕೊಂದು ಮಂತ್ರಾಲಯ, ವಶೀಲಿ ಪುಸ್ತಕಗಳ ಕಡ್ಡಾಯ ಖರೀದಿಗೊಂದು ಇಲಾಖೆ, ಸಾವಿರಾರು ಸಂಖ್ಯೆಯಲ್ಲಿ ಸಿಬ್ಬಂದಿ..ಉದ್ದೇಶ ಜನರನ್ನು ಓದಿಸಿಕೊಡಬಾರದು! ಇದಕ್ಕೆ ಕಿರೀಟಪ್ರಾಯವಾಗಿ ಕೆಂಪು ಕಣ್ಣಿನ ಜೈಲರ್ ನಿಲುವಿನ, ಸದಾ ಸಿಟ್ಟು, ಸೆಡುವಿನ ಗ್ರಂಥಪಾಲಕ. ಕವಿವಿಯ ಪ್ರೊ. ಶಿ.ಶಿ.ಬಸವನಾಳ ಗ್ರಂಥಾಲಯದಲ್ಲಿ ಕೂಡ ಈ ಪರಿಸ್ಥಿತಿ ಇದೆ.

ನಾನು ವಿದ್ಯಾರ್ಥಿಯಾಗಿದ್ದಾಗ ಅವರ ಕೈಕಾಲು ಬಿದ್ದು, ಅಂಗಲಾಚಿ, ಹೆದರಿ..ಹೆದರಿ ಓದಲು ಪುಸ್ತಕ ಭಿಕ್ಷೆ ಪಡೆದಿದ್ದೇನೆ. ಅವರು ‘ಬಾ’ ಅಂದಾಗ, ‘ನಿಲ್ಲು’ ಅಂದಲ್ಲಿ ನಿಂತು, ಮತ್ತೊಂದಾವರ್ತಿ ಮಧ್ಯಾನ್ಹ ಅಥವಾ ಸಂಜೆ ಬಾ ಎಂದರೆ ಬಾಗಿಲು ಕಾಯ್ದು..ಅಷ್ಟೆ ಅಲ್ಲ ಒಂದೆರೆಡು ದಿನ ಪುಸ್ತಕ ಹಿಂದಿರುಗಿಸುವುದು ಹೆಚ್ಚು ಕಡಿಮೆಯಾದರೆ, ಕಾರಣ ಕೇಳುವ ತಾಳ್ಮೆ ಅಥವಾ ಸಹಿಸುವ ಮಾನವೀಯತೆ ಅವರಲ್ಲಿ ಇರಲಿಲ್ಲ. ನಿರ್ದಾಕ್ಷಿಣ್ಯವಾಗಿ ದಂಡದ ಹೆಸರಿನಲ್ಲಿ ನಮ್ಮಿಂದ ಹತ್ತಿಪ್ಪತ್ತು ರುಪಾಯಿ ಕಿತ್ತುತ್ತಿದ್ದರು. ರಸೀಟಿ ಕೇಳುವುದೇ? ಇದು ಮುಖ್ಯ ಗ್ರಂಥಪಾಲಕರಿಗೆ ಗೊತ್ತಿತ್ತೋ ಇಲ್ಲವೋ? ನನಗೆ ಗೊತ್ತಿಲ್ಲ. ಆದರೆ ಸಂಜೆ ಇದೇ ಹಣದಿಂದ ಅವರೆಲ್ಲ ಕ್ಯಾಂಟೀನ ನಲ್ಲಿ ಪಾರ್ಟಿ ಮಾಡುತ್ತಿದ್ದರು!.. ಸೈಕಲ್ ಮೇಲೆ ಎಂ.ಎ. ಮಾಡಿದ ನನ್ನಂತಹ ಎಷ್ಟೋ ವಿದ್ಯಾರ್ಥಿಗಳಿಗೆ ಆ ದಿನಗಳನ್ನು ನೆನಸಿದರೆ ಈಗ ಮೈಯೆಲ್ಲ ಉರಿಯುತ್ತದೆ.

ನನ್ನಂತಹ ಬಡ ವಿದ್ಯಾರ್ಥಿಗಳಿಗೆ ಇಂದಿಗೂ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಬರವಿಲ್ಲ. ಕೊಂಡು ಓದಲು ಹಣವಿಲ್ಲ. ಕೊಂಡವರು ಓದಿ ಕೊಡುವವರೆಗೆ ತಾಳ್ಮೆ ಇಲ್ಲ. ಗ್ರಂಥಾಲಯಗಳೆ ನಮ್ಮ ಹಸಿವು ಇಂಗಿಸಿಕೊಳ್ಳುವ ಸಾಧನಗಳು. ಅಲ್ಲಿ ಸಹ ಬೇಕಾದ ಪುಸ್ತಕ ಸಿಗದೇ..ನಮ್ಮ ವಿಭಾಗದ ಪುಸ್ತಕಗಳು ಅದು ಹೇಗೋ ಪ್ರಾಣಿಶಾಸ್ತ್ರ, ಜೀವಶಾಸ್ತ್ರ ಶೆಲ್ಫ್ ಏರಿರುತ್ತಿದ್ದವು! ಪುಸ್ತಕ ಹುಡುಕುವುದೇ ಹೈರಾಣದ ಕೆಲಸವಾಗುತ್ತಿತ್ತು. ಪಠ್ಯದಲ್ಲಿ ಸೇರಿಸಿದ್ದು ಗ್ರಂಥಾಲಯದಲ್ಲಿಲ್ಲ..ಗ್ರಂಥಾಲಯದಲ್ಲಿದ್ದುದು ಪಠ್ಯಕ್ಕೆ ಹೊಂದುವುದಿಲ್ಲ. ಸಮಕಾಲೀನ ಸಿಲ್ಲ್ಯಾಬಿ ಹೆಣೆಯುವ ಪೌರುಷ ಕಾರ್ಯದಲ್ಲಿ ಮಾಸ್ತ್ರ ಪ್ರಯೋಗಗಳಿಗೆ ವಿದ್ಯಾರ್ಥಿ ರಸ ಹಿಂಡಿದ ಕಬ್ಬಿನ ಸೊಟ್ಟಿಯಂತೆ!

ಈಗಿನ ಪರಿಸ್ಥಿತಿ ಕೇಳಿ. ಅದು ಪುಗಸೆಟ್ಟಿ ಅನುಭವ. ಈಗಿನದ್ದು ಹಣ ತೆತ್ತು ಹೈರಾಣಾದ ಹೃದಯ ವಿದ್ರಾವಕ ಅನುಭವ. ಸರ್ವೇ ಸಾಮಾನ್ಯವಾಗಿ ನನ್ನಂತಹ ಮಧ್ಯಮ ವರ್ಗದ ಕುಟುಂಬಗಳು ಮನೆ ಮಂದಿಗಾಗಿ ಒಂದು ಕನ್ನಡ ಪತ್ರಿಕೆ ಖರೀದಿಸುವುದು ಅಸಾಮಾನ್ಯ ಸಂಗತಿ. ಇನ್ನು ಮನೆಯಲ್ಲಿ ಶಾಲೆಗೆ ಅಥವಾ ಕಾಲೇಜಿಗೆ ಹೋಗುವ ಮಕ್ಕಳಿದ್ದರೆ ಒಂದು ಕನ್ನಡ ಮತ್ತು ಒಂದು ಇಂಗ್ಲೀಷ್ ದಿನ ಪತ್ರಿಕೆ ಅನಿವಾರ್ಯ ಎಂದು ಬಜೆಟ್ ಹೊಂದಿಸಿಕೊಂಡು ಕೊಳ್ಳುತ್ತೇವೆ. ನಾನಂತೂ ಪತ್ರಿಕೆಗೆ ಲೇಖನ ಬರೆದು ಆ ತಿಂಗಳ ಖರ್ಚಿನ ಬಾಬತ್ತು ಸರಿ ಹೊಂದಿಸುತ್ತೇನೆ.

ಜೊತೆಗೆ ನಾವು ಸಹ ಯಾವ ಯಾವ ಪತ್ರಿಕೆಯವರು ಯಾವ ಯಾವ ಹೊಸ ಸ್ಕೀಮ್ ತಂದಿದ್ದಾರೆ. ಯಾರ ತಿಂಗಳ ಬಿಲ್ ಕಡಿಮೆ ಬರುತ್ತದೆ. ಪಕ್ಕದ ಮನೆಯವರು ಯಾವುದನ್ನು ತರಿಸುತ್ತಾರೆ ಕೇಳಿ..‘ಎಕ್ಸಚೇಂಜ್’ ಮಾಡಿಕೊಂಡು ಓದುವ ‘ಆಪ್ಷನ್’ ಜೀವಂತವಾಗಿ ಇಟ್ಟುಕೊಂಡು, ಅಳೆದು ತೂಗಿ ಪತ್ರಿಕೆ ಖರೀದಿಸುತ್ತೇವೆ. ವಿಜಯ ಕರ್ನಾಟಕದವರು ಒಂದು ರೂಪಾಯಿಗೆ ಪತ್ರಿಕೆ ಕೊಡಲು ಆರಂಭಿಸಿದಾಗ ಎರೆಡೆರೆಡು ಪತ್ರಿಕೆ ಕೊಂಡು ಓದಿದೆವು. ಆದರೆ ಪ್ರತಿಸ್ಪರ್ಧಿಗಳನ್ನು ನೆಲಕಚ್ಚಿಸುವ ಅವರ ವ್ಯಾವಹಾರಿಕ ಸರ್ಕಸ್ಸಿನಲ್ಲಿ ಕೇವಲ ಇಂಗ್ಲೀಷ ಪತ್ರಿಕೋದ್ಯಮಕ್ಕೆ ಮಾತ್ರ ಸೀಮಿತವಾಗಿದ್ದ ಪತ್ರಿಕಾ ದರ ಸಮರ ಜ್ವರ ಕನ್ನಡ ಪತ್ರಿಕೆಗಳಿಗೂ ವ್ಯಾಪಿಸಿತು. ಏಜೆಂಟರು ಇಲ್ಲಿ ನಿರ್ಣಾಯಕರಾದರು. ಕಮಿಷನ್ ಹೆಚ್ಚು ಕೊಟ್ಟವರಿಗೆ ನಮ್ಮ ಬದ್ಧತೆ ಎಂದು ಬಹಿರಂಗವಾಗಿಯೇ ಸಾರಿದರು. ಓದುಗರಿಗೇ ಇದರಿಂದ ಲಾಭ ಎಂದು ಬಿಂಬಿಸಿದರು. ಜಾಹಿರಾತುದಾರರು ಜಾಹಿರಾತು ಕೊಡದೇ ಹೋದರೆ ಪತ್ರಿಕೆ ನಿತ್ಯ ೧೦ ರುಪಾಯಿಗೆ ಬಿಕರಿಯಾಗಬೇಕು. ಖುಷಿ ಪಡಿ ಎಂದು ನಂಬಿಸಿದರು.

ಈಗ ನೋಡಿ..ಬಿಟ್ಟ ಸ್ಥಳ ತುಂಬಿರಿ ಮಾದರಿಯಲ್ಲಿ ನಮ್ಮ ಪತ್ರಿಕೆಗಳಲ್ಲಿ ಸುದ್ದಿಗಳು ಪ್ರಕಟಗೊಳ್ಳುತ್ತಿವೆ. ಹೇಗೆಂದರೆ ಕಾರ್ಯಕ್ರಮದ ಮಧ್ಯೆ ಜಾಹಿರಾತುಗಳು ವಿದ್ಯುನ್ಮಾನ ಮಾಧ್ಯಮದಲ್ಲಿ ಮೊದಲು ಬಿತ್ತರಗೊಳ್ಳಲು ಆರಂಭಿಸಿದವು. ಕ್ರಮೇಣ ಜಾಹಿರಾತುಗಳ ಮಧ್ಯೆ ಕಾರ್ಯಕ್ರಮಗಳು ಬಿತ್ತರಗೊಳ್ಳುವಂತಾಗಿದ್ದು ಹೊಸ ಬೆಳವಣಿಗೆ! ಇಲ್ಲಿಯೂ ನೋಡುಗನಿಗೇ ಲಾಭವಿದೆ ಎಂದು ಬಿಂಬಿಸಲಾಗುತ್ತಿದೆ! ಅರಿವಿನ ತ್ಸುನಾಮಿಯೇ ಮನೆಯ ಡ್ರಾಯಿಂಗ್ ರೂಮಿಗೆ ಹರಿದು ಬರುತ್ತಿದೆಯಂತೆ!

ಈಗ ಧಾರವಾಡದಲ್ಲಿ ಪತ್ರಿಕಾ ಏಜೆಂಟರ ಧಾರ್ಷ್ಟತೆ ಎಂತಹುದು ಎಂದರೆ..ತಾವು ಮನೆ ಮನೆಗೆ ಹಂಚುವ..ಹಾಕುವ ಪತ್ರಿಕೆಗಳ ‘ಎಂಆರ್ ಪಿ’ ನಿರ್ಧರಿಸುವವರು ಅವರೇ? ನ್ಯೂಸ್ ಪ್ರಿಂಟ್ ನಲ್ಲಿ ಮುದ್ರಿಸಿದ ದರ ಅವರಿಗೆ ಅನ್ವಯವಾಗುವುದಿಲ್ಲ! ಪತ್ರಿಕೆಯಲ್ಲಿ ಬಣ್ಣದಲ್ಲಿ ಮುದ್ರಿತವಾದ ಜಾಹಿರಾತು ‘ಜಾಗೋ ಗ್ರಾಹಕ ಜಾಗೋ’ ಅಣಕಿಸಿದಂತೆ ಭಾಸವಾಗುತ್ತದೆ!

ಓದುಗರನ್ನು ನಮ್ಮ ಆತ್ಮೀಯ ಪತ್ರಿಕೆಯ ಎಜೆಂಟರು ಹೆದರಿಸಬಲ್ಲರು. ಲೆಕ್ಕ ಮೀರಿ ‘ಹಾಕರ್ಸ್’ ಕಮಿಷನ್, ‘ಏಜೆಂಟ್ಸ್’ ಸಾರಿಗೆ ಭತ್ತೆ, ತಿಂಗಳಿಗೆ ೧೦ ರುಪಾಯಿ ‘ಸರ್ವಿಸ್ ಟ್ಯಾಕ್ಸ್’ ವಸೂಲಿ ಮಾಡಬಲ್ಲರು. ನಾವೇ ಲೆಕ್ಕ ಹಾಕಿ ತಿಂಗಳಲ್ಲಿ ೮ ದಿನ ಪತ್ರಿಕೆ ಬರಲಿಲ್ಲ ಎಂದು ದಿನಾಂಕ ಸಮೇತ ಅಲವತ್ತುಕೊಂಡರೆ ‘ಅದಕ್ಕೆಲ್ಲ ಏನು ಮಾಡಲು ಸಾಧ್ಯವಿಲ್ಲ’. ಕೊಡಲೇ ಬೇಕು.. ಕೊಡದೇ ಹೋದರೆ ಹೇಗೆ ವಸೂಲಿ ಮಾಡಬೇಕು ನಮಗೆ ಗೊತ್ತಿದೆ’ ಎನ್ನುತ್ತಾರೆ ಎಜೆಂಟರು! ಓದುಗ ಮರ್ಯಾದೆಗೆ ಅಂಜದೇ ಅನ್ಯ ಮಾರ್ಗವಿಲ್ಲ.

ಹೋಗಲಿ ಪತ್ರಿಕೆಯ ಪ್ರಸಾರಾಂಗ ವಿಭಾಗದ ಸ್ಥಾನಿಕ ವ್ಯವಸ್ಥಾಪಕರಿಂದ ಮಹಾಪ್ರಬಂಧಕರ ವರೆಗೆ ಏಜೆಂಟರ ಈ ಮಾನಸಿಕ ರೀತ್ಯಾ ಹಾಗು ಹಣಕಾಸು ರೀತ್ಯಾ ಶೋಷಣೆ ಕುರಿತು ದೂರು ಕೊಟ್ಟರೂ ‘ಕ್ಯಾರೆ’ ಎನ್ನುವುದಿಲ್ಲ. ಸಂಪಾದಕರ ಗಮನಕ್ಕೆ ವಿಷಯ ತರುತ್ತೇವೆ ಎಂದರೆ ಏಜೆಂಟ್ ಮಹಾಶಯನ ಉತ್ತರವೇನು ಗೊತ್ತೆ? ‘ಆ ಎಡಿಟರ್ ನಂಬರ ನಿಮ್ಮ ಹತ್ರ ಐತೋ ನಾನ ಕೊಡ್ಲೋ? ಬೇಕಾದವರಿಗೆ ಹೇಳ್ರಿ? ಅವರಿಗೆಲ್ಲ ಗೊತ್ತ ಐತಿ. ನಾವೆಲ್ಲ ಇಡಿ ತಿಂಗಳ ಅಡ್ವಾನ್ಸ್ ಕಟ್ಟಿ, ಮ್ಯಾಲೆ ಇಡಗಂಟು ಅವರ ..ಇಟ್ಟು ಪೇಪರ್ ತುಗೊಂಡಿರ್ತೇವೆ..ಅದ್ಯಾವ ನನ್ಮಗ ಅದೇನ ನಮಗ ಹೇಳ್ತಾನೋ ನಾವು ನೋಡ್ತೇವಿ’!

ಆಡಿಸಿದಳು ಯಶೋಧೆ..ನಿಮಗೆಲ್ಲ ಗೊತ್ತಲ್ಲ ಹಾಗೆಯೇ ಮುಂದುವರೆದು ಕೃಷ್ಣ ಅಲ್ಲಾಡಿಸಿದನಲ್ಲ ಆ ಯಶೋಧೆಯ! ಹಾಗಿದೆ ಈ ವರಸೆ. ಊಹಿಸಿ ಓದುಗ ದೊರೆಯ ಸ್ಥಿತಿ. ಹಲವಾರು ಎಜೆಂಟರು ಪತ್ರಿಕಾ ವರದಿಗಾರರೂ ಹೌದು! ಅವರ ಗಾಡಿಗೆ ‘ಪ್ರೆಸ್’ ಅಂತ ಕೆಂಪು ಅಕ್ಷರ ಬೋರ್ಡು ಸಹ! ಇನ್ನು ಪ್ರತಿಷ್ಠಿತ ಪತ್ರಿಕೆಯ ವರದಿಗಾರ ಅಂದ ಮೇಲೆ ಪೊಲೀಸರೊಂದಿಗಿನ ಸಖ್ಯ ‘ಈ ಪರಿಯ ಸೊಬಗಾವ ..’! ಇನ್ನು ಜುಜಬಿ ನೂರು ರುಪಾಯಿಗೆ ಸಾವಿರ ರುಪಾಯಿ ತೆತ್ತು, ವಶೀಲಿ ಹಚ್ಚಿ ಕಂಪ್ಲೇಂಟ್ ದಾಖಲಿಸಲು ಹೋದರೆ ಅವರ ಸಂಘವಿದೆ, ಯೂನಿಯನ್ ಇದೆ. ಇದು ರಿಕ್ಷಾ ಡ್ರೈವರಗಳನ್ನು ತಡವಿ ಮೈಉಳಿ ಪೆಟ್ಟು ತಿಂದಂತೆ (ಅವರ ತಪ್ಪಿದ್ದಾಗ್ಯೂ)! ಯಾವ ಮರ್ಯಾದಸ್ಥ ಈ ಕೆಲಸ ಮಾಡಲು ಮುಂದಾಗ ಬೇಕು ನೀವೆ ಹೇಳಿ?

ಇದನೆಲ್ಲ ನೋಡಿ ಬೇಸತ್ತು ಬೇರೆ ಏಜೆಂಟನಿಗಾದರೂ ಹೇಳೋಣ ಅಂದ್ರೆ..ಅವರುಗಳು ತಮ್ಮದೇ ಆದ ಸರಹದ್ದು ಮಾಡಿಕೊಂಡಿದ್ದಾರೆ. ಅವರ ಕುರುಕ್ಷೇತ್ರದಲ್ಲಿ ಅಲ್ಲ ಕ್ಷಮಿಸಿ ಕಾರ್ಯಕ್ಷೇತ್ರದಲ್ಲಿ ಇನ್ನೊಬ್ಬ ಎಜೆಂಟ್ ಕಾಲಿಡುವುದಿಲ್ಲ ಎಂದು ಅಲಿಖಿತ ಒಪ್ಪಂದ ಮಾಡಿಕೊಂಡಿದ್ದಾರಂತೆ! ದು:ಖದ ಸಂಗತಿ ಎಂದರೆ ಪತ್ರಿಕೆ ಖರೀದಿಸುತ್ತಿದ್ದವರು ಯಾವುದೋ ಅನ್ಯ ಕಾರಣಗಳಿಂದ ‘ಈ ತಿಂಗಳಿಂದ ನಮಗೆ ಪತ್ರಿಕೆ ಬೇಡ ಎನ್ನುವಂತಿಲ್ಲ?’ ಕೆಲವೆಡೆ ಒಂದು ಇನ್ನು ಹಲವೆಡೆ ಮೂರು ತಿಂಗಳ ಮೊದಲೇ ಏಜೆಂಟ್ ದೊರೆಗೆ ತಿಳಿಸಬೇಕು. ಕೂಡಲೇ ಕೈ ಬಿಡುವುದಾದರೆ ಒಂದು ತಿಂಗಳ ಬಿಲ್ (ಅ)ಗೌರವ ವಂತಿಗೆಯಾಗಿ ಸಲ್ಲಿಸಿ ಕೈ ತೊಳೆದುಕೊಳ್ಳಬೇಕು. ಪಾಪ..ಹತ್ತಾರು ವರ್ಷಗಳಿಂದ ಬಾಳಿ ಬದುಕಿದ್ದ ಎಷ್ಟೋ ಜನ ಆ ಓಣಿಯನ್ನೇ ಬಿಟ್ಟು ತೆರಳಿದ್ದಾರೆ. ಇನ್ನು ಸ್ವಂತ ಮನೆ ಕಟ್ಟಿಕೊಂಡವರು ಏನು ಮಾಡಬೇಕು?

ಇನ್ನು ಶಾಲಾ ಕಾಲೇಜುಗಳಲ್ಲಿ ಕೆಲ ಪತ್ರಿಕೆಯವರು ಮಕ್ಕಳಿಗಾಗಿ ಕಡಿಮೆ ದರದಲ್ಲಿ ಪತ್ರಿಕೆ ಕೊಳ್ಳುವ ‘ಡಬಲ್ ಬೆನಿಫಿಟ್ ಸ್ಕೀಮ್’ ಅನುಷ್ಠಾನಗೊಳಿಸಿದ್ದಾರೆ. ನಿಜಾರ್ಥದಲ್ಲಿ ‘ಪೇನ್ ಇನ್ ದ ನೆಕ್ ಸ್ಕೀಮ್’ ಅದು! ಎಜೆಂಟರಿಗೆ ಇದು ಸರಿ ಬರುತ್ತಿಲ್ಲ. ಬಹುಶ: ಪತ್ರಿಕಾ ಮಾಲೀಕರುಗಳು ಈ ಏಜೆಂಟರುಗಳು ಮತ್ತು ಪ್ರಸಾರಾಂಗದವರ ಅನೈತಿಕ ಸಬಂಧಗಳನ್ನು ಗುರುತಿಸಿಯೇ ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂಬ ನಂಬಿಕೆ ನನ್ನದು. ಇಲ್ಲಿ ಉಲ್ಲೇಖಿಸಲಾಗದಷ್ಟು ಶಿಷ್ಠ ಕಾರಣಗಳು ಅದಕ್ಕಿವೆ. ಒಂದರ್ಥದಲ್ಲಿ ‘ಹ್ಯಾಂಡ್ ಇನ್ ಗ್ಲೋವ್’ ಬಿಸಿನೆಸ್ ಅವರಿಗಿದು.

ಸ್ಟೂಡೆಂಟ್ ಸ್ಕೀಮ್ ಪ್ರವೇಶಾತಿ ಪಡೆದವರು ಎಜೆಂಟರಿಗೆ ಹಣ ಭರಿಸುವ ಅವಶ್ಯಕತೆ ಇಲ್ಲ. ಹಾಗಾಗಿ ವಾರದ ೩ ದಿನ ಉದ್ದೇಶಪೂರ್ವಕವಾಗಿ ಪತ್ರಿಕೆಗೆ ಅಘೋಷಿತ ರಜೆ! ಇನ್ನು ಉಳಿದ ನಾಲ್ಕು ದಿನಗಳಲ್ಲಿ ಎರಡು ದಿನ ಬೆಳಿಗ್ಗೆ ಪೇಪರ್ ಬಂದ್ರೆ ಇನ್ನೆರಡು ದಿನ ಮಧ್ಯಾನ್ಹ ಊಟದ ವೇಳೆಗೆ ಬಾಗಿಲಲ್ಲಿ ಬಿದ್ದಿರುತ್ತದೆ!

ಓದುಗರ ಕ್ಲಬ್ ಸ್ಥಾಪಿಸಿ. ಓರ್ವ ಅನುಭವಿ ವಕೀಲರನ್ನು ಸಲಹಾಕಾರರಾಗಿ ನೇಮಿಸಿಕೊಳ್ಳಿ. ಗ್ರಾಹಕರ ವೇದಿಕೆಗೆ ಕ್ಲಬ್ ಪರವಾಗಿ ದೂರು ದಾಖಲಿಸಿ. ಸಂಪನ್ಮೂಲ ವ್ಯಕ್ತಿಗಳ ಸಲಹೆ ಪಡೆಯಿರಿ. ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ಓಣಿಗೆ ಮಿಕ್ಕಿದವರೇ ಎಜೆಂಟರಾಗಿದ್ದರೆ ಎಂಬುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಓದುಗರ ಹಕ್ಕನ್ನು ಉಳಿಸಿಕೊಳ್ಳಲು ನಾವೇ ಹೋರಾಡಬೇಕು. ನಮ್ಮ ಹಿತಾಸಕ್ತಿ ಇನ್ನಾರೂ ಕಾಯುವವರಿಲ್ಲ!

ಹಿರಿಯ ಸ್ವಾತಂತ್ರ್ಯಯೋಧ ಶ್ರೀ ನರಸಿಂಹ ದಾಬಡೆ ಅವರನ್ನು ಮಾತನಾಡಿಸಿದೆ. ೯೬ ವರ್ಷದ ಜ್ನಾನ ವೃದ್ಧರು ಅವರು. ಬೆಳಗಾವಿಯಿಂದ ಹುಬ್ಬಳ್ಳಿಗೆ ಸಂಯುಕ್ತ ಕರ್ನಾಟಕ ಕಾರ್ಯಾಲಯ ವರ್ಗಾವಣೆಗೊಂಡಾಗ ಮೊಹರೆ ಹಣಮಂತರಾಯರಿಂದ ನೇಮಕಗೊಂಡ ಸಂ.ಕ.ದ ಪ್ರಥಮ ಎಜೆಂಟ್ ಹಾಗು ವರದಿಗಾರರು. ವಿಷಯ ತಿಳಿದು ಆ ಹಿರಿ ಜೀವದ ಕಣ್ಣಿನಿಂದ ಎರಡು ತೊಟ್ಟು ನೀರಿನ ಹನಿ ಉದುರಿದವು. ಮೌನ ಆವರಿಸಿತು. ‘ನನ್ನ ಹೋರಾಟ ಸಫಲವಾಗಲಿಲ್ಲ..ಹರ್ಷ. ಇದು ಒಳ್ಳೆಯ ಬೆಳವಣಿಗೆಯಲ್ಲ.’ ಅಂದರು. ನನ್ನ ಕಣ್ಣು ಹನಿಗೂಡಿದವು. ಈ ವಿಚಾರ ಅವರಿಗೆ ತಿಳಿಸಬಾರದಾಗಿತ್ತೇನೋ? ಎಂದು ಮನಸ್ಸು ಚಡಪಡಿಸಿತು.