ಓಪನ್ ಚಾಲೆಂಜ್

ಓಪನ್ ಚಾಲೆಂಜ್

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರವೀಣ್ ಕುಮಾರ್ ಮಾವಿನಕಾಡು
ಪ್ರಕಾಶಕರು
ಅಯೋಧ್ಯಾ, ಗಿರಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೦

ವೈಚಾರಿಕ ಸಮರಕ್ಕೆ ‘ಓಪನ್ ಚಾಲೆಂಜ್' ಎಂಬ ಪುಸ್ತಕವನ್ನು ಬರೆದವರು ಪ್ರವೀಣ್ ಕುಮಾರ್ ಮಾವಿನಕಾಡು. ಇವರು ಹುಟ್ಟಿ ಬೆಳೆದದ್ದು ಮಲೆನಾಡಿನಲ್ಲಿ. ಚಿಕ್ಕಮಗಳೂರಿನಲ್ಲಿ ಎರಡು ವರ್ಷಗಳ ಕೈಗಾರಿಕಾ ತರಭೇತಿ ಮುಗಿಸಿ ನೇರವಾಗಿ ಸೇರಿದ್ದು ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದೊಳಗೆ. ಅಲ್ಲಿ ಕಮ್ಯೂನಿಸ್ಟ್ ಕಾರ್ಮಿಕ ಸಂಘಟನೆಗಳ ಕಾರ್ಯ ಚಟುವಟಿಕೆಗಳ ಹತ್ತಿರದ ಪರಿಚಯವಾಯಿತು. ಓದಿನ ಸಮಯದಲ್ಲಿ ತರಂಗ, ಮಂಗಳ ಮುಂತಾದ ವಾರಪತ್ರಿಕೆಗಳಲ್ಲಿ ಮತ್ತು ಸ್ಥಳೀಯ ದಿನಪತ್ರಿಕೆಗಳಲ್ಲಿ ಆಗಾಗ ಚುಟುಕು, ಹನಿಗವನ, ವಿಡಂಬನೆ, ವ್ಯಂಗ್ಯಚಿತ್ರಗಳು ಪ್ರಕಟವಾಗಿದ್ದು ಬಿಟ್ಟರೆ ನಂತರದಲ್ಲಿ ಹಲವಾರು ವರ್ಷಗಳವರೆಗೆ ಅನ್ನಿಸಿದ್ದನ್ನು ನೇರವಾಗಿ ಪತ್ರಿಕೆಗಳಲ್ಲಿ ಬರೆಯುವ ಅವಕಾಶ ಸಿಗಲೇ ಇಲ್ಲ ಎಂದೇ ಹೇಳಬಹುದು. 

ಪ್ರವೀಣ್ ಕುಮಾರ್ ಅವರು ತಮ್ಮ ಮುನ್ನುಡಿಯಾದ ‘ಚಾಲೆಂಜಿಗೆ ರಣವೀಳ್ಯ' ದಲ್ಲಿ ಬರೆಯುತ್ತಾರೆ “ನನಗೆ ತಿಳುವಳಿಕೆ ಬಂದಾಗಿನಿಂದಲೂ ನಾನು ನೋಡಿದಂತೆ, ಈ ಸಮಾಜದಲ್ಲಿ ಬುದ್ಧಿಜೀವಿಗಳ ಸಂಖ್ಯೆ ತೀರಾ ಕಡಿಮೆಯಿದೆ. ಅವರ ವಾದಗಳಂತೂ ತೀರಾ ಬಾಲಿಶ. ಆದರೂ ಅವರಿಗೆ ಸಿಗುತ್ತಿರುವ ಪ್ರಚಾರವು ನಿಜವಾಗಿ ಅವರಿಗೆ ಸಿಗಬೇಕಾದ ಪ್ರಚಾರಕ್ಕಿಂತಲೂ ಸಾವಿರ ಪಟ್ಟು ಹೆಚ್ಚು. ಅವರು ಎಲ್ಲರನ್ನೂ, ಎಲ್ಲವನ್ನೂ ಪ್ರಶ್ನಿಸುತ್ತಾ ಹೋಗುತ್ತಾರೆ. ಉಳಿದವರು ಅವರ ಪ್ರಶ್ನೆಗಳನ್ನು ತಮಗೇ ಎಂದು ತಿಳಿದು ಉತ್ತರಿಸುತ್ತಾ ಹೋಗಬೇಕು. ಆಶ್ಚರ್ಯವೆಂದರೆ ಅವರುಗಳು ಯಾವತ್ತೂ ಯಾವುದಕ್ಕೂ ಉತ್ತರದಾಯಿಗಳಾಗಿಯೇ ಇಲ್ಲ! ಬಹುತೇಕ ಮಾಧ್ಯಮಗಳೂ ಕೂಡ ಅವರುಗಳು ಎತ್ತುವ ಪ್ರಶ್ನೆಗಳನ್ನು ಸುದ್ದಿ ಮಾಡುತ್ತವೆಯೇ ಹೊರತೂ ಅವರಿಗೆ ಸಿಗುವ ಉತ್ತರಗಳನ್ನು ಅಥವಾ ಅವರಿಗೆದುರಾಗುವ ಮರು ಪ್ರಶ್ನೆಗಳನ್ನು ಸುದ್ದಿ ಮಾಡುವುದೇ ಇಲ್ಲ.”

ಪ್ರವೀಣ್ ಕುಮಾರ್ ಅವರು ಹೊಸ ದಿಗಂತ ದಿನಪತ್ರಿಕೆಯಲ್ಲಿ ಪ್ರತೀ ವಾರ ಬರೆದ ‘ಹುಳಿಮಾವು' ಅಂಕಣ ಬರಹಗಳನ್ನು ಇಲ್ಲಿ ಪುಸ್ತಕದ ರೂಪದಲ್ಲಿ ಹೊರತರಲಾಗಿದೆ. ಪರಿವಿಡಿಯಲ್ಲಿ ೪೭ ಅಧ್ಯಾಯಗಳಿವೆ. ಎಲ್ಲವೂ ಮಹತ್ವಪೂರ್ಣ ಅಂಶಗಳನ್ನು ಹಾಗೂ ಮಾಹಿತಿಗಳನ್ನು ಒಳಗೊಂಡಿದ್ದರೂ ಕೆಲವೆಡೆ ಇವರ ಬರಹದ ಶೈಲಿ ವೇಗವಾಗಿ ಮುಂದೆ ಓದಿಸಿಕೊಂಡು ಹೋಗುವುದೇ ಇಲ್ಲ ಅನಿಸುತ್ತದೆ. ಆದರೆ ಇವರು ಸಂಗ್ರಹಿಸಿದ ಮಾಹಿತಿಗಳು, ಆಯ್ದ ವಿಷಯಗಳು ಬಹಳ ಅರ್ಥಪೂರ್ಣವಾಗಿವೆ ಎಂಬುದುದರಲ್ಲಿ ಎರಡು ಮಾತಿಲ್ಲ. ಸತಿ ಪದ್ಧತಿ, ಲಿಂಗಾಧಾರಿತ ಅಸಮಾನತೆ, ಇಂದಿರಾ ಕ್ಯಾಂಟೀನ್, ಮಲಹೊರುವವರ ಬಗ್ಗೆ, ಕೋಮುವಾದ ಮತ್ತು ಧರ್ಮಾಂಧತೆ, ಬೆತ್ತಲೆ ಸೇವೆ, ಲಿಕ್ವಿಡ್ ಬಾಬು, ಸೈನ್ಸ್ ಸ್ವಾಮಿ, ಪವಾಡಗಳು ಬಯಲಾಗುವ ಸಮಯ, ಲಂಕೇಶರ ಶಿಷ್ಯರ ಬಗ್ಗೆ, ಸತ್ಯ ಸಾಯಿಬಾಬಾ ಮತ್ತು ಗದ್ದರ್, ಮೀಟೂ ಆಂದೋಲನ, ವಿಕ್ರಮ ಮತ್ತು ಬೇತಾಳ, ದೇವನೂರಿಗೊಂದು ಪತ್ರ, ಮತಾಂತರ... ಹೀಗೆ ಹತ್ತು ಹಲವು ಪ್ರಚಲಿತ ಸಂಗತಿಗಳ ಬಗ್ಗೆ ಸೊಗಸಾಗಿ ಬರೆದಿದ್ದಾರೆ. ಪುಟ್ಟ ಪುಟ್ಟ ಲೇಖನಗಳಾಗಿರುವುದರಿಂದ ಯಾವಾಗ ಬೇಕಾದರೂ, ಎಲ್ಲಿಂದ ಬೇಕಾದರೂ ಓದಿ ಕೊಳ್ಳಬಹುದು.

ಬೆನ್ನುಡಿಯಲ್ಲಿ ‘ನಿಲುಮೆ'ಯ ಸಂಸ್ಥಾಪಕರಾದ ರಾಕೇಶ್ ಶೆಟ್ಟಿ ಹಾಗೂ ವೈದ್ಯ- ಸಾಹಿತಿ ಡಾ.ಕಿರಣ್ ಸೂರ್ಯ ಇವರ ಬರಹಗಳು ಇವೆ. ರಾಕೇಶ್ ಶೆಟ್ಟಿಯವರು ಬರೆದಂತೆ “ತಿಳಿಹಾಸ್ಯದ ಮೂಲಕವೇ ಬುದ್ದಿಜೀವಿಗಳ, ಕಮ್ಯೂನಿಷ್ಟರ ಬಂಡವಾಳ ಬಯಲು ಮಾಡುವ ಅನನ್ಯ ಶೈಲಿ ಮಾವಿನಕಾಡು ಅವರದ್ದು. ವಿಡಂಬನೆ ಮೂಲಕವೇ ಗಂಭೀರವಾದ ವಿಷಯಗಳನ್ನು ಓದುಗರಿಗೆ ಮುಟ್ಟಿಸುವ ಅವರ ವಿಧಾನವೂ ಅಮೋಘವಾದದ್ದು."

ಡಾ. ಕಿರಣ್ ಸೂರ್ಯ ಇವರು ಹೇಳುತ್ತಾರೆ “ವ್ಯಂಗ್ಯ ಎನ್ನುವುದು ಅರಿವಳಿಕೆ ಸವರಿದ ಬಾಣದಂತೆ! ಅದನ್ನು ಗುರಿಯಿಟ್ಟು ಬಿಟ್ಟಾಗ ಎಲ್ಲಿ ಚುಚ್ಚಬೇಕೋ ಅಲ್ಲಿಯೇ ಕರಾರುವಾಕ್ಕಾಗಿ ಚುಚ್ಚಿರುತ್ತದೆ. ಆದರೆ, ಸ್ವಲ್ಪ ಸಮಯದ ನಂತರ ಚೆನ್ನಾಗಿ ಅನುಭವಕ್ಕೆ ಬರುತ್ತದೆ! ಬಹಳ ಕಾಲ ನೆನಪಿನಲ್ಲಿ ಉಳಿಯುತ್ತದೆ!

ಹುಳಿಮಾವು ಖ್ಯಾತಿಯ ಪ್ರವೀಣ ಕುಮಾರ ಮಾವಿನಕಾಡು ಅವರು ಇಂತಹ ಅನೇಕ ಬಾಣಗಳನ್ನು ತಮ್ಮ ಬತ್ತಳಿಕೆಯಲ್ಲಿ ಹೊತ್ತಿದ್ದಾರೆ! ಆ ಬಾಣಗಳಿಗೆ ಕೆಲವೊಮ್ಮೆ ಕ್ಷಿಪಣಿಗಳನ್ನು ಜೋಡಿಸಿ ಪ್ರಯೋಗಿಸುತ್ತಾರೆ! ಮೊದಲಿಗೆ ಅದು ಎಲ್ಲೋ ಹೋದಂತೆ ಭಾಸವಾದರೂ, ಲೇಖನದ ಕೊನೆಯಲ್ಲಿ ಎಲ್ಲಿ ಸಿಡಿಯಬೇಕೋ ಪಕ್ಕಾ ಅಲ್ಲೆ ಸಿಡಿಯುತ್ತದೆ! ಅವರು ಯಾರದೇ ಹೆಸರನ್ನೂ ಹೇಳದೇ ಹೋದರೂ, ಪ್ರತಿಯೊಬ್ಬ ಓದುಗರಿಗೂ ಯಾರೆಂಬುದು ತಿಳಿದುಬಿಡುತ್ತದೆ.’

ಸುಮಾರು ೧೬೦ ಪುಟಗಳ ಈ ಪುಸ್ತಕವನ್ನು ಅಯೋಧ್ಯಾ ಪ್ರಕಾಶನದವರು ತಮ್ಮ ೧೨ನೇ ಪ್ರಕಟನೆಯಾಗಿ ಹೊರತಂದಿದ್ದಾರೆ.