ಓಶೋ ನುಡಿ : ಮಕ್ಕಳು ಬೆಳೆಯುತ್ತಾರೆ, ಪಾಲಕರಲ್ಲ
ಒಮ್ಮೆ ಓಶೋ ಅವರಿಗೆ ಯಾರೋ ಕೇಳಿದರು - 'ಮಕ್ಕಳು ತಂದೆ - ತಾಯಿ ಸುಪರ್ದಿಯಲ್ಲಿ ಬೆಳೆಯುತ್ತಾರೆ. ಪಾಲಕರು ಮಕ್ಕಳಿಗೆ ಅಪಾರ ಪ್ರೀತಿ ತೋರುತ್ತಾರೆ. ಒಳ್ಳೆಯ ಅಭ್ಯಾಸ ಹೇಳಿಕೊಡುತ್ತಾರೆ. ಸಂಸ್ಕಾರಗಳನ್ನು ಕೊಡುತ್ತಾರೆ. ಉತ್ತಮ ಶಾಲೆಗೇ ಸೇರಿಸುತ್ತಾರೆ. ತಮ್ಮ ಮಕ್ಕಳ ಒಳಿತಿಗಾಗಿ ದುಡಿಮೆಯ ಮುಖ್ಯಪಾಲನ್ನು ವಿನಿಯೋಗಿಸುತ್ತಾರೆ. ಆದರೂ ಮಕ್ಕಳು ವಾಮಮಾರ್ಗ ಹಿಡಿಯುತ್ತಾರೆ. ತಂದೆ-ತಾಯಿಗಳಿಗೆ ಮರ್ಯಾದೆ ಕೊಡುವುದಿಲ್ಲ. ಏಕೆ? ಅದಕ್ಕೆ ಓಶೋ, 'ಮಕ್ಕಳು ಸರಿಯಾಗಿ ವರ್ತಿಸಿದರೆ ಅದಕ್ಕೆ ಕಾರಣ ಪಾಲಕರು. ವಾಮಮಾರ್ಗ ಹಿಡಿದರೂ ಅವರೇ ಕಾರಣ. ಮಕ್ಕಳು ಅವರ ಪಾಲಕರಲ್ಲದೇ ಬೇರೆ ಯಾರಿಂದಲೂ ಹಾಳಾಗುವುದಿಲ್ಲ.' ಎಂದು ಕಣ್ಣುಮಿಟುಕಿಸದೇ ಪ್ರತಿಕ್ರಿಯಿಸಿದ್ದರು. ಮಕ್ಕಳು ಬೆಳೆಯುತ್ತಾರೆ. ಅವರು ಬಾಲ್ಯಾವಸ್ಥೆಯಿಂದ, ಕೌಮಾರ್ಯ, ಯೌವನಾವಸ್ಥೆ ದಾಟಿ ಗೃಹಸ್ಥರಾಗುತ್ತಾರೆ. ಆದರೆ ಪಾಲಕರು ಗೃಹಸ್ಥಾವಸ್ಥೆಗೆ ಕಾಲಿಟ್ಟ ನಂತರ ಅಲ್ಲಿಂದ ಹೊರಬರುವುದೇ ಇಲ್ಲ. ಮಕ್ಕಳು childhood ದಾಟಿ ದೊಡ್ಡವರಾಗುತ್ತಾರೆ. ಆದರೆ ಪಾಲಕರು parenthood ದಾಟದೇ ಇದ್ದಲ್ಲೇ ಇರುತ್ತಾರೆ. ಆದರೆ ಮಕ್ಕಳು ಬೆಳೆಯುತ್ತಾರೆ. ಆದರೆ ಪಾಲಕರು ಒಂದು ಹಂತ ಬೆಳೆದು, ಅಲ್ಲಿಯೇ ಇರುತ್ತಾರೆ. ಮಗುವಿಗೆ ತಂದೆ-ತಾಯಿ ಇಬ್ಬರೂ ಬೇಕು. ಅವರ ರಕ್ಷಣೆ, ಪ್ರೋತ್ಸಾಹ,ಬೆಂಬಲ ಬೇಕು. ಮಗು ತನ್ನ ಕಾಲಮೇಲೆ ನಿಂತ ನಂತರ ಪಾಲಕರು ಅಲ್ಲಿಂದ ನಿರ್ಗಮಿಸಬೇಕು. ಆದರೆ ಪಾಲಕರು ಅವರನ್ನು ನಿಯಂತ್ರಿಸುವುದನ್ನು ಮುಂದುವರೆಸುತ್ತಾರೆ. ತಮಾಷೆಯೆಂದರೆ, ಅವರು ತಮ್ಮ ಮಗುವಿನ ಬದುಕಿನಿಂದ ಎಂದೂ ನಿರ್ಗಮಿಸುವುದೇ ಇಲ್ಲ. ಮಗನ ಅಥವಾ ಮಗಳ ಮದುವೆಯಾದ ಬಳಿಕವೂ ಅವರ ಜೀವನದಲ್ಲಿ ಮೂಗು ತೂರಿಸುತ್ತಾರೆ. ಅವರನ್ನು ಅವರ ಪಾಡಿಗೆ ಬಿಟ್ಟು ಬಿಡುವುದೇ ಇಲ್ಲ. ವಿಚಿತ್ರ ಅಂದ್ರೆ, ಹೀಗೆ ಮಾಡುವ ಮೂಲಕ ತಮ್ಮ ಮಕ್ಕಳಿಗೆ ತಾವು ಸಹಕರಿಸುತ್ತಿದ್ದೇವೆ ಎಂದು ಭಾವಿಸುತ್ತಾರೆ. ಅಸಲಿಗೆ, ಮಕ್ಕಳಿಗೆ ಇದರಿಂದ ವ್ಯಕ್ತಪಡಿಸಲಾಗದ ವೇದನೆ ಆಗುತ್ತದೆ ಎಂಬುದು ಅವರ ಅರಿವಿಗೇ ಬರುವುದಿಲ್ಲ. ತಮ್ಮ ಮಕ್ಕಳು ಎಷ್ಟೇ ದೊಡ್ಡವರಾದರೂ ಪಾಲಕರಿಗೆ ಅವರು ಮಕ್ಕಳೇ. ಅಂದರೆ ಮಕ್ಕಳು ದೊಡ್ಡವರಾಗುತ್ತಾರೆ. ಆದರೆ ದೊಡ್ಡವರು ಇನ್ನೂ ದೊಡ್ಡವರಾಗುವುದಿಲ್ಲ. ಮಕ್ಕಳಾಗುತ್ತಾ ಹೋಗುತ್ತಾರೆ. ಪಾಲಕರಾಗುವುದು ಒಂದು ಕಲೆ. ಮಕ್ಕಳಿಗೆ ಜನ್ಮ ನೀಡುವುದು ದೊಡ್ಡದಲ್ಲ. ಪ್ರಾಣಿಗಳೂ ಜನ್ಮ ನೀಡುತ್ತವೆ. ಆದರೆ ಜವಾಬ್ದಾರಿಯುತ ಪಾಲಕರಾಗುವುದು ದೊಡ್ದದು. ನಿಜವಾದ ಪಾಲಕತ್ವ ಅಂದ್ರೆ ಮಕ್ಕಳನ್ನು ತಮ್ಮ ನೆರಳಿನಲ್ಲಿ ಪರವಾಲಂಬಿ ಮಾಡದೇ ಇರುವುದು. ಪಾಲಕರಾದವರು ಮಕ್ಕಳಿಗೆ ಎಲ್ಲಾ ವಿಧಗಳ ಬೆಂಬಲ ನೀಡಬೇಕು. ಈ ಕಾರಣಕ್ಕೆ ಅವರು ತಾನು ಹೇಳಿದಂತೆ ಕೇಳಬೇಕು ಎಂದು ಬಯಸುವುದು ಪಾಲಕತ್ವ ಅಲ್ಲ. ತಮ್ಮ ಮಕ್ಕಳ ಮೂಲಕ ತಮ್ಮ ಮನಸ್ಸಿನ ಇಚ್ಛೆಯನ್ನು ಈಡೇರಿಸಿಕೊಳ್ಳಲು ಪಾಲಕರು ಬಯಸಿದಾಗ ಸಮಸ್ಯೆ ಜಾಸ್ತಿಯಾಗುತ್ತದೆ. ಮಕ್ಕಳು ಮದುವೆಯಾದ ಬಳಿಕವೂ ತಮ್ಮ ಅಧೀನದಲ್ಲಿಯೇ ಇರಬೇಕು ಎಂದು ಬಯಸುತ್ತಾರೆ. ಆ ಮೂಲಕ ಸೊಸೆಯನ್ನೂ ಪಳಗಿಸಲು ಬಯಸುತ್ತಾರೆ. ಇವು ಏಕಕಾಲಕ್ಕೆ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತವೆ. ಮಕ್ಕಳಿಗೆ ತಮ್ಮ ಆಶ್ರಯ ಬೇಕಿಲ್ಲ ಎಂಬ ಸರಳ ಸಂಗತಿಯೂ ಸಹ ಗೊತ್ತಾಗುವುದಿಲ್ಲ. ಮಕ್ಕಳಿಗೆ ಅವರ ಪಾಡಿಗೆ ಸ್ವತಂತ್ರವಾಗಿ ಬದುಕಲು ಬಿಡುವುದಿಲ್ಲ. ಮಕ್ಕಳಿಗೆ ಆರಂಭದಿಂದ ಖರ್ಚು ಮಾಡಿದ್ದರಿಂದ, ಅವರಿಂದ ಆ ಹಣವನ್ನು ಪಡೆಯುವುದು ಹೇಗೆ ಎಂಬ ಯೋಜನೆಯೂ ಇರುತ್ತದೆ. ಇದು ಮತ್ತಷ್ಟು ಸಮಸ್ಯೆಗೆ ಕಾರಣವಾಗುತ್ತದೆ. ತಂದೆ-ಮಕ್ಕಳ ಮಧ್ಯೆ ಆರಂಭದಲ್ಲಿದ್ದ ಪ್ರೀತಿ-ವಾತ್ಸಲ್ಯ ಕ್ರಮೇಣ ಕ್ಷೀಣವಾಗಲು ಸಹ ಇದೆ ಕಾರಣ.
('ವಿಜಯವಾಣಿ'ಯಿಂದ ಸಂಗ್ರಹಿತ)