ಓಶೋ ಹೇಳಿದ ಕಥೆಗಳು
ಎಂಟು ಬಿಳಿಯ ಆನೆಗಳು!
ಅಮೇರಿಕದ ಜನಪ್ರಿಯ ಮನಶ್ಯಾಸ್ತ್ರಜ್ಞ ವಿಲಿಯಮ್ ಜೇಮ್ಸ್ ಒಂದು ಪುಸ್ತಕವನ್ನು ಬರೆಯುತ್ತಿದ್ದ. ಆ ಪುಸ್ತಕ ಮುಂದೆ ಮತ ಹಾಗೂ ಮನಶ್ಯಾಸ್ತ್ರದ ಇತಿಹಾಸದಲ್ಲೇ ಒಂದು ಮೈಲಿಗಲ್ಲಾಯಿತು. ಆ ಪುಸ್ತಕದ ಹೆಸರು, Varieties of Religious Experience. ತನ್ನ ಗ್ರಂಥದ ಮೂಲದ್ರವ್ಯಕ್ಕೋಸ್ಕರ ಪ್ರಪಂಚವನ್ನು ಸುತ್ತಿದ. ಬೇರಾವ ಗ್ರಂಥವೂ ಈತನದಷ್ಟು ಶಿಖರಕ್ಕೆ ಏರಲಿಲ್ಲ. ಅವನು ಭಾರತಕ್ಕೂ ಬಂದಿದ್ದ.
ಭಾರತಕ್ಕೆ ಬಂದು ಹಿಮಾಲಯದಲ್ಲಿರುವ ಸಂತನೊಬ್ಬನನ್ನು ಕಾಣಲು ಹೋದ. ಆತ ಆ ಸಂತನ ಹೆಸರನ್ನು ಕೊಟ್ಟಿಲ್ಲ. ವಾಸ್ತವಿಕವಾಗಿ, ಸಂತರಿಗೆ ಹೆಸರೇ ಇರುವುದಿಲ್ಲ. ಅವರಿಗೆ ಡ್ರೆಸ್ಸೂ, ಅಡ್ರೆಸ್ಸೂ ಯಾವುದೂ ಇರುವುದಿಲ್ಲ. ಇರುವ ಅಗತ್ಯವೂ ಇಲ್ಲ. ಸಂತನನ್ನು ಕಂಡು ಆತನಿಗೆ ಒಂದು ಪ್ರಶ್ನೆಯನ್ನು ಹಾಕುತ್ತಾನೆ. ಜೇಮ್ಸ್ ಭಾರತದ ಒಂದು ಪುರಾತನ ಶಾಸ್ತ್ರವನ್ನು ಓದುತ್ತಿದ್ದ. ಅದರಲ್ಲಿ ಭೂಮಿಯನ್ನು ಎಂಟು ಬಿಳಿಯ ಆನೆಗಳು ಎತ್ತಿ ಹಿಡಿದಿದ್ದವೆಂದು ಕಂಡುಕೊಂಡ.
ಅವನಿಗೆ ಗೊಂದಲ ಮತ್ತು ಅಶ್ಚರ್ಯವಾಯಿತು. ಅವನೊಬ್ಬ ತರ್ಕವಾದಿ, ತರ್ಕಶಾಸ್ತ್ರಜ್ಞ. ಆದ್ದರಿಂದ ಆತ ಸಂತನನ್ನು ಕೇಳಿದ, ‘ಇದು ತುಂಬಾ ಅಸಂಬದ್ಧವೆಂದು ಕಂಡುಬರುತ್ತದೆ. ಆ ಎಂಟು ಬಿಳಿ ಆನೆಗಳು ಯಾವುದರ ಮೇಲೆ ನಿಂತಿವೆ? ಅವುಗಳಿಗೆ ಅಧಾರವೇನು?’
ಆ ಸಂತ ಹೇಳಿದ ‘ಇತರ ಎಂಟು ಬಿಳಿಯ ಹಾಗೂ ದೊಡ್ಡ ಆನೆಗಳ ಮೇಲೆ ಆಧಾರವಾಗಿವೆ.’ ವಿಲಿಯಮ್ ಜೇಮ್ಸ್ ಕೇಳಿದ; ʻಆದರೆ ಇದು ನನ್ನ ಪ್ರಶ್ನೆಯನ್ನು ಪರಿಹರಿಸುವುದಿಲ್ಲ. ದೊಡ್ಡ ಬಿಳಿಯ ಆನೆಗಳನ್ನು ಯಾರು ಹೊತ್ತುಕೊಂಡಿದ್ದಾರೆ?’
ಆ ಸಂತ ನಕ್ಕು ಮತ್ತೆ ನುಡಿದ, ʼಆನೆಗಳು ಆನೆಗಳ ಮೇಲೆ, ಆನೆಗಳು ಆನೆಗಳ ಮೇಲೆ, ಕೆಳಕ್ಕೆ ಹೋದಂತೆಲ್ಲಾ….. ನೀನು ಪ್ರಶ್ನಿಸುತ್ತಲೇ ಹೋಗಬಹುದು’ ಸಂತ ಮುಂದುವರಿಸಿದ, ‘ನಾನು ಅದೇ ಉತ್ತರವನ್ನು ಮುಂದುವರಿಸುತ್ತಲೇ ಹೋಗುವೆನು… ಅತ್ಯಂತ ತಳದವರೆಗೂ..ʼ
ವಿಲಿಯಮ್ ಜೇಮ್ಸ್ ಹಾಗೆಯೇ ಯೋಚಿಸಿದ. ಇನ್ನೊಂದು ಕೊನೆಯ ಪ್ರಶ್ನೆಯನ್ನು ಕೇಳಬಹುದು ಎಂದುಕೊಂಡ. ಕೇಳಿದ. ಸರಿ, ಹಾಗಾದರೆ ಆ ಅತ್ಯಂತ ತಳಕ್ಕೆ ಅಧಾರ ಯಾವುದು?
ಸಂತ ನಿರ್ವಿಕಾರನಾಗಿ ಹೇಳಿದ; ಯಾವುದೇ ಅನುಮಾನ ಬೇಡ. ಇನ್ನೂ ದೊಡ್ಡದಾದ ಎಂಟು ಆನೆಗಳು!
ಇದು ಹೀಗೆಯೇ ಆಗಬೇಕು. ನೀವು ನಿಮ್ಮ ಭೂತದ ಬದುಕಿನ ಮೇಲೆ ನಿಂತಿರುವಿರಿ. ನಿಮ್ಮ ತಂದೆ, ನಿಮ್ಮ ತಾತ, ಮುತ್ತಾತ, ಆತ ಆತನ ತಂದೆಯ ಮೇಲೆ ಹೀಗೆಯೇ… ನೀವು ಎಂದಿಗೂ ಮೊಟ್ಟಮೊದಲ ಬಾರಿಗೆ ನಾನು ಇಲ್ಲಿಗೆ ಬಂದೆ ಎಂಬುದನ್ನು ಹೇಳಲಾರಿರಿ. ನಿಮ್ಮ ಬಳಿ ಮೂರ್ಖತನಗಳನ್ನು ಕೊನೆಗಾಣಿಸುವ ಯಾವ ಸಾಧ್ಯತೆಯೂ ಇಲ್ಲ. ಇರುವ ಒಂದೇ ದಾರಿ ಅಂದರೆ ಅವು ಮೂರ್ಖತನಗಳು ಎಂಬ ಅರಿವುಂಟಾದಾಗ ಮಾತ್ರ. ಆ ಅರಿವಿನಲ್ಲಿ ಮೂರ್ಖತನಗಳು ಹಾಗೆಯೇ ಕರಗಲಾರಂಭಿಸುವುವು.
***
ಹೊರಹೋಗುವ ಬಾಗಿಲು ಎಲ್ಲಿದೆ?
ಒಬ್ಬ ಸಾಧು ಇದ್ದ. ಒಂದು ಮಧ್ಯಾಹ್ನ ಆತ ಧ್ಯಾನದಿಂದ ಎಚ್ಚೆತ್ತಾಗ ಒಬ್ಬ ವ್ಯಕ್ತಿ ಸಮೀಪ ಕುಳಿತಿರುವುದು ಕ೦ಡಿತು. ಸಾಧು ಹತ್ತಿರ ಕರೆದು ವಿಚಾರಿಸಿದ. ಆ ವ್ಯಕ್ತಿ ತನಗೆ ಬದುಕಿನಲ್ಲಿ ಬಹಳ ಕಷ್ಟಗಳಿರುವುದಾಗಿ ಹೇಳಿ ಅವುಗಳನ್ನು ಪರಿಹರಿಸುವಂತೆ ಬೇಡಿಕೊಂಡ.
ಒಂದು ನಿಮಿಷ ಮೌನವಾದ ಸಾಧು ಆತನಿಗೆ ಹೇಳಿದ, ‘ಇಂದೇನೋ ನಿನ್ನ ಕಷ್ಟ ಪರಿಹರಿಸಬಹುದು. ಆದರೆ ನಾಳೆ ಹೊಸ ಕಷ್ಟ ಬರುತ್ತದೆ, ಆಗಲೂ ನಾನು ಪರಿಹರಿಸುತ್ತೇನೆ ಎಂದಿಟ್ಟುಕೋ, ಒಂದು ದಿನ ನಾನೇ ಇಲ್ಲವಾಗಬಹುದು, ಆಗ ನಿನ್ನ ಗತಿಯೇನು?’ ಎಂದು ಕೇಳಿದ. ಆ ವ್ಯಕ್ತಿಯಲ್ಲಿ ಮಾತುಗಳಿರಲಿಲ್ಲ.
ಸಾಧು ಮುಂದುವರಿಸಿದ, ‘ಹಿಂದೆ ಒಬ್ಬ ಕಣ್ಣು ಕಾಣದ ವ್ಯಕ್ತಿ ನನ್ನ ಬಳಿ ಬಂದಿದ್ದ. ಹೋಗುವಾಗ ಈ ಕೋಣೆಯಿಂದ ಹೊರಹೋಗುವ ಬಾಗಿಲು ಎಲ್ಲಿದೆ ಅಂತ ಕೇಳಿದ. ನಾನೇನೋ ತೋರಿಸಬಲ್ಲೆ. ಆದರೆ ಆತ ಹೋಗುವ ಮನೆಗಳಲ್ಲೆಲ್ಲ ಇದೇ ಪ್ರಶ್ನೆ ಕೇಳಿದರೆ, ಕೆಲವೊಮ್ಮೆ ಆತ ಮನೆಯಿಂದ ಕೊನೆಯವನಾಗಿ ಹೊರಬಂದರೆ, ಅದಕ್ಕೆ ನಾನವನಿಗೆ ಬಾಗಿಲು ತೋರಿಸುವ ಬದಲು, ಕಣ್ಣಿಗೆ ಚಿಕಿತ್ಸೆ ಕೊಟ್ಟು ಕಾಣುವಂತೆ ಮಾಡಿದೆ. ಈಗ ಹೇಳು ನಿನಗೂ ಹೊರಹೋಗುವ ಬಾಗಿಲು ಎಲ್ಲಿದೆ ಎಂದು ಹೇಳಲೇ?’ ಎಂದರು.
ಆ ಸಾಧುವಿನ ಮಾರ್ಗದರ್ಶನದಲ್ಲಿ ಆತ ಅಂತಃದೃಷ್ಟಿಯಿಂದ ಸಮಸ್ಯೆಯನ್ನು ನೋಡಿ ಅದನ್ನು ಪರಿಹರಿಸುವ ಬಗೆಯನ್ನು ಕಂಡುಕೊಂಡ.
***
ಖಾಲಿ ದೋಣಿಯ ಕಥೆ
ಆಗ ಮಳೆಗಾಲ, ನದಿಯೊಂದು ತುಂಬಿ ಹರಿಯುತ್ತಿತ್ತು. ಪುಟ್ಟ ದೋಣಿಯೊಂದು ನದಿಯಲ್ಲಿ ಹೋಗುತ್ತಿತ್ತು. ಮಳೆ ಬಿಟ್ಟು ಬಹಳ ಹೊತ್ತಾಗಿದ್ದಕ್ಕೋ ಏನೋ ಹೊಳೆ ಪ್ರಶಾಂತವಾಗಿತ್ತು. ಒಂದಿಷ್ಟು ದೂರ ಚಲಿಸಿದ ನಂತರ ಈ ದೋಣಿಗೆ ಎದುರಾಗಿ ಮತ್ತೊಂದು ದೋಣಿ ಬಂತು. ತುಸುವೇ ಅಂತರದಲ್ಲಿ ಎರಡೂ ಮುಖಾಮುಖಿಯಾದವು. ಎದುರಿದ್ದ ದೋಣಿ ಬಂದು ಇದಕ್ಕೆ ಹೊಡೆಯಿತು. ತಕ್ಷಣ ಈ ದೋಣಿಯಲ್ಲಿದ್ದವ ಎದ್ದು ಆ ದೋಣಿಯ ಮೇಲೆ ಜಿಗಿದ. ಅದರಲ್ಲಿ ಯಾರಿದ್ದಾರೆ ಅಂತ ಹುಡುಕಿದ. ನಾವೆ ನಿರ್ಮಾನುಷವಾಗಿತ್ತು. ಆತ ಪುನಃ ತನ್ನ ದೋಣಿಗೆ ಜಿಗಿದು ಮೌನವಾಗಿ ಮುಂದಕ್ಕೆ ಹೋದ.
***
ಸಂತನ ಮನಸ್ಸು
ಒಮ್ಮೆ ಝೆನ್ ಮಾಸ್ಟರ್ ಬೋಕೊಜೋ ಒಂದು ಹಳ್ಳಿಯ ರಸ್ತೆಯಲ್ಲಿ ಪ್ರಯಾಣ ಮಾಡುತ್ತಿದ್ದಾಗ ಯಾರೋ ಒಬ್ಬ ಅಚಾನಕ್ ಆಗಿ ಎದುರಾಗಿ ಮಾಸ್ಟರ್ ನ ಬೆನ್ನ ಮೇಲೆ ಜೋರಾಗಿ ಕೋಲಿನಿಂದ ಪ್ರಹಾರ ಮಾಡಿದ. ಆ ಹೊಡೆತಕ್ಕೆ ಆಯ ತಪ್ಪಿ ಬೋಕೊಜೋ ಕೆಳಗೆ ಬಿದ್ದ, ಕೋಲು ಕೂಡ ಹೊಡೆದವನ ಕೈಯಿಂದ ಜಾರಿ ಕೆಳಗೆ ಬಿತ್ತು. ಹೊಡೆದವ ಮಾತ್ರ ಅಲ್ಲಿ ನಿಲ್ಲದೇ ಜೋರಾಗಿ ಓಡಲು ಶುರು ಮಾಡಿದ. ಮಾಸ್ಟರ್ ಎದ್ದವನೇ ಆ ಕೋಲು ಕೈಗೆತ್ತಿಕೊಂಡು ಹೊಡೆದವನ ಹಿಂದೆ ಓಡತೊಡಗಿದ, “ ನಿಲ್ಲು ನಿಲ್ಲು ನಿನ್ನ ಕೋಲು ತೆಗೆದುಕೊಂಡು ಹೋಗು “ ಕೂಗತೊಡಗಿದ.
ಮಾಸ್ಟರ್ ಓಡಿ ಹೋಗಿ ಅವನನ್ನು ತಡೆದು ನಿಲ್ಲಿಸಿ ಅವನಿಗೆ ಕೋಲು ವಾಪಸ್ ಮಾಡಿದ. ಅಷ್ಟರಲ್ಲಾಗಲೇ ಅಲ್ಲಿ ಜನ ಸೇರತೊಡಗಿದ್ದರು. ಒಬ್ಬ ದಾರಿಹೋಕ ಮಾಸ್ಟರ್ ಬೋಕೊಜು ನ ಪ್ರಶ್ನೆ ಮಾಡಿದ, “ ಮಾಸ್ಟರ್ ಈ ಮನುಷ್ಯ ನಿನಗೆ ಅಷ್ಟು ಜೋರಾಗಿ ಹೊಡೆದ ಆದರೆ ನೀನು ಅವನಿಗೆ ಒಂದು ಮಾತು ಹೇಳಲಿಲ್ಲವಲ್ಲ. “
ಆಗ ಬೋಕೊಜು ಹೇಳಿದನಂತೆ, “ ಇವನು ನನ್ನ ಹೊಡೆದದ್ದು ಮಾತ್ರ ನಿಜ, ಅವ ಹೊಡೆದ ನಾನು ಹೊಡೆಸಿಕೊಂಡೆ ಇದು ಮಾತ್ರ ನಿಜ. ಇದು ಹೇಗೆಂದರೆ ನಾನು ಮರದ ಕೆಳಗೆ ಹಾಯ್ದು ಹೋಗುತ್ತಿದ್ದಾಗ ಅಥವಾ ಮರದ ಕೆಳಗೆ ಕುಳಿತಿದ್ದಾಗ, ಮರದ ರೆಂಬೆಯೊಂದು ಮುರಿದುಕೊಂಡು ನನ್ನ ಮೇಲೆ ಬಿದ್ದಿದ್ದರೆ ನಾನು ಏನು ಮಾಡಬಹುದಾಗಿತ್ತು? “
ಆಗ ನೆರೆದಿದ್ದ ಗುಂಪು ಉತ್ತರಿಸಿತು, “ ಆದರೆ ಮರದ ರೆಂಬೆ ಮತ್ತು ಮನುಷ್ಯ ಎರಡೂ ಒಂದೇ ಅಲ್ಲವಲ್ಲ. ನಾವು ರೆಂಬೆಗೆ ಬೈಯ್ಯಬಹುದೆ? ನೀನು ದುರ್ಬಲ ಮರ ಎಂದು ಮರವನ್ನು ದೂಷಿಸಬಹುದೆ? ನಾವು ಮರ ಅಥವಾ ರೆಂಬೆಗೆ ಯಾವ ಶಿಕ್ಷೆಕೊಡಬಹುದು? ಕೊಟ್ಟರೂ ಏನು ಪ್ರಯೋಜನ? ಅವಕ್ಕೆ ಬುದ್ದಿ -ಮನಸ್ಸು (mind) ಇದೆಯಾ ?
ಮಾಸ್ಟರ್ ಬೋಕೊಜೋ ಉತ್ತರಿಸಿದ, “ ನನಗೆ ಆ ರೆಂಬೆ ಈ ಮನುಷ್ಯ ಎರಡೂ ಒಂದೇ. ನನಗೆ ರೆಂಬೆಗೆ ಬೈಯ್ಯುವುದು ಸಾಧ್ಯವಿಲ್ಲ ಎಂದರೆ, ಈ ಮನುಷ್ಯನಿಗೆ ಬೈಯ್ಯುವುದು ಹೇಗೆ ಸಾಧ್ಯ? ಒಂದು ಘಟನೆ ನಡೆದುಹೋಯಿತು. ಅದೃಷ್ಟಕ್ಕೆ ನನಗೆ ಏನೂ ಆಗಲಿಲ್ಲ. ಆ ಘಟನೆಯ ಬಗ್ಗೆ ಚಿಂತಿಸಿ ಏನು ಪ್ರಯೋಜನ? ಅವನೊಳಗಿನ ಮನುಷ್ಯತ್ವಕ್ಕೆ ಕರೆ ಕೊಡುವುದನ್ನಷ್ಟೇ ನಾನು ಮಾಡಬಹುದಾದದ್ದು. ಅವನ ಪ್ರಜ್ಞೆಯನ್ನು ಎಚ್ಚರಿಸುವುದನ್ನಷ್ಟೇ ನಾನು ಮಾಡಿದ್ಜು. ಇದಕ್ಕೂ ಮೀರಿ ಆದ ಘಟನೆಯ ಬಗ್ಗೆ ಚಿಂತಿಸಿ ಫಲವಿಲ್ಲ.”
ಇದು ಸಂತನ ಮನಸ್ಸು – ಯಾವುದನ್ನೂ ಆಯ್ಕೆ ಮಾಡಿಕೊಳ್ಳದಿರುವುದು, ಯಾವುದನ್ನೂ ಅಪೇಕ್ಷಿಸದಿರುವುದು, ಹೀಗಾಗಬೇಕು ಹೀಗಾಗಬಾರದು ಎಂದು ಚಿಂತಿಸದಿರುವುದು. ಅವನ ಜೊತೆ ಏನೇ ಆದರೂ ಅವನು ಅದನ್ನು ಟೋಟ್ಯಾಲಿಟಿಯಲ್ಲಿ ಸ್ವೀಕರಿಸುತ್ತಾನೆ. ಇಂಥ ಸ್ವೀಕಾರ ಅವನಿಗೆ ಸ್ವಾತಂತ್ರ್ಯವನ್ನು ನೀಡುತ್ತದೆ, ಇಂಥ ಸ್ವೀಕಾರ ಅವನಿಗೆ ಬದುಕನ್ನ ಗ್ರಹಿಸುವ ಸಾಮರ್ಥ್ಯವನ್ನು ನೀಡುತ್ತದೆ. ಆಗಬೇಕು, ಆಗಬಾರದು, ಭಾಗ ಮಾಡುವುದು, ತೀರ್ಪು ಹೇಳುವುದು, ಖಂಡಿಸುವುದು, ಹೊಗಳುವುದು ಎಲ್ಲವೂ ದೃಷ್ಟಿ ದೋಷಗಳು.
(ಸಂಗ್ರಹಾನುವಾದ)
ಚಿತ್ರ ಕೃಪೆ: ಅಂತರ್ಜಾಲ ತಾಣ