ಓ ಆರ್ ಎಸ್ ಕಂಡು ಹಿಡಿದವರು ಯಾರು?

ಓ ಆರ್ ಎಸ್ ಕಂಡು ಹಿಡಿದವರು ಯಾರು?

ಓ ಆರ್ ಎಸ್ (Oral Rehydration Solution-ORS) ದ್ರಾವಣದ ಬಗ್ಗೆ ನಿಮಗೆ ಗೊತ್ತೇ ಇದೆ. ಬಹಳಷ್ಟು ಸಮಯದಲ್ಲಿ ಈ ದ್ರಾವಣ ಹಲವರ ಜೀವ ರಕ್ಷಕವಾಗಿಯೂ ಕೆಲಸ ಮಾಡಿದೆ. ಇದನ್ನು ಮೊದಲು ತಯಾರಿಸಿದವರು ಹೇಮೇಂದ್ರನಾಥ ಚಟರ್ಜಿ ಎಂಬ ಪಶ್ಚಿಮ ಬಂಗಾಳದ ವೈದ್ಯ. ಕಾಲರಾಕ್ಕೆ ತುತ್ತಾದ ರೋಗಿಗಳಿಗೆ ಮೊದಲ ಬಾರಿಗೆ ಓ ಆರ್ ಎಸ್ ಅನ್ನು ತಯಾರಿಸಿ ನೀಡಿದರು. ಇವರು ಒಂದು ಲೀಟರ್ ನೀರಿಗೆ ೨೫ ಗ್ರಾಂ ಗ್ಲೂಕೋಸ್ ಹಾಗೂ ೪ ಗ್ರಾಂ ಉಪ್ಪನ್ನು ಹಾಕಿ ದಾವಣವನ್ನು ಸಿದ್ಧಪಡಿಸಿದರು. ಅದನ್ನು ಕಾಲರಾ ಪೀಡಿತರಿಗೆ ನೀಡಿದರು. ಈ ದ್ರಾವಣವನ್ನು ಕುಡಿದ ಕಾಲರಾ ಪೀಡಿತರು ಚೇತರಿಸಿಕೊಂಡರು. ಈ ಬಗ್ಗೆ ಒಂದು ಲೇಖನವನ್ನು ಬರೆದು ಅದನ್ನು ೧೯೫೩ರಲ್ಲಿ ವಿಶ್ವವಿಖ್ಯಾತ ವೈದ್ಯಕೀಯ ನಿಯತಕಾಲಿಕ ‘ಲ್ಯಾನ್ಸೆಟ್' ಪತ್ರಿಕೆಗೆ ಕಳುಹಿಸಿದರು. ಲೇಖನವು ಪ್ರಕಟವಾಯಿತು. ಅವರ ಅಧ್ಯಯನವು ‘ವೈಜ್ಞಾನಿಕವಾಗಿಲ್ಲ' ಎಂಬ ಹಿನ್ನಲೆಯಲ್ಲಿ ಈ ಶೋಧಕ್ಕೆ ಅಂತಹ ಮಹತ್ವ ದೊರೆಯಲಿಲ್ಲ. 

೧೯೭೧ರಲ್ಲಿ ಭಾರತ-ಪಾಕಿಸ್ತಾನ ಸಮರವು ನಡೆದು ಬಾಂಗ್ಲಾದೇಶವು ಉದಯಿಸಿತು. ಬಾಂಗ್ಲಾ ನಿರಾಶ್ರಿತರ ಸಮಸ್ಯೆ ತೀವ್ರವಾಗಿತ್ತು. ನಿರಾಶ್ರಿತರ ಶಿಬಿರದಲ್ಲಿ ಕಾಲರಾ ಕಾಣಿಸಿಕೊಂಡು, ಸಮಸ್ಯೆಯು ಉಲ್ಬಣಿಸಿತ್ತು. ತೀವ್ರವಾದ ನೀರ್ಕಳೆತಕ್ಕೆ ತುತ್ತಾಗಿದ್ದ ಕಾಲರಾ ಪೀಡಿತರಿಗೆ ನೀಡಲು ತಂದಿದ್ದ ಡ್ರಿಪ್ ಎಲ್ಲಾ ಮುಗಿದುಹೋಗಿತ್ತು. ನೋಡನೋಡತ್ತಿದ್ದಂತೆಯೇ ಜನರು ಸಾಯತೊಡಗಿದರು. ಆಗ ದಿಲೀಪ್ ಮಹಲನೋಬಿಸ್ ಎಂಬ ವೈದ್ಯ ಓ ಆರ್ ಎಸ್ ತಯಾರಿಸಿ ಎಲ್ಲರಿಗೂ ನೀಡುವಂತೆ ಹೇಳಿದ. ಸುಮಾರು ಮೂರು ಸಾವಿರ ಕಾಲರಾ ಪೀಡಿತರು ಓ ಆರ್ ಎಸ್ ದ್ರಾವಣವನ್ನು ಕುಡಿದರು. ಓ ಆರ್ ಎಸ್ ಸೇವಿಸಿದವರಲ್ಲಿ ಸಾವಿನ ಪ್ರಮಾಣ ೩.೬% ಇದ್ದರೆ, ಓ ಆರ್ ಎಸ್ ಸೇವಿಸದವರಲ್ಲಿ ಸಾವಿನ ಪ್ರಮಾಣವು ೩೦ % ರಷ್ಟು ಹೆಚ್ಚಿತ್ತು. ಓ ಆರ್ ಎಸ್ ದ್ರಾವಣವನ್ನು ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಪ್ರಯೋಗಿಸಿ ನೋಡಿದರು. ಓ ಆರ್ ಎಸ್ ನೀರ್ಕಳೆತಕ್ಕೆ ತುತ್ತಾದವರ ಜೀವನವನ್ನು ಉಳಿಸಿತ್ತು. ಓ ಆರ್ ಎಸ್  ಇದುವರೆಗೂ ಅದೆಷ್ಟು ಜನರ ಜೀವವನ್ನು ಉಳಿಸಿದೆಯೋ ಅದು ಲೆಕ್ಕಕ್ಕೇ ಇಲ್ಲ. ಇಷ್ಟು ಜೀವಗಳನ್ನು ಉಳಿಸಿದ, ಉಳಿಸುತ್ತಿರುವ ಹಾಗೂ ಉಳಿಸಲಿರುವ ಓ ಆರ್ ಎಸ್ ಅನ್ನು ಕಂಡು ಹಿಡಿದವರು ಇಂದಿಗೂ ಅನಾಮಧೇಯರಾಗಿಯೇ ಇರುವುದು ನಮ್ಮ ದುರ್ದೈವವೇ ಸರಿ.

(ಮುಂದಿನ ವಾರ: ಮನೆಯಲ್ಲೇ ಓ ಆರ್ ಎಸ್ ತಯಾರಿಕೆ ಹೇಗೆ?)

ಮಾಹಿತಿ: ‘ಸೂತ್ರ’ ಪತ್ರಿಕೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ