"ಓ ನಿನ್ನೆ" ಎಲ್ಲಿ ಹೋದೆ ನೀನು?
ಬರಹ
ಸುಳ್ಳಲ್ಲ ಬಲು ದಿಟವು
ಹಸಿವು ಕಾಡುತಲಿತ್ತು
ಅಪ್ಪ-ಅಮ್ಮನಾ ಬಿಳಿಚಿದಾ ಮುಖದಲ್ಲಿ
ನೋವು ಮನೆ ಮಾಡಿತ್ತು||
ದಿನರಾತ್ರಿ ದುಡಿದರೂ
ಅರೆಹೊಟ್ಟೆ ಅರೆ ಬಟ್ಟೆ
ದುಡಿದುಡಿದು ದೇಹ
ಕೃಷವಾಗಿ ಬಿತ್ತು||
ವಾರಾನ್ನ ಬಿಕ್ಷಾನ್ನ ಊಟಮಾಡಿ
ಗೋಣಿ ಚೀಲವೆ ಸುಪ್ಪತ್ತಿಗೆಯಾಗಿ
ಅವರಿವರು ಕೊಟ್ಟ ಹಳೆಬಟ್ಟೆ ಯುಟ್ಟು
ಓದು ಕಲಿತುದು ತುತ್ತು ಅನ್ನಕಾಗಿ||
ನೋವಿನಲು ನಲಿವಿತ್ತು
ಅನ್ನದಲಿ ರುಚಿ ಇತ್ತು
ಭಾವನೆಗೆ ಮನವು ಬಂಧಿಯಾಗಿತ್ತು
ನಾಳಿನ ನಿರೀಕ್ಷೆಯಲಿ ದಿನಗಳುರುಳಿತ್ತು||
"ಓ ನಿನ್ನೆ" ಎಲ್ಲಿ ಹೋದೆ ನೀನು?
ನಿನ್ನ ನೆನಪಿನಲಿ
ನಗುನಗುತಲೆ ಕಳೆಯುವೆ
ಈ ದಿನವ ನಾನು||