ಔದಾರ್ಯ ಎಂದರೆ ಏನು?!
ಇಂದು ನನ್ನ ಕಕ್ಷಿಗಾರ ಸ್ನೇಹಿತರೋರ್ವರು ನನ್ನಲ್ಲಿ ಮಾತಾನಾಡುತ್ತಾ "ನಿಮ್ಮ ಪ್ರಕಾರ ಔದಾರ್ಯ ಎಂದರೆ ಏನು?!" ಅಂತ ಪ್ರಶ್ನೆ ಮಾಡಿದರು. ನನಗೆ ಬಲು ಇಷ್ಟವಾದ ಪದ ಈ "ಔದಾರ್ಯ". ಒಳ್ಳೆಯ ಪ್ರಶ್ನೆ, ನನ್ನ ನೆಚ್ಚಿನ ಪ್ರಶ್ನೆ ಅಂತ ಮನಸ್ಸಿನೊಳಗೆ ಅಂದುಕೊಂಡೆ! ಮಗುಳ್ನಗು ನನಗರಿವಿಲ್ಲದಂತೆ ನನ್ನ ಮುಖದ ಮೇಲೆ ಮುದ್ರೆಯೊತ್ತಿತ್ತು.
ನನಗೆ ಕೆಲವೊಮ್ಮೆ ಅನ್ನಿಸುವುದು ಈ "ಔದಾರ್ಯ" ಎಂಬ ಒಂದು ಗುಣ ಇಲ್ಲದೆ ಎಷ್ಟೋ ಸಂಬಂಧಗಳು ಹಳ್ಳ ಹಿಡಿದು, ಎಷ್ಟೋ ಸಾಹಸಗಳು ನೆನೆಗುದಿಗೆ ಬಿದ್ದು, ಜೀವನ ಬರೇ ಸಿನಿಕತನ, ಸ್ವಾರ್ಥ, ಸಣ್ಣತನ ಎಂಬಿತ್ಯಾದಿ ಮನುಷ್ಯ ಮಾತ್ರರಿಗೆ ಅನ್ವಯಿಸದ ಗುಣಗಳಿಂದಲೇ ತುಂಬಿ "ಮನುಷ್ಯ" ರೂಪವೇ ಕಾಣದಂತೆ ಮುಚ್ಚಿಬಿಡುತ್ತವಲ್ಲಾ?! ಅಲ್ಲದೇ ಸಾಯುವವರೆಗೂ ಔದಾರ್ಯದ ಗಂಧವನ್ನೇ ಆಸ್ವಾಧಿಸದೆ ಬದುಕು ವ್ಯರ್ಥವಾಗಿ ಬಿಡುತ್ತದಲ್ಲಾ ಅಂತ!
'ಔದಾರ್ಯ' ಎಂಬ ಒಂದು ಒಳ್ಳೆಯ ಗುಣ ಮನುಷ್ಯನನ್ನು ಎಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ, ಎಷ್ಟೊಂದು ಸಮಾಧಾನ, ಸಂತೃಪ್ತಿ, ನೆಮ್ಮದಿಯನ್ನು ಮೊಗೆದೀಯುತ್ತದೆ! ಅದರ ಪೂರ್ಣ ಪರಿಚಯವೇ ಇಲ್ಲದೆ ಮನುಷ್ಯರೆಂದು ಅನ್ನಿಸಿಕೊಳ್ಳುವುದಕ್ಕೂ ನಾಲಾಯಾಕ್ಕಾಗಿ ತೋರುವವರೂ ಇದ್ದಾರೆ! ಅಷ್ಟು ಶಕ್ತಿ, ಅಷ್ಟು ಶೋಭೆ ಔದಾರ್ಯಕ್ಕಿದೆ!
ನಾನೊಂದಷ್ಟು ಯೋಚಿಸಿ ಮಾತಿಗಾಗಿ ಬಾಯಿ ತೆರೆದೆ: "ರಾಮಾಯಣದಲ್ಲಿ ರಾವಣನ ಇಬ್ಬರು ಗುಪ್ತಚರರು, ಶುಕ ಹಾಗೂ ಸಾರಣ, ಲಂಕೆಯ ದಡದಲ್ಲಿ ಬೀಡುಬಿಟ್ಟಿದ್ದ ಶ್ರೀರಾಮ ಸೈನ್ಯದ ಬಲಾಬಲವನ್ನು ತಿಳಿಯಲು ಮಾರುವೇಷದಲ್ಲಿ ಬಂದು ಸಿಕ್ಕಿಬೀಳುತ್ತಾರೆ. ಕಪಿಗಳಿಂದ ಒದೆ ತಿನ್ನುತ್ತಾರೆ. ಆದರೆ ಶ್ರೀರಾಮರು ಅವರನ್ನು ಶಿಕ್ಷಿಸ ಬಾರದೆಂದು ತಡೆದು ತನ್ನ ಕಪಿಸೈನ್ಯದ ಇಂಚಿಂಚನ್ನೂ ಅವರಿಗೆ ಪರಿಚಯಿಸುವಂತೆ ಸುಗ್ರೀವನಾಳುಗಳಿಗೆ ಆಜ್ಞಾಪಿಸುತ್ತಾರೆ! ಇದು ಶ್ರೀರಾಮರ ಔದಾರ್ಯ! ತನ್ನ ಬಲದ ಬಗ್ಗೆ ವಿಶ್ವಾಸವಿರುವಲ್ಲಿರುವ ಔದಾರ್ಯವೇ ಯುದ್ದ ಆರಂಭವಾಗುವ ಮೊದಲೇ ಸೋಲೊಪ್ಪಿಕೊಳ್ಳುವಲ್ಲಿಯೂ ಇರುತ್ತದೆ ಎಂಬಲ್ಲಿ ಔದಾರ್ಯದ ಸೌಂದರ್ಯ ನಿಜವಾಗಿ ಕಾಣದಿರಬಹುದು!(?)
ವೈರಿಯ ಒಳ್ಳೆಯತನವನ್ನು, ನಮಗೆ ನೋವಿತ್ತು ಕೆಟ್ಟದ್ದು ಹಾರೈಸಿದವರ ಒಳ್ಳೆಯ ಗುಣಗಳನ್ನು, ಅವರ ಬಲವನ್ನು ಹಾಡಿ ಹೊಗಳುವುದಿದೆಯಲ್ಲ ಅದು ಔದಾರ್ಯ. Parliamentarian ಅಂತ ಅನ್ನಿಸಿಕೊಳ್ಳಬೇಕಾದರೆ ಆತನ ಎದೆಯಾಳದಲ್ಲಿ ಔದಾರ್ಯದ ದೊಡ್ಡ ನಿಧಿಯೇ ಇರಬೇಕಾಗುತ್ತದೆ!
ಮನುಷ್ಯ ಔದಾರ್ಯದ ಹೆಜ್ಜೆಯಿಟ್ಟಾಗ ಪ್ರಪಂಚವೇ ಅವನ ಹಿಂದೆ ನಿಲ್ಲುತ್ತದೆ! ಔದಾರ್ಯ ಮತ್ತು ಅಹಂಕಾರ(ego) ಒಟ್ಟಿಗಿರಲು ಸಾಧ್ಯವಿಲ್ಲ! ರಾಷ್ಟ್ರಕವಿ ಕುವೆಂಪುರವರು "ನನ್ನ ದೇವರು" ಎಂಬ ಪುಸ್ತಕದಲ್ಲಿ "ತನಗೆ ಕಚ್ಚಿ ಓಡುತ್ತಿರುವ ನಾಗರ ಹಾವಿನ ಹೆಡೆಯ ಸೌಂದರ್ಯವನ್ನು ವರ್ಣಿಸುವುದಿದೆಯಲ್ಲ ಅದು ಔದಾರ್ಯ" ಅಂತ ವಿವರಿಸಿದ್ದನ್ನು ಒಮ್ಮೆ ಓದಿದ ನೆನಪು!" ಅಂತ ಹೇಳಿ ಮಾತು ಮುಗಿಸಿದೆ!
ಅವರಿಗೆಷ್ಟು ಅರ್ಥವಾಯ್ತೋ ಗೊತ್ತಿಲ್ಲ! ಆದರೆ ಅವರ ಮುಖದಲ್ಲೊಂದು ಔದಾರ್ಯದ ನಗುವನ್ನು ಕಂಡೆ!
-”ಮೌನಮುಖಿ” ಉಡುಪಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ