ಔಷಧೀಯ ಗುಣಗಳ ಆಗರ - ಕರಿ ಜೀರಿಗೆ

ಔಷಧೀಯ ಗುಣಗಳ ಆಗರ - ಕರಿ ಜೀರಿಗೆ

ವೈಜ್ಞಾನಿಕವಾಗಿ ನೈಜೆಲ್ಲಾ ಸಟೈವ (Nigella Sativa) ಎಂದೇ ಕರೆಯುವ ಕರಿಜೀರಿಗೆಯು ರನಾಂಕುಲೇಸಿ (Ranunculaceae) ಕುಟುಂಬಕ್ಕೆ ಸೇರಿದ್ದು, ಸಂಬಾರ ಮತ್ತು ಔಷಧಿಯ ಗುಣಗಳನ್ನು ಹೆಚ್ಚು ಒಳಗೊಂಡಿರುತ್ತದೆ. ಇದನ್ನು ಅನೇಕ ಸಾಮಾನ್ಯ ಹೆಸರುಗಳಿಂದ ಕರೆಯಲಾಗುತ್ತದೆ. ಅವುಗಳೆಂದರೆ, ಫೆನಲ್ ಹೂ, ಜಾಯಿಕಾಯಿ ಹೂ, ಕಾಡು ಈರುಳ್ಳಿ ಬೀಜ, ರೋಮನ್ ಕೊತ್ತಂಬರಿ ಎಂದೇ ಹೆಸರುವಾಸಿಯಾಗಿದೆ, ಸಾಮಾನ್ಯವಾಗಿ ಕರಿಜೀರಿಗೆ ಬೀಜವು ನೋಡಲು ಈರುಳ್ಳಿ ಬೀಜವನ್ನೇ ಹೋಲುತ್ತದೆ, ಭಾರತದಲ್ಲಿ ಕರಿಜೀರಿಗೆಯನ್ನು ಕಲೋಂಜಿ ಅಥವಾ ಕಾಲಾ ಜೀರಾ ಎಂದೇ ಕರೆಯಲ್ಪಡುವ ಇದು ನೈರುತ್ಯ ಏಷ್ಯಾ ಮತ್ತು ಮೆಡಿಟರೇನಿಯನ್ ಪ್ರದೇಶದಿಂದ ಹುಟ್ಟಿ ಬಂದಂತಹ ಮಸಾಲೆ ಬೀಜ ಹಾಗೂ ಔಷಧಿ ಸಸ್ಯವಾಗಿದೆ.

ಕರಿ ಜೀರಿಗೆ ಸಸ್ಯವು ಸಾಮಾನ್ಯವಾಗಿ ವಾರ್ಷಿಕ ಗಿಡಮೂಲಿಕೆಯಾಗಿದೆ, ಸಸ್ಯದ ಎತ್ತರವು ೫೦-೭೦ ಸೆಂ.ಮೀ, ಇದು ಗಿಳಿ ಹಸಿರು ಬಣ್ಣದ ಎಲೆಗಳನ್ನು ಹೊಂದಿರುತ್ತದೆ. ಪ್ರಾರಂಭದ ಬೆಳವಣಿಗೆಯಲ್ಲಿ ಇದರ ಎಲೆಗಳು ಕೊತ್ತಂಬರಿ ಸೊಪ್ಪಿನ ಎಲೆಯನ್ನು ಹೋಲುತ್ತದೆ. ಹೂವುಗಳು ಸೂಕ್ಷ್ಮ ತಿಳಿನೀಲಿ ಅಥವಾ ಬಿಳಿಬಣ್ಣದಲ್ಲಿರುತ್ತದೆ. ಈ ಸಸ್ಯವು ೧೦೦ಕ್ಕೂ ಹೆಚ್ಚು ಅಮೂಲ್ಯ ಅಂಶಗಳನ್ನು ಒಳಗೊಂಡಿದೆ, ಕರಿಜೀರಿಗೆ ಬೀಜದಲ್ಲಿ ಸಾಮಾನ್ಯವಾಗಿ ಶೇ. ೦.೫ ರಿಂದ ೧.೫ ರಷ್ಟು ತೈಲವನ್ನು, ಶೇ. ೨೦.೮೫ ಪ್ರೋಟಿನ್, ಶೇ. ೩೮.೨೦ ಕೊಬ್ಬು ಹಾಗೂ ಜೀವಸತ್ವ ಬಿ ಮತ್ತು ಜೀವಸತ್ವ ಇ ಅನ್ನು ಹೊಂದಿರುತ್ತದೆ. ಅತಿ ಮುಖ್ಯವಾಗಿ ಥೈಮೋಕ್ವಿನಾಲ್ ಮತ್ತು ನೈಜೆಲ್ಲಿನ್ ಎಂಬ ಅತ್ಯಮೂಲ್ಯವಾದ ಅಂಶಗಳನ್ನು ಒಳಗೊಂಡಿರುತ್ತದೆ. ಕರಿಜೀರಿಗೆ ಬೀಜವು ಔಷಧಿ ತಯಾರಿಕೆ ಮತ್ತು ಸುಗಂಧ ದ್ರವ್ಯಗಳ ಉದ್ಯಮದಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿರುತ್ತದೆ. ಭಾರತದಲ್ಲಿ ವಾಣಿಜ್ಯ ಬೆಳೆಯಾಗಿ ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ಹಿಮಾಚಲಪ್ರದೇಶ, ಜಾರ್ಕಾಂಡ್, ಅಸ್ಸಾಂ, ಪಶ್ಚಿಮಬಂಗಾಳ ಮತ್ತು ಆಂಧ್ರ ಪ್ರದೇಶದಲ್ಲಿ ಬೆಳೆಯಲಾಗುತ್ತದೆ.

ಔಷಧಿಯ ಗುಣಲಕ್ಷಣಗಳು: ಅಸ್ತಮಾ, ಕೆಮ್ಮು, ಸಂಧಿವಾತ, ಕಾಮಲೆ ಮತ್ತು ಅಧಿಕ ರಕ್ತದೊತ್ತಡದಂತಹ ವಿವಿಧ ಕಾಯಿಲೆಗಳಗೆ ಇದು ಅತ್ಯುತ್ತಮ ನೈಸರ್ಗಿಕ ಪರಿಹಾರವಾಗಿದೆ. ಕರಿ ಜೀರಿಗೆಯ ಬೀಜಗಳನ್ನು ಉಪಯೋಗಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಿ ಮಧುಮೇಹವನ್ನು ತಡೆಗಟ್ಟುತ್ತದೆ. ಕರಿಜೀರಿಗೆಯನ್ನು ಬಳಸುವುದರಿಂದ ಇದರಲ್ಲಿ ಇರುವಂತಹ ಸ್ಯಾಪೋನಿನ್ ಅಂಶವು ದೇಹದಲ್ಲಿನ ವಿಷವನ್ನು ಶುದ್ಧಿಕರಿಸುತ್ತದೆ ಮತ್ತು ತಟಸ್ಥಗೊಳಿಸುತ್ತದೆ. ಪರಾವಲಂಬಿ ಸೋಂಕಿನ ವಿರುದ್ದ ಹೋರಾಡಲು ಕರಿಜೀರಿಗೆಯನ್ನು ಬಳಸಲಾಗುತ್ತದೆ. ಕರಿ ಜೀರಿಗೆ ಎಣ್ಣೆಯನ್ನು ಕೂದಲು ಮತ್ತು ಬೆರಳುಗಳ ಉಗುರುಗಳನ್ನು ಬಲಪಡಿಸಲು ಉಪಯೋಗಿಸುತ್ತಾರೆ. ಕರಿ ಜೀರಿಗೆ ಬೀಜವನ್ನು ಸೇವಿಸುವುದರಿಂದ ತಲೆನೋವು ಮತ್ತು ಹಲ್ಲು ನೋವುಗಳಿಗೆ ಉಪಯುಕ್ತವಾದ ನೋವು ನಿವಾರಕವಾಗಿದೆ. ಕರಿ ಜೀರಿಗೆಯನ್ನು ನಾವು ಸೇವಿಸುವ ಆಹಾರದಲ್ಲಿ ಬಳಕೆ ಮಾಡುವುದರಿಂದ ಹೃದಯಘಾತದಿಂದ ಹಾನಿಯಾಗದಂತೆ ರಕ್ಷಿಸುತ್ತದೆ. ಕರಿ ಜೀರಿಗೆಯನ್ನು ಬಳಸುವುದರಿಂದ ದೇಹದ ತೂಕವನ್ನು ನಿಯಂತ್ರಿಸಿ ಬೆಳವಣಿಗೆಯಲ್ಲಿ ಸಮತೋಲನವನ್ನು ಕಾಪಾಡಬಹುದು.

ಉಪಯೋಗಿಸುವ ವಿಧಾನ: ಒಂದು ಚಮಚ ಕರಿ ಜೀರಿಗೆ ಎಣ್ಣೆಯನ್ನು ಒಂದು ಚಮಚ ಜೇನು ತುಪ್ಪದೊಂದಿಗೆ ಬೆರೆಸಿ ಇದನ್ನು ಪ್ರತಿದಿನ ಒಂದರಿಂದ ಎರಡು ಬಾರಿ ತೆಗೆದುಕೊಳ್ಳಬೇಕು. ಒಂದು ಚಮಚ ಕರಿ ಜೀರಿಗೆ ಬೀಜವನ್ನು ಸ್ವಲ್ಪ ಪ್ರಮಾಣದ ನೀರಿನಲ್ಲಿ ಐದು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿದ ನಂತರ ನೀರನ್ನು ತಂಪುಗೊಳಿಸಿ ಕುಡಿಯುವುದರಿಂದ ಗ್ಯಾಸ್ಟ್ರೀಕ್ ಅನ್ನು ತಡೆಗಟ್ಟಬಹುದು. ಒಂದು ಕಪ್ಪು ಮೊಸರನ್ನು ಒಂದು ಚಮಚ ಕರಿಜೀರಿಗೆ ಎಣ್ಣೆಯೊಂದಿಗೆ ಬೆರೆಸಿ ಪ್ರತಿದಿನ ಎರಡು ಬಾರಿ ಸೇವಿಸುವುದರಿಂದ ಕರುಳು, ಹೊಟ್ಟೆನೋವು ಮತ್ತು ಇತ್ಯಾದಿ ರೋಗಗಳನ್ನು ತಡೆಗಟ್ಟಬಹುದು.

ಬೇಸಾಯ ಕ್ರಮಗಳು: ಮಣ್ಣು: ಈ ಬೆಳೆಗೆ ಮರಳು ಮಿಶ್ರಿತವಾದ ಕಪ್ಪು ಮತ್ತು ಕೆಂಪು ಮಣ್ಣು ಸೂಕ್ತವಾಗಿರುತ್ತದೆ. ರಸಸಾರ ಸರಾಸರಿ ೭.೫-೮ ರವರೆಗೆ ಇರುವ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ.

ಹವಾಗುಣ: ಬೆಳೆಯುವ ಮಾಗುವ ಕಾಲದಲ್ಲಿ ಒಣ ಹವೆ ಅವಶ್ಯಕತೆ ಇರುವುದರಿಂದ ಇದನ್ನು ಸಾಮಾನ್ಯವಾಗಿ ಅಕ್ಟೋಬರ್ ೧೫ ರಿಂದ ನವೆಂಬರ್ ೧೫ ರ ಒಳಗೆ ಬಿತ್ತನೆ ಮಾಡಲಾಗುವುದು. ತಾಪಮಾನ ೨೮-೪೦ ಡಿಗ್ರಿ ಬೆಳವಣಿಗೆಗೆ ಸೂಕ್ತವಾಗಿರುತ್ತದೆ.

ಬಿತ್ತನೆ ಸಮಯ: ಉತ್ತರ ಭಾರತದಲ್ಲಿ ಕಪ್ಪು ಜೀರಿಗೆಯನ್ನು ಅಕ್ಟೋಬರ್ ೧೫ ರಿಂದ ನವೆಂಬರ್ ೧೫ ರ ವರೆಗೆ ಬಿತ್ತನೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಬೀಜವು ಪ್ರತಿ ಹೆಕ್ಟೆರ್‌ಗೆ ೬-೮ ಕೆ.ಜಿ ಬೇಕಾಗುತ್ತದೆ.

ಅಂತರ: ಕರಿಜೀರಿಗೆಯನ್ನು ಸಾಲಿನಿಂದ ಸಾಲಿಗೆ ೩೦ ಸೆಂ.ಮೀ ಗಿಡದಿಂದ ಗಿಡಕ್ಕೆ ೧೫ ಸೆಂ.ಮೀ ಅಂತರದಲ್ಲಿ ಬಿತ್ತನೆ ಮಾಡಲಾಗುತ್ತದೆ. ಬಿತ್ತನೆ ಮಾಡಿದ ೧೦-೧೧ ದಿನಗಳಲ್ಲಿ ಮೊಳಕೆಯೊಡೆಯಲು ಪ್ರಾರಂಭಿಸುತ್ತದೆ.

ಗೊಬ್ಬರ: ನಾಟಿಗೆ ಮುಂಚಿತವಾಗಿ ಪ್ರತಿ ಹೆಕ್ಟರ್‌ಗೆ ೩೦ ಟನ್ ಕೊಟ್ಟಿಗೆ ಗೊಬ್ಬರವನ್ನು ಉಳುಮೆ ಸಮಯದಲ್ಲಿ ಮಿಶ್ರಣ ಮಾಡಬೇಕು ೪೦:೨೦:೩೦ ಕೆ.ಜಿ ಸಾರಜನಕ, ರಂಜಕ, ಪೊಟಾಷ್ ಅನ್ನು ನಾಟಿ ಮಾಡಿದ ೫೦ ದಿನಗಳ ನಂತರ ಮತ್ತು ಕಾಯಿಯಲ್ಲಿ ಬೀಜಗಳು ಅಭಿವೃದ್ಧಿ ಹೊಂದುವ ಸಮಯದಲ್ಲಿ ನೀಡುವುದು ಸೂಕ್ತ.

ನೀರಾವರಿ: ಈ ಸಸ್ಯವು ಅತಿ ಕಡಿಮೆ ನೀರನ್ನು ಬಯಸುತ್ತದೆ. ಪ್ರತಿ ಹದಿನೈದು ದಿನಕ್ಕೊಮ್ಮೆ ನೀರು ಹಾಯಿಸುವುದು ಸೂಕ್ತ ಮತ್ತು ಕಾಯಿ ಕಟ್ಟುವ ಸಮಯದಲ್ಲಿ ನೀರನ್ನು ಹಾಯಿಸುವುದರಿಂದ ಬೀಜಗಳು ಚೆನ್ನಾಗಿ ಅಭಿವೃದ್ಧಿ ಹೊಂದುತ್ತವೆ.

ಕೊಯ್ಲು: ಕರಿ ಜೀರಿಗೆಯು ಬಿತ್ತನೆಯಾದ ೧೪೦-೧೬೦ ದಿನಗಳ ನಂತರ ಕಟಾವಿಗೆ ಬರುತ್ತದೆ. ಕೊಯ್ಲಿನ ಸಮಯದಲ್ಲಿ ಕಾಯಿ ಮತ್ತು ಎಲೆಭಾಗವು ಕಂದು ಬಣ್ಣ ಹೊಂದಿದ್ದು, ಕಾಯಿಯ ಒಳಭಾಗದಲ್ಲಿರುವ ಬೀಜಗಳು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಸಾಮಾನ್ಯವಾಗಿ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಕರಿಜೀರಿಗೆ ಕೊಯ್ಲಿಗೆ ಬರುತ್ತದೆ. ಕೊಯ್ಲಾದ ನಂತರ ಕಾಯಿಯನ್ನು ಎರಡು ದಿನಗಳ ಕಾಲ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸುವುದರಿಂದ ಉತ್ತಮ ಗುಣಮಟ್ಟದ ಬೀಜಗಳನ್ನು ಪಡೆಯಬಹುದು. ಪ್ರತಿ ಹೆಕ್ಟೆರ್‌ಗೆ ೮-೧೦ ಕ್ವಿಂಟಾಲ್ ಬೀಜವನ್ನು ಇಳುವರಿಯಾಗಿ ಪಡೆಯಬಹುದು.

ಚಿತ್ರ ಮತ್ತು ಮಾಹಿತಿ ಸಹಕಾರ: ಕಿರಣ್ ಎಂ. ಆರ್ ಮತ್ತು ಡಾ. ಭರತ್‌ಕುಮಾರ್ ಟಿ. ಪಿ. ಮೂಡಿಗೆರೆ.