ಔಷಧೀಯ ಸಸ್ಯ ಸಂಪತ್ತು

ಔಷಧೀಯ ಸಸ್ಯ ಸಂಪತ್ತು

ಪುಸ್ತಕದ ಲೇಖಕ/ಕವಿಯ ಹೆಸರು
ಪಿ. ಎಸ್. ವೆಂಕಟರಾಮ ದೈತೋಟ
ಪ್ರಕಾಶಕರು
ವಿವೇಕಾನಂದ ಸಂಶೋಧನಾ ಕೇಂದ್ರ, ಪುತ್ತೂರು, ದಕ್ಷಿಣ ಕನ್ನಡ
ಪುಸ್ತಕದ ಬೆಲೆ
ರೂ. 500/-

ಇದು ಭಾರತದ ಪಾರಂಪರಿಕ ಔಷಧೀಯ ಸಸ್ಯಜ್ನಾನವನ್ನು ಭಟ್ಟಿ ಇಳಿಸಿದ ಪುಸ್ತಕ; ಪಾಣಾಜೆಯ ಪಾರಂಪರಿಕ ಮೂಲಿಕಾ ವೈದ್ಯರಾಗಿದ್ದ ಪಿ. ಎಸ್. ವೆಂಕಟರಾಮ ದೈತೋಟ ಅವರ ಜೀವಮಾನದ ತಪಸ್ಸಿನ ಫಲ ಇದು.

ಈ ಪುಸ್ತಕದಲ್ಲಿದೆ 280 ಜನೋಪಯೋಗಿ ಔಷಧೀಯ ಸಸ್ಯಗಳ ಅಪೂರ್ವ ಜ್ನಾನಭಂಡಾರ. ಪ್ರತಿಯೊಂದು ಔಷಧೀಯ ಸಸ್ಯದ ಬಗ್ಗೆ ಮೂರು ವಿಭಾಗಗಳಲ್ಲಿ ಮಾಹಿತಿ ನೀಡಲಾಗಿದೆ: ಸಸ್ಯದ ಹೆಸರುಗಳು, ಮೂಲಿಕಾ ಪರಿಚಯ, ಉಪಯೋಗಗಳು. ಜೊತೆಗೆ ಸಸ್ಯದ ಗುರುತು ಹಿಡಿಯಲು ಸಹಾಯವಾಗಲಿಕ್ಕಾಗಿ ಲೇಖಕರೇ ಚಿತ್ರಿಸಿರುವ ಸಸ್ಯದ ರೇಖಾ ಚಿತ್ರಗಳು.

ಪುಸ್ತಕದ ಆರಂಭದಲ್ಲಿ ಪರಿಣತರು ಬರೆದಿರುವ ನಾಲ್ಕು ಮಾಹಿತಿಪೂರ್ಣ ಲೇಖನಗಳಿವೆ:
(1) ಸಸ್ಯಶಾಸ್ತ್ರ ಪರಿಚಯ - ಡಾ. ಎಸ್. ಶಂಕರ ಭಟ್
(2) ಮೂಲಿಕೆ ಬಳಕೆಯ ಮೈಲಿಗಲ್ಲುಗಳು - ಡಾ. ಸತ್ಯನಾರಾಯಣ ಭಟ್ ಪಿ.
(3) ಭಾರತೀಯ ಸಸ್ಯ ಶಾಸ್ತ್ರ ಪರಂಪರೆ - ವಿ. ವಿ. ಭಟ್
(4) ಮೂಲಿಕಾ ತಜ್ನ ವೆಂಕಟರಾಮ ದೈತೋಟ - ಶ್ರೀಪಡ್ರೆ
(5) ಔಷಧೀಯ ಸಸ್ಯ ಸಂಪತ್ತು - ಪಿ. ಎಸ್. ವೆಂಕಟರಾಮ ದೈತೋಟ

ಕನ್ನಡ ನಾಡಿನ ಜನಪ್ರಿಯ ಕೃಷಿಮಾಸಿಕ “ಅಡಿಕೆ ಪತ್ರಿಕೆ”ಗೆ 29 ವರುಷ ಪ್ರತಿ ತಿಂಗಳು “ಮನೆಮದ್ದು" ಅಂಕಣ ಬರೆಯುತ್ತಿದ್ದ ದೈತೋಟರು 21-7-2017ರಂದು ನಿಧನರಾದರು. ಅವರು ಇಂಜಿನಿಯರಿಂಗ್ ಪದವೀಧರರು. ವೃತ್ತಿಯನ್ನೇ ತ್ಯಜಿಸಿ, ತಮ್ಮ ಕುಟುಂಬದ ಪರಂಪರಾಗತ ಮೂಲಿಕಾ ಚಿಕಿತ್ಸೆ  ಮುಂದುವರಿಸಲಿಕ್ಕಾಗಿ ತಮ್ಮೂರು ಪಾಣಾಜೆಗೆ ಮರಳಿ, ದಶಕಗಳಿಂದ ಅಲ್ಲೇ ನೆಲೆಸಿದ್ದರು. ಆಯುರ್ವೇದ ಮತ್ತು ಮೂಲಿಕಾ ಚಿಕಿತ್ಸೆಯಲ್ಲಿ ಅಗಾಧ ಅನುಭವ ಹೊಂದಿದ್ದ ತಂದೆ ಪಂಡಿತ ಶಂಕರನಾರಾಯಣ ಭಟ್ಟ ಅವರಿಂದ ಚಿಕಿತ್ಸಾ ವಿಧಾನಗಳನ್ನು ಕಲಿತು, 1977ರಿಂದ ಸ್ವತಃ ಚಿಕಿತ್ಸೆ ನೀಡಲು ಶುರು ಮಾಡಿದರು. ಆಲೋಪಥಿ ಪದ್ಧತಿಯಲ್ಲಿಯೂ ಗುಣವಾಗದಿದ್ದ ಹಲವಾರು ಅನಾರೋಗ್ಯಗಳನ್ನು ತಮ್ಮ ಚಿಕಿತ್ಸೆಯಿಂದ ಗುಣಪಡಿಸಿದ್ದರು. ಉದಾಹರಣೆಗೆ, ವಸಡುಗಳಿಂದ ರಕ್ತ ಸುರಿಯುವ ಸಮಸ್ಯೆ. ಆದ್ದರಿಂದಲೇ ಕರ್ನಾಟಕ ಮಾತ್ರವಲ್ಲ, ಕೇರಳ, ಆಂಧ್ರಪ್ರದೇಶ, ತಮಿಳ್ನಾಡು ಇತ್ಯಾದಿ ರಾಜ್ಯಗಳಿಂದಲೂ ಅನೇಕ ರೋಗಿಗಳು ಪಾಣಾಜೆಗೆ ಬಂದು ಅವರಿಂದ ಚಿಕಿತ್ಸೆ ಪಡೆಯುತ್ತಿದ್ದರು.

ಸಸ್ಯಗಳ ಬಗ್ಗೆ ಅವರು “ನಡೆದಾಡುವ ವಿಶ್ವಕೋಶ” ಎಂದೇ ಖ್ಯಾತರು. ಸಾವಿರಕ್ಕೂ ಮಿಕ್ಕಿ ಸಸ್ಯಗಳನ್ನು ಗುರುತಿಸಿ, ಅವುಗಳ ಗುಣಲಕ್ಷಣಗಳ ಹಾಗೂ ಔಷಧೀಯ ಪ್ರಯೋಜನಗಳ ಬಗ್ಗೆ ನಿರರ್ಗಳವಾಗಿ ತಿಳಿಸಬಲ್ಲವರು. ಆಹಾರ, ಆರೋಗ್ಯ, ಗಿಡಮೂಲಿಕೆಗಳ ಬಗ್ಗೆ ನಿರಂತರವಾಗಿ ಉಪನ್ಯಾಸ ನೀಡುತ್ತಾ, ಕಾರ್ಯಾಗಾರಗಳನ್ನು ನಡೆಸುತ್ತಾ ಸಾವಿರಾರು ಜನರಿಗೆ ತಮ್ಮ ಅಮೂಲ್ಯ ಪಾರಂಪರಿಕಾ ಜ್ನಾನವನ್ನು ಧಾರೆ ಎರೆದಿದ್ದರು. 1996ರಲ್ಲಿ ಪುತ್ತೂರಿನಲ್ಲಿ ಜರಗಿದ ವಿಶ್ವ ಹವ್ಯಕ ಸಮ್ಮೇಳನದಲ್ಲಿ 1008 ಗಿಡಮೂಲಿಕೆಗಳನ್ನು ಪ್ರದರ್ಶಿಸಿದ್ದು ಅವರ ಸಾಧನೆ.

ಅವರು ಭಾನುವಾರ ಮಾತ್ರ ಪಾಣಾಜೆಯ ತಮ್ಮ ಮನೆಯಲ್ಲಿ ಚಿಕಿತ್ಸೆಗೆ ಲಭ್ಯವಿರುತ್ತಿದ್ದರು. ವಾರದ ಇತರ ದಿನಗಳು ಅಧ್ಯಯನ, ಶಿಬಿರಗಳು, ಲೇಖನ ಬರಹ ಮತ್ತು ಸಸ್ಯಗಳ ಹುಡುಕಾಟಕ್ಕೆ ಮೀಸಲು. ಅವರು ಚಿಕಿತ್ಸೆಗೆ ಯಾರಿಂದಲೂ ಶುಲ್ಕ ಪಡೆದವರಲ್ಲ. ಅವರದು ಉಚಿತ ಸೇವೆ. ರೋಗಿಗಳಿಗೆ ಔಷಧಿ ಮತ್ತು ತಯಾರಿ ವಿಧಾನವನ್ನು ಬರೆದೇ ಕೊಡುತ್ತಿದ್ದರು. ಅವರ ರೋಗ ಪತ್ತೆ ವಿಧಾನ ವಿಶಿಷ್ಟ. ರೋಗಿಯನ್ನು ಮೈಮುಟ್ಟಿ ಪರೀಕ್ಷಿಸುತ್ತಿರಲಿಲ್ಲ. ಅವರ ಮುದ್ರಿತ ಪ್ರಶ್ನಾವಳಿಗೆ ರೋಗಿ ಉತ್ತರ ಬರೆದು ಕೊಡಬೇಕಾಗಿತ್ತು; ಅದನ್ನು ಓದಿಯೇ ರೋಗಮೂಲ ಪತ್ತೆ ಮಾಡುವ ಕ್ರಮ. ಚಿಕಿತ್ಸೆಗೆ ಕಡುಪಥ್ಯ ಸೂಚಿಸುತ್ತಿದ್ದರು. ಪ್ರಾಕೃತಿಕ ಆಹಾರವೇ ಉತ್ತಮ ಎಂದು ನಂಬಿದ್ದ ದೈತೋಟರ ಅನುಸಾರ, “ರೋಗಗಳೆಲ್ಲಾ ನಮ್ಮ ಆಹಾರ ವಿಧಾನದಿಂದ ಬರುತ್ತವೆ. ಈಗ ಲಭ್ಯವಿರುವ ಆಹಾರ ವಸ್ತುಗಳೆಲ್ಲಾ ವಿಷಮಯ. ಆದ್ದರಿಂದ ನಮ್ಮ ಆಹಾರ ವಿಧಾನವೇ ಬದಲಾಗಬೇಕು. ಮನುಷ್ಯ ಮತ್ತು ಪ್ರಕೃತಿಯ ಸಂಬಂಧ ದೂರವಾದುದೇ ಇಂದಿನ ರೋಗಗಳಿಗೆ ಮೂಲ ಕಾರಣ.”