ಔಷಧೀಯ ಸಸ್ಯ

Submitted by addoor on Thu, 02/23/2017 - 08:54

ಅಮೃತ ಬಳ್ಳಿ
ಸಸ್ಯ ಶಾಸ್ತ್ರೀಯ ಹೆಸರು: Tinospora cordifolia
ಸಂಸ್ಕೃತ: ಗುಡೂಚಿ     ತೆಲುಗು: ತಿಪ್ಪ ತೇಗ 
ತಮಿಳು: ಸಿಂದಿಲಕೊಡ
 
ಮೂರು ವರುಷಗಳ ಮುಂಚೆ, ಕರಾವಳಿ ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಚಿಕೂನ್ಗೂನ್ಯ ಕಾಯಿಲೆ ಹರಡಿದಾಗ ಅಮೃತ ಬಳ್ಳಿಯ ಕಷಾಯ ಕುಡಿದು ಸಾವಿರಾರು ಜನರಿಗೆ ಶರೀರದ ಗಂಟುಗಳ ನೋವು ಶಮನ. ಅಮೃತ ಬಳ್ಳಿ ಹದವಾದ ಬಿಸಿಲಿರುವ ಜಾಗದಲ್ಲಿ ಸೊಂಪಾಗಿ ಬೆಳೆದು ಹಬ್ಬುವ ಬಳ್ಳಿ. ಹಸುರು ಬಣ್ಣದ ಹೃದಯಾಕಾರದ ಮೃದುವಾದ ಎಲೆಗಳು. ಇದರ ಕಾಂಡದ ಮೇಲೆ ತೆಳು ಪೊರೆ. ಕಾಂಡದ ಭಾಗಗಳು ೪ – ೫ ಅಡಿ ಉದ್ದದ ದಾರಗಳಂತೆ ಜೋತು ಬೀಳುವುದು ಇದರ ವಿಶೇಷ. ಎಲೆ ಹಾಗೂ ಕಾಂಡ ಮುರಿದರೆ “ಹಾಲು” ಹೊರಬರುತ್ತದೆ. ಗುಂಪುಗುಂಪಾದ ಹಸುರು ಬಣ್ಣದ ಹೂಗಳು. ಕೊತ್ತಂಬರಿ ಗಾತ್ರದ ಗೊಂಚಲು ಕಾಯಿಗಳ ಬಣ್ಣ ಆರಂಭದಲ್ಲಿ ಹಸುರು, ಅನಂತರ ಕೆಂಪು. ಈ ಬಳ್ಳಿಯ ಎಲೆ, ಕಾಂಡ, ಬೇರು ಕಹಿ. ಇದರ ಎಲೆ ಅಥವಾ ಕಾಂಡದ ಕಷಾಯ ಅಥವಾ ಪುಡಿ, ಜ್ವರ, ಸಂಧಿವಾತ, ಸಕ್ಕರೆಕಾಯಿಲೆ, ಮೂಲವ್ಯಾಧಿ, ಚರ್ಮರೋಗ, ವಾಂತಿ, ಹೊಟ್ಟೆಉರಿ, ಬಹುಮೂತ್ರ ಚಿಕಿತ್ಸೆಗೆ ಸಹಕಾರಿ. ಜ್ವರ ಮತ್ತು ಸಕ್ಕರೆ ಕಾಯಿಲೆ: ಎರಡು ಲೋಟ ನೀರಿಗೆ, ೨ – ೩ ಇಂಚು ಉದ್ದದ, ಬೆರಳು ದಪ್ಪದ ನಾಲ್ಕೈದು ಕಾಂಡದ ತುಂಡು ಹಾಕಿ, ಕುದಿಸಿ, ಕಷಾಯ ಮಾಡಿ ದಿನಕ್ಕೆ ೨ – ೩ ಸಲ ಕುಡಿಯಬೇಕು. ಹೊಟ್ಟೆ ಉರಿ: ಎಲೆಗಳಿಂದ ೨ ಟೀ-ಚಮಚ ರಸ ತೆಗೆದು, ಚಿಟಿಕೆ ಓಂ ಪುಡಿ ಸೇರಿಸಿ ಕುಡಿಯಬೇಕು. ವಾಂತಿ, ವಾಕರಿಕೆ: ೨೫ ಗ್ರಾಮ್ ಕಾಂಡ ಅರೆದು, ಅದಕ್ಕೆ ಮೂರು ಲೋಟ ನೀರು ಸೇರಿಸಿ ಕಷಾಯ ಮಾಡಬೇಕು. ಒಂದು ಲೋಟ ಕಷಾಯಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ದಿನಕ್ಕೆ ೩ ಸಲ ಕುಡಿಯಬೇಕು. ಶರೀರದಲ್ಲಿ ಏಳುವ ಪಿತ್ತದ ಗಂಧೆಗಳು: ಅಮೃತಬಳ್ಳಿ ಎಲೆ, ಸಾಸಿವೆ, ಶ್ರೀಗಂಧದ ಚಕ್ಕೆ – ಇವನ್ನು ಸಮತೂಕದಲ್ಲಿ ಎಮ್ಮೆಯ ಹಾಲಿನಲ್ಲಿ ಅರೆದು ಪಿತ್ತದ ಗಂಧೆಗಳಿಗೆ ಹಚ್ಚಬೇಕು. ಇದರಿಂದ ತುರಿಕೆ ಹಾಗೂ ಉರಿ ಶಮನ. ರಕ್ತ ಶುದ್ಧಿ: ಮೂರು ಗ್ರಾಮ್ ಕಾಂಡದ ಪುಡಿಗೆ ಜೇನುತುಪ್ಪ ಬೆರೆಸಿ, ೪೦ ದಿನ (ಬೆಳಗ್ಗೆ ಅಥವಾ ರಾತ್ರಿ) ಸೇವಿಸಬೇಕು.
-ಗಾಯ: ಕತ್ತಿ, ಚೂರಿ ಇತ್ಯಾದಿಗಳಿಂದ ಆದ ಗಾಯಕ್ಕೆ ಕಾಂಡದ ತುಂಡು ಅರೆದು ಲೇಪಿಸಬೇಕು.
-ಹೆಂಗಸರ ರಕ್ತಸ್ರಾವ: ೨೦ ಗ್ರಾಮ್ ಹಸಿಕಾಂಡದ ರಸಕ್ಕೆ ಒಂದು ತುಂಡು ಬೆಲ್ಲದ ಚೂರು ಬೆರೆಸಿ, ದಿನಕ್ಕೆ ೨ ಸಲ (ಬೆಳಗ್ಗೆ ಮತ್ತು ರಾತ್ರಿ) ಸೇವಿಸಬೇಕು.
-ಬಹುಮೂತ್ರ: ಒಂದು ಗ್ರಾಮ್ ಕಾಂಡದ ಪುಡಿಯನ್ನು ದನದ ಹಾಲಿನಲ್ಲಿ ಬೆರೆಸಿ, ದಿನಕ್ಕೆ ೨ ಸಲ ಕುಡಿಯಬೇಕು.
(ವಿವಿಧ ಮೂಲಗಳಿಂದ ಚಿಕಿತ್ಸಾ ವಿವರ ಸಂಗ್ರಹ)