ಔಷಧ ಪೂರೈಕೆಯಿಲ್ಲದೆ ಸಂಕಷ್ಟದಲ್ಲಿ ಇ ಎಸ್ ಐ ಆಸ್ಪತ್ರೆ ಬಳಕೆದಾರರು

ರಾಜ್ಯದ ಏಳು 'ಇ ಎಸ್ ಐ' ಆಸ್ಪತ್ರೆ ಹಾಗೂ ೧೧೪ 'ಇ ಎಸ್ ಐ' ಚಿಕಿತ್ಸಾಲಯಗಳಿಗೆ (ಡಿಸ್ಪೆನ್ಸರಿ) ಅಗತ್ಯವಾದ ೫೦೦ಕ್ಕೂ ಹೆಚ್ಚು ಔಷಧಿಗಳ ಖರೀದಿ ಪ್ರಕ್ರಿಯೆ ೧೭ ತಿಂಗಳಿಂದ ನಡೆದೇ ಇಲ್ಲ ಎಂಬ ಸಂಗತಿ ನಿಜಕ್ಕೂ ಆತಂಕಕಾರಿಯಾಗಿದೆ. ಎರಡು ವರ್ಷಗಳಲ್ಲಿ ಕೊರೊನಾ ಸೃಷ್ಟಿಸಿರುವ ತಲ್ಲಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಮೇಲಿನ ಒತ್ತಡ ಎಂಥದ್ದು ಎಂಬುವುದು ಜಗಜ್ಜಾಹೀರಾಗಿದೆ. ಈ ವಿಷಯ ಪರಿಸ್ಥಿತಿಯ ಮಧ್ಯೆಯೇ, ಒಂದೂವರೆ ವರ್ಷದಿಂದ ಔಷಧ ಖರೀದಿ ಪ್ರಕ್ರಿಯೆ ನಡೆದೇ ಇಲ್ಲ ಎಂಬುದು ಯಾವುದೇ ಸರಕಾರಕ್ಕೆ ಶೋಭೆ ತರುವಂತದ್ದಲ್ಲ. ಈ ಬೇಜವಾಬ್ದಾರಿಯ ನಡೆಯಿಂದಾಗಿ ಅಂತಿಮವಾಗಿ, ಇ ಎಸ್ ಐ ಆಸ್ಪತ್ರೆಗಳಿಗೆ ಬರುವ ರೋಗಿಗಳ ಮೇಲಾಗುತ್ತದೆ. ಔಷಧಗಳನ್ನು ಸಕಾಲದಲ್ಲಿ ಅಗತ್ಯವೆನಿಸಿದ ಪ್ರಮಾಣದಲ್ಲಿ ಪಡೆಯಲಾಗದೆ ಪರದಾಡುವಂತಾಗಿದೆ. ವೈದ್ಯರು ಸೂಚಿಸಿದಷ್ಟು ಪ್ರಮಾಣದ ಮಾತ್ರೆ, ಔಷಧ ನೀಡಿಕೆಯಲ್ಲೂ ಚೌಕಾಶಿ ಶುರುವಾಗಿದೆ. ರೋಗಿಗಳು ತೀರಾ ಪ್ರತಿರೋಧ ತೋರಿದರೆ ಖಾಸಗಿ ಔಷಧಾಲಯಗಳಿಂದ ಖರೀದಿ ಬಳಿಕ ಬಿಲ್ ಸಲ್ಲಿಸಿ ವೆಚ್ಚ ಹಿಂಪಡೆಯುವಂತೆ ಸೂಚಿಸಲಾಗುತ್ತಿದೆ. ಇದು ರೋಗಿಗಳನ್ನು ಇನ್ನಷ್ಟು ಕಂಗಾಲಾಗಿಸಿದೆ.
ರಾಜ್ಯದಲ್ಲು ೪೮.೭೫ ಲಕ್ಷ ಇ ಎಸ್ ಐ ಕಾರ್ಡುದಾರರಿದ್ದಾರೆ. ೭ ಆಸ್ಪತ್ರೆ, ೧೧೪ ಚಿಕಿತ್ಸಾಲಯಗಳ ಜತೆಗೆ ಕೇಂದ್ರದ ಇ ಎಸ್ ಐ ನಿಗಮದ ನಿಯಂತ್ರಣದಲ್ಲಿರುವ ೩ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅವಕಾಶವಿದೆ. ರೋಗಿಗಳಿಗೆ ಉಚಿತವಾಗಿ ವಿತರಿಸುವ ಔಷಧಗಳಿಗೆ ತಗಲುವ ಒಟ್ಟು ವೆಚ್ಚದಲ್ಲಿ ಶೇ ೮೫ರಷ್ಟು ಕೇಂದ್ರ ಸರಕಾರ ಹಾಗೂ ಶೇ ೧೫ ರಷ್ಟನ್ನು ರಾಜ್ಯ ಸರಕಾರ ಭರಿಸುತ್ತದೆ. ಆಸ್ಪತ್ರೆ, ಚಿಕಿತ್ಸಾಲಯಗಳು ೬ ತಿಂಗಳಿಗೊಮ್ಮೆ ಅಗತ್ಯವಾದಷ್ಟು ಔಷಧಗಳ ಬೇಡಿಕೆ ಪ್ರಸ್ತಾವ ಸಲ್ಲಿಸುವುದು ವಾಡಿಕೆ. ಆದರೆ ೨೦೨೧ರ ಎಪ್ರಿಲ್ ನಿಂದ ಈವರೆಗೆ ಔಷಧಗಳ ಖರೀದಿ ಪ್ರಕ್ರಿಯೆ ನಡೆದಿಲ್ಲ. ಕೆಲವು ಚಿಕಿತ್ಸಾಲಯ, ಆಸ್ಪತ್ರೆಗಳಿಂದ ಅಸಹಜ ಪ್ರಮಾಣದಲ್ಲಿ ಔಷಧ ಬೇಡಿಕೆ ಪ್ರಸ್ತಾವ ಸಲ್ಲಿಕೆ ಆರೋಪದ ಹಿನ್ನಲೆಯಲ್ಲಿ ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದು, ಔಷಧ ಪೂರೈಕೆ ಯಾವಾಗ ಆಗಲಿದೆ ಎಂಬುದರ ಬಗ್ಗೆ ಈವರೆಗೂ ಸ್ಪಷ್ಟತೆ ಇಲ್ಲ. ಈ ಸಮಸ್ಯೆಗೆ ಮುಖ್ಯ ಕಾರಣ ಎಂದರೆ-ಕೆಲವು ಆಸ್ಪತ್ರೆ, ಚಿಕಿತ್ಸಾಲಯಗಳು ಸಲ್ಲಿಸಿರುವ ಔಷಧ ಬೇಡಿಕೆ ಅಸಹಜವಾಗಿರುವುದು. ಯಾಕೆ ಈ ರೀತಿಯಾಗುತ್ತಿದೆ ಎಂಬುದರ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಇತ್ತೀಚಿನ ಕೆಲವು ವರ್ಷಗಳಲ್ಲಿ ಇ ಎಸ್ ಐ ಆಸ್ಪತ್ರೆಗಳನ್ನು ಜನಸ್ನೇಹಿಯಾಗಿ ಮಾಡಲಾಗಿದೆ. ಹೆಚ್ಚು ಪಾರದರ್ಶಕವಾಗಿಯೂ ಇರುವಂತೆ ನೋಡಿಕೊಳ್ಳಲಾಗಿದೆ. ಜತೆಗೆ, ಅತ್ಯುತ್ತಮ ಚಿಕಿತ್ಸೆಯನ್ನು ಒದಗಿಸುವ ಭರವಸೆ ಹುಟ್ಟು ಹಾಕಲಾಗಿದೆ. ಸಂಬಂಧಿತ ಸಚಿವರು, ಅಧಿಕಾರಿಗಳು ಔಷಧ ಖರೀದಿ ವಿಳಂಬವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಕಾಲಮಿತಿಯೊಳಗೇ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ಒಂದು ವೇಳೆ, ಇಡೀ ವ್ಯವಸ್ಥೆಯಲ್ಲೇ ತಪ್ಪುಗಳಿದ್ದರೆ ಅವುಗಳನ್ನು ಸರಿಪಡಿಸುವ ಕೆಲಸವನ್ನು ಕೂಡಲೇ ಮಾಡಲೇಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳೂ ಈ ವಿಷಯದಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವ ಅಗತ್ಯವಿದೆ. ಇಲ್ಲದಿದ್ದರೆ, ರೋಗಿಗಳಿಗೆ ಅಗತ್ಯ ಔಷಧಗಳು ಸಿಗದೇ ದುರಂತಗಳು ಸಂಭವಿಸಬಹುದು. ಹಾಗಾಗಿ, ಈ ಕೂಡಲೇ ಎಚ್ಚರಿಕೆ ವಹಿಸುವುದು ಅತ್ಯಗತ್ಯ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೦೨-೦೭-೨೦೨೨
ಚಿತ್ರ ಕೃಪೆ: ಅಂತರ್ಜಾಲ ತಾಣ