ಕಂಗಳ ಬೆಳಗು
‘ಕಂಗಳ ಬೆಳಗು' ಇದು ಬೇಂದ್ರೆ ಮತ್ತು ಮಧುರಚ್ಹೆನ್ನರ ಕಾವ್ಯಗಳಲ್ಲಿವ್ಯಗಳಲ್ಲಿ ಅನುಭಾವ : ತಲನಿಕ ಅಧ್ಯಯನ ಎಂದು ಲೇಖಕರಾದ ಡಾ. ಸತ್ಯಮಂಗಲ ಮಹಾದೇವ ಇವರು ಪುಸ್ತಕದ ಮುಖಪುಟದಲ್ಲೇ ಪ್ರಕಟ ಮಾಡಿದ್ದಾರೆ. ಈ ಅಪರೂಪದ ಪುಸ್ತಕಕ್ಕೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಇದರ ವಿಶ್ರಾಂತ ಕುಲಪತಿಗಳಾದ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಇವರು ಬೆನ್ನುಡಿ ಬರೆದಿದ್ದಾರೆ. ಅವರು ತಮ್ಮ ಮಾತುಗಳಲ್ಲಿ ಹೇಳುವುದು ಹೀಗೆ “ಡಾ. ಸತ್ಯಮಂಗಲ ಮಹಾದೇವ ಇವರ ಕಂಗಳ ಬೆಳಗು ಒಂದು ಅತ್ಯಪೂರ್ವ ವಿಶ್ಲೇಷಣಾತ್ಮಕ ಕೃತಿ. ಬೇಂದ್ರೆ ಮತ್ತು ಮಧುರಚೆನ್ನರ ಕಾವ್ಯಗಳಲ್ಲಿ ಅನುಭಾವದ ನೆಲೆಗಳ ಸ್ವರೂಪವನ್ನು ಈ ಕೃತಿಯು ಪರಿಶೋಧಿಸುತ್ತದೆ. ಡಾ. ಸತ್ಯಮಂಗಲ ಮಹಾದೇವ ನಮ್ಮ ನಡುವಿನ ಸೂಕ್ಷ್ಮಸಂವೇದಿ ಕಾವ್ಯತತ್ವಜ್ಞ. ಹೀಗಾಗಿ ಅವರು ಇಲ್ಲಿ ನಡೆಸಿರುವ ತುಲನಾತ್ಮಕ ಅಧ್ಯಯನ ಚೇತೋಹಾರಿಯಾಗಿದೆ. ಈ ವಿದ್ವದ್ ಮಹಾಪ್ರಬಂಧದಲ್ಲಿ ಅನುಭಾವದ ತಾತ್ವಿಕ ವಿಶ್ಲೇಷಣೆ ಇರುವಂತೆ, ಅನ್ವಯಿಕ ಸಂವಿಶ್ಲೇಷಣೆಯೂ ಉಂಟು. ಬೇಂದ್ರೆ ಮತ್ತು ಮಧುರಚೆನ್ನರ ಕವಿತೆಗಳಲ್ಲಿ ಹುದುಗಿರುವ ಅನುಭಾವದ ಅನ್ವಯಿಕತೆಯನ್ನೂ ತಾತ್ವಿಕತೆಯನ್ನೂ ಸತ್ಯಮಂಗಲ ಮಹಾದೇವ ಸೂಕ್ಷ್ಮವಾಗಿ ಶೋಧಿಸಿ ಸಂವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಪ್ರಾಚ್ಯ ಹಾಗೂ ಪಾಶ್ಚಾತ್ಯ ತತ್ವಜ್ಞಾನದ ಖನಿಗಳನ್ನು ಕುರಿತೇಟಿನಂತೆ ಮಹಾದೇವ ಇಲ್ಲಿ ಸೆರೆಹಿಡಿದಿದ್ದಾರೆ. ಇದೊಂದು ಅನುಭಾವ ಸಾಹಿತ್ಯಕ್ಕೆ ಮಹತ್ತರ ಕೊಡುಗೆಯೆಂದೇ ನನ್ನ ನಿಶ್ಚಿತ ನಂಬಿಕೆ.”