ಕಂಗೆಟ್ಟ ಕನಸು
ಕವನ
ಅರಳುವ ಮುನ್ನ ಕಂಗೆಟ್ಟಿದೆ ಕನಸು
ಹೊತ್ತ ಭಾರಕೆ ಕುಬ್ಜವಾಗಿದೆ ಮನಸು
ಕರಗಳ ತಲುಪಿಲ್ಲ ಪುಸ್ತಕದ ಬೆರಗು
ಬೆಳಗಾದರೆ ಕೆಲಸ ಎಳೆದಿದೆ ಸಂಕೋಲೆ ಬಿಡದು.
ನಡೆವ ಹಾದಿ ಕಂಡರಿಯದ ಜನರು
ಗೆಳೆಯರಿಲ್ಲದ ಗಾಯನ ಸೊರಗಿದ ಸ್ವರವು
ರವಿ ಜಾರುವ ಮುನ್ನ ಮಾರಬೇಕಿದೆ ಬಣ್ಣಗಳ
ಬಣ್ಣವಿರದ ಬದುಕಲಿ ಹೇಗೆ ತೆರೆಯಲಿ ಕಣ್ಣುಗಳ?
ಮಾರುವುದೇ ಕೆಲಸ ಕಳೆಯುತಿದೆ ನಿಮಿಷ
ಮಾರಿಹೆ ನನ್ನ ಹೆಸರನೇ ಅಳಿಸಿ
ತೋಚಿದಂತೆ ಕರೆವರು ನನ್ನ ಮಂದಿ
ಧಣಿಗೂ ನಾನೊಬ್ಬ ಸೇವಕನಷ್ಟೇ.
ಗಳಿಸಿದ ಹಣದಿ ದಕ್ಕುವ ಬಿಡಿಗಾಸು
ಮುಚ್ಚದು ಬದುಕಿನ ಜೋಪಡಿಯೇ ತೂತು
ಜೋಪಾನ ಜಾಣ ಎನ್ನುವ ಮಾತುಗಳಿಲ್ಲ
ಬಿದ್ದರೆ ನಾನೇ ಎದ್ದು ಸಾಗುವೆ ಮೆಲ್ಲ.
ಬಲಕಾರ್ಮಿಕ ನಾನು ನನ್ನನೇ ಮರೆತೆ
ರಸ್ತೆಯ ಗುಂಡಿಗಳ ನಡುವೆ ಸೊರಗಿ ಕುಳಿತೆ
ವೇಗವಾಗಿ ಸಾಗುತಿದೆ ಹಲವು ವಾಹನ
ಅಕ್ಷರವರಿಯದೇ ನಿಂತಲ್ಲೇ ನಿಂತೆಹೆನಣ್ಣ.
-ನಿರಂಜನ ಕೇಶವ ನಾಯಕ, ಶಿಕ್ಷಕ, ಮಂಗಳೂರು.
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್