ಕಂಗ್ಲೀಷ್ ನಲ್ಲೆ ಸಾಗಿದೆ ನಮ್ಮಬದುಕು... ಕಲಿಕೆ ಮಾತ್ರ ಬೇಡವೆಂದರೆ ಹೇಗೆ?

ಕಂಗ್ಲೀಷ್ ನಲ್ಲೆ ಸಾಗಿದೆ ನಮ್ಮಬದುಕು... ಕಲಿಕೆ ಮಾತ್ರ ಬೇಡವೆಂದರೆ ಹೇಗೆ?

ಬರಹ

ನಾವಿಂದು ಬದುಕುತ್ತಿರುವ ಕಾಲಘಟ್ಟದಲ್ಲಿ ಮಾಹಿತಿಯ ಮಹಾಪೂರವೇ ಹರಿದಿದೆ. ಹೌದು, ಇದು ಮಾಹಿತಿ ಯುಗ.  ಇದೀಗ ಇಂಗ್ಲಿಷ್ ಅಂತರಾಷ್ಟ್ರೀಯ ಭಾಷೆಯಷ್ಟೇ ಅಲ್ಲ; ಈ ಯುಗದ ಪ್ರವರ್ತಕ ಭಾಷೆಯಾಗಿರುವುದೂ ನಮ್ಮೆಲ್ಲರ ಅರಿವಿಗೆ ಬಂದಿದೆ. ಅಷ್ಟೇ, ನಮ್ಮ ಮಾತೃಭಾಷೆಯ ಅಳಿವು ಉಳಿವಿನ ಪ್ರಶ್ನೆಯೆ ನಮ್ಮನ್ನು ಕಾಡಿದೆ.  ಟಿ.ವಿ.,ಸಿನಿಮಾ ಬಂದು ಕಥಾ ಸಾಹಿತ್ಯಕ್ಕೆ ಬೇಡಿಕೆ ಕುಸಿದಿರಬಹುದಾದರೂ ಅದು ಮತ್ತೆ ಕೆಲವೆಡೆಯಿಂದ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತಿರುವುದನ್ನೂ ನಾವು ಮನಗಾಣುತ್ತಿದ್ದೇವೆ. ಅದಕ್ಕೆ ಸಾಕ್ಷಿಯಾಗಿರುವ ಉದಾಹರಣೆಗಳಲ್ಲಿ ಮಾಹಿತಿ ತಂತ್ರಜ್ಞಾನದ ಇಂತಹ ಕನ್ನಡ ಆನ್ ಲೈನ್ ಬರಹಗಳ ಉಪಯುಕ್ತತೆಗೆ ಕಾರಣವಾದ ಇಂಟರ್ ನೆಟ್ ತಾಣಗಳೂ ಹೌದು. ಹಾಗೆಯೆ  ಇಣುಕು ನೋಟ ಹರಿಸಿದರೆ ಸಾಕು;ನಾವಿಂದು ಒಳಗೆ-ಹೊರಗೆ ಬದುಕುತ್ತಿರುವುದು ಕಂಗ್ಲೀಷ್ ಭಾಷೆಯಲ್ಲೇ ಎಂಬುದೂ ಕೂಡ ಸ್ಪಷ್ಟವಾಗಿ ವೇದ್ಯವಾಗುತ್ತದೆ.
ದಿನ ನಿತ್ಯದ ನಮ್ಮ ಮನೆಯೊಳಗಣ ಮಾತುಗಳು ಮತ್ತು ಹೊರಗಣ ವ್ಯವಹಾರಿಕ ಮಾತುಗಳನ್ನು ಗಮನಿಸುತ್ತಲೆ ನಮ್ಮನ್ನು ನಾವು ಪ್ರಶ್ನಿಸಿಕೊಂಡರೆ ನಾವ್ಯಾರೂ ನಮ್ಮ ಅಚ್ಚ ಕನ್ನಡದಲ್ಲಿ ಮಾತನಾಡುತ್ತಿಲ್ಲವಲ್ಲ..! ನಮ್ಮ ಕನ್ನಡ ನುಡಿಗಳೊಡನೆ ಇಂಗ್ಷೀಷ್ ಹಾಸುಹೊಕ್ಕಾಗಿ ಬೆರೆತಿದೆ;ಬೆರೆಯುತ್ತಲೇ ಬಂದಿದೆ. ನಾವುಗಳು ನಮಗರಿತೋ ಅರಿಯದೇಯೋ ಸ್ವೀಕರಿಸುತ್ತಿದ್ದೇವಲ್ಲ. ಈಗಾಗಲೇ ಹೇಳಿದಂತೆ, ಇಂದಿನ ಈ ಮಾಹಿತಿ ಯುಗದಲ್ಲಿ ಅದರ ಪ್ರಭಾವ ಹೆಚ್ಚಿದಂತೆಲ್ಲ; ನಮ್ಮ ಕಟ್ಟಾ ಕನ್ನಾಡಾಭಿಮಾನಿಗಳಿಗೆ, ಸಾಹಿತಿಗಳಿಗೆ ಅದೇ ಕನ್ನಡದ ಅವನತಿಯೆಂಬ ಗಾಭರಿಯೋ... ಅಥವಾ ತಮ್ಮ ಪ್ರಭಾವ ಬೆಳಿಸಿಕೊಳ್ಳಲಿಕ್ಕೆ  ಇದೊಂದು ಕಾರಣೀಭೂತ ಸಮಯವೋ ಎಂಬಂತಾಗಿರುವುದೂ ಇಂದಿನ ಪ್ರಚಲಿತ ಸ್ವಾರಸ್ಯಕರ ಸುದ್ದಿಯಾಗಿದೆಯಲ್ಲ...!!
ಯಾಕೆಂದರೆ, ಮಾನವನ ಬದುಕೆಂಬುದು ನಿಂತ ನೀರಲ್ಲ. ಬದಲಾವಣೆ ಕಾರಣೀಭೂತವಾಗಿ ಆಗುತ್ತಲೇ ಇರುತ್ತದೆ. ಅಂತಹ ಬದಲಾವಣೆಯ ಪರಿಣಾಮಗಳೇನೇ ಇರಲಿ ಅವು ನಮ್ಮ ಬದುಕು ಭಾಷೆಯ ಮೇಲೆ ನೇರವಾಗಿ ಆಗುವುದೂ ಶತ ಸಿದ್ಧವೇ.  ಕಾಲದ ಪ್ರವಾಹದಲ್ಲಿ ಅದನ್ನೂ ಯಾವ ದಿಗ್ಗಜಗಳೂ ತಡೆಗಟ್ಟಲು ಸಾಧ್ಯವಾಗದೆಂಬುದೂ ಚರಿತ್ರಾರ್ಹ ಸಂಗತಿಯೆ ಆಗಿದೆ.

[quote]ನಾವು ಕನ್ನಡಾಭಿಮಾನಿಗಳು. ಈ ನಾಡು ನುಡಿಗೆ ಮೀಸಲಾದವರು.ನಿಜ. ಆದರೆ, ದೇಶ ಭಾಷೆಗೆ ಮಿಗಿಲಾದ ಜ್ಞಾನ ದಾಹಿಗಳಾಗಬೇಕು ನಾವು.  ನಮ್ಮ ಮಕ್ಕಳನ್ನು ಚಿಕ್ಕಂದಿನಿಂದಲೇ ಆ ದಿಸೆಯಲ್ಲಿ ತಯಾರು ಮಾಡಬೇಕಲ್ಲ...ಅಂದ ಹಾಗೆ ಪ್ರಸ್ತುತದಲ್ಲಿ ನಾವು ನಮ್ಮ ಮಕ್ಕಳೆಲ್ಲರೂ ಬದುಕುತ್ತಿರುವುದು ಕಂಗ್ಲೀಷ್ ಭಾಷೆಯೊಂದಿಗೇ ಎಂಬುದೂ ಕಠೋರ ವಾಸ್ತವ ಸಂಗತಿಯೆ ಆಗಿದೆ...[/quote]

 ನೋಡಿ,ಒಬ್ಬ ಹಳ್ಳಿ ಹೈದನ ಕೈಯಲ್ಲೂ ಮೊಬೈಲ್ ಇರುತ್ತದೆ; ಆತನ ಬಾಯಲ್ಲಿ ಕಂಗ್ಲೀಷ್ ಮೊಳಗುತ್ತಲೇ ಇರುತ್ತದೆ. ಅದು ತೀರ ಸಹಜ ಗುಣವೇ ಆಗಿ ನಮಗೆಲ್ಲ ತೋರುತ್ತಿರುವಾಗ  ಅದೇ ಹಳ್ಳಿ ಹೈದರಿರುವ ಮಕ್ಕಳ ಶಾಲೆಯಲ್ಲಿ ಪ್ರಾಥಮಿಕ ಒಂದನೇ ತರಗತಿಯಿಂದಲೇ ಒಂದು ಸಬ್ಜೆಕ್ಟ್ ಅಲ್ಲಲ್ಲ; ಒಂದು ವಿಷಯವಾಗಿ ಇಂಗ್ಷೀಷ್ ಬೋಧಿಸಿದರೇನು ಕನ್ನಡ ಮೂಲ ಬೇರನ್ನೇ ಚುವುಟಿ ಹಾಕಿಬಿಡುತ್ತಾರೆಂಬ ಭಯವೇತಕೋ.... ಹಾಗೆ ನೋಡಿದರೆ, ಯಾವುದೇ ವಿದ್ಯೆಯ ಪ್ರಾಥಮಿಕ ಶಿಕ್ಷಣ(ಕಂಪ್ಯೂಟರ್ ಶಿಕ್ಷಣವೂ ಸೇರಿದಂತೆ) ಮಾತೃಭಾಷೆಯಲ್ಲೇ ಆಗಬೇಕು ಆದರೇನು! ಇಂಗ್ಷೀಷ್ ಕೂಡ ಜತೆಗೇ ಇರಬೇಕು; ಅದೇ ಇಂದಿನ ಅತ್ಯಗತ್ಯವೂ ಆಗಿದೆ;ಆಗುತ್ತಲೇ ಇದೆಯಲ್ಲ..  ಅಷ್ಟೇಕೆ, ನೀವೂ ನೋಡಿದ್ದೀರಿ; ಇಂದಿನ ಶಾಲಾ ಕಾಲೇಜುಗಳಲ್ಲೂ ಇಂಗ್ಷೀಷ್ ಮಾಧ್ಯಮದಲ್ಲಿ ಬೋಧನಾಕ್ರಮ ಇದ್ದರೂ ಅಲ್ಲಿನ ಕೆಲ ಶಿಕ್ಷಕರೂ ವಿಜ್ಞಾನದ ಪಾಠಗಳನ್ನೂ ಬೋಧಿಸುವಾಗ ತಾವು ಹೇಳ ಬೇಕಾಗಿರುವುದು ಇಂಗ್ಷೀಷ್ ಮಾಧ್ಯಮವೇ  ಆದರೂ  ಜೊತೆಗೆ ವಿಷಯದ ಅರ್ಥವಂತಿಕೆಗಾಗಿ ವಿದ್ಯಾರ್ಥಿಗಳಿಗೆ ತಟ್ಟನೆ ಮನದಟ್ಟಾಗುವುದಕ್ಕಾಗಿಯೆ  ಮಧ್ಯೆ ಮಧ್ಯೆ ತಾವು ಹೇಳುವ ಇಂಗ್ಷೀಷ್ ಪದಗಳೊಂದಿಗೇ ಕನ್ನಡ ಪದಗಳನ್ನೂ ಹೇಳುತ್ತಾ  ಅರ್ಥೈಸಲು ತೊಡುಗುವುದನ್ನೂ ನಾವು ಕಂಡಾಗ ಸಮಂಜಸವಾಗಿಯೇ ತೋರುತ್ತದೆ.
ಇನ್ನೂ ಹೇಳಬೇಕೆಂದರೆ ಬಹಳವಿದೆ; ನಾವು ವಿದ್ಯಾವಂತ ಹಿರಿಯರಾಗಿ ಇಂಗ್ಲೀಷ್ ನಲ್ಲೂ ಮಾತನಾಡಬಲ್ಲವರಾಗಿರುವವರೂ ಇದ್ದೇವೆ.  ವಿಪರ್ಯಾಸವೆಂದರೆ ಹಿರಿಯರಾದ ನಮಗೇ ಎಷ್ಟೋ ಸಂದರ್ಭಗಳಲ್ಲಿ ಸಂಬಾರ ಪದಾರ್ಥಗಳು ಮತ್ತು ಕಾಯಿ ಪಲ್ಯೆಗಳ ಪದಗಳಿಗೆ ಇನ್ನೂ ಕೆಲ ಚಿಕ್ಚ ಪುಟ್ಟ ವಸ್ತುಗಳಿಗೆ ಇಂಗ್ಷೀಷಿನಲ್ಲಿ ಏನು ಹೇಳುತ್ತಾರೆಂಬುದು ತಿಳಿಯದೇ ಗೊಂದಲದಲ್ಲಿ ಬೀಳುವ ಪ್ರಸಂಗಗಳೇ ಇರುತ್ತವೆಯಲ್ಲ. ನಮ್ಮ ಪುಟ್ಟ ಪುಟ್ಟ ಮಕ್ಕಳಿಗೆ ಕನಿಷ್ಠ ಪಕ್ಷ ಪ್ರಾರಂಭದಲ್ಲೇ ಅಂತಹ  ಇಂಗ್ಲೀಷ್ ಪದಗಳ ಪರಿಚಯವಾದರೂ ಆಗುವುದಿಲ್ಲವೇ..ಅದು ಅತ್ಯಗತ್ಯವೆನಿವುದಿಲ್ಲವೇ ಇಂದಿನ ದಿನಗಳಲ್ಲಿ...?
ವಸ್ತು ಸ್ಥಿತಿ ಹೀಗಿರುವಾಗ ಕಂಗ್ಲೀಷ್ ಶಾಲೆಗಳೆಂಬ ದೂರು ಏಕೋ....ಮಾನ್ಯ ಮುಖ್ಯ ಮಂತ್ರಿಗಳ ವಾಸ್ತವಿಕ ನಿಲುವಿಗೆ ಪ್ರತಿರೋಧವೇಕೋ....ಇಂತಹ ವಿರೋಧಗಳಿಂದ “ಕಟ್ಟಾಭಿಮಾನಿಗಳು” ಸಾಧಿಸುವುದಾದರೂ ಏನೋ.. ವಾಸ್ತವದಲ್ಲಿ ಅಚ್ಚ ಕನ್ನಡದಲ್ಲೇ ಎಲ್ಲರೂ ವ್ಯವಹರಿಸುವಂತೆ ಮಾತನಾಡುವಂತೆ ಈ ಮಹಾನ್ ದಿಗ್ಗಜರುಗಳು ಮಾಡಲು ಸಾಧ್ಯವಿದೆಯೇ..?

-ಎಚ್.ಶಿವರಾಂ, ದಿನಾಂಕ: 07-06-2007

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet