ಕಂಚಿ ಪ್ರವಾಸ

ಕಂಚಿ ಪ್ರವಾಸ

ಬರಹ

ಕಂಚಿಯು ದಕ್ಷಿಣ ಭಾರತದ ಸುಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಒಂದು. ಭಗವತಿ ಕಾಮಾಕ್ಷಿ ದೇವಿಯಲ್ಲದೆ, ಶಂಕರ ಭಗವತ್ಪಾದರು ಸ್ಥಾಪಿಸಿದರೆನ್ನಲಾದ ಶಂಕರಪೀಠಗಳಲ್ಲಿ ಒಂದು ಈ ಸ್ಥಳದಲ್ಲಿದೆ. ಕಂಚಿಯು ಪಲ್ಲವರ ರಾಜಧಾನಿಯಾಗಿತ್ತು. ಅಲ್ಲದೆ ಕಂಚಿಯು ಶೈವರು ಮತ್ತು ವೈಷ್ಣವರ ದೇವಾಲಯಗಳನ್ನೊಳಗೊಂಡ ಒಂದು ವಿಶಿಷ್ಠ ಸ್ಥಳವಾಗಿದೆ.ಅದರಿಂದಾಗಿ ಕಂಚಿಯನ್ನು ಶಿವಕಂಚಿ ಮತ್ತು ವಿಷ್ಣು ಕಂಚಿ ಎಂದು ವಿಭಾಗಿಸಲಾಗಿದೆ.

ಕಂಚಿಯು ಬೆಂಗಳೂರಿನಿಂದ ಸುಮಾರು ೨೮೫ ಕಿ.ಮಿ. ದೂರದಲ್ಲಿದ್ದು, ಇತ್ತೀಚೆಗೆ ನಾನು ಈ ದೂರವನ್ನು ಕಾರಿನಲ್ಲಿ ಸುಮಾರು ೬ ಗಂಟೆಗಳಲ್ಲಿ ಕ್ರಮಿಸಿದೆ. ಹೊಸೂರಿನಿಂದ ಕಂಚಿಯವರೆಗಿನ ಹೆದ್ದಾರಿಯನ್ನು ಹೈವೇ ಅಥಾರಿಟಿ ಆಫ್ ಇಂಡಿಯಾದವರು ನಿರ್ಮಿಸಿ ನಿರ್ವಹಿಸುತ್ತಿದ್ದಾರೆ. ರಸ್ತೆ ನಿರ್ಮಾಣವು ಅತ್ಯಂತ ಉತ್ತಮ ಮಟ್ಟದ್ದಾಗಿದ್ದು ಒಂದೇ ಒಂದು ರಸ್ತೆ ಉಬ್ಬು ಇಲ್ಲದಿರುವುದು ದಕ್ಷಿಣ ಭಾರತದಲ್ಲಿಯೇ ವಿನೂತನವಾಗಿದೆ. ಎಲ್ಲಿಯೂ ಒಂದಾದರೂ ರಸ್ತೆ ಗುಂಡಿಗಳಾಗಲಿ, ಪೊಲೀಸರು ಇಡುವ ರಸ್ತೆ ತಡೆಬೇಲಿಗಳಾಗಲೀ ಇಲ್ಲದಿರುವುದರಿಂದ ನಾವು ಸಲೀಸಾಗಿ ಗಂಟೆಗೆ ೧೦೦ ಕಿ.ಮಿ ವೇಗದಲ್ಲಿ ಕ್ರಮಿಸಬಹುದಾಗಿದೆ. ಸಂಪೂರ್ಣವಾಗಿ ಸಂತೋಷ ಕೊಡುವ ಪ್ರವಾಸವಾಗಿದ್ದು, ರಸ್ತೆಯ ಇಕ್ಕೆಲಗಳಲ್ಲಿಯೂ ಸುಂದರವಾದ ಹಸಿರು ತುಂಬಿದ ಬೆಟ್ಟಗಳಿಂದ ಆವೃತವಾದ ಪರಿಸರ ಮನಸ್ಸಿಗೆ ಆಹ್ಲಾದಕರವಾಗಿದೆ. ಸುಂದರ ಪ್ರಕೃತಿಯ ಛಾಯಾ ಚಿತ್ರಗಳನ್ನು ತೆಗೆದು ನೋಡಿ ಸಂತಸ ಪಡುವುದಕ್ಕೆ ಯಾವ ಅಡ್ದಿಯೂ ಇಲ್ಲ.

ಹಾದಿಯಲ್ಲಿ ಕಡೆ ಶುಲ್ಕ ವಸೂಲಿ ಕೇಂದ್ರಗಳಿವೆ. (ರೂ. ೨೫/-, ರೂ. ೩೫/- ರೂ. ೪೫/- ಮತ್ತು ರೂ. ೨೫/-). ಇದು ಸ್ವಲ್ಪ ದುಬಾರಿ ಎನಿಸಿದರೂ, ಪ್ರವಾಸ ಕೊಡುವ ಸಂತೋಷದ ಮುಂದೆ ಇದು ಏನೂ ಅಲ್ಲವೆನಿಸುವುದು.

ದುರಾದೃಷ್ಟವಶಾತ್, ನಾನು ಕಂಚಿ ದೇವಾಲಯಗಳ ಮುಖ್ಯ ಮೂರ್ತಿಗಳ ಛಾಯಾ ಚಿತ್ರಗಳನ್ನು ತೆಗೆಯಲು ಅವಕಾಶ ಕೊಡಲಿಲ್ಲ. ಆದ್ದರಿಂದ ಗರ್ಭಗುಡಿಯ ಹೊರಭಾಗ ಮತ್ತು ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳ ಚಿತ್ರಗಳನ್ನು ತೆಗೆದೆ. ಅಲ್ಲಿರುವ ಗೋವಿಂದರಾಜ ದೇವಸ್ಥಾನದಲ್ಲಿನ ಮಾಳಿಗೆ ಅಂಟಿಕೊಂಡಿರುವ ಹಲ್ಲಿಯನ್ನು ಮುಟ್ಟಿದರೆ ನಾವು ಮಾಡಿದ ಪಾಪಗಳೆಲ್ಲವೂ ಪರಿಹಾರವಾಗುವುದೆಂಬ ನಂಬಿಕೆ ಇದೆ. ಅದನ್ನು ಮುಟ್ಟಿ ಬಂದವರನ್ನು ಮುಟ್ಟಿದರೂ ಪಾಪಗಳೆಲ್ಲಾ ಪರಿಹಾರವಾಗುವುದಂತೆ!! ನಾನು ಮುಟ್ಟಿ ಬಂದಿದ್ದೇನೆ. ಅದರ ಛಾಯಾ ಚಿತ್ರ ಇಲ್ಲಿ ಕೊಟ್ಟಿದ್ದೇನೆ. ಮುಟ್ಟಿ ನಿಮ್ಮ ಪಾಪ ಪರಿಹರಿಸಿಕೊಳ್ಳಿ.