ಕಂಚುಹುಳಿ ಹಸಿ ಸಾಸಿವೆ
ಕಂಚುಹುಳಿ(ಹೇರಳೆಕಾಯಿ) ೨, ತೆಂಗಿನ ಕಾಯಿ ತುರಿ ೧ ಕಪ್, ಒಣಮೆಣಸು ೨, ಸಾಸಿವೆ ಕಾಲು ಚಮಚ, ಕಾಯಿಮೆಣಸು ೧, ಅರಸಿನ ಹುಡಿ ಒಂದು ಚಿಟಿಕೆ, ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ.
ಕಂಚುಹುಳಿ ರಸಹಿಂಡಿ ಇಡಬೇಕು. ತೆಂಗಿನಕಾಯಿ ತುರಿಗೆ ಒಣಮೆಣಸು, ಸಾಸಿವೆ, ಕಾಯಿಮೆಣಸು, ಚಿಟಿಕೆ ಅರಶಿನಹುಡಿ ಹಾಕಿ ರುಬ್ಬಿ, ಹಿಂಡಿ ಇಟ್ಟ ರಸಕ್ಕೆ ಸೇರಿಸಬೇಕು. ಉಪ್ಪು ಮತ್ತು ಬೆಲ್ಲ ಸೇರಿಸಿ ಮಿಶ್ರ ಮಾಡಿ. ಇದಕ್ಕೆ ಬೆಲ್ಲ ಜಾಸ್ತಿ ಹಾಕಬೇಕಾಗುತ್ತದೆ. ಒಗ್ಗರಣೆ ಕೊಡದಿದ್ದರೂ ಆಗುತ್ತದೆ.(ಬಾಣಂತಿಯರಿಗೆ ಕೊಡುವುದಾದರೆ ಸಣ್ಣ ಉರಿಯಲ್ಲಿ ಕುದಿಸಿ ಬಡಿಸಬಹುದು).ಆರೋಗ್ಯಕ್ಕೆ ಒಳ್ಳೆಯದು.
ಪೂರಕ ಮಾಹಿತಿ: *ಇದೇ ಕಾಯಿಯ ಸಿಪ್ಪೆಯನ್ನು ಒಣಗಿಸಿಟ್ಟು ತಂಬುಳಿ ಮಾಡಬಹುದು.
*ಎಳ್ಳೆಣ್ಣೆ ಅಥವಾ ತೆಂಗಿನೆಣ್ಣೆ ಕುದಿಸಿ, ಇದರ ಸಿಪ್ಪೆ, ರಸ ಎರಡನ್ನೂ ಹಾಕಿ, ಸ್ವಲ್ಪ ಅರಶಿನ, ಹುಣಿಸೇಹುಳಿ ಸೊಪ್ಪು, ಮಾಫಲಫಲ ಸೊಪ್ಪು ಹಾಕಿ ಚೆನ್ನಾಗಿ ಕುದಿಸಿ, ಕರಿ ಕಟ್ಟಿದ ಮೇಲೆ, ಶೋಧಿಸಿ ಬಾಟ್ಲಿಯಲ್ಲಿ ಹಾಕಿಟ್ಟು, ಬಾಣಂತಿಯರಿಗೆ ಮೈಗೆ ಹಚ್ಚಿ ಸ್ನಾನ ಮಾಡಬಹುದು.(ನನಗೆ ಇದೇ ಎಣ್ಣೆ ತಾಯಿಯವರು ಮಾಡಿ ಕೊಟ್ಟಿದ್ದಾರೆ) ಮೈಕೈ ನೋವಿಗೆ ಒಳ್ಳೆಯದು.
-ರತ್ನಾ ಕೆ.ಭಟ್,ತಲಂಜೇರಿ