ಕಂಟ್ರೋಲ್ + ಆಲ್ಟ್ + ಡಿಲೀಟ್
ಎಷ್ಟೋ ಸಲ ಸಂಕಟದಲ್ಲಿ ಸಿಕ್ಕಿ ಬಿದ್ದಾಗ ತಲೆಯಲ್ಲಿ ಕಸ ತುಂಬಿ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿದೆಯೇನೋ ಎಂದೆನಿಸುವುದುಂಟು. ಕೆಲವರಿಗೆ ಸ್ಟೇಜಿನೆದುರು ಬಂದು ನಿಂತಾಗ, ಕೆಲವರಿಗೆ ಇಂಟರ್’ವ್ಯೂ ಪ್ಯಾನೆಲ್ ಎದುರಿಗೆ ಕುಳಿತಾಗ ಮತ್ತೆ ಕೆಲವರಿಗೆ ತಪ್ಪು ಸಿಕ್ಕಿ ಬಿದ್ದಾಗ... ಈ ಪಟ್ಟಿ ಮುಂದುವರಿಯುತ್ತದೆ. ಅವರವರ ಟೆನ್ಶನ್ ಮತ್ತು ಅದರಿಂದಾಗುವ ಭಯದ ಪ್ರಭಾವ ಇದಾದರೂ ಕೆಲವೊಮ್ಮೆ ಅಧಿಕ ರಕ್ತದೊತ್ತಡ, ಹಾರ್ಟು ಅಟ್ಯಾಕು, ತಲೆ ತಿರುಗಿ ಬೀಳುವುದು ಮುಂತಾದ ಸೀರಿಯಸ್ ರೂಪವೂ ತಾಳುವುದುಂಟು. ಹೀಗೆ ನಾವೆಲ್ಲ ಮೆದುಳು ಕೆಲಸ ಮಾಡದ ಪರಿಸ್ಥಿತಿಯನ್ನು ಒಂದಲ್ಲ ಒಂದು ರೀತಿ ಎದುರಿಸಿಯೇ ಇರುತ್ತೇವೆ. ಏಕೆಂದರೆ ನಮ್ಮಲ್ಲಿ ಕೃಷ್ಣನಂತಹ ಸ್ಥಿತಪ್ರಜ್ಞೆಯ ಅಭಾವವಿರುವುದೂ ಒಂದು ಕಾರಣ. ಆ ಕ್ಷಣಗಳಲ್ಲಿ ಈ ವಿಚಾರವೇ ಬೇಡ ಎಂದು ಆ ವಿಚಾರವನ್ನು ಎಷ್ಟು ಹೊರತೆಗೆಯಲು ಪ್ರಯತ್ನಿಸಿದರೂ ಅದೇ ಮತ್ತೆ ಮತ್ತೆ ಮನದಲ್ಲಿ ಸುಳಿಯುತ್ತಿರುತ್ತದೆ.
ಮನುಷ್ಯನ ದೇಹ ರಚನೆ ಎಷ್ಟು ಸಂಕೀರ್ಣವೆಂದರೆ ತೊಡಕಾದ ವಿಷಯಗಳನ್ನು ಆ ಹೊತ್ತಿಗೆ ಪರಿಹರಿಸಿ ಮನಸ್ಸನ್ನು ಶಾಂತವಾಗಿಸಲು ಏನಾದರೂ ಬೇರೆ ವಿಚಾರವನ್ನು ತಲೆಯಲ್ಲಿ ತುಂಬಿಸಬೇಕಾಗುತ್ತದೆ. ಇಂಟರ್’ವ್ಯೂ ಕ್ಲಿಯರ್ ಆಗಲಿಲ್ಲ, ಸಂಸಾರದ ಕಿರಿಕಿರಿಗಳು, ಸಿಕ್ಕಾಪಟ್ಟೆ ಬೈಯ್ಯುವ ಬಾಸ್ ಅಥವಾ ಬ್ರೇಕ್ ಅಪ್ ಆದ ವಿಷಯಗಳನ್ನು ಮರೆಯಲು ಹೆಂಡವೋ, ಸಿಗರೇಟೋ, ಡ್ರಗ್ಸೋ, ಸತ್ಸಂಗವೋ, ಭಜನೆಯೋ, ಟಿವಿಯೋ ಮುಂತಾದ ಮಾರ್ಗಗಳನ್ನು ಅನುಸರಿಸುವುದು ಬೇರೆ ವಿಚಾರವನ್ನು ಮನಸ್ಸಿನಲ್ಲಿ ತರಲೆಂದೇ. ಕೆಲವರಿಗಂತೂ ಆ ನೋವನ್ನು ಸಂಪೂರ್ಣವಾಗಿ ಅನುಭವಿಸಲೆಂದೇ ಶೋಕ ಗೀತೆಗಳನ್ನು ಕೇಳುವ ಅಭ್ಯಾಸವೂ ಇದೆ. ಇದು ನೋವನ್ನು ಉತ್ತೇಜಿಸುವಂತೆ ಮಾಡಿ ಕಣ್ಣೀರಾಗಿ ನೋವು ಕಡಿಮೆಯಾಗುವುದೂ ಒಂದು ರೀತಿ ನಿಜ. ಕಾಲದೊಂದಿಗೆ ನೋವುಗಳು ಮರೆಯಾಗುತ್ತವಾದರೂ ಕೆಲವೊಮ್ಮೆ ಮನಸ್ಸೆಂಬುದು ಅದೇ ವಿಷಯವನ್ನು ಕೊರೆದು ಕೊರೆದು ಸಣ್ಣ ಗಾಯವಾಗಿ ಆ ಗಾಯ ಕ್ಯಾನ್ಸರ್ ಆಗಿ ಮತ್ತೆ ಅದೇ ಅವಸಾನದ ಕಾರಣವೂ ಆಗಿ ಬಿಡುತ್ತದೆ.
ನಾವು ಮೆದುಳಿನ ವಿಚಾರವನ್ನು ಬೇರೆ ವಿಚಾರದಿಂದ ಓವರ್ರೈಡ್ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಾಮಾನ್ಯವಾಗಿ ಸಿದ್ಧಿಸುತ್ತದೆ. ಆದರೆ ಹೆಚ್ಚಾಗಿ ಚಿಂತೆ ತಲೆಗೆ ಬಂದಾಗ ಬೇರೆ ಚಿಂತೆಗಳೂ ಜೊತೆಯಲ್ಲೇ ಹುಟ್ಟಿ ಚಿಂತೆಯೆಂಬ ಸಂಕುಲ ಬಿಜಾಸುರ ಜಾತಿ ಸೇರುವ ಅವಕಾಶಗಳೇ ಹೆಚ್ಚು. ಅದಕ್ಕೇ ಅಂದಿದ್ದು ಮನುಷ್ಯ ಮೆದುಳು ತುಂಬಾ ಸಂಕೀರ್ಣ ಎಂದು. ಆದರೆ ಕೇವಲ ಬಿಟ್ಸ್ ಎಂಬ ಬೈನರೀ ಡಿಜಿಟ್ಟುಗಳ ಆಧಾರದ ಮೇಲೆ ನಡೆಯುವ ಕಂಪ್ಯೂಟರ್ ಅದೇ ಪರಿಸ್ಥಿತಿಯಲ್ಲಿ ಸಿಕ್ಕರೆ ನಾವೆಲ್ಲಾ ಕಂಟ್ರೋಲ್ + ಆಲ್ಟ್ + ಡಿಲೀಟ್ ಹೊಡೆದು ಪ್ರಾಸೆಸ್’ನ ಎಂಡೋ ಅಥವಾ ರಿಸ್ಟಾರ್ಟೋ ಮಾಡುತ್ತೇವೆ. ಹಿಂದಿನ ಯಾವುದೇ ನೆನಪುಗಳನ್ನು ಪುನಃ ತೆಗೆದುಕೊಳ್ಳದೇ ಅದು ಸರಾಗವಾಗಿ ಮುನ್ನಡೆಯುತ್ತದೆ. ಮತ್ತೆ ಅದೇ ಪ್ರೋಗ್ರಾಮುಗಳನ್ನು ರನ್ ಮಾಡದಿದ್ದರಾಯಿತು. ಮಾಡಿದರೂ ಅದಕ್ಕೆ ಬೇಕಾದ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡರಾಯಿತು. ಆದರೆ ನಮ್ಮ ಮೆದುಳು ಹಾಗಲ್ಲವಲ್ಲ, ಒಮ್ಮೆ ಚಿಂತಾಜನಕ ವಿಚಾರಗಳನ್ನು ಕೊಂದರೂ ವೈರಸ್ಸಿನಂತೆ ಅವು ಮತ್ತೆ ಕಾಡತೊಡಗುತ್ತವೆ. ಅದಕ್ಕೇ ’ಇದು ಹೀಗೆಯೇ’ ಎಂದು ಇದ್ದ ಸ್ಥಿತಿಯನ್ನು ಒಪ್ಪಿಕೊಳ್ಳುವುದೂ ಕೆಲವೊಮ್ಮೆ ತಲೆಬಿಸಿಯನ್ನು ಕಡಿಮೆ ಮಾಡುತ್ತದೆ. ನಮ್ಮ ಮೆದುಳಿನಲ್ಲಿ ಕಂಟ್ರೋಲ್ ಆಲ್ಟ್ ಡಿಲೀಟ್ ಇಲ್ಲ ನಿಜ, ಆದರೆ ರಿಸ್ಟಾರ್ಟ್ ಆಯ್ಕೆಯಂತೂ ಇದೆ. ಅದೆಂದರೆ ಹೊಸ ಆರಂಭ. ಬಹುಶಃ ಎಲ್ಲರಿಗೂ ಉಪಯೋಗವಾಗುವಂತಹ ಆಯ್ಕೆ ಅದು.
ಇಷ್ಟಕ್ಕೂ ಕಂಟ್ರೋಲ್ + ಆಲ್ಟ್ + ಡಿಲೀಟ್ ಕಂಡು ಹಿಡಿದವರು ಡೇವಿಡ್ ಬ್ರಾಡ್ಲಿ! ಅವರು ಆ ಕೋಡನ್ನು ಬರೆಯಲು ತೆಗೆದುಕೊಂಡ ಅವಧಿ ೧ ನಿಮಿಷ ಮತ್ತು ೨೩ ಸೆಕಂಡುಗಳಂತೆ. ಐಬಿಎಂ ಕಂಪನಿಯಲ್ಲಿ ೨೯ ವರ್ಷಗಳಷ್ಟು ಸೇವೆ ಸಲ್ಲಿಸಿದ ಈ ವ್ಯಕ್ತಿ, ಕಂಪ್ಯೂಟರ್ ಹ್ಯಾಂಗ್ ಆದಲ್ಲಿ ಪರಿಹಾರ ಕಂಡು ಹಿಡಿಯಲು ಈ ಪ್ರೋಗ್ರಾಮನ್ನು ಬರೆದಿದ್ದಾರೆ. ಈ ಬಗ್ಗೆ ಬ್ರಾಡ್ಲಿ ಹೇಳುತ್ತಾರೆ, "ಅದಕ್ಕಿಂತಲೂ ಬೇರೆ ತುಂಬಾ ಒಳ್ಳೆಯ ಕೆಲಸ ಮಾಡಿದ್ದೇನೆ, ಆದರೆ ಹೆಸರು ಅದಕ್ಕೆ ಮಾತ್ರ". ವಿಂಡೋಸ್ ಯಾವತ್ತೂ ಪ್ರತಿಕ್ರಿಯೆ ಕೊಡುವುದನ್ನು ನಿಲ್ಲಿಸಿದಾಗಲೆಲ್ಲಾ ಡೇವಿಡ್ ಬ್ರಾಡ್ಲಿ ಪರೋಕ್ಷವಾಗಿ ನೆನಪಾಗುತ್ತಾರೆ. ಅದರ ಬಗ್ಗೆ ಅವರು ಹೀಗೆ ಹೇಳುತ್ತಾರೆ, "ನಾನದನ್ನು ಸೃಷ್ಟಿಸಿದ್ದೆ ನಿಜ, ಆದರೆ ಅದನ್ನು ಪ್ರಸಿದ್ಧಗೊಳಿಸಿದ್ದು ಬಿಲ್ ಗೇಟ್ಸ್. ಯಾವಾಗಲೆಲ್ಲಾ ವಿಂಡೋಸ್ ಕ್ರಾಶ್ ಆಗುತ್ತದೋ ಆಗ ನನ್ನ ಕೋಡ್ ಕೆಲಸ ಮಾಡುತ್ತದೆ. ಇನ್ನೊಂದು ಮಾತಲ್ಲಿ ಹೇಳುವುದಾದರೆ ಯಾವಾಗ ಬಿಲ್ ಗೇಟ್ಸ್ ಸೋಲುತ್ತಾನೋ ಆವಾಗ ನಾನು ಗೆಲ್ಲುತ್ತೇನೆ"
Comments
ಉ: ಕಂಟ್ರೋಲ್ + ಆಲ್ಟ್ + ಡಿಲೀಟ್
In reply to ಉ: ಕಂಟ್ರೋಲ್ + ಆಲ್ಟ್ + ಡಿಲೀಟ್ by abdul
ಉ: ಕಂಟ್ರೋಲ್ + ಆಲ್ಟ್ + ಡಿಲೀಟ್
ಉ: ಕಂಟ್ರೋಲ್ + ಆಲ್ಟ್ + ಡಿಲೀಟ್
In reply to ಉ: ಕಂಟ್ರೋಲ್ + ಆಲ್ಟ್ + ಡಿಲೀಟ್ by Iynanda Prabhukumar
ಉ: ಕಂಟ್ರೋಲ್ + ಆಲ್ಟ್ + ಡಿಲೀಟ್
ಉ: ಕಂಟ್ರೋಲ್ + ಆಲ್ಟ್ + ಡಿಲೀಟ್
In reply to ಉ: ಕಂಟ್ರೋಲ್ + ಆಲ್ಟ್ + ಡಿಲೀಟ್ by gopaljsr
ಉ: ಕಂಟ್ರೋಲ್ + ಆಲ್ಟ್ + ಡಿಲೀಟ್
ಉ: ಕಂಟ್ರೋಲ್ + ಆಲ್ಟ್ + ಡಿಲೀಟ್
In reply to ಉ: ಕಂಟ್ರೋಲ್ + ಆಲ್ಟ್ + ಡಿಲೀಟ್ by kavinagaraj
ಉ: ಕಂಟ್ರೋಲ್ + ಆಲ್ಟ್ + ಡಿಲೀಟ್
ಉ: ಕಂಟ್ರೋಲ್ + ಆಲ್ಟ್ + ಡಿಲೀಟ್
In reply to ಉ: ಕಂಟ್ರೋಲ್ + ಆಲ್ಟ್ + ಡಿಲೀಟ್ by nimmolagobba balu
ಉ: ಕಂಟ್ರೋಲ್ + ಆಲ್ಟ್ + ಡಿಲೀಟ್
ಉ: ಕಂಟ್ರೋಲ್ + ಆಲ್ಟ್ + ಡಿಲೀಟ್