ಕಂಡದ್ದು ಕಾಣದ್ದು
ಸುಭಾಷ್ ರಾಜಮಾನೆಯವರ ಲೇಖನಗಳ ಸಂಗ್ರಹವು ‘ಕಂಡದ್ದು ಕಾಣದ್ದು’ ಎನ್ನುವ ಹೆಸರಿನಿಂದ ಬಿಡುಗಡೆಯಾಗಿದೆ. ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಡಾ. ಕೆ ವಿ ನಾರಾಯಣ. ಇವರು ತಮ್ಮ ಬೆನ್ನುಡಿಯಲ್ಲಿ “ಕಿರಿಯ ಗೆಳೆಯ ಸುಭಾಷ್ ರಾಜಮಾನೆ ಈ ದಿನಮಾನಗಳಲ್ಲಿ ಕಾಣೆಯಾಗುತ್ತಿರುವ ಪುಸ್ತಕಮೋಹಿಗಳ ಪರಂಪರೆಗೆ ಸೇರಿದವರು. ರಾಶಿ ರಾಶಿ ಹೊತ್ತಗೆಗಳನ್ನು ಕೂಡಿಡುವುದರ ಜೊತೆಗೆ ಓದುವ ಹೊಣೆಯನ್ನೂ ಹೊತ್ತಿರುವವರು. ತಾವು ಓದಿದ್ದನ್ನು ಇತರರ ಜೊತೆಗೆ ಹಂಚಿಕೊಳ್ಳಲು ಉತ್ಸುಕರಾಗಿರುವವರು. ಹಾಗೆ ಅವರು ಬರೆದ ಕೆಲವು ಲೇಖನಗಳು ಇಲ್ಲಿ ಸಂಕಲಿತವಾಗಿವೆ.
ತಾವು ಓದಿ ಮೆಚ್ಚಿಕೊಂಡ, ಒಪ್ಪಿಕೊಂಡ ಕೃತಿಗಳು, ಕೃತಿಕಾರರು ಇತರ ಓದುಗರಲ್ಲೂ ನೆಲೆಗೊಳ್ಳಬೇಕೆಂಬ ಹಂಬಲ ಇವರ ಬರಹಗಳಲ್ಲಿ ಮೈದುಂಬಿಕೊಂಡಿದೆ. ಈ ಬಗೆಯ ಬರಹಗಳಿಗೆ ಕನ್ನಡದಲ್ಲಿ ಒಂದು ಹಿರಿದಾದ ಪರಂಪರೆಯೇ ಇದೆ. ಆದರೆ ಈಚಿನ ದಿನಗಳಲ್ಲಿ ಈ ಹಾದಿ ಹಿಡಿದವರು ತುಂಬ ಕಡಿಮೆ ಸಂಖ್ಯೆಯಲ್ಲಿ ಇದ್ದಾರೆ.” ಎಂದಿದ್ದಾರೆ.
ಲೇಖಕರಾದ ಸುಭಾಷ್ ರಾಜಮಾನೆಯವರು ತಮ್ಮ ಮಾತಿನಲ್ಲಿ ಹೇಳಿರುವುದು ಹೀಗೆ…”ಇಲ್ಲಿಯ ಲೇಖನಗಳು ನಾಲ್ಕು ವರ್ಷಗಳ ಹಿಂದೆಯೇ ಪ್ರತಿ ವಾರಕ್ಕೊಮ್ಮೆ 'ನ್ಯಾಯಪಥ' ಹಾಗೂ 'ನಾನು ಗೌರಿ ಡಾಟ್ ಕಾಮ್'ನಲ್ಲಿ ಪ್ರಕಟವಾದವು. ಈಗ ಇದೊಂದು ಮಿರಾಕಲ್‌ನಂತೆ ತೋರುತ್ತಿದೆ. ಪಟ್ಟುಹಿಡಿದು ನಿಯತವಾಗಿ ವಾರ ವಾರವೂ ಬರೆಯುವುದು ನನಗೆ ಹೊಂದುವುದಿಲ್ಲ ಎಂದುಕೊಂಡಿದ್ದೆ. ಅದಕ್ಕೆ ನನ್ನೊಳಗಿನ ಹಿಂಜರಿಕೆಯು ಕಾರಣವಾಗಿರಬಹುದು. ಗೆಳೆಯರಾದ ಆಕೃತಿ ಗುರುಪ್ರಸಾದ್ ಅವರು ಹಳೆಯ ಪುಸ್ತಕಗಳ ಬಗ್ಗೆ ಒಂದು ಅಂಕಣ ಬರೆಯಬೇಕೆಂದು ಆಗಾಗ ನನಗೆ ಹೇಳುತ್ತಲೇ ಇದ್ದರು. ಅವರು ಕೇಳಿದಾಗ ಆಗೊಮ್ಮೆ ಈಗೊಮ್ಮೆ ಲೇಖನಗಳನ್ನು ಬರೆದು ಕಳಿಸುತ್ತಿದ್ದೆ. ಆದರೆ ರೆಗ್ಯೂಲರ್ ಆಗಿ 'ಅಂಕಣ' ಬರೆಯಲು ಹಿಂದೇಟು ಹಾಕುತ್ತಲೇ ಇದ್ದೆ.
ಆಗಷ್ಟೇ ಗುರುಪ್ರಸಾದ್‌ರು 'ನ್ಯಾಯಪಥ' ಪತ್ರಿಕೆಗೆ ಕಾರ್ಯನಿರ್ವಾಹಕ ಸಂಪಾದಕರಾಗಿ ಹೊಸ ಜವಾಬ್ದಾರಿಯನ್ನು ಹೊತ್ತಿದ್ದರು. ಅವರ ಒತ್ತಾಯ ಹೆಚ್ಚುತ್ತಲೇ ಇತ್ತು. ನಾನು ಏನಾದರೊಂದು ನೆಪ ಹೇಳಿ ತಪ್ಪಿಸಿಕೊಳ್ಳುತ್ತಲೇ ಇದ್ದೆ. ಹೀಗೆ ಒಂದು ದಿನ ಅವರ ವಿಶ್ವಾಸದ ಒತ್ತಾಸೆಗೆ ಮಣಿದು ಬರೆಯಲು ಒಪ್ಪಿಕೊಂಡೆ. ಈ ಬರಹಗಳಿಗೆ 'ಸುಗಂಧಿ ಬೇರು' ಎಂಬ ಶೀರ್ಷಿಕೆ ನೀಡಲಾಯಿತು. ಈ ಹೆಸರನ್ನು ಮಿತ್ರರಾದ ರಾಜಶೇಖರ ಹಳೆಮನೆಯರು ಸೂಚಿಸಿದ್ದರು. ಈ ಬರಹಗಳು ಸುಮಾರು ಇಪ್ಪತ್ತು ವಾರಗಳ ಕಾಲ 'ನ್ಯಾಯಪಥ'ದಲ್ಲಿ ಪ್ರಕಟಗೊಂಡವು. ಆಗ ಇವುಗಳನ್ನು ಓದಿದ ಸ್ನೇಹಿತರು, ಕೆಲವು ಓದುಗರು ತಂತಮ್ಮ ಅಭಿಪ್ರಾಯಗಳನ್ನು ನೀಡುತ್ತಿದ್ದರು. ಕೆಲವು ಹಿರಿಯ ಲೇಖಕರು, ವಿಮರ್ಶಕರು ಪ್ರತಿಕ್ರಿಯೆ ನೀಡುತ್ತಿದ್ದರು.
ನನ್ನ ಪಿಎಚ್.ಡಿ. ಸಂಶೋಧನ ಕೃತಿ 'ನಿರ್ದಿಗಂತವಾಗಿ ಏರಿ' ೨೦೧೭ರಲ್ಲಿ ಪ್ರಕಟವಾದ ನಂತರದಲ್ಲಿ ಲೇಖನಗಳ ಪುಸ್ತಕವನ್ನು ಹೊರ ತರಲು ಆಗಿರಲಿಲ್ಲ. ಆರು ಅನುವಾದಿತ ಕೃತಿಗಳೇ ಹೊರಬಂದವು. ಈಗ ಮೊದಲ ಕೃತಿಯಾಗಿ 'ಕಂಡದ್ದು ಕಾಣದ್ದು' ಪ್ರಕಟವಾಗುತ್ತಿದೆ. ಇಲ್ಲಿಯ ಎಲ್ಲ ಬರಹಗಳು ಓದಿನ ಮುಖಾಂತರವೇ ಹುಟ್ಟಿಕೊಂಡವು. ನನಗೆ ಇಷ್ಟವಾದ ಒಂದಿಷ್ಟು ಹಳೆಯ ಪುಸ್ತಕಗಳ ಕಥನ ಇಲ್ಲಿದೆ
ಈ ಕೃತಿಯಲ್ಲಿ ಕಾವ್ಯ, ಸಣ್ಣಕತೆ, ಕಾದಂಬರಿ, ಜೀವನ ಚರಿತ್ರೆ, ಸಂಶೋಧನೆ, ಸಂಗೀತ, ವ್ಯಕ್ತಿಚಿತ್ರ ಮೊ ಮೊದಲಾದ ವಿಷಯಗಳು ಹರಡಿಕೊಂಡಿವೆ. ಅರ್ಧದಷ್ಟು ಬರಹಗಳು ಅನುವಾದಿತ ಕೃತಿಗಳಿಂದ ರೂಪುಗೊಂಡಿವೆ. ಈ ಕೃತಿಯನ್ನು ಪ್ರಬಂಧ, ಲೇಖನ, ವಿಮರ್ಶೆ, ಅನುಭವ ಕಥನ ಇತ್ಯಾದಿಯಾಗಿ ಹಣೆಪಟ್ಟಿ ಹಚ್ಚಲು ಇಷ್ಟವಿಲ್ಲ. ಇವೆಲ್ಲ ಸಂಗತಿಗಳು ಒಂದರೊಳಗೊಂದು ಬೆರೆತುಕೊಂಡಿವೆ.
ಇಲ್ಲಿಯ ಬರಹಗಳ ಕಂತೆಯನ್ನು ಕನ್ನಡದ ಬಹುಶ್ರುತ ಚಿಂತಕರಾದ ಡಾ. ಕೆ.ವಿ. ನಾರಾಯಣ ಅವರಿಗೆ ಓದಲು ಕೊಟ್ಟೆ. ಅವರು ಈ ಕೃತಿಯ ಬಗ್ಗೆ ಬರೆದಿದ್ದು ನನಗೆ ತುಂಬ ಖುಷಿ ನೀಡಿದೆ. ಇದರ ಬಗ್ಗೆ ಮತ್ತೊಂದು ಬರಹ ಆಕಸ್ಮಿಕವಾಗಿ ಒಲಿದು ಬಂದಿತು. ಇತ್ತೀಚೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ೧೨ ದಿನ ಆರ್‌ಸಿ ತರಬೇತಿಯಲ್ಲಿದ್ದೆ. ಅಲ್ಲೇ ಕಲ್ಯಾಣ ನಗರದಲ್ಲಿ ಇರುವ ಕನ್ನಡದ ಮಹಿಳಾ ದನಿಯಾಗಿ ಹೊಮ್ಮಿದ ಮಲ್ಲಿಕಾ ಘಂಟಿಯವರು ಮನೆಗೆ ಕರೆದರು. ಆಗ ಅನಸೂಯಾ ಕಾಂಬಳೆಯವರು ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋದರು. ಮಲ್ಲಿಕಾ ಘಂಟಿಯವರ ಮನೆಯಲ್ಲಿ ನಡೆದ ಮಾತುಕತೆ ಆಪ್ತವಾಗಿದ್ದವು. ಯಾವುದೋ ಮಾತಿಗೆ ನನ್ನ ಬ್ಯಾಗಿನಲ್ಲಿದ್ದ ಈ ಕೃತಿಯ ಹಸ್ತಪ್ರತಿಯನ್ನು ಅವರಿಗೆ ತೋರಿಸಿದೆ. ತಕ್ಷಣಕ್ಕೆ ಕಣ್ಣಾಡಿಸಿದರು. ತಮಗೆ ಬಿಡುವಾದಾಗ ಓದಿ ಮತ್ತು ಏನಾದರು ಸಲಹೆ ಸೂಚನೆಗಳಿದ್ದರೆ ಕೊಡಿ ಎಂದು ಕೇಳಿಕೊಂಡೆ. ಅವರು ಅವತ್ತೇ ರಾತ್ರಿಯೆಲ್ಲ ಈ ಕೃತಿಯನ್ನು ಓದಿದ್ದಲ್ಲದೆ ಕೈಬರಹದ ಎರಡು ಪುಟಗಳನ್ನು ಬರೆದು ಒಂದು ಕವರಿನಲ್ಲಿಟ್ಟು ಮರುದಿನ ರಾತ್ರಿ ನನಗೆ ತಲುಪಿಸಿದ್ದರು. ಈಗಲೂ ಇದು ನನಗೊಂದು ಅಚ್ಚರಿಯ ಸಂಗತಿಯಾಗಿದೆ.”