ಕಂದಗೆ ಬೇಕು ಕೌಶಲ
ಈಗಿನ ದಿನಗಳಲ್ಲಿ ನಮ್ಮ ಮಕ್ಕಳಿಗೆ ಮನೆಯಲ್ಲಿ ಏನು ಕಲಿಸುತ್ತಿದ್ದೇವೆ? ಶಾಲೆಗಳಲ್ಲಿ ಏನು ಕಲಿಸಲಾಗುತ್ತಿದೆ? ಎಂದು ಒಂದು ಕ್ಷಣ ಯೋಚಿಸಿ. ಈಗ ಶೇಕಡಾ 80ರಷ್ಟು ಕುಟುಂಬಗಳು ಒಂಟಿ ಕುಟುಂಬಗಳಾಗಿವೆ. ಅಲ್ಲಿ ಮಕ್ಕಳಿಗೆ ಒಳ್ಳೆಯ ಮೌಲ್ಯಗಳನ್ನು ಕಲಿಸಲು ಅಜ್ಜ-ಅಜ್ಜಿಯರು ಹಾಗೂ ಹಿರಿಯರು ಆ ಕುಟುಂಬಗಳಲಿಲ್ಲ. ಹೆತ್ತವರಿಗಂತೂ ಮನೆಗೆಲಸಗಳ ನಿರ್ವಹಣೆ ಮತ್ತು ವೃತ್ತಿಯ ಒತ್ತಡದಿಂದಾಗಿ ಮಕ್ಕಳ ಜೊತೆ ನಿರಾಳವಾಗಿ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಶಾಲೆಗಳಲ್ಲಂತೂ ಸಿಲೆಬಸ್ಸಿನಲ್ಲಿ ಕಡ್ಡಾಯ ಮಾಡಿದ್ದನ್ನಷ್ಟೇ ಕಲಿಸಲಾಗುತ್ತಿದೆ.
ಇನ್ನು ವಾರ್ತಾ ಚಾನೆಲುಗಳಲ್ಲಿ, ಅಂತರ್ಜಾಲದಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ರಾಶಿರಾಶಿ ಮಾಹಿತಿ ಸ್ಫೋಟವಾಗುತ್ತಿದೆ. ಆದರೆ ಅದರಲ್ಲಿ ಸಮಾಜಮುಖಿಯಾದ ಮಾಹಿತಿ ಹುಡುಕಿದರೂ ಸಿಗದು. ಇದರಿಂದಾಗಿ ಇಂದಿನ ಮಕ್ಕಳಿಗೆ ಜೀವನ ಕೌಶಲಗಳನ್ನು ಕಲಿಯಲು ಅವಕಾಶವೇ ಇಲ್ಲವಾಗಿದೆ.
ಈ ಹಿನ್ನೆಲೆಯಲ್ಲಿ, ಪ್ರಸಿದ್ಧ ಮನೋವೈದ್ಯಕೀಯ ಪರಿಣತರೂ ಕನ್ನಡದ ವೈದ್ಯಸಾಹಿತಿಯೂ ಆಗಿರುವ ಡಾ. ಕೆ. ಆರ್ ಶ್ರೀಧರ್ ಅವರ ಈ ಕೃತಿ ಉಲ್ಲೇಖಿತ ಕೊರತೆಯನ್ನು ನೀಗಲು ಅಗತ್ಯವಾದ ಪ್ರಾಥಮಿಕ ಮಾಹಿತಿಯನ್ನು ಒಳಗೊಂಡಿದೆ. ಇದರಲ್ಲಿ ಲೇಖಕರು ಈ ಕೆಳಗಿನ ಜೀವನ ಕೌಶಲಗಳ ಬಗ್ಗೆ ಸರಳ ಭಾಷೆಯಲ್ಲಿ ಉಪಯುಕ್ತ ಮಾಹಿತಿ ನೀಡಿದ್ದಾರೆ:
1) ಆಹಾ ಇದೇನು ದೊಡ್ಡ ಸಮಸ್ಯೆಯಲ್ಲ (Problem Solving)
2) ಅಂತಿಮ ತೀರ್ಮಾನಕ್ಕೆ ಬೇಕು ಜಾಣತನ (Decision Making)
3) ಏನು? ಎಲ್ಲಿ? ಹೇಗೆ? ಎಂಬುದನ್ನು ಯೋಚಿಸಿ - ವಿಮರ್ಶಾತ್ಮಕ ಆಲೋಚನೆ (Critical Thinking)
4) ಹೊಸತನ್ನು ಕಾಣುವ ಹಂಬಲ - ಸೃಜನಾತ್ಮಕ ಆಲೋಚನೆ (Creative Thinking)
5) ಪರಸ್ಪರ ಸಂಬಂಧ (Interpersonal Relationship)
6) ನುಡಿದರೆ ಮುತ್ತಿನ ಹಾರದಂತಿರಬೇಕು - ಪರಿಣಾಮಕಾರಿ ಸಂವಹನ (Effective Communication)
7) ತನ್ನ ಬಗ್ಗೆ ಅರಿವು (Self Awareness)
8) ಇತರರನ್ನು ಆಲಿಸಿ ಅರಿಯಬೇಕು (Understanding Others)
9) ತನ್ನಂತೆ ಪರರ ಬಗೆದೊಡೆ (Empathy)
10) ಭಾವನೆಗಳು ಕದಡಿದಾಗ (Emotional Control)
11) ಒತ್ತಡಗಳ ನಿರ್ವಹಣೆ (Managing Stress)
ಹೆತ್ತವರೂ ಯುವಜನರೂ ಈ ಪುಸ್ತಕ ಓದಿಕೊಂಡು, ಇದರಲ್ಲಿರುವ ಜೀವನ ಕೌಶಲಗಳನ್ನು ಅಳವಡಿಸಿಕೊಂಡರೆ, ತಮ್ಮ ಬದುಕಿನ ಹಲವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.
ಈ ಪುಸ್ತಕದ ಬಗ್ಗೆ ಲೇಖಕರು ಬರೆದಿರುವ ಪ್ರಾಸ್ತಾವಿಕ ಮಾತುಗಳು: “... ಸಮಾಜದಲ್ಲಿ ಬುದ್ಧಿವಂತರೆನಿಸಿ ಕೊಂಡಿರುವ ನಮಗೆ ನೆಮ್ಮದಿಯ ಕೊರತೆ, ಅಭದ್ರತೆಯ ಭಾವನೆ, ಗೊಂದಲದ ಮನಸ್ಸು. ಇವುಗಳ ನಡುವೆ ಹೃದಯ ಸಂಬಂಧೀ ಕಾಯಿಲೆಗಳು, ಕ್ಯಾನ್ಸರ್ ಮತ್ತು ಮನೋದೈಹಿಕ ಕಾಯಿಲೆಗಳು ಹೆಚ್ಚಾಗುತ್ತಲೇ ಇವೆ. ಅದೇ ರೀತಿಯಲ್ಲಿ ಪ್ರತಿಯೊಬ್ಬರಿಗೂ ಸದಾ ಮಾನಸಿಕ ಒತ್ತಡ, ಒತ್ತಡದಿಂದ ಹಲವಾರು ಮಾನಸಿಕ ಕಾಯಿಲೆಗಳು. ಅದರಲ್ಲಿಯೂ ದಿನಗಳೆದಂತೆ ಖಿನ್ನತೆ ಎಂಬ ಮಾನಸಿಕ ಕಾಯಿಲೆಯಿಂದ ಬಳಲುವವರು ಹೆಚ್ಚಾಗುತ್ತಿದ್ದಾರೆ. ನಮ್ಮ ದೇಶದ ಬೆನ್ನೆಲುಬು ಎಂದು ಕರೆಸಿಕೊಳ್ಳುವ ಯುವ ಪೀಳಿಗೆ ಮದ್ಯ, ಮಾದಕ ವಸ್ತುಗಳ ಚಟಗಳಿಗೆ, ದಂಗೆಕೋರತನಕ್ಕೆ, ಖಿನ್ನತೆಗೆ ತುತ್ತಾಗುವ ಸಂದರ್ಭಗಳು ಹೆಚ್ಚಾಗುತ್ತಿವೆ. …
ವ್ಯಕ್ತಿತ್ವದಲ್ಲಿನ ಗುಣಗಳು ನಾವು ಜನಿಸಿದ ಕ್ಷಣದಿಂದಲೇ ನಮ್ಮಲ್ಲಿ ಮೂಡಲು ಪ್ರಾರಂಭವಾಗುತ್ತವೆ. ಪಾಲಕರ ವ್ಯಕ್ತಿತ್ವದ ಗುಣಗಳು ಆತ್ಮೀಯತೆಯಿಂದ ಕೂಡಿರಬೇಕು. ಆಗ ಮಗುವು ಒಳ್ಳೆಯ ಗುಣಗಳನ್ನು ತನ್ನಲ್ಲಿ ಅಳವಡಿಸಿಕೊಳ್ಳಲು ಅನುವಾಗುತ್ತದೆ. ಇದರಿಂದ ಭವಿಷ್ಯದಲ್ಲಿ ಅವಶ್ಯವಾದ ಜೀವನ ಕೌಶಲಗಳನ್ನು ರೂಢಿಸಿಕೊಂಡು ನೆಮ್ಮದಿಯ ಜೀವನ ನಡೆಸಲು ಸುಲಭವಾಗುತ್ತದೆ. ಆರೋಗ್ಯಕರ ವ್ಯಕ್ತಿತ್ವದಿಂದ ಎಷ್ಟೋ ಕಾಯಿಲೆಗಳನ್ನು ದೂರವಿಡಬಹುದು.
ಶರವೇಗದಲ್ಲಿ ಬದಲಾಗುತ್ತಿರುವ ಇಂದಿನ ಸಮಾಜದಲ್ಲಿ ಸಂಬಂಧಗಳು ಮರೆಯಾಗುತ್ತಿವೆ. ಆತ್ಮೀಯ ಸಂವಹನದ ಕೊರತೆ ಎದ್ದು ಕಾಣುತ್ತಿದೆ. ಕೌಟುಂಬಿಕ ಘರ್ಷಣೆಗಳು ಹೆಚ್ಚಾಗುತ್ತಿವೆ. ಕೋಪ, ದ್ವೇಷ, ಅಸೂಯೆಗಳನ್ನು ವ್ಯಾಪಕವಾಗಿ ಕಾಣುತ್ತಿದ್ದೇವೆ. ಹೆಚ್ಚಿನವರನ್ನು ಮಾನಸಿಕ ಅಭದ್ರತೆ ಕಾಡುತ್ತಿದೆ. ಇದಕ್ಕೆ ಕಾರಣ ಜೀವನ ಕೌಶಲಗಳ ಕೊರತೆ. ಈ ಕೊರತೆಗಳನ್ನು ನೀಗಿಸಲು ಪೋಷಕರು ಮಕ್ಕಳಲ್ಲಿ ಈ ಗುಣಗಳನ್ನು ಹುಟ್ಟುಹಾಕುವುದು ಸುಲಭ ಪರಿಹಾರ. … ಮೇಲಿನ ಅಂಶಗಳನ್ನು ತುಲನೆ ಮಾಡಿ ಈ ಕೃತಿಯನ್ನು ಬರೆಯಲು ತೀರ್ಮಾನಿಸಿದೆ. ಇದರಲ್ಲಿ ಹೆಚ್ಚಿನ ಉದಾಹರಣೆಗಳನ್ನು ಪ್ರಚಲಿತ ಸಮಾಜದಲ್ಲಿ ನಾವು ನೋಡುವ, ನನ್ನಲ್ಲಿ ಸಲಹೆಗಾಗಿ ಬರುವವರ ಕುರಿತೇ ಉಲ್ಲೇಖಿಸಿದ್ದೇನೆ.”