ಕಗ್ಗನ ಬಯಕೆ
ಕವನ
ಬೆಣ್ಣೆಮುದ್ದೆಯನೆತ್ತಿ ಆಗಸದಿಲಿಟ್ಟಂತೆ
ಬಿಡಿ ಹೂ ಬಿಡಿಬಿಡಿಸಿ ಬೀಳಿಸಿದಂತೆ
ಮಗುವ ನಗುವ ಮೊಗದ ಸಿರಿಯಂತೆ
ಮಧುರ ಸ್ವರವ ತೀಡಿ ತೀಡಿ ತಿದ್ದಿದಂತೆ
ಬೆಳದಿಂಗಳ ಬಾಲೆಯ ಬಳುಕುವ ಲಾಸ್ಯದಂತೆ
ವಿರಹಿಯ ಮಾದಕ ಮಧುರ ನೋವಿನಂತೆ
ತರುಣಿತಾಯ ಪುತ್ರನಪ್ಪುಗೆಯ ಸೊಕ್ಕಿನ ಸ್ವಾದದಂತೆ
ಬೆಳದಿಂಗಳಲಿ ದೂರವೇಣುವಿನಿಂಪಿನುಲಿಯಂತೆ
ಪಾರಿಜಾತದ ಕೊರೆವ ಮಧುರ ಕಂಪಿನಂತೆ
ಪಂಪನ ಪದಗಳೋಘದ ಪೆಂಪಿನಂತೆ
ರನ್ನನ ಶಬ್ದಭಂಡಾರ ಸಿರಿಯಂತೆ
ಹರಿಹರರ ರಗಳೆಗಳ ಮಳೆಯಂತೆ
ರಾಘವಾಂಕನ ಷಟ್ಪದಿಯ ಭವ್ಯತೆಯಂತೆ
ಗದುಗಿನನಾರಣಪ್ಪನ ಶ್ರೀಕ್ರಿಷ್ಣ ಮೋಹದಗ್ಗಳಿಕೆಯಂತೆ
ದತ್ತರಾಮನ ಗಂಗೆ ಭೋರ್ಗರೆದಂತೆ
ನೆಲಸೆನ್ನ ನಾಲಿಗೆಯಮೇಲೆ ತ್ರಿಭುವನ
ಭುವನ ಸುಂದರಿತಾಯೆ ಕನ್ನಡ ಭುವನೇಶ್ವರಿ.