ಕಗ್ಗ ದರ್ಶನ – 1 (1)

ಕಗ್ಗ ದರ್ಶನ – 1 (1)

“ಮಂಕುತಿಮ್ಮನ ಕಗ್ಗ” ಮತ್ತು “ಮರುಳ ಮುನಿಯನ ಕಗ್ಗ” ಮಾನ್ಯ ಡಿ.ವಿ. ಗುಂಡಪ್ಪನವರು ಮನುಕುಲಕ್ಕೆ ಇತ್ತ ಮಹಾನ್ ಕೊಡುಗೆಗಳು. ಈ ಮೇರುಕೃತಿಗಳ ಮುಕ್ತಕಗಳಲ್ಲಿ ಅಡಗಿವೆ ನಮ್ಮ ಬದುಕಿನ ಎಲ್ಲ ಪ್ರಶ್ನೆಗಳಿಗೆ ಉತ್ತರಗಳು. ಅವುಗಳಲ್ಲಿ ಕೆಲವು ಮುಕ್ತಕಗಳ ಹೊಳಹನ್ನು ಓದುಗರ ಮುಂದಿಡುವ ಪುಟ್ಟ ಪ್ರಯತ್ನ ಈ ಸರಣಿ ಬರಹಗಳು. ಪ್ರತಿಯೊಂದು ಬರಹದ ಮೊದಲ ಭಾಗದಲ್ಲಿ “ಮಂಕುತಿಮ್ಮನ ಕಗ್ಗ”ದ ಒಂದು ಮುಕ್ತಕ ಮತ್ತು ಎರಡನೆಯ ಭಾಗದಲ್ಲಿ “ಮರುಳ ಮುನಿಯನ ಕಗ್ಗ”ದ ಒಂದು ಮುಕ್ತಕವನ್ನು ಅವುಗಳ ಸಂದೇಶದ ಸಹಿತ ಓದುಗರ ಮುಂದಿರಿಸುತ್ತೇನೆ. ಸಂದೇಶಗಳ ಸಾಮ್ಯತೆಯ ದೃಷ್ಠಿಯಿಂದ ಈ ಎರಡೂ ಮುಕ್ತಕಗಳನ್ನು ಆಯ್ದುಕೊಂಡಿದ್ದೇನೆ.
ಅಕ್ಕಿಯೊಳಗನ್ನವನು ಮೊದಲಾರು ಕಂಡವನು?
ಅಕ್ಕರದ ಬರಹಕ್ಕೆ ಮೊದಲಿಗನದಾರು?
ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ
ದಕ್ಕುವುದೆ ನಿನಗೆ ಜಸ – ಮಂಕುತಿಮ್ಮ
ಇದರಲ್ಲಿ ಮಾನ್ಯ ಡಿ.ವಿ. ಗುಂಡಪ್ಪನವರು ಎತ್ತುವ ಪ್ರಶ್ನೆ, “ನಿನಗೆ ಕೀರ್ತಿ (ಜಸ) ಸಿಗಲಿಕ್ಕುಂಟೆ?” ಯಾಕೆಂದರೆ, ತಲೆತಲಾಂತರಗಳಿಗೆ ಸಲ್ಲುವಂತಹ ಮಹಾನ್ ಉಪಕಾರ ಮಾಡಿದವರನ್ನೇ (ಆದಿ ಬಂಧುಗಳನ್ನು) ಈ ಜಗತ್ತು ನೆನಪಿಟ್ಟುಕೊಂಡಿಲ್ಲ. ಉದಾಹರಣೆಗೆ, ಕಾಡಿನ ಹುಲ್ಲಿನ ಬೀಜಗಳಾದ ಅಕ್ಕಿ ಬೇಯಿಸಿ ತಿಂದರೆ ಹಸಿವು ತಣಿಯುತ್ತದೆ ಎಂಬುದನ್ನು ಮೊತ್ತಮೊದಲಾಗಿ ಪತ್ತೆ ಮಾಡಿದ ವ್ಯಕ್ತಿ ಯಾರು? ಅಕ್ಷರದ ಬರಹಕ್ಕೆ ನಾಂದಿ ಹಾಡಿದವನು/ಳು ಯಾರು? ಇವೆರಡೂ ಅಸಾಮಾನ್ಯ ಸಾಧನೆಗಳು. ಲಕ್ಷಲಕ್ಷ ಮನುಷ್ಯರು ಬದುಕಿ ಉಳಿಯಲು ಅನ್ನ ಕಾರಣವಾಯಿತು. ವರುಷದಿಂದ ವರುಷಕ್ಕೆ ಮನುಷ್ಯನ ವಿಕಾಸಕ್ಕೆ ಒತ್ತಾಸೆಯಾದ ಭಾಷೆಯ ಬೆಳವಣಿಗೆಗೆ ಅಕ್ಷರಗಳು ಕಾರಣವಾದವು.
ಇಂತಹ ಬೆಲೆಕಟ್ಟಲಾಗದ ಅನ್ವೇಷಣೆ ಮಾಡಿದವರ ಹೆಸರನ್ನೇ ಈ ಜಗತ್ತು ದಾಖಲಿಸಿಲ್ಲ. ಹಾಗಿರುವಾಗ, ಸಣ್ಣಪುಟ್ಟ ಸಾಧನೆಗಳನ್ನು ಮಾಡುವ ಮನುಷ್ಯರು, ತಮ್ಮ ಹೆಸರು ಶಾಶ್ವತವಾಗಿ ಉಳಿಯಬೇಕು ಎಂದು ಹಂಬಲಿಸುವುದಕ್ಕೆ ಅರ್ಥವಿದೆಯೇ? “ಇದು ನಾನು ಮಾಡಿದ್ದು, ಅದು ನನ್ನ ಕೊಡುಗೆ” ಎಂದು ಡಂಗುರ ಸಾರುವುದು ಸರಿಯೇ? ದೇವಸ್ಥಾನಗಳಲ್ಲಿ ಹಲವರ ಹೆಸರು ರಾರಾಜಿಸುವುದನ್ನು ಕಂಡಿದ್ದೀರಾ? ಈ ಗಡಿಯಾರ ಇವರು ಕೊಟ್ಟದ್ದು, ಆ ಗೋಡೆ ಅವರು ಕಟ್ಟಿಸಿದ್ದು ಎಂಬ ಫಲಕಗಳು ದೇವರ ಮೂರ್ತಿಯ ಮುಂದೆ! ಹೀಗೆಲ್ಲ ಮಾಡಿದರೆ ನನಗೆ ಕೀರ್ತಿ ದಕ್ಕುವುದೇ ಎಂಬ ಪ್ರಶ್ನೆ ಮತ್ತೆಮತ್ತೆ ಮನದಲ್ಲಿ ಮೂಡಿ ಬರಲಿ.