ಕಗ್ಗ ದರ್ಶನ – 10 (2)

ಕಗ್ಗ ದರ್ಶನ – 10 (2)

ಎನಿತ ಜಗಕಿತ್ತೆ ನೀಂ ಕೊಂಡೆಯೆನಿತದರಿಂದ
ಗಣಿತವದೆ ನಿನ್ನ ಯೋಗ್ಯತೆಗೆ ನೆನೆದದನು
ಉಣು ಬೆಮರಿ, ನಗು ನೊಂದು, ನಡೆ ಕುಂಟುತಲುಮೆಂದು
ಹಣೆಯ ಬರಹವೊ ನಿನಗೆ – ಮರುಳ ಮುನಿಯ
ಈ ಭೂಮಿಗೆ ನಾವು ಬಂದಾಗಿದೆ. ಪ್ರತಿಯೊಬ್ಬರೂ ಬಂದ ಕ್ಷಣದಿಂದಲೇ ಒಂದು ಲೆಕ್ಕಾಚಾರ ಶುರುವಾಗಿದೆ: ಈ ಜಗತ್ತಿಗೆ ಕೊಟ್ಟದ್ದು ಎಷ್ಟು? ಈ ಜಗತ್ತಿನಿಂದ ಪಡೆದದ್ದು ಎಷ್ಟು? ಈ ಗಣಿತವೇ ನಮ್ಮ ಯೋಗ್ಯತೆಯ ಮಾನದಂಡ ಎಂದು ವಿವರಿಸುತ್ತಾರೆ ಮಾನ್ಯ ಡಿ.ವಿ.ಜಿ.ಯವರು.
ನಾವು ಪಡೆದದ್ದಕ್ಕಿಂತ ಕೊಟ್ಟದ್ದು ಜಾಸ್ತಿಯಿದ್ದರೆ ಮಾತ್ರ ಇಲ್ಲಿ ನಮಗೊಂದು ಯೋಗ್ಯತೆ ಎಂಬುದನ್ನು ನಾವು ಮನಗಾಣಬೇಕು. ಹಾಗೆಯೇ ಬದುಕಬೇಕು – ಆಗ ನಮ್ಮ ಬದುಕಿಗೊಂದು ಬೆಲೆ. ಕಷ್ಟಪಟ್ಟು ದುಡಿದು ಅದರ ಫಲವನ್ನು ಮಾತ್ರ ಉಣ್ಣುವವರಾಗಬೇಕು. ದಿನದಿನವೂ ಎದುರಾಗುವ ಸಂಕಟಗಳನ್ನು ಅನುಭವಿಸಿ, ಹರುಷದಿಂದ ಬಾಳಬೇಕು. ಜೀವನದ ಎಡರುತೊಡರುಗಳಿಂದ ನಾವು ಕುಂಟಬೇಕಾದೀತು; ಆದರೆ ಬದುಕಿನ ಹಾದಿಯಲ್ಲಿ ನಡೆಯುತ್ತಲೇ ಇರಬೇಕು – ಕುಂಟುತ್ತಲೇ ನಡೆಯಬೇಕು. ಅದೆಲ್ಲ ನಮ್ಮನಮ್ಮ ಹಣೆಯಬರಹ – ಅದನ್ನು ಅನುಭವಿಸಲೇ ಬೇಕು.
ಧೀಮಂತ ವ್ಯಕ್ತಿತ್ವದ ಡಿ.ವಿ. ಗುಂಡಪ್ಪನವರು ಹೀಗೆ ಹೇಳಿದ್ದು ಮಾತ್ರವಲ್ಲ; ಹಾಗೆಯೇ ಬಾಳಿದರು. ಡಾ. ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು ಆಡಳಿತದ ವಿಷಯಗಳಲ್ಲಿ ಕೆಲವೊಮ್ಮೆ ಡಿ.ವಿ. ಗುಂಡಪ್ಪನವರ ಸಲಹೆ ಕೇಳುತ್ತಿದ್ದರು. ಅದಕ್ಕಾಗಿ ಗುಂಡಪ್ಪನವರು ಸಂಭಾವನೆ ಪಡೆಯಬೇಕು ಎಂಬುದು ಡಾ. ವಿಶ್ವೇಶ್ವರಯ್ಯನವರ ಆಗ್ರಹ. ಹಾಗಾಗಿ, ಡಿ.ವಿ.ಜಿ.ಯವರು ಸಂಭಾವನೆಯ ಚೆಕ್ಕುಗಳನ್ನು ಸ್ವೀಕರಿಸಿದರು. ತಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲದಿದ್ದರೂ, ಸಂಭಾವನೆಯ ಯಾವುದೇ ಚೆಕ್ಕನ್ನು ಡಿ.ವಿ.ಜಿ.ಯವರು ನಗದೀಕರಿಸಲಿಲ್ಲ. ಸರಕಾರಕ್ಕೆ ಸಲಹೆ ನೀಡುವುದು ತನ್ನ ಧರ್ಮ, ಅದಕ್ಕಾಗಿ ಸಂಭಾವನೆ ಪಡೆಯಬಾರದು ಎಂದು ನಂಬಿದ ಮಹಾನ್ ಮಾನವ ಅವರು.
ಇಂದು ಏನಾಗಿದೆ? ನಾವೆಲ್ಲರೂ ಸಮಾಜದಿಂದ, ದೇಶದಿಂದ ಇನ್ನಷ್ಟು ಮತ್ತಷ್ಟು ಪಡೆಯುತ್ತಲೇ ಇರುತ್ತೇವೆ. ಬದಲಾಗಿ, ಸಮಾಜ ಹಾಗೂ ದೇಶಕ್ಕೆ ಕೊಡುವ ಚಿಂತನೆ ನಮ್ಮಲ್ಲಿ ಮೂಡುವುದೇ ಇಲ್ಲ. ಕರ್ನಾಟಕ ಸರಕಾರದಿಂದ ಪಡಿತರ ಕಾರ್ಡ್ ಪಡೆದ ಕುಟುಂಬಗಳ ಸಂಖ್ಯೆ ಒಂದು ಕೋಟಿ ಮೂರು ಲಕ್ಷ. ಇದರಲ್ಲಿ ಅಕ್ರಮ ಕಾರ್ಡುಗಳ ಸಂಖ್ಯೆ ೧೫ ಲಕ್ಷಕ್ಕಿಂತ ಅಧಿಕ! ಇದು ನಮ್ಮ ನೈತಿಕ ಪತನವನ್ನು ತೋರಿಸುತ್ತದೆ. ಇನ್ನಾದರೂ ಕೊಡಲು ಕಲಿಯೋಣ.