ಕಗ್ಗ ದರ್ಶನ – 11 (1)

ಕಗ್ಗ ದರ್ಶನ – 11 (1)

ಮನದಿಂದ ಮನಕೆ ಪಾರ್ವುದು ಬಾಳಿನುರಿಯ ಕಿಡಿ
ಮನೆಯಿಂದ ಮನೆಗಲೆವ ಗಾಳಿ ಹೊಗೆಯಂತೆ
ಮನುಜರ ಪರಸ್ಪರೋದ್ರೇಕ ಜಗದ ವಿಲಾಸ
ಮನವೆ ಪರಮಾದ್ಭುತವೊ – ಮಂಕುತಿಮ್ಮ
ಮನಸ್ಸಿನ ಪರಿಯನ್ನು ತಮ್ಮ ಕೆಲವು ಮುಕ್ತಕಗಳಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ ಮಾನ್ಯ ಡಿ.ವಿ. ಗುಂಡಪ್ಪನವರು. ಆ ಮೂಲಕ, ಮನೋವ್ಯಾಪಾರವನ್ನು ಅರ್ಥ ಮಾಡಿಕೊಳ್ಳಲು ಸಹಕರಿಸುವ ಒಳನೋಟಗಳನ್ನು ಒದಗಿಸಿದ್ದಾರೆ.
ಈ ಮುಕ್ತಕದಲ್ಲಿ ಅವರು ಮನಸ್ಸಿಗೆ ನೀಡಿರುವ ಉಪಮೆ ಮನೆಯಿಂದ ಮನೆಗೆ ಅಲೆಯುವ ಗಾಳಿ ಮತ್ತು ಹೊಗೆ. ಇವನ್ನು ಯಾರೂ ಹಿಡಿದಿಡಲು ಸಾಧ್ಯವಿಲ್ಲ. ಅವು ನಮ್ಮ ಮನೆಯ ಸಂದಿಗೊಂದಿಗಳಿಂದ ತೂರಿಕೊಂಡು ಪಕ್ಕದ ಮನೆಗಳಿಗೆ, ಅಲ್ಲಿಂದ ಆಚೆಯ ಮನೆಗಳಿಗೆ ಹೋಗಿಯೇ ಹೋಗುತ್ತವೆ. ನಮ್ಮ ಬದುಕಿನ ಬೆಂಕಿಯ ಕಿಡಿಗಳೂ ಹಾಗೆಯೇ. ಕೋಪ, ರೋಷ, ದ್ವೇಷ, ಹಗೆತನ, ನೀಚತನ ಇಂತಹ ಕೆಟ್ಟ ಭಾವನೆಗಳೆಲ್ಲ ಜ್ವಾಲಾಮುಖಿಗಳಂತೆ. ಇವುಗಳು ಸ್ಫೋಟಿಸಿದಾಗೆಲ್ಲ ಕೆನ್ನಾಲಗೆಗಳು ಮನಸ್ಸಿನಿಂದ ಮನಸ್ಸಿಗೆ ಹಾರುತ್ತವೆ – ವಿದ್ವುದ್ವೇಗದಲ್ಲಿ ಇಡೀ ಜಗತ್ತನ್ನೇ ವ್ಯಾಪಿಸುತ್ತವೆ.
ಇತ್ತೀಚೆಗೆ, ಬಂಗಾಲ ಕೊಲ್ಲಿಯಲ್ಲಿ ಎಲ್ಲಿಯೋ ಹುಟ್ಟಿದ ಬಿರುಗಾಳಿ, ಚಂಡಮಾರುತವಾಗಿ ಬೆಳೆದು ಆಂಧ್ರದ ವಿಶಾಖಪಟ್ಟಣಕ್ಕೆ, ಒರಿಸ್ಸಾದ ಹಳ್ಳಿಗಳಿಗೆ ಅಪ್ಪಳಿಸಿ ರುದ್ರನರ್ತನ ಮಾಡಿದ್ದನ್ನು ನೆನೆಯೋಣ. ಹಾಗೆಯೇ ಯಾರೋ ಕೆಲವರ ಮನಸ್ಸಿನಲ್ಲಿ ಹುಟ್ಟಿದ ದ್ವೇಷದ ಕಿಡಿ, ಯುಎಸ್ಎ ದೇಶದ ನ್ಯೂಯಾರ್ಕಿನ ಅತಿ ಎತ್ತರದ ಬಹುಮಹಡಿ ಅವಳಿ ಕಟ್ಟಡಗಳನ್ನು ಧ್ವಂಸ ಮಾಡುವ ಸಂಚು ರೂಪಿಸಿತು. ಅದಕ್ಕಾಗಿ ದೊಡ್ಡ ದಾಳಿಯ ತಂತ್ರ ಮಾಡಿ, ವಿಮಾನವನ್ನೇ ಆ ಅವಳಿಗೋಪುರಗಳಿಗೆ ಅಪ್ಪಳಿಸಿ ಅವನ್ನು ನಿರ್ನಾಮ ಮಾಡಿತು!
ಹೀಗೆ ಮನುಷ್ಯರ ಕ್ರೋಧ, ಉದ್ವೇಗ, ವೈರ ಭಾವನೆಗಳ ಸ್ಫೋಟ ಹಾಗೂ ತಾಕಲಾಟ, ಈ ಜಗತ್ತಿನಲ್ಲಿ ಒಂದು ಆಟವಿದ್ದಂತೆ. ಕ್ಷಣಕ್ಷಣವೂ ಅದರ ಬದಲಾವಣೆಯೇ ಒಂದು ಬೆರಗು. ಮುಂದೇನಾದೀತೆಂದು ಯಾರೂ ಊಹಿಸಲಾಗದು. ಹಿಂದೆ ಆದಂತೆಯೇ ಮುಂದೆಯೂ ಆದೀತೆಂದು ನಿರೀಕ್ಷಿಸಲಾಗದು. ಆದ್ದರಿಂದಲೇ ನಮ್ಮ ಮನಸ್ಸೆಂಬುದು ಪರಮಾದ್ಭುತ.