ಕಗ್ಗ ದರ್ಶನ – 12 (1)

ಕಗ್ಗ ದರ್ಶನ – 12 (1)

ಮನವನಾಳ್ವುದು ಹಟದ ಮಗುವನಾಳುವ ನಯದೆ
ಇನಿತನಿತು ಸವಿಯುಣಿಸು ಸವಿಕಥೆಗಳಿಂದೆ
ಅನುಕೂಲಿಸದು ಬರಿಯ ಕೂಗು ಬಡಿತಗಳಿನದು
ಇನಿತಿತ್ತು ಮರಸಿನಿತ – ಮಂಕುತಿಮ್ಮ
ಮನಸ್ಸನ್ನು ಮಗುವಿಗೆ ಹೋಲಿಸುತ್ತ, ಈ ಮುಕ್ತಕದಲ್ಲಿ, ಮನಸ್ಸನ್ನು ಸಂಭಾಳಿಸುವ ಬಗ್ಗೆ ಒಳನೋಟಗಳನ್ನು ತೋರಿದ್ದಾರೆ ಮಾನ್ಯ ಡಿ.ವಿ. ಗುಂಡಪ್ಪನವರು.
ಹಟ ಹಿಡಿದ ಮಗುವನ್ನು ನಾವು ಹೇಗೆ ಸಮಾಧಾನ ಮಾಡುತ್ತೇವೆ? ಮನಸ್ಸನ್ನೂ ಹಾಗೆಯೇ ಸಮಾಧಾನ ಮಾಡಬೇಕು. ಸವಿಯಾದ ತಿನಿಸನ್ನು ಸ್ವಲ್ಪಸ್ವಲ್ಪವೇ ತಿನ್ನಿಸುತ್ತಾ, ಮುದ ನೀಡುವ ಕತೆಗಳನ್ನು ಹೇಳುತ್ತಾ ಹಟಮಾರಿ ಮಗುವನ್ನು ಒಲಿಸಿಕೊಳ್ಳುತ್ತೇವೆ. ಅದೇ ರೀತಿಯಲ್ಲಿ ಚಂಡಿ ಹಿಡಿದ ಮನಸ್ಸಿಗೆ ನಿಧಾನವಾಗಿ ವಾಸ್ತವದ ಅರಿವು ಮೂಡಿಸುತ್ತಾ, ದುಡುಕಿನ ಪರಿಣಾಮಗಳನ್ನು ಮನದಟ್ಟು ಮಾಡಿಸುತ್ತಾ ಸಮಾಧಾನ ಪಡಿಸಬೇಕು.
ಜಿದ್ದಿಗೆ ಬಿದ್ದ ಮನಸ್ಸು ಯಾರಿಗೋ ಬುದ್ಧಿ ಕಲಿಸಲೇ ಬೇಕೆಂದು ಹಟ ಮಾಡುತ್ತದೆ. ಬೇರೊಬ್ಬರ ಮೇಲೆ ಸೇಡು ತೀರಿಸಬೇಕೆಂದು ಕತ್ತಿ ಮಸೆಯುತ್ತದೆ. ಆಗ ಮನಸ್ಸಿನಲ್ಲಿ ಅರಿವು ಮೂಡಿಸಬೇಕಾಗುತ್ತದೆ: ಇತರರಿಗೆ ಬುದ್ಧಿ ಕಲಿಸಲು ನಮ್ಮಿಂದಾಗದು; ಅವರವರೇ ಬುದ್ಧಿ ಕಲಿತುಕೊಳ್ಳ ಬೇಕಾಗುತ್ತದೆ. ನಾವು ಬದಲಾಗ ಬಹುದು ವಿನಃ ಇತರರನ್ನು ಬದಲಾಯಿಸಲಾಗದು ಎಂಬುದೇ ವರ್ತನಾ ಬದಲಾವಣೆಯ ಮೂಲತತ್ವ.
ಹಟ ಮಾಡುವ ಮಗುವಿನ ಮೇಲೆ ರೇಗಿದರೆ ಪ್ರಯೋಜನ ಇದೆಯೇ? ಆ ಮಗುವನ್ನು ಹಿಡಿದು ಹಿಗ್ಗಾಮುಗ್ಗ ಬಡಿದರೆ ಮಗು ಹಟ ಬಿಡುತ್ತದೆಯೇ? ಇಲ್ಲ, ಇದರಿಂದ ಯಾವ ಪ್ರಯೋಜನವೂ ಇಲ್ಲ. ಮಗು ಇನ್ನಷ್ಟು ರಚ್ಚೆ ಹಿಡಿಯುತ್ತದೆ ವಿನಃ ನಿಮಗೆ ಒಲಿಯುವುದಿಲ್ಲ. ನಮ್ಮ ಮನಸ್ಸೂ ಹಾಗೆಯೇ.
ಸಿಹಿತಿಂಡಿಯನ್ನು ಒಂದಿನಿತು ಕೊಟ್ಟು ಮಗುವಿನ ಹಟವನ್ನು ಒಂದಷ್ಟು ಕಡಿಮೆ ಮಾಡಬೇಕು. ಒಂದು ಒಳ್ಳೆಯ ಕತೆ ಹೇಳಿ ಮಗುವನ್ನು ನಗಿಸಬೇಕು. ನಮ್ಮ ಮನಸ್ಸಿನ ಜೊತೆಯೂ ಇದೇ ತಂತ್ರ ಅನುಸರಿಸಬೇಕು. ಒಳ್ಳೆಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಮನಸ್ಸಿಗೆ ಮುದ ನೀಡಬೇಕು. ಉದಾಹರಣೆಗೆ: ಒಳ್ಳೆಯ ಕತೆಕಾದಂಬರಿಗಳ ಓದು, ಸಂಗೀತ ಕೇಳುವುದು, ಭಜನೆ ಮಾಡುವುದು, ಸಜ್ಜನರ ಸಹವಾಸ. ಕ್ರಮೇಣ ಮನಸ್ಸಿನ ಉದ್ವೇಗ ತಹಬಂದಿಗೆ ಬರುತ್ತದೆ. ಮಂಜಿನಗಡ್ಡೆ ಕರಗಿದಂತೆ ಹಟ ಕರಗಿ, ಮನಸ್ಸು ತಿಳಿಯಾಗುತ್ತದೆ.