ಕಗ್ಗ ದರ್ಶನ – 15 (2)
ಜೀವ ಹೊರೆಯೇನಲ್ಲ, ಬಿಸುಡೆನುವುದೇಕದನು?
ಸಾವು ನಷ್ಟವುಮಲ್ಲ, ಸಾಯೆ ಭಯವೇಕೆ?
ಜೀವಕಂ ಸಾವಿಗಂ ಸಮಸಿದ್ಧನಾದವನೆ
ಕೋವಿದನು ತತ್ವದಲಿ – ಮರುಳ ಮುನಿಯ
“ನನಗೆ ಜೀವನವೇ ಭಾರವಾಗಿದೆ” ಎಂದು ಕೆಲವರು ಹೇಳೋದನ್ನು ಕೇಳಿದ್ದೀರಾ? ಆದರೆ, ಡಿ.ವಿ. ಗುಂಡಪ್ಪನವರು ಹೇಳುತ್ತಾರೆ: ಜೀವ ಹೊರೆಯಲ್ಲ. ಹಾಗಾಗಿ ಅದನ್ನು ಎತ್ತಿ ಬಿಸಾಡು ಎನ್ನುವುದು ಯಾಕೆ? ಜೀವ ಇರುವುದೇ ಬದುಕಲಿಕ್ಕೆ. ಜೀವನದಿಯಲ್ಲಿ ಈಸಬೇಕು, ಈಸಿ ಜಯಿಸಬೇಕು. ಹಾಗೆಯೇ ಸಾವು ಎಂದರೆ ನಾಶ ಎಂದಲ್ಲ. ಸಾವಿನಿಂದ ಯಾವುದೂ ನಷ್ಟವಾಗುವುದಿಲ್ಲ. ಹಾಗಿರುವಾಗ, ಸಾಯಲು ಭಯವೇಕೆ? ಎಂದು ಕೇಳುತ್ತಾರೆ.
ಬದುಕಿನ ದೊಡ್ಡ ಸತ್ಯ ಸಾವು. ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ಸಾಯಲೇ ಬೇಕು. ಈ ಸತ್ಯವನ್ನು ಒಪ್ಪಿಕೊಳ್ಳುವುದೇ ವಿವೇಕ. ಜೀವನವನ್ನೂ, ಜೀವನದ ಕೊನೆಯಾದ ಸಾವನ್ನೂ ಸಮಚಿತ್ತದಿಂದ ಎದುರಿಸುವವನೇ ಬದುಕಿನ ತತ್ವವನ್ನು ತಿಳಿದ ವಿವೇಕಿಯಾಗುತ್ತಾನೆ.
ಅರುಣಿಮಾ ಸಿನ್ಹಾ ರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿ (ಜನನ ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ೧೯೮೮ರಲ್ಲಿ). ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಆಕೆಯನ್ನು ದುಷ್ಟರು ರೈಲಿನಿಂದ ಹೊರಕ್ಕೆ ದೂಡಿದ್ದು ೧೧ ಎಪ್ರಿಲ್ ೨೦೧೧ರಂದು. ಓಡುವ ರೈಲಿನಡಿಗೆ ಬಿದ್ದ ಆಕೆಯ ಎಡಗಾಲೇ ತುಂಡಾಯಿತು. ಇಂತಹ ಪರಿಸ್ಥಿತಿಯಲ್ಲಿ ಯಾರಿಗಾದರೂ ಬದುಕೇ ಭಾರವೆನಿಸುತ್ತಿತ್ತು. ಆದರೆ ಅರುಣಿಮಾ ತನ್ನ ಬದುಕನ್ನು ಸವಾಲಾಗಿ ಸ್ವೀಕರಿಸಿದಳು. ದೊಡ್ಡ ಕನಸು ಕಂಡಳು – ಭೂಮಿಯ ಅತ್ಯಂತ ಎತ್ತರದ ಪರ್ವತ ಶಿಖರವನ್ನೇ ಏರುವ ಕನಸು. ಎಡಗಾಲು ಕಳೆದುಕೊಂಡ ಎರಡೇ ವರುಷಗಳಲ್ಲಿ (೧ ಎಪ್ರಿಲ್ ೨೦೧೩ರಂದು) ಆ ದೊಡ್ಡ ಕನಸನ್ನು ಛಲದಿಂದ ನನಸು ಮಾಡಿದಳು ಅರುಣಿಮಾ.
ಈಗ ಅವಳು ಈ ಜಗತ್ತಿನಲ್ಲೇ ಅಪ್ರತಿಮ ಮಹಿಳೆ – ಮೌಂಟ್ ಎವರೆಸ್ಟ್ ಶಿಖರವನ್ನು ಹತ್ತಿದ ಜಗತ್ತಿನ ಮೊತ್ತಮೊದಲ ಕಾಲಿಲ್ಲದ ಮಹಿಳೆ. ಅಬ್ಬ ಎಂಥ ಸಾಧನೆ! ಇದನ್ನು ದಾಖಲಿಸಿದ್ದಾಳೆ “ಪರ್ವತದಲ್ಲಿ ಮರುಹುಟ್ಟು” ಎಂಬ ಆತ್ಮಕತೆಯಲ್ಲಿ.
ಈಗ, ತನಗೆ ಬರುತ್ತಿರುವ ಪ್ರಶಸ್ತಿಗಳ ಹಣವನ್ನೆಲ್ಲ ತನ್ನ ಎರಡನೇ ಕನಸಿನ ಸಾಧನೆಗಾಗಿ ಧಾರೆ ಎರೆಯುತ್ತಿದ್ದಾಳೆ – ಅದು ಬಡ ವಿಕಲಚೇತನ ವ್ಯಕ್ತಿಗಳಿಗಾಗಿ ಕ್ರೀಡಾ ಅಕಾಡೆಮಿ ಕಟ್ಟುವ ಕನಸು. ೨೦೧೫ರಲ್ಲಿ ಕೇಂದ್ರ ಸರಕಾರ ಪದ್ಮಶ್ರೀ ನೀಡಿ ಅರುಣಿಮಾ ಸಿನ್ಹಾಳನ್ನು ಗೌರವಿಸಿದೆ. ಈಗ ಹೇಳಿ, ಬದುಕು ಭಾರವೇ?