ಕಗ್ಗ ದರ್ಶನ – 16 (1)

ಕಗ್ಗ ದರ್ಶನ – 16 (1)

ಧಾತನೆಣ್ಣೆಯ ಗಾಣದೆಳ್ಳು ಕಾಳಲೆ ನೀನು
ಆತನೆಲ್ಲರನರೆವನ್; ಆರನುಂ ಬಿಡನು
ಆತುರಂಗೊಳದೆ ವಿಸ್ಮೃತಿ ಬಡದುಪೇಕ್ಷಿಸದೆ
ಘಾತಿಸುವನೆಲ್ಲರನು - ಮಂಕುತಿಮ್ಮ
“ಬ್ರಹ್ಮ(ಧಾತ)ನ ಎಣ್ಣೆಯ ಗಾಣದ ಎಳ್ಳು ಕಾಳು ನೀನು” ಎನ್ನುತ್ತಾ ನಮ್ಮ ಸ್ಥಿತಿಯನ್ನು ಮರ್ಮಕ್ಕೆ ನಾಟುವಂತೆ ತೋರಿಸಿ ಕೊಡುತ್ತಾರೆ, ಮಾನ್ಯ ಡಿ.ವಿ. ಗುಂಡಪ್ಪನವರು. ಆ ಎಣ್ಣೆಯ ಗಾಣಕ್ಕೆ ಹಾಕಿದ ಎಳ್ಳು ಕಾಳಿನ ಗತಿ ಏನು? ಅದನ್ನು ಗಾಣ ಅರೆದು ಎಣ್ಣೆ ಹಿಂಡಿ ತೆಗೆಯುತ್ತದೆ. ಸೃಷ್ಟಿಕರ್ತನೂ ನಮ್ಮನ್ನೆಲ್ಲ ಹಾಗೆಯೇ ಬದುಕಿನಲ್ಲಿ ಕ್ಷಣಕ್ಷಣವೂ ಅರೆಯುತ್ತಾನೆ.
ಇತ್ತೀಚೆಗೆ ಆಂಧ್ರಪ್ರದೇಶದ ರಕ್ತಚಂದನದ ಕಾಡಿಗೆ ಮರಕಡಿಯಲು ನುಗ್ಗಿದ ತಮಿಳ್ನಾಡಿನ ಇಪ್ಪತ್ತು ಜನರು ಪೊಲೀಸರ ಗುಂಡಿಗೆ ಬಲಿಯಾದರು. ಎಪ್ರಿಲ್ ೨೦೧೫ರಲ್ಲಿ ಯುರೋಪಿಗೆ ಕಳ್ಳದಾರಿಯಲ್ಲಿ ನುಸುಳಲಿಕ್ಕಾಗಿ ಒಂದು ನೌಕೆಯಲ್ಲಿ ಬರುತ್ತಿದ್ದ ೯೦೦ ಜನರು ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿ ಸತ್ತರು. ೨೦೧೫ರಲ್ಲಿ ಆ ಸಮುದ್ರದಲ್ಲಿ ಹೀಗೆ ಸತ್ತವರ ಸಂಖ್ಯೆ (ಮೊದಲ ೪ ತಿಂಗಳುಗಳಲ್ಲಿ) ೧,೫೦೦. ಮುಂಚಿನ ವರುಷ ಹೀಗೆ ಬಲಿಯಾದವರು ೩,೨೦೦ ಜನರು.
ಜಗನ್ನಿಯಾಮಕ ಯಾರನ್ನೂ ಬಿಡುವುದಿಲ್ಲ. ಪುಣ್ಯಕ್ಷೇತ್ರಗಳಿಗೆ ಯಾತ್ರೆ ಹೊರಟವರ ಮೇಲೂ ಆತನಿಗೆ ಕರುಣೆಯಿಲ್ಲ. ಜೂನ್ ೨೦೧೩ರಲ್ಲಿ ಕೇದಾರನಾಥದಲ್ಲಿ ಮತ್ತು ಉತ್ತರಖಂಡದ ರುದ್ರಪ್ರಯಾಗ, ಚಮೋಲಿ, ಉತ್ತರಕಾಶಿಗಳಲ್ಲಿ ಕಂಡುಕೇಳರಿಯದ ನೆರೆ ಬಂದಾಗ ಸತ್ತವರ ಸಂಖ್ಯೆ ೫,೦೦೦ ಎಂದು ಉತ್ತರಾಂಚಲ ಸರಕಾರ ಘೋಷಿಸಿದೆ.
ಹುಲುಮಾನವರಿಗೆ ಇಂತಹ ಗತಿ ಕಾಣಿಸುವಾಗ ಆತನಿಗೆ ಆತುರವಿಲ್ಲ; ಮರೆತು ಹೋಗುವುದೂ (ವಿಸ್ಮೃತಿ) ಇಲ್ಲ; ಯಾರನ್ನೂ ಆತ ಕಡೆಗಣಿಸುವುದಿಲ್ಲ. ಅಗ್ನಿಪರ್ವತಗಳು ಸ್ಫೋಟಿಸಿದಾಗ ಸತ್ತವರೆಷ್ಟು? ಭೂಕಂಪಗಳು ಆದಾಗೆಲ್ಲ ಬಲಿಯಾದವರೆಷ್ಟು? ಭಯಂಕರ ಪ್ರಳಯ “ಸುನಾಮಿ”ಯಲ್ಲಿ ಮಡಿದವರ ಸಂಖ್ಯೆ ೨,೭೫,೦೦೦ ಎಂದು ಅಂದಾಜು!
ಬ್ರಹ್ಮ ಎಲ್ಲರನ್ನು ಘಾತಿಸುತ್ತಾನೆ. ಯಾರೂ ಊಹಿಸದ ರೀತಿಯಲ್ಲಿ ಏಟು ನೀಡುತ್ತಾನೆ. ಮಲೇಷ್ಯಾದಿಂದ ಮೇಲೇರಿದ ವಿಮಾನವೊಂದು ನಾಪತ್ತೆಯಾಗಿ ಅವಶೇಷಗಳು ಇನ್ನೂ ಪತ್ತೆಯಾಗಿಲ್ಲ. ಅದಾಗಿ ಕೆಲವೇ ತಿಂಗಳುಗಳಲ್ಲಿ ಹಾಗೆಯೇ ಇನ್ನೊಂದು ವಿಮಾನ ಪತನ. ಆದ್ದರಿಂದ ಯಾವತ್ತೂ ನೆನಪಿರಲಿ: ನೀನು ಬ್ರಹ್ಮನ ಎಣ್ಣೆಗಾಣದ ಎಳ್ಳುಕಾಳು.