ಕಗ್ಗ ದರ್ಶನ – 16 (2)

ಕಗ್ಗ ದರ್ಶನ – 16 (2)

ಕಣ್ಣೀರ ಸುರಿ ಕೆರಳು ಕಾದು ಕೊಲ್ ಕೊಲ್ಲಿಸಿಕೊ
ಬಿನ್ನಣಿಸು ಹಂಬಲಿಸು ದುಡಿ ಬೆದರು ಬೀಗು
ಚಿಣ್ಣರಾಟವೆನೆ ನೋಡುತ ನಿನ್ನ ಪಾಡುಗಳ
ತಣ್ಣಗಿರುವನು ಶಿವನು – ಮರುಳ ಮುನಿಯ
ಸೃಷ್ತಿಕರ್ತನು ನಿನ್ನನ್ನು ಎಣ್ಣೆಗಾಣದಲ್ಲಿ ಸಿಲುಕಿದ ಎಳ್ಳು ಕಾಳಿನಂತೆ ಅರೆಯುತ್ತಿದ್ದರೆ, ಲಯಕರ್ತನಾದ ಶಿವ ನಿನ್ನನ್ನು ಏನು ಮಾಡುತ್ತಾನೆಂದು ಈ ಮುಕ್ತಕದಲ್ಲಿ ಮನಮುಟ್ಟುವಂತೆ ವರ್ಣಿಸಿದ್ದಾರೆ ಮಾನ್ಯ ಡಿ.ವಿ.ಜಿ. ನಿನ್ನ ಎಲ್ಲ ಸಂಕಷ್ಟಗಳನ್ನು ತನ್ನ ಮಕ್ಕಳ (ಚಿಣ್ಣರ) ಆಟವೆಂಬಂತೆ ನೋಡುತ್ತ ಶಿವನು ತಣ್ಣಗಿರುತ್ತಾನೆ; ಏನೂ ಆಗಿಲ್ಲ ಎಂಬಂತೆ ಇರುತ್ತಾನೆ ಎಂದು ವಿವರಿಸಿದ್ದಾರೆ.
ಹೌದಲ್ಲ! ನಾಗನರೇಶ್ ಎಂಬಾತ ಎಂಟನೆಯ ಕ್ಲಾಸಿನಲ್ಲಿ ಓದುತ್ತಿದ್ದ. ಒಂದು ದಿನ ಲಾರಿ ಡ್ರೈವರಿನ ಪಕ್ಕದಲ್ಲಿ ಕುಳಿತು ಪ್ರಯಾಣಿಸುತ್ತಿದ್ದ. ಆಗೊಂದು ಅಪಘಾತ. ನಾಗನರೇಶ್ ಲಾರಿಯಿಂದ ರಸ್ತೆಗೆ ಬಿದ್ದ. ಲಾರಿಯಲ್ಲಿದ್ದ ಕಬ್ಬಿಣದ ಪೈಪುಗಳು ಅವನ ಕಾಲುಗಳ ಮೇಲೆ ಉರುಳಿ ಬಿದ್ದವು. ಕೊನೆಗೆ ಅವನ ಎರಡೂ ಕಾಲುಗಳನ್ನು ಡಾಕ್ಟರ್ ಕತ್ತರಿಸಬೇಕಾಯಿತು. ಕಾಲುಗಳು ಹೋದರೇನಂತೆ, ಕೈಗಳು ಇವೆಯಲ್ಲ ಎಂಬಂತೆ ಬದುಕಿದ ನಾಗನರೇಶ್ ಈಗ ಬೆಂಗಳೂರಿನ ಗೂಗಲ್ ಕಚೇರಿಯಲ್ಲಿ ಅಧಿಕಾರಿ. ಅವನ ಮುಗುಳ್ನಗು ಅವನ ಆತ್ಮವಿಶ್ವಾಸದ ಸಂಕೇತ.
ಅವಳ ಹೆಸರು ಜೆಸ್ಸಿಕಾ ಕಾಕ್ಸ್. ಅಮೇರಿಕಾದ ಅರಿಜೋನಾ ಪ್ರಾಂತ್ಯದವಳು. ಅವಳು ಪದವೀಧರೆ, ಕರಾಟೆಪಟು, ಈಜಿನ ಚಾಂಪಿಯನ್, ಚೆನ್ನಾಗಿ ಕಾರು ಚಲಾಯಿಸುತ್ತಾಳೆ, ವಿಮಾನವನ್ನೂ ಹಾರಿಸುತ್ತಾಳೆ. ಅದರಲ್ಲೇನು ವಿಶೇಷ ಅಂತೀರಾ? ಅವಳಿಗೆ ಹುಟ್ಟುವಾಗಲೇ ಎರಡೂ ಕೈಗಳಿಲ್ಲ. ಕೈಗಳು ಇಲ್ಲದಿದ್ದರೇನಂತೆ, ಕಾಲುಗಳು ಇವೆಯಲ್ಲ ಎಂಬಂತೆ ಬದುಕಿ ಬೆಳೆದಿರುವ ಜೆಸ್ಸಿಕಾಳದು ಅಪ್ರತಿಮ ಸಾಧನೆ: ಕಾಲುಗಳಿಂದ ವಿಮಾನ ಹಾರಿಸುವ ಮೊತ್ತಮೊದಲ ಪೈಲಟ್.
ಆಸ್ಟ್ರೇಲಿಯಾದ ನಿಕ್ ಮೊಯಾಚಿಚ್ - ಹುಟ್ಟುವಾಗಲೇ ಎರಡೂ ಕೈಗಳಿಲ್ಲದ, ಎರಡೂ ಕಾಲುಗಳಿಲ್ಲದ ವ್ಯಕ್ತಿ. ಆದ್ದರಿಂದಲೇ ಅವನ ಬದುಕು “ಮಿತಿಯಿಲ್ಲದ ಬದುಕು” ಆಗಿದೆ. ನಮ್ಮ ಬದುಕನ್ನು ಹೇಗೆ ಸ್ವೀಕರಿಸಬೇಕು ಎಂಬುದಕ್ಕೆ ಈ ಮೂವರು ಮಾದರಿ. ಗಮನಿಸಿ, ಇಂತಹ ಸಾವಿರಾರು ಜನರಿದ್ದಾರೆ. ಕಣ್ಣಿಲ್ಲದ ಹಲವು ಕುರುಡರು ಕಣ್ಣಿದ್ದವರಿಗೇ ಬೆಳಕಾಗಿದ್ದಾರೆ, ಅಲ್ಲವೇ?
ಬದುಕಿನಲ್ಲಿ ನಾವು ಎಲ್ಲವನ್ನೂ ಅನುಭವಿಸಬೇಕಾಗುತ್ತದೆ – ದುಃಖ, ಕೋಪ, ಕೆರಳುವಿಕೆ, ಪ್ರಾಣವೇ ಹೋಗುವಂತಹ ಸಂಕಟ. ಹಾಗೆಯೇ ನಮ್ಮ ಆಸೆ, ಹೆದರಿಕೆ, ಗರ್ವ, ಪಾಂಡಿತ್ಯ ಪ್ರದರ್ಶನ, ಭಿನ್ನಹ, ದುಡಿತ – ಇವೆಲ್ಲವೂ ನಮಗೆ ಉತ್ಕಟ ಅನುಭವ, ಆದರೆ ಆ ಸದಾಶಿವನಿಗೆ ಇವೆಲ್ಲ ಮಕ್ಕಳಾಟ.