ಕಗ್ಗ ದರ್ಶನ – 17(1)
ತಿರುತಿರುಗಿ ತಿರುಗುತ್ತೆ ಬುಗುರಿ ತಾನೇ ಸೋತು
ತಿರೆಗುರುಳುವುದು ತನ್ನ ಬಲವ ತಾಂ ಕಳೆದು
ನರನುಮಂತೆಯೆ ಸುತ್ತಿ ಕಡೆಗೊಂದು ದಿನ
ತೆರುವನಸ್ಥಿಯ ಧರೆಗೆ - ಮಂಕುತಿಮ್ಮ
ಬಾಲ್ಯದಲ್ಲಿ ಬುಗುರಿಯಾಟ ನಮಗೆಲ್ಲ ಒಂದು ವಿಸ್ಮಯ. ಅದಕ್ಕೆ ಬಿಗಿಯಾಗಿ ನೂಲು ಸುತ್ತಿದ ಬಳಿಕ, ರೊಯ್ಯನೆ ನೆಲಕ್ಕೆಸೆದಾಗ ಸರ್ರನೆ ತಿರುಗಲು ಶುರು. ಹಾಗೆ ತಿರುಗುತ್ತ ನಿಧಾನವಾಗಿ ತನ್ನ ಬಲ ಹಾಗೂ ವೇಗ ಕಳೆದುಕೊಳ್ಳುತ್ತಿದ್ದ ಬುಗುರಿ ಕೊನೆಗೆ ನೆಲಕ್ಕೆ ಉರುಳಿ ಬೀಳುತ್ತಿತ್ತು; ಅದರ ಚಲನೆ ನಿಲ್ಲುತ್ತಿತ್ತು. ಮನುಷ್ಯನೂ ಹಾಗೆಯೇ ಎಂದು ಮನಮುಟ್ಟುವ ಮಾತನ್ನಾಡಿದ್ದಾರೆ ಮುಕ್ತಕದಲ್ಲಿ ಮಾನ್ಯ ಡಿ.ವಿ.ಜಿ.ಯವರು.
ಯಾಕೆಂದರೆ ಮನುಷ್ಯನೂ ಬದುಕಿನುದ್ದಕ್ಕೂ ವೇಗವಾಗಿ ಸುತ್ತುತ್ತಾನೆ. ಏನೆಲ್ಲ ಚಟುವಟಿಕೆಗಳು! ಎಷ್ಟೆಲ್ಲ ಕಾರುಬಾರುಗಳು! ಒದ್ದಾಟಗಳು, ಸಂಕಟಗಳು, ಜಂಜಾಟಗಳು! ವಿದ್ಯಾಭ್ಯಾಸದ, ಯೌವನದ, ಸಂಸಾರದ ಸಮಸ್ಯೆಗಳು. ಇವುಗಳ ಸುಳಿಯಲ್ಲಿ ಸುತ್ತುತ್ತಾ ಸುತ್ತುತ್ತಾ, ಆರಂಭದ ವರುಷಗಳ ಉತ್ಸಾಹವನ್ನೂ ಬಲವನ್ನೂ ಕಳೆದುಕೊಳ್ಳುತ್ತಾ ಕೊನೆಗೊಂದು ದಿನ ಮಣ್ಣಿನಲ್ಲಿ ಮಣ್ಣಾಗುತ್ತಾನೆ (ತೆರುವನಸ್ಥಿಯ ಧರೆಗೆ).
೨೫ ಎಪ್ರಿಲ್ ೨೦೧೫ರಂದು ನೇಪಾಳದಲ್ಲಿ ೭.೯ ತೀವ್ರತೆಯ ಭೂಕಂಪದಲ್ಲಿ ಒಂದೇಟಿಗೆ ಸುಮಾರು ೮,೦೦೦ ಜನರು ಮಣ್ಣಾದರು. ಗಾಯಾಳುಗಳ ಸಂಖ್ಯೆ ಸುಮಾರು ೧೭,೦೦೦. ಭೂಕಂಪದ ಕ್ಷಣದ ವರೆಗೆ ಎಂತಹ ಜಂಜಡದ ಜೀವನ! ಅದಕಾಗಿ ಇದಕಾಗಿ ಮತ್ತೊಂದಕಾಗಿ ಬಿಡುವಿಲ್ಲದ ಬಡಿದಾಟ: ಪದವಿಗಾಗಿ, ಉದ್ಯೋಗಕ್ಕಾಗಿ, ವೇತನಕ್ಕಾಗಿ, ಭಡ್ತಿಗಾಗಿ, ಭದ್ರತೆಗಾಗಿ, ಸಂಸಾರಕ್ಕಾಗಿ, ಮಕ್ಕಳಿಗಾಗಿ, ಮನೆಗಾಗಿ, ಜಮೀನಿಗಾಗಿ – ಹೀಗೆ ಜೋರಾಗಿ ಸುತ್ತಿಸುತ್ತಿ ಹೆಣಗಿ ಹೆಣಗಿ ಕೊನೆಗೆ ಎಲ್ಲವೂ ಒಮ್ಮೆಲೇ ನಿಶ್ಚಲ!
೨,೫೦೦ ಕಿಮೀ ಉದ್ದದ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಭೂಕಂಪದ ಅಪಾಯದ ಗಂಟೆ ಮೊಳಗುತ್ತಲೇ ಇದೆ – ಭಾರತ ಭೂಖಂಡದ ಉತ್ತರದ ಗಡಿ ನೇಪಾಳದ ದಕ್ಷಿಣದ ಗಡಿಗೆ ೪೦ – ೫೦ ದಶಲಕ್ಷ ವರುಷಗಳ ಮುಂಚೆ ಅಪ್ಪಳಿಸಿದಾಗಿನಿಂದ. ಇಂತಹ ಆತಂಕದ ಭೂವಲಯದಲ್ಲಿ ಭೂಕಂಪದ ತೀವ್ರತೆ ತಡೆಯುವಂತಹ (ಜಪಾನಿನ ಮಾದರಿಯಂತೆ) ಮನೆಗಳನ್ನು ನಿರ್ಮಿಸಬೇಕಾಗಿತ್ತು. ಅದಕ್ಕೆ ಗಮನ ನೀಡದ ಕಾರಣ ಈಗ ೨,೮೦,೦೦೦ ಮನೆಗಳ ನಾಶ, ಅಪಾರ ಸಾವುನೋವು. ಮನುಷ್ಯನ ಬದುಕಿನ ದೊಡ್ದ ವಾಸ್ತವ ಸಾವು ಎಂಬ ಅರಿವು ನಮ್ಮಲ್ಲಿ ಬೆಳೆಯಲಿ.